ಗಣರಾಜ್ಯ ಉಳಿಸಲು ಕೆಂಬಾವುಟ ಹಿಡಿದರು…

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ವತಿಯಿಂದ ರಾಜ್ಯಾದ್ಯಂತ ಈ ಗಣರಾಜ್ಯ ದಿನದಂದು, ‘ಗಣರಾಜ್ಯ ಉಳಿಸಿ, ಜನರಾಜ್ಯ ಬೆಳೆಸಿ’ ‘ಕೋಮುವಾದ, ಭಯೋತ್ಪಾದನೆ ಅಳಿಸಿ ಸಂವಿಧಾನದ ಆಶಯಗಳನ್ನು ಈಡೇರಿಸಿ’ ಎನ್ನುವ ಘೋಷಣೆಯೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಇತರೆಡೆಇಡೀ ದಿನದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಕೊಪ್ಪಳ, ದಾವಣಗೆರೆ, ಮೈಸೂರು, ಅಂಕೋಲಾ, ಸಿಂಧನೂರು, ಹಳಿಯಾಳ, ದೇವದುರ್ಗ ಮುಂತಾದ ಕಡೆ ಪ್ರತಿಭಟನೆಗಳು ನಡೆದು ಸಾವಿರಾರು ಜನ ಭಾಗವಹಿಸಿದ ವರದಿಗಳು ಬಂದಿವೆ. ಇಡೀ ದಿನ ಘೋಷಣೆಗಳು, ಭಾಷಣಗಳು, ಹಾಡುಗಳು ಇದ್ದವು. ಕೆಲವು ಕಡೆ ಪ್ರಗತಿಪರ ಬುದ್ದಿಜೀವಿಗಳು ಭಾಗವಹಿಸಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ಪ್ರಾಣ ತ್ಯಾಗ ಮಾಡಿ ಬ್ರಿಟೀಷರನ್ನು ಓಡಿಸಿದರು. ದೇಶದಲ್ಲಿ ಸಮಾನತೆ, ಕೋಮುಸೌಹಾರ್ದತೆ, ಐಕ್ಯತೆ ಸೇರಿದಂತೆ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಆಶಯಗಳೊಂದಿಗೆ ರಚನೆಯಾದ ಸಂವಿಧಾನದ ಆಶಯಗಳನ್ನು ಆಡಳಿತ ನಡೆಸಿದ ಸರ್ಕಾರಗಳು ಗಾಳಿಗೆ ತೂರುತ್ತಿವೆ. ಅದರಲೂ ಈಗ ಅಧಿಕಾರಕ್ಕೆ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರವಂತೂ ಅತೀ ಆಕ್ರಮಣಕಾರಿಯಾಗಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಸಂವಿಧಾನದ ಆಶಯಗಳ ಉಳಿವಿಗಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂವಿಧಾನ ಶಿಕ್ಷಣ, ಉದ್ಯೋಗ, ಆರೋಗ್ಯ ಮೂಲಭೂತ ಹಕ್ಕಾಗಬೇಕು ಎಂದು ಹೇಳುತ್ತದೆ, ಆದರೆ ಸರ್ಕಾರಗಳು ಇವುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಸಂವಿಧಾನ ಆಶಯಗಳಿಗೆ ಎಳ್ಳು ನೀರು ಬಿಟ್ಟಿವೆ. ಕಾರ್ಮಿಕರು-ರೈತರ ಕೂಲಿಯನ್ನೂ ಅಲ್ಪ ಗಳಿಕೆ ಹಾಗೂ ದುಡಿದ ತನ್ನ ಹಣ ಬಳಸಿಕೊಳ್ಳುವ ಪ್ರಾಥಮಿಕ ಸ್ವಾತಂತ್ರ್ಯ ಕಸಿದ ನೋಟು ನಿಷೇಧ ಕ್ರಮ ಅತ್ಯಂತ ಕಟುವಾದ ಪ್ರಜಾಪ್ರಭುತ್ವ-ವಿರೋಧಿ ಕ್ರಮ ಎಂಧು ಖಂಡಿಸಲಾಯಿತು.

ದೇಶದ ಅತ್ಯುನ್ನತವಾದ ಲೋಕಸಭೆಯಲ್ಲಿ ಇದಕ್ಕೆ ಯಾವುದೇ ರೀತಿಯ ಉತ್ತರವನ್ನು ನೀಡದೆ ಆಗೌರವ ತೋರುವ ಮೂಲಕ, ಪ್ರಧಾನಿ ಗಣರಾಜ್ಯ ವ್ಯವಸ್ಥೆಗೆ ವಿರುದ್ದವಾಗಿ ವರ್ತಿಸುತ್ತಿದ್ದಾರೆ. ಒಂದು ಕಡೆ ಬೆಳೆಗಳನ್ನು ಬೆಳೆಯುವ ರೈತರು ಬೆಂಬಲ ಬೆಲೆ ಸಿಗದೆ ಪರಿತಪಿಸುತ್ತಿರುವಾಗ ರೈತರ ಸಾಲ ಮನ್ನಾ ಮಾಡುವ ಯಾವುದೇ ಘೋಷಣೆಗಳನ್ನು ಮಾಡದ ಕೇಂದ್ರ ಸರ್ಕಾರ ಬಂಡವಾಳಗಾರರ ಸಾಲಗಳನ್ನು ಮನ್ನಾ ಮಾಡುತ್ತಿದೆ. ಇಂದು ಪ್ರಕೃತಿದತ್ತಾವಾಗಿ ಸೀಗುವ ನೀರಿಗೂ ಸಹ ಹಣಕೊಟ್ಟು ಕುಡಿಯುವ ವ್ಯವಸ್ಥೆ ಜಾರಿಯಾಗುತ್ತಿದೆ ಎಂತಹ ಸ್ಥಿತಿಯಲ್ಲಿ ದೇಶದ ಜನಕ್ಕಾಗಿ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *