ಟಿಪ್ಪು ಸುಲ್ತಾನ್ ಜಯಂತಿಗೆ ಅರ್ಥಹೀನ ವಿರೋಧ

ನವೆಂಬರ್ 10 ರಂದು ಆಚರಿಸಲಾಗುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಗೆ ಸಂಘ-ಗ್ಯಾಂಗಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದು ಕಳೆದ ವರ್ಷದ ವಿರೋಧಕ್ಕಿಂತಲೂ ತೀವ್ರವಾಗಿದೆ-ಗುಣಾತ್ಮಕವಾಗಿಯೂ ಪ್ರಮಾಣಾತ್ಮಕವಾಗಿಯೂ. `ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಈ ವರ್ಷವೂ ಟಿಪ್ಪು ಜಯಂತಿ ಆಚರಣೆಗೆ ಮುಂದಾದರೆ ಇಡೀ ಕರ್ನಾಟಕ ಹೊತ್ತಿ ಉರಿಯಲಿದೆ’ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಎಚ್ಚರಿಕೆ ನೀಡಿದರು. ಕಳೆದ ವರ್ಷ ಒಬ್ಬ ಕುಟ್ಟಪ್ಪನ ನೆತ್ತರು ಹರಿದು ಕೊಡಗು ಜಿಲ್ಲೆ ಹೊತ್ತಿ ಉರಿದಿತ್ತು. ಈ ವರ್ಷ ಟಿಪ್ಪು ಜಯಂತಿ ವಿರೋಧಿಸಲು ಗ್ರಾಮ ಗ್ರಾಮಗಳಲ್ಲಿ ಬಜರಂಗದಳದ ಪಡೆ ಸಿದ್ಧವಾಗಿದೆ. ಸರ್ಕಾರ ಕಾರ್ಯಕ್ರಮ ಕೈಬಿಡದಿದ್ದರೆ ಕರ್ನಾಟಕ ಹೊತ್ತಿ ಉರಿಯುವುದು ನಿಶ್ಚಿತ’ ಎಂದರು ಗೋಪಾಲ್. ಈ ಎಚ್ಚರಿಕೆ ಬಂದಿದ್ದು ಅಕ್ಟೋಬರ್ 24 ರಂದು ಮಂಗಳೂರಿನಲ್ಲಿ ನಡೆದ ಭಜರಂಗದಳದ ದಕ್ಷಿಣ ಪ್ರಾಂತ ಅಧಿವೇಶನದ ಸಮಾರೋಪದಲ್ಲಿ. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎ.ಜೆ.ಶೆಟ್ಟಿ ದಂತವೈದ್ಯ ಕಾಲೇಜಿನ ಡೀನ್ ಡಾ.ಶ್ರೀಧರ ಶೆಟ್ಟಿ, `ಟಿಪ್ಪು ಏನು ಎಂಬುದು ಇತಿಹಾಸ ಓದಿದರೆ ಗೊತ್ತಾಗುತ್ತದೆ. ರಾಜ್ಯದ ಜನರು ಸಂಭ್ರಮಿಸಬೇಕಿರುವುದು ಟಿಪ್ಪುವಿನ ಜನ್ಮದಿನವನ್ನಲ್ಲ, ಆತನ ಸಾವನ್ನು ಸಂಭ್ರಮಿಸಬೇಕು’ ಎಂದರಂತೆ.

