ಆರೆಸ್ಸೆಸ್ ನ ಲಾಠಿ, ಖಡ್ಗಗಳ ಝಳಪಿಸುವಿಕೆಯ ಮಧ್ಯದಲ್ಲೇ ಓಡಾಡಿದ್ದೇನೆ : ಪಿಣರಾಯಿ

ಆಗ ನನಗೆ ಏನೂ ಮಾಡಲಾಗದವರು ಈಗೇನು ಮಾಡುತ್ತೀರಿ?:

ಸಂಗಾತಿಗಳೇ ಹಾಗೂ ಪ್ರೀತಿಯ ಸಹೋದರ, ಸಹೋದರಿಯರೇ, ಮಂಗಳೂರಿನಲ್ಲಿ ನಡೆದ ಈ ಐತಿಹಾಸಿಕ ಸೌಹಾರ್ದ ರ್ಯಾಲಿಗೆ ಬಂದು ಭಾಗವಹಿಸಲು ನನಗೆ ಸಂತೋಷವಾಗುತ್ತದೆ.

ದೇಶದಲ್ಲಿ, ರಾಜ್ಯಗಳಲ್ಲಿ ಮತೀಯ ಸೌಹಾರ್ದತೆಯನ್ನು ರಕ್ಷಿಸಬೇಕಾಗಿದೆ. ದೇಶದ ವಿವಿದ ಭಾಗಗಳಲ್ಲಿ ಈ ಸೌಹಾರ್ದತೆಗೆ ಅಪಾಯ ಸಂಭವಿಸಿದೆ ಹಾಗೂ ಜನತೆಯ ಐಕ್ಯತೆಯನ್ನು ನಾಶಮಾಡುವ ಪ್ರಕರಣಗಳು ತಲೆ ಎತ್ತುತ್ತಿವೆ.. ಈ ಐಕ್ಯತೆಯನ್ನು ಒಡೆಯುವ ಶಕ್ತಿಗಳೇ ಇಂದು ಕೇಂದ್ರದಲ್ಲಿ ಅಧಿಕಾರ ಚಲಾಯಿಸುತಿವೆ. ಸೌಹಾರ್ಧತೆಯನ್ನು, ಐಕ್ಯತೆಯನ್ನು ಬಯಸದೇ ಇರುವ ಶಕ್ತಿಗಳೇ ಇಂದು ಕೇಂದ್ರದಲ್ಲಿ ಅಧಿಕಾರವನ್ನು ಚಲಾಯಿಸಲು ನಿರ್ದೇಶನ ನೀಡುತ್ತಿವೆ. ಈ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಯಾವತ್ತೂ ಸಮಾಜದಲ್ಲಿ ಸಾಮರಸ್ಯವನ್ನು ಬಯಸುವವರಲ್ಲ. ಬದಲಾಗಿ ಜನಗಳ ಮಧ್ಯೆ ಬಿರುಕು ಸೃಷ್ಟಿಸಿ. ಸಮಾಜವನ್ನು ಒಡೆದು ತಮ್ಮ ಮತೀಯ ದ್ವೇಷವನ್ನು ಸಾಧಿಸಲು ಇರುವ ಸಂಘಟನೆ. ಈ ಆರೆಸ್ಸೆಸ್ ಸಂಘಟನೆಯ ಆದೇಶವನ್ನೇ ಸರಕಾರ ಪಾಲಿಸುತ್ತಿರುವುದು ನಾವು ನೋಡುತ್ತಿದ್ದೇವೆ.

1925 ರಲ್ಲಿ ಆರೆಸ್ಸೆಸ್ ಸಂಘಟನೆ ಹುಟ್ಟಿದೆ. ಭಾರತದ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿರುವ ಸಂದರ್ಭದಲ್ಲೂ ಆರ್‍ಎಸ್‍ಎಸ್ ಸಂಘಟನೆ ದೇಶದಲ್ಲಿ ಕೆಲಸ ಮಾಡುತ್ತಿತ್ತು. ನಂತರದ 22 ವರ್ಷಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟ ಬಹಳ ತೀವ್ರವಾಗಿರುವ ಸಂದರ್ಭದಲ್ಲೂ ಈ ಆರೆಸ್ಸೆಸ್ ಸಂಘಟನೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ.

