ಇನ್ ವೆಸ್ಟ್ ಕರ್ನಾಟಕ

ಬೆಂಗಳೂರಿನಲ್ಲಿ ‘ಇನ್‍ವೆಸ್ಟ್ ಕರ್ನಾಟಕ-2016’ ಭರಾಟೆ ನಡೆದಿದೆ. ಪುನಃ ಲಕ್ಷಗಟ್ಟಲೆ ಕೋಟಿ ಕೋಟಿ ಬಂಡವಾಳ ಹೂಡಿಕೆ ಹಾಗೂ ಲಕ್ಷಾಂತರ ಉದ್ಯೋಗಗಳ ಕನಸು ಬಿತ್ತಲಾಗುತ್ತಿದೆ. ಹೂಡಿಕೆದಾರರ ಕಣ್ಣಿಗೆ ಬೆಂಗಳೂರಿನ ‘ಟ್ರಾಫಿಕ್ ಜಾಮ್’ ಬೀಳದಂತೆ ಬಸ್ಸುಗಳನ್ನು ಲಾರಿಗಳನ್ನು ನಗರದೊಳಗೆ ಬಿಡುತ್ತಿಲ್ಲ. ಪ್ರಮುಖ ರಸ್ತೆಗಳು ಚೊಕ್ಕವಾಗಿ ಕಾಣುವಂತೆ, ಪಂಚತಾರಾ ಹೊಟಲುಗಳ ಸುತ್ತ ಕಸ, ಒಳಗೆ ಜಿರಲೆಗಳು ಕಾಣದಿರುವಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೂ ಸಮಾವೇಶ ನಡೆಯುವಾಗಲೇ ಆಫ್ರಿಕನ್ ಮಹಿಳೆಯ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ನಡೆದರೂ ಅದು ‘ಜನಾಂಗೀಯ ದ್ವೇಷ ಕೃತ್ಯ ಅಲ್ಲ’ ಎಂದು ಗೃಹಮಂತ್ರಿಗಳು ಅಪ್ಪಣೆ ಕೊಡಿಸಿದ್ದಾರೆ.

ಹೂಡಿಕೆದಾರರು ಗಾಬರಿಯಾದರೇ ಎಂದಿರಬಹುದು. ಆದರೆ ಹೂಡಿಕೆದಾರರ ಮತ್ತು ದೌರ್ಜನ್ಯಕ್ಕೆ ಒಳಗಾದವರ ‘ವರ್ಣ’ದಿಂದಾಗಿಯೋ ಏನೋ ಅವರೂ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ‘ಬೆಂಗಳೂರು-ಕರ್ನಾಟಕ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಜಾಗ’ ಎಂದು ಯಾವಾಗಲೂ ಕೋಳಿಜಗಳದಲ್ಲಿ ತೊಡಗಿರುವ ಕೇಂದ್ರ/ರಾಜ್ಯ ಸರಕಾರಗಳ ಬಿಜೆಪಿ/ಕಾಂಗ್ರೆಸ್ ಮಂತ್ರಿಗಳು ಅಧಿಕಾರಿಗಳು ಸಮಾವೇಶದಲ್ಲಿ ಒಂದೇ ರಾಗದಲ್ಲಿ ಹಾಡಿದ್ದಾರೆ.