ಇದೇ ಮುಂದಿನ ದಿನಗಳಲ್ಲಿ ಬೇರೆ ಬೇರೆ ಶಬ್ದಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಮಾರ್ದನಿಗೊಳ್ಳುತ್ತಾ ಹೋಯಿತು. `ಟಿಪ್ಪು ಒಬ್ಬ ಮೂಲಭೂತವಾದಿ. ಸಾವಿರಾರು ಜನರ ಕಗ್ಗೊಲೆಗೆ ಆತ ಕಾರಣವಾಗಿದ್ದಾನೆ. ಇಂತಹ ವಿವಾದಿತ ವ್ಯಕ್ತಿಯ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದು ಬೇಡ’ ಎಂದು ಅಪ್ಪಣೆ ಕೊಡಿಸಿದರು ಮಾಜಿ ಇನ್ಫೊಸಿಸ್ ಹಾಗೂ ಮಣಿಪಾಲ ಶಿಕ್ಷಣ ಸಾಮ್ರಾಜ್ಯದ ದೊರೆ ಹಾಗೂ `ಸರ್ವಜ್ಞ ಟಿವಿ ಎಕ್ಸ್ ಪರ್ಟ್’ ಮೋಹನದಾಸ ಪೈ. `ಆತನೇನೂ ಸ್ವಾತಂತ್ರ್ಯ ಹೋರಾಟಗಾರ ಆಗಿರಲಿಲ್ಲ. ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲಷ್ಟೇ ಆತನ ಹೋರಾಟ ಸೀಮಿತವಾಗಿತ್ತು’ ಎಂದೂ ಎಕ್ಸ್ ಪರ್ಟ್ ಕಾಮೆಂಟು ಹೊಡೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದನ್ನು ನೋಡಿದರೆ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಆಚರಿಸಿದರೂ ಆಶ್ಚರ್ಯವಿಲ್ಲ ಎಂದು ಸಂಸದ ಕಮ್ ಪತ್ರಕರ್ತ ಪ್ರತಾಪ್ ಸಿಂಹ ಕೆಟ್ಟ ಜೋಕು ಮಾಡಿದರು. “ಟಿಪ್ಪುವನ್ನು ಬ್ರಿಟಿಶರು ಕೊಲ್ಲದಿದ್ದರೆ, ದಕ್ಷಿಣ ಭಾರತ ಇಸ್ಲಾಮೀಕರಣವಾಗುತ್ತಿತ್ತು. ಟಿಪ್ಪು ಸಾವಿನಿಂದ ಆತನ ಸಂತತಿ ನಿಂತಿತು” ಎಂದು ಡಾ. ಚಿದಾನಂದಮೂರ್ತಿ ಬ್ರಿಟಿಶರಿಗೆ ತಮ್ಮ ಅನಂತ ಕೃತಜ್ಞತೆ ಅರ್ಪಿಸಿದರು. ಟಿವಿ ಚರ್ಚೆಯೊಂದರಲ್ಲಿ ಡಾ. ವಾಮನಾಚರ್ಯರು “ಬ್ರಿಟಿಶರು ಟಿಪ್ಪುವನ್ನು ಕೊಂದಿದ್ದು ಮಾತ್ರವಲ್ಲದೆ ಅವನ ಮಕ್ಕಳನ್ನು ಕುಟುಂಬದವರನ್ನು ದೂರದ ಕಲ್ಲತ್ತಾದಲ್ಲಿ ಬಿಟ್ಟು ಬಂದು ಒಳ್ಳೆಯ ಕೆಲಸ ಮಾಡಿದರು” ಎಂದು ಬ್ರಿಟಿಶರ ಕ್ರೌರ್ಯವನ್ನು ಬಹುವಾಗಿ ಮೆಚ್ಚಿಕೊಂಡರು. “ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೂ ಏಕೆ ಜಯಂತಿ ಆಚರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿಯಾಗಿದ್ದವನ ಜಯಂತಿ ಆಚರಣೆ ಏಕೆ” ನನಗೆ ತಿಳಿದಿರುವ ಇತಿಹಾಸದಂತೆ ಟಿಪ್ಪು ಸಣ್ಣ ಸಂಸ್ಥಾನದ ರಾಜ” ಎಂದರು ಕರ್ನಾಟಕದ ಮುಖ್ಯ ನ್ಯಾಯಾಧೀಶರು. ಅವರು ಟಿಪ್ಪು ಜಯಂತಿ ಆಚರಣೆಯನ್ನು ಪ್ರಶ್ನಿಸಿ ಕೆಪಿಮಂಜುನಾಥ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಈ ಮೌಖಿಕ ಅಭಿಮತ ವ್ಯಕ್ತಪಡಿಸಿದರೆಂದು ವರದಿಯಾಗಿದೆ.

ಭಜರಂಗದಳದ ನಾಯಕನಿಂದ ಮುಖ್ಯ ನ್ಯಾಯಾಧೀಶರ ವರೆಗಿನ ಹೇಳಿಕೆಗಳಲ್ಲಿ- `ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲಷ್ಟೇ ಹೋರಾಡಿದ ಇನ್ನೊಬ್ಬ ರಾಜ. ಆತನ ಜಯಂತಿ ಆಚರಣೆ ಬೇಡ’-ಎಂಬ ಕೆಲವು ಸಾಮಾನ್ಯ ಅಂಶಗಳು ಕಂಡು ಬಂದವು. ಈ ನಿರೂಪಣೆ ಒಂದೇ ಕೇಂದ್ರದಿಂದ ಹಂಚಿದಂತೆ ಅನಿಸುತ್ತಿತ್ತು. ಇದು ದೇಶದ/ರಾಜ್ಯದ ಇತಿಹಾಸ ಮತ್ತು `ದೇಶಪ್ರೇಮ’ `ಸ್ವಾತಂತ್ರ್ಯ ಹೋರಾಟ’ದ ಪರಿಕಲ್ಪನೆಗಳ ಬಗ್ಗೆ ಸಂಘಗ್ಯಾಂಗಿನ ಕೋಮುವಾದಿ ದೃಷ್ಟಿಕೋಣದಿಂದ ಹೊರಟವು ಎಂಬುದು ಸ್ಪಷ್ಟ. ಈವರೆಗೆ ಸಂಘಗ್ಯಾಂಗಿನ ಸಂಘಟನೆಗಳಿಗೆ ಸೀಮಿತವಾಗಿದ್ದದ್ದು ಉದ್ಯಮಿಗಳು, ನ್ಯಾಯಾಧೀಶರಿಂದಲೂ ಹೊರಬಂದಿದ್ದು ಈ ವರ್ಷದ ವಿಶೇûಷವಾಗಿತ್ತು. ಇದು ಸಂಘಗ್ಯಾಂಗಿನ ಈ ಬಾರಿಯ ಟಿಪ್ಪು ವಿರುದ್ಧ ಅಪಪ್ರಚಾರದ ಹೂರಣವೂ ಆಗಿತ್ತು. ಕಳೆದ ಬಾರಿಯ ಕೊಡವರ, ಮಲಬಾರಿನ ಹಿಂದೂಗಳ ಮೇಲೆ, ಮಂಗಳೂರಿನ ಕ್ರಿಶ್ಚಿಯನ್ನರ ಮೇಲೆ ಟಿಪ್ಪು ಅತ್ಯಾಚಾರಗಳನ್ನೂ ಅಗತ್ಯ ಬಿದ್ದಲ್ಲಿ ಬಳಸಲಾಗುತ್ತಿದ್ದರೂ, ಒತ್ತು ಮೇಲೆ ಹೇಳಿದ ಅಂಶಗಳ ಮೇಲೆ ಇದ್ದವು. ಇದಲ್ಲದೆ ಶೂದ್ರ ಜಾತಿಯೊಂದನ್ನು ತಮ್ಮ ಕೋಮುವಾದಿ ಅಪಪ್ರಚಾರದಲ್ಲಿ ಒಳಗೊಳ್ಳುವ ಪ್ರಯತ್ನ ಮಾಡಿದರು. ಹೈದರಾಲಿ ಮದಕರಿ ನಾಯಕನ ರಾಜ್ಯವನ್ನು ಮೋಸದಿಂದ ವಶಪಡಿಸಿಕೊಂಡ. ಆದ್ದರಿಂದ ವಾಲ್ಮೀಕಿ-ಬೇಡ ಸಮದಾಯದ ಜನ ಟಿಪ್ಪು ಜಯಂತಿಯನ್ನು ವಿರೋಧಿಸಬೇಕು. ಟಿಪ್ಪುವನ್ನು ದ್ವೇಷಿಸಬೇಕು ಎಂದು ಪ್ರಚಾರ ಮಾಡಿದರು. ಇತ್ತೀಚೆಗಷ್ಟೇ ಚುನಾವಣೆ ತಯಾರಿಯ ಭಾಗವಾಗಿ ವಾಲ್ಮೀಕಿ ಸಮಾವೇಶವನ್ನು ಬಿಜೆಪಿ ಸಂಘಟಿಸಿತ್ತು. ಸಮುದಾಯದ ಮೀಸಲಾತಿಯನ್ನು ಶೇ.3.5 ರಿಂದ ಶೇ. 7.5 ಏರಿಸುವ ಆಶ್ವಾಸನೆ ಕೊಟ್ಟಿತ್ತು. ಕಾಂಗ್ರೆಸಿನ ವಿರುದ್ಧ ಮತಬ್ಯಾಂಕಿನ ರಾಜಕೀಯದ ಆಪಾದನೆ ಮಾಡುವ ಬಿಜೆಪಿ ಟಿಪ್ಪು ಜಯಂತಿ ವಿರೋಧ ಚಳುವಳಿಯನ್ನು ತನ್ನ ಮತಬ್ಯಾಂಕಿನ ರಾಜಕೀಯದತ್ತ ತಿರುಗಿಸಿತ್ತು. ಹೈ ಕೋರ್ಟಿನಲ್ಲಿ ಜಯಂತಿ ಆಚರಣೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಕಾನೂನು ಹೋರಾಟವನ್ನು ಹೂಡಿದೆ.