ಆರೆಸ್ಸೆಸ್ ಸಂಘಟನೆ ಸ್ವಾತಂತ್ರ್ಯ ಹೋರಾಟಗಳಲ್ಲಿ ಯಾವ ಪಾತ್ರ ವಹಿಸದಿದ್ದರೂ, ಅವರು ಅವರದೇ ಪಾತ್ರವನ್ನು ನೆರವೇರಿಸಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಳಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋಗಿ ಎಂಬ ಘೋಷಣೆ ಎಲ್ಲಾ ಸಂಘಟನೆಗಳಿಂದಲೂ ಬಂದ ಸಮಯ. ಕೆಲವು ವಿಷಯಗಳಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರ ಅಂತಿಮ ಗುರಿ ಸ್ವಾತಂತ್ರ್ಯ ಪಡೆಯುವುದಾಗಿತ್ತು.

ಈ ಸಂದರ್ಭದಲ್ಲಿ ಆರೆಸ್ಸೆಸ್ ನವರು ಬ್ರಿಟಿಷರು ಭಾರತದಿಂದ ತೊಲಗಬೇಕೆಂಬ ಘೋಷಣೆ ಮಾಡಲು ತಯಾರಾಗಲಿಲ್ಲ. ಬದಲಾಗಿ ಬ್ರಿಟಿಷರಿಗೆ ಸಹಕರಿಸುವ ಕೆಲಸವನ್ನು ಮಾಡಿದರು. ಆರೆಸ್ಸೆಸ್ ನ ಮುಖಂಡರಾದ ಸಾರ್ವಕರ್ ಬ್ರಿಟಿಷ್ ವೈಸ್‍ರ್ಯಾಯ್‍ರನ್ನು ಭೇಟಿ ಮಾಡಿ ತಮ್ಮಲ್ಲಿ ನಮಗೆ ಬಹಳ ಹೊಂದಾಣಿಕೆ ಇದೆ. ನಮ್ಮಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಬ್ರಿಟಿಷರ ಆಳ್ವಿಕೆಗೆ ತಮ್ಮ ವಿರೋಧವಿಲ್ಲ ಎಂಬ ಆರೆಸ್ಸೆಸ್ ನ ನಿಲುವನ್ನು ಪ್ರಕಟಿಸಿದರು. ಈ ರೀತಿಯಲ್ಲಿ ದೇಶಕ್ಕೆ ಮೋಸ ಮಾಡಿದ ಸಂಘಟನೆ ಆರೆಸ್ಸೆಸ್. ನಮ್ಮ ದೇಶವನ್ನು, ನಮ್ಮ ಜನರನ್ನು ಒಂದಾಗಿ ಕಾಣಲು ಆರೆಸ್ಸೆಸ್ ತಯಾರಾಗಲಿಲ್ಲ. ಅವರನ್ನು ಜಾತಿಗಳ, ಧರ್ಮಗಳ ಹೆಸರಲ್ಲಿ ವಿಭಜನೆ ಮಾಡಬೇಕೆಂಬುದೇ ಆರೆಸ್ಸೆಸ್ ನ ತಂತ್ರವಾಗಿತ್ತು. ಅದರ ಭಾಗವಾಗಿ ದೇಶದ ವಿವಿಧ ಭಾಗಗಳಲ್ಲಿ ಜರುಗಿದ ಎಲ್ಲಾ ಮತೀಯ ಗಲಭೆಗಳ ನೇತೃತ್ವವನ್ನು ವಹಿಸಿದ್ದು ಆರೆಸ್ಸೆಸ್. ಜನರ ಐಕ್ಯತೆಯನ್ನೂ ಸಾಮಾಜಿಕ ಸಾಮರಸ್ಯವನ್ನು ಆರೆಸ್ಸೆಸ್ ಎಂದೂ ಬಯಸಲಿಲ್ಲ.

