ಕಾವೇರಿ : ಪರಿಸ್ಥಿತಿ ತಿಳಿಯಾಗಿದೆ, ಆದರೆ…

ಕಾವೇರಿ ವಿವಾದದಲ್ಲಿ ಕೊನೆಗೂ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿದೆ.

ಅಕ್ಟೋಬರ್ 1 ರಂದು ಜೆಡಿ(ಎಸ್) ನಾಯಕ ದೇವೇಗೌಡರ ಉಪವಾಸ, ಸೂಕ್ತ ಮಧ್ಯಪ್ರವೇಶ ಮಾಡುವ ಬಗ್ಗೆ ಫೋನ್ ಮೂಲಕ ಪ್ರಧಾನಿ ಭರವಸೆ, ಅ. 3 ರಂದು ಕೇಂದ್ರ ಸರಕಾರದ ಮರು ಪರಿಶೀಲನಾ ಅರ್ಜಿ, ಅ.4 ಸುಪ್ರೀಂ ಕೋರ್ಟಿನ ಆದೇಶ – ಇವುಗಳಿಂದ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾಗಿದೆ. ಆದರೆ ವಿವಾದ ಇನ್ನೂ ಬಗೆಹರಿದಿಲ್ಲ. ತಾತ್ಕಾಲಿಕವಾಗಲಿ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.

ಅಕ್ಟೋಬರ್ 3 ರಂದು ಕರೆದಿದ್ದ ವಿಧಾನ ಮಂಡಳದ ತುರ್ತು ಅಧಿವೇಶನ ಕರ್ನಾಟಕದ ಬೆಳೆಗಳಿಗೆ ನೀರು ಬಿಡಲು ನಿರ್ಣಯ ಮಾಡಿತು. ಕುಡಿಯುವ ನೀರಿನ ಉದ್ದೇಶಕ್ಕೆ ಅಗತ್ಯವಾದ 27.60 ಟಿಎಂಸಿ ಮೀರಿ ಒಟ್ಟು 34.13 ಟಿಎಂಸಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ನೀರನ್ನು ರೈತರ ಬೆಳೆಗಳಿಗೆ ಹರಿಸಲು ನಿರ್ಣಯ ಮಾಡಿತು. ಆ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡಲು ಅನುವು ಮಾಡಿಕೊಟ್ಟಿತು.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟು ನೀಡಿರುವ ಆದೇಶವನ್ನು ಮಾರ್ಪಾಟು ಮಾಡಲು ಕೋರಿ ಕೇಂದ್ರ ಸರಕಾರ ಅಕ್ಟೋಬರ್ 3ರಂದು ಮಾಪಾಟು ಅರ್ಜಿ ಸಲ್ಲಿಸಿತು. ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟು ತನ್ನ ಸೆ. 20 ಮತ್ತು ಸೆ. 30ರ ಆದೇಶದಲ್ಲಿ ನಿರ್ದೇಶಿಸಿದಾಗ ಅದನ್ನು ಒಪ್ಪಿಕೊಂಡಿದ್ದ ಅಟಾರ್ನಿ ಜನರಲ್ ಮುಕುಲ್ ರೊಹಟಗಿ, ಬಹುಶಃ ಪ್ರಧಾನಿ ನಿರ್ಧೇಶನದಂತೆ ಈ ಅರ್ಜಿ ಸಲ್ಲಿಸಿದರು.