ಈ ಪತ್ರಿಕೆಯ ಕಳೆದ ಸಂಚಿಕೆಯ ಪ್ರಧಾನ ಲೇಖನದಲ್ಲಿ ಇಂತಹ ಸಮಾವೇಶ ಬಿತ್ತಿದ ಭ್ರಮೆ ಮತ್ತು ವಾಸ್ತವಗಳ ನಡುವಿನ ಅಗಾಧ ಅಂತರವನ್ನು ನಿರೂಪಿಸಲಾಗಿತ್ತು. “ಹಿಂದಿನ ಮೂರು ಜಿಮ್ ಸಮಾವೇಶಗಳಲ್ಲಿ ಅನುಮೋದನೆಯಾಗಿವೆ ಎಂದು ಘೋಷಣೆಯಾದ ಪ್ರತಿ 8 ಯೋಜನೆಗಳಲ್ಲಿ, ಕೇವಲ ಎರಡು ಘಟಕಗಳು ಅನುಷ್ಟಾನದ ಹಂತಕ್ಕೆ ಬಂದಿವೆ. ಅದರಲ್ಲಿ ಒಂದು ಘಟಕ ಮಾತ್ರ ಆರಂಭವಾಗಿದೆ. ಘೋಷಿತ ಬಂಡವಾಳದ ಕೇವಲ 10ರಲ್ಲಿ ಒಂದು ಭಾಗ ವಾಸ್ತವವಾಗಿ ಹೂಡಿಕೆಯಾಗಿದೆ. ಆದರೆ ಆರಂಭವಾಗದ ಅರ್ಧದಷ್ಟು ಘಟಕಗಳು ಸುಮಾರು ಶೇ. 70ರಷ್ಟು ಭೂಮಿಯನ್ನು ಇಟ್ಟುಕೊಂಡಿವೆ!  ಎಷ್ಟು ಉದ್ಯೋಗಗಳನ್ನು ವಾಸ್ತವವಾಗಿ ಸೃಷ್ಟಿಸಿವೆ ಎಂಬುದಕ್ಕೆ ದಾಖಲೆಗಳಿಲ್ಲ.” ಇದು ಆ ನಿರೂಪಣೆಯ ಸಾರಾಂಶವಾಗಿತ್ತು.

ಜಿಮ್ 2010ರ ಮತ್ತು ಬಳ್ಳಾರಿಯ ನಿರ್ದಿಷ್ಟ ಅನುಭವ ತೆಗೆದುಕೊಂಡರೆ, ಭರವಸೆ 1.39 ಲಕ್ಷ ಕೋಟಿ ರೂ. ಹೂಡಿಕೆ, 35 ಕೈಗಾರಿಕೆಗಳು, 79 ಸಾವಿರ ಉದ್ಯೋಗಗಳು. ಕಳೆದ ಐದು ವರ್ಷಗಳಲ್ಲಿ ವಾಸ್ತವವಾಗಿ ಬಂದಿದ್ದು 15 ಕೈಗಾರಿಕೆಗಳು, 16.4 ಸಾವಿರ ಕೋಟಿ ರೂ. ಹೂಡಿಕೆ ಮತ್ತು ಉದ್ಯೋಗಗಳು ಕೇವಲ 9,229. ಹೂಡಿಕೆ ಸಮಾವೇಶದಲ್ಲಿ ಮಾತ್ರವಲ್ಲ, ಸಾಮಾನ್ಯ (ಉನ್ನತ ಮಟ್ಟದ ಒಪ್ಪಿಗೆ ಸಮಿತಿಯ ಪರಿಶೀಲನೆ) ಪ್ರಕ್ರಿಯೆಯಲ್ಲಿ ಮತ್ತು ಸಮಾವೇಶದಲ್ಲಿ ಅನುಮೋದನೆಯಾದ ಹೂಡಿಕೆ ಯೋಜನೆಗಳನ್ನು ಒಟ್ಟಾಗಿ ತೆಗೆದುಕೊಂಡರೂ ಪರಿಸ್ಥಿತಿಯೂ ಇದೇ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಕಳೆದ 7 ವರ್ಷಗಳಲ್ಲಿ 3063 ಒಟ್ಟು ಅನುಮೋದಿತ ಯೋಜನೆಗಳಲ್ಲಿ ಕೇವಲ 323 ಆರಂಭವಾಗಿವೆ.

ಆದ್ದರಿಂದಲೋ ಏನೋ ಈ ಸಮಾವೇಶದ ನಂತರ ಎಷ್ಟು ಹೂಡಿಕೆ ಆಗಲಿದೆ, ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಬಗ್ಗೆ ಸರಕಾರದ ಅಧಿಕೃತ ವಕ್ತಾರರು ಏನೂ ಹೇಳುತ್ತಿಲ್ಲ. ಇದು ಯಾರೂ ಅದನ್ನು ನಂಬುವುದಿಲ್ಲ ಅಂತ ಇರಬಹುದು ಅಥವಾ ಇನ್ನೇನಾದರೂ ಕಾರಣ ಇದೆಯೇ? ಆದರೂ 2 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಬಗ್ಗೆ ಅನಧಿಕೃತವಾಗಿ ಹೇಳಲಾಗುತ್ತಿದೆ. ಉದ್ಯೋಗಗಳ ಬಗ್ಗೆ ಇಂತಹ ಊಹಾಪೋಹವೂ ಇಲ್ಲ. ಈ ಬರಹ ಪ್ರಿಂಟಿಗೆ ಹೋಗುವವರೆಗೆ ಸಮಾವೇಶ ಇನ್ನು ನಡೆಯುತ್ತಿದೆ. ಅಂತಿಮ ಹೂಡಿಕೆಯ ಭರವಸೆ ಎಷ್ಟು ಎಂದು ಗೊತ್ತಾಗಿಲ್ಲ.