ರಾಷ್ಟ್ರಪಿತ ಮಹಾತ್ಮಾಗಾಂಧಿಯನ್ನು ಯಾಕಾಗಿ ಕೊಂದರು ಎಂಬ ಪ್ರಶ್ನೆ ನಮ್ಮ ಮುಂದಿದೆ. ಗಾಂಧೀಜಿಯವರು ಯಾರಿಗೂ ಅನ್ಯಾಯ ಮಾಡಿದವರಲ.್ಲ ಅವರನ್ನು ಕೊಲ್ಲಲು ಆರೆಸ್ಸೆಸ್ ನವರು ತುಂಬಾ ದಿನಗಳಿಂದ ತಯಾರಿ ನಡೆಸಿದ್ದರು. ಗೋಡ್ಸೆ ಮಹಾತ್ಮಾಗಾಂಧಿಯನ್ನು ತಮ್ಮ ಪಿಸ್ತೂಲು ಆಯುಧದಿಂದ ಕೊಂದರೆ, ಆರೆಸ್ಸೆಸ್ ನವರು ಗೋಡ್ಸೆಯನ್ನೇ ತಮ್ಮ ಆಯುದವನ್ನಾಗಿ ಗಾಂಧೀಜಿಯವರ ಹತ್ಯೆಮಾಡಲು ಉಪಯೋಗಿಸಿದರು. ಗಾಂಧೀಜಿಯವರ ಕೊಲೆಯಾದಾಗ ಆರ್‍ಎಸ್‍ಎಸ್ ಘಟಕಗಳಲ್ಲಿ ಸಿಹಿಯನ್ನು ಹಂಚಲಾಯಿತು. ಗಾಂಧೀಜಿಯ ಕೊಲೆಯಿಂದಾಗಿ ಜನರ ರೋಷ ಕೆರಳಿತು. ಆರೆಸ್ಸೆಸ್ ನ್ನು ನಿಷೇದಿಸಬೇಕೆಂಬ ಬೇಡಿಕೆ ರೋಷಗೊಂಡ ಜನರಿಂದ ಬಂದಾಗ ಆರೆಸ್ಸೆಸ್ ನ್ನು ನಿಷೇದಿಸಲಾದರೂ, ಕೆಲವೇ ಸಮಯದ ನಂತರ ಅಂದಿನ ಅಧಿಕಾರದಲ್ಲಿರುವ ನಾಯಕತ್ವಕ್ಕೆ ಒತ್ತಡ ಹಾಗೂ ಬೆದರಿಕೆಯೊಡ್ಡಿ ಆರೆಸ್ಸೆಸ್ ನ ನಿಷೇದವನ್ನು ರದ್ದುಗೊಳಿಸಿದರು. ನಿಷೇದ ರದ್ದುಗೊಂಡರೂ ಅವರ ಬಣ್ಣ ಬದಲಾಗಲಿಲ್ಲ. ಅವರ ತಂತ್ರಗಾರಿಕೆ ಬದಲಾಗಲಿಲ್ಲ.

ಆರೆಸ್ಸೆಸ್ ನ ತಾತ್ವಿಕತೆಯೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. 1925 ರಲ್ಲಿ ಈ ಸಂಘಟನೆ ಹುಟ್ಟಿದೆ. ಐದು ವರ್ಷ ನಂತರ ಸಂಘಟನೆಯ ಮುಖಂಡರಲ್ಲೊಬ್ಬರಾದ ಬಿ.ಎಸ್.ಮುಂಜೆ ಯವರು ಕೆಲವು ಅಂತರ್ರಾಷ್ಟ್ರೀಯ ನಾಯಕರನ್ನು ಭೇಟಿಯಾದರು. ಅವರು ಆರೆಸ್ಸೆಸ್ ಗೆ ಮಾದರಿ ಆಗಬಹುದಾದ ಸಂಘಟನೆಗಳ ಹುಡುಕಾಟದಲ್ಲಿ ಇದ್ದರು. ಮುಖ್ಯವಾಗಿ ಅವರು ಭೇಟಿಯಾದುದು ಇಟೆಲಿ ದೇಶದ ಮುಸ್ಸೊಲಿನಿಯವರನ್ನು. ಅಲ್ಲಿ ಅವರು ಮುಸ್ಸೊಲಿನಿಯ ಫ್ಯಾಸಿಸ್ಟ್ ಸಂಘಟನೆಯ ತರಬೇತಿ ಕೇಂದ್ರಗಳಿಂದ ಉತ್ತೇಜಿತರಾಗುತ್ತಾರೆ. ಆ ರೀತಿಯ ತರಬೇತಿ ತಂತ್ರಗಳ ವಿವರಗಳ ಬಗ್ಗೆ ಮತ್ತು  ಭಾರತದಲ್ಲಿ ಅವನ್ನು ಹೇಗೆ ಅಳವಡಿಸಬಹುದೆಂದು ಮುಸ್ಸೊಲಿನಿಯೊಡನೆ ಚರ್ಚೆ ನಡೆಸುತ್ತಾರೆ. ಈ ಫ್ಯಾಸಿಸ್ಟ್ ಸಂಘಟನಾ ತತ್ವವನ್ನು ಆರೆಸ್ಸೆಸ್ ಭಾರತದಲ್ಲಿ ಪ್ರಯೋಗಿಸಲು ಪ್ರಾರಂಭಿಸಿತು. ಇಂದಿಗೂ ಆರೆಸ್ಸೆಸ್ ಮುಸ್ಸೊಲಿನಿಯವರ ಫ್ಯಾಸಿಸ್ಟ್ ಸಂಘಟನಾ ಸ್ವರೂಪವನ್ನೇ ಅನುಸರಿಸುತ್ತಿದೆ.