ಸಂವಿಧಾನದ 262ನೇ ಕಲಂ ಪ್ರಕಾರ ಅಂತರರಾಜ್ಯ ನದಿ ನೀರು ವ್ಯಾಜ್ಯಗಳು ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುವುದಿಲ್ಲ. ಶಾಸನಾತ್ಮಕ ಪ್ರಕ್ರಿಯೆ ಮೂಲಕ ಮಂಡಳಿ ರಚನೆ ಮಾಡಬೇಕಾಗುತ್ತದೆ. ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದರೆ ಮಾತ್ರ ಮಂಡಳಿ ರಚನೆ ಆಗುತ್ತದೆ. ಆದ್ದರಿಂದ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡುವುದು ಸುಪ್ರೀಂ ಕೋರ್ಟು ನಿರ್ಧೇಶನ ನೀಡುವಂತಿಲ್ಲ. ಹೀಗೆ ನಿರ್ಧೇಶನ ನೀಡಿದರೆ ಅಂತರರಾಜ್ಯ ಜಲವಿವಾದ ಕಾಯಿದೆ-1956ರ ಕಲಮು 15ರ ಅಡಿ ಕೇಂದ್ರ ಸರಕಾರಕ್ಕೆ ಇರುವ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ. ಎಂಬುದು ಮಾರ್ಪಾಟು ಅರ್ಜಿಯ ಪ್ರಮುಖ ವಾದವಾಗಿತ್ತು. ಅಲ್ಲದೆ ನಿರ್ವಹಣಾ ಮಂಡಳಿ ರಚನೆಗೆ ಶಿಫಾರಸು ಮಾಡಿದ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಪ್ರಶ್ನಿಸಿ ನಾಲ್ಕೂ ರಾಜ್ಯಗಳು ಸಲ್ಲಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದ್ದರಿಂದ ಕಾವೇರಿ ನಿರ್ವಹಣಾ ಮಂಡಳಿಯ ರಚನೆಯ ಆದೇಶವನ್ನು ಮಾರ್ಪಾಟು ಮಾಡಬೇಕೆಂದು ಈ ಅರ್ಜಿಯಲ್ಲಿ ಅಟಾರ್ನಿ ಜನರಲ್ ಮನವಿ ಮಾಡಿಕೊಂಡರು.

ಇದಲ್ಲದೆ ಕೇಂದ್ರ ಸರಕಾರ ಸಲ್ಲಿಸಿದ ಮಾರ್ಪಾಟು ಅರ್ಜಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ವಾಸ್ತವ ಸ್ಥಿತಿ ಅಧ್ಯಯನಕ್ಕೆ ಹೈ-ಪವರ್ ಟೆಕ್ನಿಕಲ್ ಸಮಿತಿ ರಚನೆ ಮಾಡುವುದಾಗಿ ಹೇಳಿತು. ಸಮಿತಿ ಎರಡೂ ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಸ ಮಾಡಿ ವಾಸ್ತವ ಸ್ಥಿತಿ ಮತ್ತು ನೀರಿನ ಅಗತ್ಯತೆಯನ್ನು ಅಧ್ಯಯನ ಮಾಡಿ ಸುಪ್ರೀಂ ಕೋರ್ಟಿಗೆ ವರದಿ ಮಾಡಲಿದೆ ಎಂದೂ ಮರು ಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿತ್ತು.
ಅಕ್ಟೋಬರ್ 4ರಂದು ಕೇಂದ್ರ ಸರಕಾರದ ಹಾಗೂ ಕರ್ನಾಟಕ ಸರಕಾರದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟು ಕೇಂದ್ರ ಸರಕಾರ ಸಲ್ಲಿಸಿದ ಮಾರ್ಪಾಟು ಅರ್ಜಿಯ ಅಂಶಗಳನ್ನು ಮನ್ನಿಸಿತು. ಕೇಂದ್ರ ಸರಕಾರ ರಚಿಸಿದ ತಂಡ 10 ದಿನಗಳ ಕಾಲ ಕಾವೇರಿ ಕಣಿವೆಯಲ್ಲಿ ಸಂಚರಿಸಿ ಅಧ್ಯಯನ ನಡೆಸಿ ವಸ್ತುಸ್ಥಿತಿ ಅರಿಯಬೇಕು. ಆ ಕುರಿತು ವರದಿಯನ್ನು ಅಕ್ಟೋಬರ್ 17ರೊಳಗೆ ಸಲ್ಲಿಸಬೇಕು ಅಲ್ಲಿಯ ತನಕ 12 ದಿನಗಳ ಕಾಲ (ಅಂದರೆ ಅ. 18ರ ವರೆಗೆ) ನಿತ್ಯ 2 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂದು ಆದೇಶಿಸಿತು.