ಆದರೆ ಇದಕ್ಕಿಂತ ಕೇಳಬೇಕಾದ ಮುಖ್ಯ ಪ್ರಶ್ನೆ – ಈ ಸಮಾವೇಶಗಳ ನಿಜವಾದ ಉದ್ದೇಶ ಏನು? ‘ಕೈಗಾರಿಕೀಕರಣ ಅಥವಾ ವಿನಾಶ’ ಎಂಬ ವಿಶ್ವೇಶ್ವರಯ್ಯ ಅವರ ಬಹುಶ್ರುತ ಹೇಳಿಕೆಯನ್ನು ಸಮಾವೇಶದಲ್ಲಿ ನೆನಪಿಸಿಕೊಂಡು, ಪ್ರಮುಖ ಉದ್ದೇಶ ಕೈಗಾರಿಕೀಕರಣ ಅಥವಾ ಕೈಗಾರಿಕೀಕರಣದ ಮೂಲಕ ಅಭಿವೃದ್ಧಿ ಎಂದು ಸಾರಲಾಯಿತು. ಅದೇ ಉಸಿರಿನಲ್ಲಿ ‘ಭೂಮಿಯ ಲಭ್ಯತೆ ಬಗ್ಗೆ ಚಿಂತೆ ಬೇಡ. ನೀವು ಭೂಮಿ ಗುರುತಿಸಿ ಸರ್ವೇ ನಂಬರ್ ಹೇಳಿ. ಅದನ್ನು ಕೊಡಿಸುವುದು ನಮ್ಮ ಜವಾಬ್ದಾರಿ’ ಎಂದು ಹೂಡಿಕೆದಾರರಿಗೆ ಓಪನ್ ಚೆಕ್ ಕೊಡಲಾಗಿದೆ.

ಕೈಗಾರಿಕೀಕರಣ ಅವರ ಉದ್ದೇಶ ಎಂದು ಒಪ್ಪಿಕೊಂಡರೂ, ಸಮಾವೇಶದ ಹಿಂದಿರುವ “ಅಭಿವೃದ್ಧಿ = ಕೈಗಾರಿಕೀಕರಣ = ಬಂಡವಾಳ ಹೂಡಿಕೆ = ಭೂಸ್ವಾಧೀನ” ಎಂಬ ಫಾರ್ಮುಲಾ ಒಪ್ಪಿಕೊಳ್ಳುವುದು ಖಂಡಿತಾ ಕಷ್ಟ.  ಅಭಿವೃದ್ಧಿಗೆ ಕೈಗಾರಿಕೀಕರಣ ಖಂಡಿತ ಅಗತ್ಯ. ಆದರೆ ನಿಜವಾದ ಅಭಿವೃದ್ಧಿಗೆ – ಪರಿಸರ ಮಾಲಿನ್ಯ-ನಾಶ ಮಾಡದ,  ಪರಿಸರ ತಾಳಿಕೊಳ್ಳುವ, ಪ್ರಾಕೃತಿಕ ಸಂಪನ್ಮೂಲಗಳ ದಕ್ಷ ಬಳಕೆ ಮಾಡುವ, ಉದ್ಯೋಗ ಸೃಷ್ಟಿಸುವ, ಮನುಷ್ಯರ ನಿಜವಾದ ಅಗತ್ಯಗಳನ್ನು ಪೂರೈಸುವ ಸರಕು-ಸೇವೆಗಳ ಉತ್ಪಾದನೆ ಮಾಡುವ, ಈಗ ಇರುವ ಕೃಷಿ-ಕೈಗಾರಿಕೆಗಳಿಗೆ ಪೂರಕವಾಗಿರುವ – ಕೈಗಾರಿಕೀಕರಣ ಬೇಕು.

ಆದ್ದರಿಂದ ಯಾವ ರೀತಿಯ ಕೈಗಾರಿಕೆ ಬೇಕು ಎಂಬುದನ್ನು ಬಂಡವಾಳ ಹೂಡಿಕೆದಾರರ ಆಯ್ಕೆಗೆ (ಖಯಾಲಿ, ಆಸಕ್ತಿ ಅಥವಾ ಲಾಭದಾಸೆ) ಬಿಡಲು ಸಾಧ್ಯವಿಲ್ಲ. ಅದನ್ನು ಯೋಜಿತವಾಗಿ ನಿರ್ಧರಿಸಬೇಕು. ಇದೇ ರೀತಿ ಯಾವ ಕೈಗಾರಿಕೆಗೆ ಎಷ್ಟು ಭೂಮಿ ಮತ್ತು ಇತರ ಪ್ರಾಕೃತಿಕ ಸಂಪನ್ಮೂಲ ಬೇಕು, ಎಲ್ಲಿ ಎಂಬುದನ್ನೂ ಸಹ ವೈಜ್ಞಾನಿಕವಾಗಿ ಕೈಗಾರಿಕೆಯ ಸ್ವರೂಪದ ಮೇಲೆ ನಿರ್ಧರಿಸಬೇಕು. ಆಹಾರ ಉತ್ಪಾದನೆ-ಭದ್ರತೆ, ಈಗಿರುವ ಕೃಷಿ-ಕೈಗಾರಿಕೆಗಳ ರಕ್ಷಣೆ ಮುಂತಾದ ಅಭಿವೃದ್ಧಿಯ ಅಗತ್ಯಗಳ ಒಟ್ಟಾರೆ ಅಂದಾಜಿನ ಮೇಲೆ ಇದನ್ನೂ ನಿರ್ಧರಿಸಬೇಕು.

ಆದರೆ ಹಿಂದಿನ ಸಮಾವೇಶಗಳ ಮತ್ತು ಇತರ ಅನುಮೋದಿತ ಯೋಜನೆಗಳ ಒಟ್ಟು ಅನುಭವ ನೋಡಿದರೆ, ‘ಹೂಡಿಕೆದಾರ’ರ ಉದ್ದೇಶ  ಕೈಗಾರಿಕೀಕರಣವೂ ಅಲ್ಲ. ಉದ್ಯೋಗ ಸೃಷ್ಟಿಯೂ ಅಲ್ಲ. ಭೂಮಿ ಅಥವಾ ಇತರ ಸಾರ್ವಜನಿಕ ಪ್ರಾಕೃತಿಕ ಸಂಪನ್ಮೂಲಗಳನ್ನು ಬಿಟ್ಟಿಯಾಗಿ ಅಥವಾ ಮೂರು ಕಾಸಿಗೆ, ಇತರ ಹಣಕಾಸಿನ ಮತ್ತಿತರ ಸಬ್ಸಿಡಿಗಳನ್ನು ದೋಚುವುದು. ಅದನ್ನು ಕೈಗಾರಿಕೀರಣದ ಬದಲು ಕಡಿಮೆ ರಿಸ್ಕ್ ನಲ್ಲಿ ಸೂಪರ್ ಲಾಭ ಗಳಿಸುವ ಇತರ (ರೀಯಲ್ ಎಸ್ಟೇಟ್ ನಂತಹ) ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು -ಎ ಎಂಬುದು ಸ್ಪಷ್ಟವಾಗುತ್ತದೆ. ಬೇರೆ ಯಾವ ರೀತಿಯಲ್ಲಿ – “ಘೋಷಿತ ಬಂಡವಾಳದ ಕೇವಲ 10ರಲ್ಲಿ ಒಂದು ಭಾಗ ವಾಸ್ತವವಾಗಿ ಹೂಡಿಕೆಯಾಗಿದೆ. ಆದರೆ ಆರಂಭವಾಗದ ಅರ್ಧದಷ್ಟು ಘಟಕಗಳು ಸುಮಾರು ಶೇ. 70ರಷ್ಟು ಭೂಮಿಯನ್ನು ಇಟ್ಟುಕೊಂಡಿವೆ!” – ಭ್ರಮೆ-ವಾಸ್ತವಗಳ ಈ ಅಂತರವನ್ನು ಅರ್ಥ ಮಾಡಿಕೊಳ್ಳಬಹುದು? ಜಿಮ್ 2010ರಲ್ಲಿ ಬಳ್ಳಾರಿಗೆ ಕಬ್ಬಿಣ-ಉಕ್ಕು ಕೈಗಾರಿಕೆಗಳ ಹೂಡಿಕೆಯ ಘೊಷಣೆ ಅದರ ಜತೆ ದೀರ್ಘ ಗಣಿ ಲೀಸ್ ಕೊಡಲಾಗುತ್ತದೆ ಎಂಬ ನಿರೀಕ್ಷೆಯಿಂದ ಆಗಿತ್ತು.