ಆರೆಸ್ಸೆಸ್ ತನ್ನ ಸಿದ್ದಾಂತವನ್ನು ಹಿಟ್ಲರ್ ಜರ್ಮನಿಯ ನಾಜೀವಾದದಿಂದ ಪಡೆಯಿತು. ಹಿಟ್ಲರನು ಜರ್ಮನಿಯಲ್ಲಿರುವ ಯೆಹೂದಿ ಮತ್ತಿತರ ಅಲ್ಪಸಂಖ್ಯಾತ ಜನರನ್ನು ನಾಶಪಡಿಸಲು ರೂಪಿಸಿದ ತಂತ್ರಗಳನ್ನು ವಿಶ್ವದ ಎಲ್ಲಾ ಸಂಘಟನೆಗಳು ವಿರೋಧಿಸಿ ಖಂಡಿಸಿದ್ದವು. ಆರೆಸ್ಸೆಸ್ ಮಾತ್ರ ಹಿಟ್ಲರನ ಈ ನೀತಿಯನ್ನು ಸ್ವಾಗತಿಸಿ ಬೆಂಬಲ ನೀಡಿತು. ಹಿಟ್ಲರನ ಈ ನೀತಿಯಿಂದ ಅದಕ್ಕೆ ಪರಮಾನಂದವಾಗಿತ್ತು. ದೇಶದ ನೀತಿ ನಿರೂಪಣೆಗೆ ಜರ್ಮನಿ ಮಾಡೆಲ್ ಎಂದು ಆರೆಸ್ಸೆಸ್ ಸಾರ್ವಜನಿಕವಾಗಿಯೇ ಹೇಳಿತು. ಜರ್ಮನಿಯ ಯೆಹೂದಿಯರನ್ನು ನಾಶಮಾಡಲು ಹಿಟ್ಲರ್ ನಡೆಸಿದ ಕ್ರೂರ ದಮನತಂತ್ರಗಳನ್ನು ಆರೆಸ್ಸೆಸ್ ನವರು ಬಾರತದಲ್ಲಿ ಪ್ರಯೋಗಿಸಿ ಇಲ್ಲಿರುವ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಾರೆ. ಹಿಟ್ಲರನ ಈ ನರಮೇಧದ ನೀತಿಯನ್ನು ಭಾರತದಲ್ಲಿ ಆರೆಸ್ಸೆಸ್ ನವರು ಬಳಸಬೇಕೆಂದು ಗೋಲ್ವ್‍ಲ್ಕರ್ ಕೂಡಾ ಬರೆದಿರುತ್ತಾರೆ. ಹಿಟ್ಲರನಿಗೆ ಜರ್ಮನಿಯ ಅಲ್ಪಸಂಖ್ಯಾತರು ಯಹೂದಿಯರು.  ಕಮ್ಯೂನಿಸ್ಟರನ್ನು “ಬೊಲ್ಶೆವಿಕ್ಸ್” ಎಂದು ಕರೆದ. ಯಹೂದಿಯರು ಮತ್ತು ಕಮ್ಯುನಿಸ್ಟರನ್ನು ದೇಶದ ಆಂತರಿಕ ಶತ್ರುಗಳೆಂದು ಕರೆದ. ಭಾರತದಲ್ಲಿ ಆರೆಸ್ಸೆಸ್ – ಮುಸಲ್ಮಾನ, ಕ್ರೈಸ್ತರು ಮತ್ತು ಕಮ್ಯೂನಿಸ್ಟ್ಟರನ್ನು – ತಮ್ಮ ಶತ್ರುಗಳಾಗಿ ಕಾಣುತ್ತದೆ ಹಾಗೂ ಅವರ ಮೇಲೆ ದಾಳಿಗಳನ್ನು ಸಹಾ ಮಾಡುತ್ತಿದ್ದಾರೆ.