ಟಿಪ್ಪು ಜಯಂತಿಯ ವಿರುದ್ಧ ಸಂಘಗ್ಯಾಂಗಿನ ಚಳುವಳಿಯ ಈ ಬಾರಿಯ ಹೂರಣವಾಗಿರುವ `ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲಷ್ಟೇ ಹೋರಾಡಿದ ಇನ್ನೊಬ್ಬ ರಾಜ. ಆತನ ಜಯಂತಿ ಆಚರಣೆ ಬೇಡ’ – ಎಂಬ ಅಂಶಗಳ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡಬೇಕಾಗಿದೆ. ಬ್ರಿಟಿಶರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟದ ಮಹತ್ವವನ್ನು ಈ ಬಾರಿ ಸಂಘಗ್ಯಾಂಗು ವಿಶೇûಷವಾಗಿ ಅಲ್ಲಗಳೆಯುತ್ತಿರುವುದು ಬರಿಯ ಕೋಮುವಾದಿ ಮುಸ್ಲಿಂ-ದ್ವೇಷದಿಂದ ಮಾತ್ರವಲ್ಲ. ಸಂಘಗ್ಯಾಂಗು ಬ್ರಿಟಿಶರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಮಾತ್ರವಲ್ಲ, ಅದು ಬ್ರಿಟಿಶರ ಕೋಮುವಾದಿ ತಂತ್ರದ ಕೂಸು ಮತ್ತು ತೊತ್ತು ಆಗಿತ್ತು. ಸ್ವಾತಂತ್ರ್ಯ ಚಳುವಳಿಯನ್ನು ಕೋಮುದ್ವೇಷ-ಗಲಭೆಗಳಿಂದ ಒಡೆದು ಬ್ರಿಟಿಶರ ಏಜೆಂಟರಂತೆ ಕೆಲಸ ಮಾಡಿತ್ತು ಎಂಬುದನ್ನು ಮುಚ್ಚಿಕೊಳ್ಳಬೇಕಾಗಿದೆ. ಬ್ರಿಟಿಶ್-ವಸಾಹತುಶಾಹಿ ವಿರುದ್ಧ ಹೋರಾಡಿದವರು `ದೇಶಭಕ್ತರು’, `ರಾಷ್ಟ್ರವಾದಿಗಳು’ ಆದರೆ, ಸಂಘಗ್ಯಾಂಗಿನವರು ಇವೆರಡೂ ಆಗಿರಲೂ ಸಾದ್ಯವಿಲ್ಲವಲ್ಲ. ಮಾತ್ರವಲ್ಲ, ಈಗಲೂ ಅಮೆರಿನ್ ಸಾಮ್ರಾಜ್ಯಶಾಹಿಯ ಬಾಲಂಗೋಚಿಯಾಗಿರುವ ನೀತಿ ಅನುಸರಿಸುತ್ತಿರುವುದೂ ಪ್ರಶ್ನಾರ್ಹವಾಗುತ್ತದಲ್ಲ. `ದೇಶಭಕ್ತಿ’, `ರಾಷ್ಟ್ರವಾದ’ವನ್ನು ರಾಷ್ಟ್ರಧ್ವಜ, ರಾಷ್ಟ್ರಗೀತೆ, ಮಿಲಿಟರಿ, ಪ್ರಭುತ್ವ ಮುಂತಾದ ಪ್ರತಿಮೆಗಳಿಗೆ ಪ್ರಶ್ನಾತೀತ ನಿಷ್ಟೆಗೆ ಸೀಮಿತಗೊಳಿಸುವ ಪ್ರಯತ್ನದ ಭಾಗ ಎಂದು ಸಂಘಗ್ಯಾಂಗಿನ ಟಿಪ್ಪು ಜಯಂತಿಯ ವಿರುದ್ಧ ಚಳುವಳಿಯನ್ನು ಬಯಲಿಗೆಳೆಯಬೇಕಾಗಿದೆ. ಟಿಪ್ಪು ಸುಲ್ತಾನನ ಬ್ರಿಟಿಶ್-ವಸಾಹತುಶಾಹಿ ವಿರುದ್ಧ ಸತತ ರಾಜಿಯಿಲ್ಲದ ಹೋರಾಟವನ್ನು ನೆನಪಿಸುತ್ತಲೇ, ಸಂಘಗ್ಯಾಂಗಿನ ಬ್ರಿಟಿಶ್ ಏಜೆಂಟ ಪಾತ್ರವನ್ನೂ ಬಯಲು ಮಾಡಬೇಕಾಗಿದೆ.

ಟಿಪ್ಪು ಬರಿಯ `ಇನ್ನೊಬ್ಬ ರಾಜ’ ಅಲ್ಲ. ಆತ ಇತರ ರಾಜರಂತೆ ಜನ-ಪೀಡಕನೂ ಅಲ್ಲ. ಅತ್ಯಂತ ಜನಾನುರಾಗಿ ಜನಪ್ರಿಯ ರಾಜನಾಗಿದ್ದ ಎಂದೂ ಪ್ರಚಾರ ಮಾಡಬೇಕಾಗಿದೆ. ಮೈಸೂರು (ಮತ್ತು ಆಮೇಲೆ ಕರ್ನಾಟಕ) ಒಂದು ಪ್ರಗತಿಪರ ಅಭಿವೃದ್ಧ ರಾಜ್ಯ ಆದ ಪ್ರಕ್ರಿಯೆಯ ಆದ್ಯ ಪ್ರವರ್ತಕ ಟಿಪ್ಪುವೇ. ಆಗ ಇದ್ದ ಮಧ್ಯವರ್ತಿಗಳ ಶೋಷಣೆ ನಿಲ್ಲಿಸಿ ರೈತುವಾರಿ ಪದ್ಧತಿ ಜಾರಿ ಮಾಡಿದ್ದು ಟಿಪ್ಪು ಆಡಳಿತದ ಕಾಲದಲ್ಲಿ. ಕೃಷಿಗೆ ಉತ್ತೇಜನ ನೀಡಲು ಹಲವು ಆಡಳಿತಾತ್ಮಕ ಸುಧಾರಣೆಗಳು ಮತ್ತು ನೀರಾವರಿ ಯೋಜನೆಗಳನ್ನು ಆರಂಭಿಸಿದವನು ಟಿಪ್ಪುವೇ. ಆತನ ಆಡಳಿತ ಕಾಲದಲ್ಲಿ ಹೊಸ ಭೂ ಕಂದಾಯ ಪದ್ಧತಿ, ನಾಣ್ಯ, ಕ್ಯಾಲೆಂಡರು ಮುಂತಾದ ಸೃಜನಶೀಲ ಆಡಳಿತಾತ್ಮಕ ಕ್ರಮಗಳನ್ನು ಜಾರಿಗೆ ತರಲಾಯಿತು. ಕಾವೇರಿಗೆ ಈಗ ಕೆ.ಆರ್.