ಕಬ್ಬಿಣ-ಉಕ್ಕು ಕಾರ್ಖಾನೆ ಸ್ಥಾಪಿಸುವುದಕ್ಕಿಂತ ಕಚ್ಚಾ ಅದಿರಿ£ ರಫ್ತು ಕಡಿಮೆ ರಿಸ್ಕಿನ ಸೂಪರ್ ಲಾಭದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಗಣಿ ಹಗರಣದಿಂದ ಇದು ಸಾಧ್ಯವಿಲ್ಲದಾದಾಗ ಈ ಹೂಡಿಕೆಗಳನ್ನು ತಡೆ ಹಿಡಿಯಲಾಯಿತು. ಸರಕಾರದ (ರಾಜಕಾರಣಿಗಳು ಅಥವಾ ಅಧಿಕಾರಿಗಳ ಸಹ) ಉದ್ದೇಶ ಸಹ ಕೈಗಾರಿಕೀಕರಣವೂ ಅಲ್ಲ. ಉದ್ಯೋಗ ಸೃಷ್ಟಿಯೂ ಅಲ್ಲ. ಭೂಮಿ ಮತ್ತು ಇತರ ಪ್ರಾಕೃತಿಕ ಸಂಪನ್ಮೂಲಗಳ ಲೂಟಿಯಲ್ಲಿ ಹೂಡಿಕೆದಾರರ ಜತೆ ಶಾಮೀಲಾಗಿ ಅದರಲ್ಲಿ ಈಗಾಗಲೇ ಪಾಲುದಾರರಾಗಿರುವುದು ಅಥವಾ ಮುಂದೆ ಪಾಲುದಾರರಾಗಲು ಸಿದ್ಧತೆ ಮಾಡುವುದು.

ಇದರರ್ಥ ಕೈಗಾರಿಕೀಕರಣ ಬೇಡವೆಂದೇ? ಖಂಡಿತ ಅಲ್ಲ. ಕೈಗಾರಿಕೀಕರಣ ದೀರ್ಘವಾದ ಸಂಕೀರ್ಣ ಪ್ರಕ್ರಿಯೆ.  ಬಂಡವಾಳ, ಪ್ರಾಕೃತಿಕ ಸಂಪನ್ಮೂಲಗಳ ಜತೆಗೆ ಅಗತ್ಯ ವಸ್ತುಗಳ ಉತ್ಪಾದನೆಗೆ ಶ್ರಮದ ಕೌಶಲ್ಯ, ಸೃಜನಶೀಲತೆ, ವಿಜ್ಞಾನ-ತಂತ್ರಜ್ಞಾನಗಳನ್ನು ಬೆಳೆಸುವ; ಅವನ್ನು ಶಿಕ್ಷಣ, ಸಮಾಜದ ಇತರ ಬೆಳವಣಿಗೆಗಳ ಜತೆಗೆ ತಳುಕು ಹಾಕುವ; – ದೀರ್ಘವಾದ ಸಂಕೀರ್ಣ ಪ್ರಕ್ರಿಯೆ.  ಕರ್ನಾಟಕಕ್ಕೆ ಭಾರತಕ್ಕೆ ಇದು ಗೊತ್ತಿಲ್ಲದ್ದೂ ಅಲ್ಲ. ಹೊಸದೂ ಅಲ್ಲ. ಮೈಸೂರು ಪ್ರಾಂತ್ಯದ ‘ವಿಶ್ವೇಶ್ವರಯ್ಯ ಮಾದರಿ’, ಸ್ವಾತಂತ್ರ್ಯ ನಂತರದ ‘ನೆಹರೂ ಮಾದರಿ’, ಈ ಎರಡು ಮಾದರಿಗಳ ಫಲವಾಗಿ 1980ರ ದಶಕದ ಸಣ್ಣ-ಮಧ್ಯಮ ಕೈಗಾರಿಕೆಗಳ ಬೆಳವಣಿಗೆ, 1990ರ ದಶಕದ ಐಟಿ ಕ್ಷೇತ್ರದ ಬೆಳವಣಿಗೆಯ ಅನುಭವ ನಮ್ಮ ಮುಂದಿದೆ. ಇವೆಲ್ಲವೂ ಪೂರ್ಣ ಸಕಾರಾತ್ಮಕ ಅನುಭವಗಳಲ್ಲ. ಅವುಗಳ ಸಫಲತೆ ಮತ್ತು ವೈಫಲ್ಯಗಳಿಂದಲೂ ಪಾಠ ಕಲಿತು ಈಗಿನ ಸನ್ನಿವೇಶಕ್ಕೆ ಹೊಂದುವ ಕೈಗಾರಿಕೀಕರಣದ ನೀತಿ ರೂಪಿಸಬೇಕಿದೆ.