ಕೇಂದ್ರದ ತಜ್ಞರ ತಂಡ ಈ ಬರಹ ಪ್ರಿಂಟಿಗೆ ಹೋಗುವ ಹೊತ್ತಿಗೆ (ಅಕ್ಟೋಬರ್ 7 ಮಧ್ಯಾಹ್ನ) ಬೆಂಗಳೂರಿಗೆ ಬಂದು ಜಲಸಂಪನ್ಮೂಲ ಸಚಿವ ಮತ್ತು ಅಧಿಕಾರಿಗಳ ತಂಡ ಬೇಟಿ ಮಾಡಿದೆ. ರಾಜ್ಯ ಸರಕಾರದ ಪರವಾಗಿ ತಂಡಕ್ಕೆ ಮನವಿ ಸಲ್ಲಿಸಲಾಗಿದೆ. ಕಾವೇರಿ ಕೊಳ್ಳದ ಭೇಟಿಗೆ ತಂಡ ಹೊರಟಿದೆ. ತಂಡದ ನಾಯಕತ್ವವನ್ನು ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ವಹಿಸಿದ್ದಾರೆ. ತಂಡದಲ್ಲಿ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಹುಸೇನ್, ಗೋದಾವರಿ ಮತ್ತು ಕೃಷ್ಣಾ ಕಣಿವೆಯ ಮುಖ್ಯ ಇಂಜಿನೀಯರ್ ಆರ್.ಕೆ.ಗುಪ್ತ, ಕಾವೇರಿ ಕೊಳ್ಳದ ನಾಲ್ಕೂ ರಾಜ್ಯಗಳ ಜಲಸಮನ್ಮೂಲ ಇಲಾಖೆ ಮುಖ್ಯ ಇಂಜಿನೀಯರುಗಳು ಇದ್ದಾರೆ. ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದಶಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಕೆ.ಆರ್.ಎಸ್. ಅಣೆಕಟ್ಟಿನ ಮುಖ್ಯ ಇಂಜಿನೀಯರುಗಳು ಈ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸುತ್ತಾರೆ. ತಂಡ ಕಬಿನಿ, ಕೆ.ಆರ್.ಎಸ್., ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಗೆ ಖುದ್ದು ಬೇಟಿ ನೀಡಿ ಮಾಹಿತಿ ಪಡೆಯಲಿದೆ. ಅ. 8ರಂದು ತಮಿಳುನಾಡಿನ ಮೆಟ್ಟೂರು ಜಲಾಶಯದ ನೀರಿನ ಸಂಗ್ರಹಣೆ ಮತ್ತು ಬೆಳೆಗಳ ಪರಿಸ್ಥಿತಿ ಪರಿಶೀಲಿಸಲಿದೆ.

ಇವೆಲ್ಲದರಿಂದ ಸದ್ಯಕ್ಕೆ ತೀರಾ ಬಿಗಡಾಯಿಸಿದ್ದ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನತ್ತ ಜಾರುತ್ತಿದ್ದ ಪರಿಸ್ಥಿತಿ ತಿಳಿಯಾಗಿದೆ. ಆದರೆ ನಿಜವಾದ ಸಮಸ್ಯೆ ಹಾಗೇ ಇದೆ. ಈ ತಿಂಗಳ ಆರಂಭದಿಂದ ಎರಡೂ ರಾಜ್ಯಗಳಲ್ಲಿ ಪ್ರಮುಖ ಪಕ್ಷಗಳು ತಮ್ಮ ಚುನಾವಣಾ ರಾಜಕೀಯದ ದೃಷ್ಟಿಯಿಂದ ಈ ಬಿಕ್ಕಟ್ಟು ಸೃಷ್ಟಿಸಿದ್ದವು. ಪ್ರಮುಖ ರಾಜಕೀಯ ಪಕ್ಷಗಳು, ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ನ್ಯಾಯಾಂಗ ಎಲ್ಲವೂ ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆಯನ್ನು ಕಗ್ಗಂಟಾಗಿಸುತ್ತಾ ಬಿಕ್ಕಟ್ಟಿನತ್ತ ತೆಗೆದುಕೊಂಡು ಹೋಗಿದ್ದವು. ಈಗ ಆಗಿದ್ದು ಸೆಪ್ಟೆಂಬರ್ ಆದಿಯಲ್ಲೇ ಆಗಬಹುದಾಗಿತ್ತು. ಈ ಕಾಲಮುಗಳಲ್ಲಿ ಹಿಂದೆಯೂ ವಾದಿಸಿದಂತೆ ಕೇಂದ್ರ ಮಧ್ಯಪ್ರವೇಶ ಮಾಡಿ ರಾಜ್ಯ ಸರಕಾರಗಳ ನಡುವೆ ಮಾತುಕತೆ ನಡೆಸುವುದು ಮಾತ್ರ ಇದಕ್ಕೆ ಪರಿಹಾರ. ಇದಕ್ಕೆ ನ್ಯಾಯಾಲಯಗಳ ಮೂಲಕ ಪರಿಹಾರ ಸಾಧ್ಯವಿಲ್ಲ ಎಂಬುದು ಪುನಃ ಸಾಬೀತಾಗಿದೆ.

ಆದರೆ ಈಗಲೂ ರಾಜಕೀಯ ಪಕ್ಷಗಳು, ಸರಕಾರಗಳು ಸಮಸ್ಯೆಯ ತಾತ್ಕಾಲಿಕ ಅಥವಾ ಶಾಶ್ವತ ಪರಿಹಾರ ಹುಡುಕುವತ್ತ ಪ್ರಯತ್ನ ಮಾಡುತ್ತಾರೆ ಎಂಬ ಗ್ಯಾರಂಟಿ ಇನ್ನೂ ಇಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿ(ಎಸ್) ಮೂರೂ ಪಕ್ಷಗಳು ತಮ್ಮ ಪಕದ ರಾಜಕೀಯಕ್ಕೆ ಕಾವೇರಿ ವಿವಾದವನ್ನು ದಾಳ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ತಲೆಕೆಳಗಾಗುವ ಸೂಚನೆ ಕಂಡು ಬಂದಿದ್ದರಿಂದಷ್ಟೇ ತಾವೇ ಸೃಷ್ಟಿಸಿದ ಬಿಕ್ಕಟ್ಟು ತಿಳಿಯಾಗಿಸಿವೆ. ಬಿಕ್ಕಟ್ಟು ಹೀಗೆ ಮುಂದುವರೆದರೆ ಬಿಜೆಪಿಗೆ ಹಿನ್ನಡೆಯಾಗಬಹುದು. ಕಾಂಗ್ರೆಸ್, ಜೆಡಿ(ಎಸ್) ಗಳಿಗೆ ರಾಜಕೀಯ ಪ್ರಯೋಜನವಾಗಬಹುದು ಎಂಬ ಆತಂಕ ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಕಾರಣವಾದಂತೆ ಕಾಣುತ್ತದೆ ಕಾಂಗ್ರೆಸ್ ಸಹ ನ್ಯಾಯಾಂಗ ನಿಂದನೆಯ ತೂಗುಗತ್ತಿಯ ಆತಂಕದಿಂದ ತಿಳಿಯಾಗಿಸುವತ್ತ ಹೆಜ್ಜೆ ಹಾಕಿತು. ದೇವೇಗೌಡೆರ ಉಪವಾಸ, ನಾರಿಮನ್ ಅವರು ವಾದದಿಂದ ಹಿಂತೆಗೆದದ್ದೂ ಈ ಬೆಳವಣಿಗೆಗಳಿಗೆ ಪೂರಕವಾಯಿತು.

ಆದರೆ ಕಾವೇರಿ ಕೊಳ್ಳದ ರೈತರ ಆತಂಕ ಇನ್ನೂ ಹೋಗಿಲ್ಲ. 1.88 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. 4.76 ಲಕ್ಷ ಎಕರೆಯಲ್ಲಿ ಬೆಳೆ ಇದೆ. ಎಷ್ಟು ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು, ಎಷ್ಟರಲ್ಲಿ ಬೆಳೆ ಇದೆ, ರೈತರಿಗೆ ಎಷ್ಟು ನಷ್ಟವಾಗಿದೆ – ಇವೆಲ್ಲದರ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ಕೊಡುವ ಬಗ್ಗೆ ಶೀಘ್ರದಲ್ಲೇ ಸರಕಾರ ನಿರ್ಣಯ ಕೈಗೊಳ್ಳಬೇಕು.

One thought on “ಕಾವೇರಿ : ಪರಿಸ್ಥಿತಿ ತಿಳಿಯಾಗಿದೆ, ಆದರೆ…

Leave a Reply

Your email address will not be published. Required fields are marked *