ಎಸ್. ಇರುವಲ್ಲೇ ಆಣೆಕಟ್ಟು ಕಟ್ಟಲು ಟಿಪ್ಪು ಯೋಜಿಸಿದ್ದ. ರೇಷ್ಮೆ ಕೃಷಿ ಮತ್ತು ಕೈಗಾರಿಕೆ ಆರಂಭಿಸಿದ್ದು ಟಿಪ್ಪು. ಸಸ್ಯ ವೈವಿಧ್ಯಕ್ಕೆ ಹೆಸರಾದ ಬೆಂಗಳೂರಿನ ಲಾಲ್‍ಬಾಗ್ ಸ್ಥಾಪಿಸಿದ್ದು ಟಿಪ್ಪು ಕಾಲದಲ್ಲಿ. ಟಿಪ್ಪು ಕಾಲದ ಮೈಸೂರು ಒಂದು ಮಿಲಿಟರಿ ಶಕ್ತಿಯಾಗಿದ್ದು ಯುದ್ಧದಲ್ಲಿ ರಾಕೆಟ್ ಅಸ್ತ್ರಗಳ ಬಳಕೆ, ನೌಕಾ ಸೈನ್ಯ ಹೊಂದಿತ್ತು. ಒಟ್ಟಾರೆಯಾಗಿ ಟಿಪ್ಪು ಆಡಳಿತ ಸ್ಥಳೀಯವ ಉತ್ಪಾದನಾ ಶಕ್ತಿಗಳನ್ನು ಉತ್ತೇಜಿಸುವ ದೂರಗಾಮಿ ಕ್ರಮಗಳನ್ನು ಕೈಗೊಂಡಿದ್ದು ಈ ಪ್ರಗತಿಪರ ಅಭಿವೃದ್ಧಿ-ಪರ ನೀತಿಗಳ ಮುಂದುವರಿಕೆಯೇ ಮುಂದೆ ಮೈಸೂರು ದೇಶದಲ್ಲೇ ಪ್ರಗತಿಪರ ಅಭಿವೃದ್ಧ ರಾಜ್ಯ ಎನ್ನಿಸಿಕೊಳ್ಳಲು ಕಾರಣವಾಯಿತು. ಈ ಬಗ್ಗೆ ವಾಸ್ತವ ಸಂಗತಿಗಳನ್ನು ವ್ಯಾಪಕವಾಗಿ ಜನರ ನಡುವೆ ವ್ಯಾಪಕವಾಗಿ ಪ್ರಚಾರ ಮಾಡಬೇಕಾಗಿದೆ.

ಈ ನಿಟ್ಟಿನಲ್ಲಿ ಹೈದರ್ ಮತ್ತು ಟಿಪ್ಪುವಿನ ಕುರಿತಾಗಿ ಇರುವ ಅನೇಕ ಜನಪದ ಲಾವಣಿಗಳನ್ನು ಪುನಃ ಜನಪ್ರಿಯಗೊಳಿಸಬೇಕಾಗಿದೆ. ಇವುಗಳನ್ನು ಲಿಂಗದೇವರು ಹಳೆಮನೆ, ಪ್ರೊ. ಜೀ ಶಂ ಫರಮಶಿವಯ್ಯನವರು, ನಿಂಗಣ್ಣ ಸಣ್ಣಕ್ಕಿಯವರು ಸಂಗ್ರಹಿಸಿ ಪ್ರಕಟಿಸಿದ್ದರು. ಎಲ್ಗುಂಡಪ್ಪ ಅವರ ಪ್ರಖ್ಯಾತ ಸಂಕಲನ “ನಾಡ ಪದಗಳಲ್ಲಿ ಟಿಪ್ಪು ಸುಲ್ತಾನನ ಬೀಳಿನ ಹಾಡು” ಎಂಬ ಲಾವಣಿಯಿದೆ. ಈ ಲಾವಣಿಗಳು ಟಿಪ್ಪುವಿನ ಬಗೆಗೆ ವಿಶೇಷ ಒಲವನ್ನು ಪ್ರಕಟಿಸುತ್ತಿದ್ದು, ಇವನ್ನು ಮನೆಮನೆಗೆ ಹೋಗಿ ಹಾಡಲಾಗುತ್ತಿತ್ತು. ಲಾವಣಿಯ ಕೆಲವು ಸಾಲುಗಳು ಇಂತಿವೆ-

`ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ
ಫರಂಗಿಸೊಲ್ಜರ ತರಂಗ ಮದ್ಯದಿ ತುರಂಗ ಬಿಟ್ಟನು ತ್ವರಿತದಲಿ.