ಸಾರ್ವಜನಿಕ ಸಂಪನ್ಮೂಲಗಳಿಂದ ಸಾರ್ವಜನಿಕ ಒಡೆತನದಲ್ಲಿ ಮೂಲ ಸೌಕರ್ಯಗಳನ್ನು ಸೃಷ್ಟಿಸುವುದು, ಸಾರ್ವಜನಿಕ ಕ್ಷೇತ್ರದಲ್ಲಿ ವಿಜ್ಞಾನ-ತಂತ್ರಜ್ಞಾನದ ಶಿಕ್ಷಣ-ಸಂಶೋಧನೆ, ಆಯಕಟ್ಟಿನ ಕ್ಷೇತ್ರಗಳಲ್ಲಿ ಸಾರ್ವಜನಿಕ ಒಡೆತನದ ಕೈಗಾರಿಕೆಗಳ ಸ್ಥಾಪನೆ, ರಾಜ್ಯ ಸರಕಾರದ ಒಡೆತನದ ಉದ್ಯಮಗಳ ಪುನರುಜ್ಜೀವನ, ಸಣ್ಣ-ಮಧ್ಯಮ ಉದ್ಯಮಗಳಿಗೆ ಉತ್ತೇಜನ (ಸಮಾವೇಶದಲ್ಲಿ ಸರಕಾರದ ಬಗ್ಗೆ ಸಣ್ಣ-ಮಧ್ಯಮ ಉದ್ಯಮಿಗಳು ಗರಂ ಆಗಿದ್ದರು ಎಂದು ವರದಿಯಾಗಿದೆ), ನಿಜವಾದ ‘ಮೇಡ್-ಇನ್-ಇಂಡಿಯಾ’ ಅಥವಾ ‘ಮೇಡ್-ಇನ್-ಕರ್ನಾಟಕ’ಕ್ಕೆ ಉತ್ತೇಜನ – ಇಂತಹ ನೀತಿಯ ಆವಶ್ಯಕ ಅಂಶಗಳು.   ‘ಇನ್‍ವೆಸ್ಟ್ ಕರ್ನಾಟಕ-2016’ದಂತಹ ಸಮಾವೇಶಗಳಿಂದಂತೂ ನಿಜವಾದ ಕೈಗಾರಿಕೀಕರಣ ಸಾಧ್ಯವಿಲ್ಲ. ಇಂತಹ ಸಮಾವೇಶಗಳು ಸಾಧಿಸುವುದು ‘ಕೈಗಾರಿಕೀಕರಣ ಇಲ್ಲದ ವಿನಾಶ’ವನ್ನು. ಈ ಸಮಾವೇಶಗಳ ನಿಜವಾದ ಫಾರ್ಮುಲಾ ಹೀಗಿದೆ:

ಬಂಡವಾಳ ಹೂಡಿಕೆದಾರರ ಸಮಾವೇಶ = ಭೂಕಸಿತ = ಕೈಗಾರಿಕೀಕರಣ ಇಲ್ಲದ ವಿನಾಶ.

Leave a Reply

Your email address will not be published. Required fields are marked *