ಟಿಪು ಸುಲ್ತಾನನ ಹದಿನೇಳು ವರುಷದ ಆಡಳಿತ ಕೊನೆಯಾಯ್ತು
ಟೀಪು ರಾಜ್ಯದೊಳು ಶರಾಬು ಶೇಂದಿ ಗಾಂಜಾ ಅಫೀಮು ಇರಲಿಲ್ಲ
ಟೀಪುವಿನ ಕಾಲದೊಳು ಜೂಜಿನಾಟ ಮೇಣ್ವ ್ಯಭಿಚಾರದ ಸುಳಿವಿಲ್ಲ
ಹುಲಿ ಸೀಳಿದ ದೊರೆ ಅಳಿದೋದ ಮೇಲೆ ರಣದಲ್ಲಿ
ಮಳೆಯಾಯಿತು ಗಳಿಗೇಲಿ ಪ್ರಳಯದಂತೆ ಭರದಲ್ಲಿ
ಸುಲಿಗೆಯ ಮಾಡಿದರು ಶತ್ರು ಜನರು ಪುರದಲ್ಲಿ
ಬಳಿ ಕಾದ ವಿವರ ಬರೆದೇನು ಇಲ್ಲಿ ಫಲವಿಲ್ಲ.

ಟಿಪ್ಪುವಿನ ಪರವಾಗಿರುವ ಧ್ವನಿ ಈ ಲಾವಣಿಗಳಲ್ಲಿರುವುದು ಕಂಡು ಬರುತ್ತದೆ. ಇದೂ ಚರಿತ್ರೆ ಯೆಂದು ತಿಳಿಹೇಳಬೇಕಾಗಿದೆ.

ಹೈದರಾಲಿ ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನ ರಾಜ್ಯವನ್ನು ವಶಪಡಿಸಿಕೊಂಡ. ಆದ್ದರಿಂದ ವಾಲ್ಮೀಕಿ ಸಮುದಾಯ ಟಿಪ್ಪುವನ್ನು ದ್ವೆಷಿಸಬೇಕು-ಎಂಬುದನ್ನು ಪ್ರಶ್ನಿಸಬೇಕಾಗಿದೆ. ಹಾಗಾದರೆ ಸ್ವತಂತ್ರ ಬುಡಕಟ್ಟುಗಳಾಗಿ ಈ ಸಮುದಾಯ ಜೀವಿಸುತ್ತಿದ್ದಾಗ ಆ ಪ್ರದೇಶಗಳನ್ನೆಲ್ಲ ವಶಪಡಿಸಿಕೊಂಡ ಕದಂಬರು, ಚಾಲುಕ್ಯರು ಇತ್ಯಾದಿ, ಹಾಗೇ ಗಂಗರನ್ನು ಅಧೀನ ಮಾಡಿಕೊಂಡ ಚಾಲುಕ್ಯರು, ರಾಷ್ಟಕೂಟರು, ಚೋಳರು, ಕೆಂಪೇಗೌಡರನ್ನು ಸೆರೆಗೆ ಹಾಕಿದ ವಿಜಯನಗರದರಸರು ಇವರೆಲ್ಲನ್ನೂ ವಾಲ್ಮೀಕಿ ಸಮುದಾಯ, ಗಂಗವಾಡಿಕಾರ ಮತ್ತು ಇತರ ಒಕ್ಕಲಿಗರು ದ್ವೆಷಿಸಬೇಕೆ? ಹೀಗೆ ರಾಜ, ಮಹರಾಜರುಗಳ ನಡುವೆ, ನವಾಬ, ಸುಲ್ತಾನರ ನಡುವೆ ಎಷ್ಟೋ ಯುದ್ಧಗಳು ನಡೆದಿವೆ. ಅವರ ವಾರಸುದಾರರೆಂದು ಭ್ರಮೆಗೊಳಗಾದ ಜನರೆಲ್ಲ ಪರಸ್ಪರ ದ್ವೇಷಕಾರಬೇಕೆ-ಎಂದೂ ಕೇಳಬೇಕಾಗಿದೆ.

ಇದೇ ಸಮಯದಲ್ಲಿ ಟಿಪ್ಪು ಆದರ್ಶ ರಾಜ ಅಥವಾ ಪುರುಷ ಎಂದು ಹಾಡಿ ಹೊಗಳ ಬೇಕಾಗಿಲ್ಲ. ಎಲ್ಲಾ ರಾಜರಂತೆ ಆತನಲ್ಲೂ ನ್ಯೂನತೆಗಳು ಇದ್ದವು. ಆತನ ವಾಸ್ತವ ಸಾಧನೆಗಳನ್ನು ಹೇಳಲು ಬೇಕಾದಷ್ಟು ಇದೆ. ಇಲ್ಲದ್ದನ್ನು ಆತನ ಮೇಲೆ ಹೊರಿಸುವುದು ಬೇಡ. ಆದರೆ ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಕಪ್ಪು-ಬಿಳುಪಿನ ಒಂದೇ ಆಯಾಮಕ್ಕೆ ಇಳಿಸುವ ಸಂಘಗ್ಯಾಂಗಿನ ಪ್ರಯತ್ನಗಳನ್ನು ಧೃಢತೆಯಿಂದ ಎದುರಿಸಬೇಕಾಗಿದೆ. ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವ ಅವನನ್ನು ಕರ್ನಾಟಕದಲ್ಲೂ ದೇಶದ ತುಂಬಾ, ಸಂಘಗ್ಯಾಂಗಿನ ಸತತ ಅಪ ಪ್ರಚಾರದ ನಂತರವೂ ಒಂದು ಜನಪ್ರಿಯ ರಾಷ್ಟ್ರೀಯ `ಐಕಾನ್’ ಆಗಿಸಿದೆ. ಅವನ ಬಗ್ಗೆ ಬಂದ ಕಥೆ-ಕಾದಂಬರಿಗಳು, ನಾಟಕಗಳು, ಸಿನಿಮಾ, ಟಿವಿ ಸೀರಿಯಲುಗಳಿಗೆ ಲೆಕ್ಕವಿಲ್ಲ. `ಹಿಂದುತ್ವ ರಾಜಕಾರಣ’ಕ್ಕೆ ತೀರಾ ವಿರುದ್ಧವಾದ, ಅದರ ಹಿಡಿತಕ್ಕೆ ಜಗ್ಗದ ಬಗ್ಗದ ಒಗ್ಗದ ಟಿಪ್ಪುವಿನಂತಹ ರಾಷ್ಟ್ರೀಯ `ಐಕಾನ್’ ಅವರಿಗೆ ಜೀರ್ಣಿಸಿಕೊಳ್ಳುವುದು ಕಷ್ಟ. ಅದಕ್ಕಾಗಿಯೇ ಅವರ ಈ ಬದ್ಧ ವಿರೋಧ.

ಸಂಘಗ್ಯಾಂಗಿನ ಕುತ್ಸಿತ ಅಪಪ್ರಚಾರವನ್ನು, ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಎತ್ತಿಹಿಡಿಯುವ ಮೂಲಕ ಹಿಮ್ಮೆಟ್ಟಿಸಬೇಕಾಗಿದೆ. ಇದಕ್ಕಾಗಿ ಟಿಪ್ಪು ಹುಟ್ಟುಹಬ್ಬವನ್ನು ವಿಚಾರ ಸಂಕಿರಣ, ಸಾರ್ವಜನಿಕ ಸಭೆ ಮುಂತಾದವುಗಳ ಮೂಲಕ-ರಾಜಿಯಿಲ್ಲದ ವಸಾಹತುಶಾಹಿ-ವಿರೋಧಿ ಹೋರಾಟಗಾರ; ಧಾರ್ಮಿಕ ಸಮಭಾವ, ಉತ್ಪಾದನಾ ಶಕ್ತಿಗಳನ್ನು ಹಾಗೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಪ್ರಭುತ್ವದ ರೂಪಕ; ತಾತ್ವಿಕ ಚಿಂತಕ-ಮುಂತಾದ ಟಿಪ್ಪುವಿನ ವರ್ಣರಂಜಿತ ಬಹುಮುಖಿ ವ್ಯಕ್ತಿತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಆತನ ವ್ಯಕ್ತಿತ್ವಕ್ಕೆ ನ್ಯಾಯ ಸಲ್ಲಿಸಬೇಕಾಗಿದೆ.

Leave a Reply

Your email address will not be published. Required fields are marked *