ದೇಶದ ‘ಶತ್ರು’ಗಳಾಗಿ ಕಾಣುವ ಮುಸಲ್ಮಾನ, ಕ್ರೈಸ್ತರು ಮತ್ತು ಕಮ್ಯೂನಿಸ್ಟ್‍ರ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಾರೆ. ಸಾವಿರಾರು ಕೊಲೆಗಳನ್ನು ದೇಶದ ವಿವಿದ ಭಾಗಗಳಲ್ಲಿ ಆರೆಸ್ಸೆಸ್ ನವರು ನಡೆಸಿರುತ್ತಾರೆ. ಈ ರೀತಿಯ ಘರ್ಷಣೆ ಹೇಗೆ ನಡೆಸಬೇಕು, ಯಾವ ವಿಷಯದ ಮೇಲೆ ನಡೆಸಬೇಕು ಎಂಬುದರ ಬಗ್ಗೆ ಆರೆಸ್ಸೆಸ್ ನಿರ್ದಿಷ್ಟ ತರಬೇತಿ ಕೊಡುತ್ತದೆ. ಒಂದೊಂದು ಸಂಘರ್ಷವನ್ನು ಹೇಗೆ ಮತೀಯ ಬಣ್ಣ ಕಟ್ಟಿ ಪ್ರಚೋದಿಸಬಹುದು ಎಂದು ತರಬೇತಿ ಪಡೆದ ಆರೆಸ್ಸೆಸ್ ನವರು ಇಂತಹ ಆದೇಶಗಳನ್ನು ಜಾರಿಗೊಳಿಸುತ್ತಾರೆ. ಈ ರೀತಿಯ ಸಂಘರ್ಷಗಳನ್ನು ಹುಟ್ಟಿಹಾಕುವುದು, ಅದಕ್ಕೆ ಬೇಕಾದ ಬಣ್ಣಗಳನ್ನು ಹಚ್ಚಿ ಸುಳ್ಳು ಸುಳ್ಳು ಅಪಪ್ರಚಾರಗಳನ್ನು ಹೇಗೆ ಮಾಡಬಹುದೆಂದು ಆರೆಸ್ಸೆಸ್ ನವರಿಗೆ ತರಬೇತಿ ಕೊಡಲಾಗುತ್ತಿದೆ ಆದ್ದರಿಂದಲೇ ಎಲ್ಲಾ ಕೋಮು ಗಲಭೆಗಳ ಮುಂಚೂಣಿಯಲ್ಲಿರುವುದು ಆರ್‍ಎಸ್‍ಎಸ್ ಸಂಘಟನೆ. ಕೋಮು ಗಲಭೆಗಳ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರೆಸ್ಸೆಸ್ ಅವನ್ನು ಹುಟ್ಟು ಹಾಕಲು ಬಳಸಿದ ಸಮಾನ ತಂತ್ರಗಳನ್ನು ಕಾಣಬಹುದು.

ಆರೆಸ್ಸೆಸ್ ಜಾತ್ಯತೀತತೆಗೆ ವಿರೋಧವಾಗಿತ್ತು. ಭಾರತ ಒಂದು ಸೆಕ್ಯುಲರ್ ದೇಶವಾಗಿರಬಾರದು ಎಂಬುದು ಮೊದಲಿನಿಂದಲೂ ಅದರ ನಿಲುವಾಗಿತ್ತು.  ಜುಲೈ 31, 1947 ರ ರೀತಿಯ ಆರೆಸ್ಸೆಸ್ ನ ಮುಖವಾಣಿಯಾದ “ಆರ್ಗನೈಸರ್” ಪತ್ರಿಕೆಯಲ್ಲಿ ದೇಶದ ಹೆಸರು “ಇಂಡಿಯಾ” ಆಗಿರಬೇಕು ಎಂಬುದಕ್ಕೂ ಆರೆಸ್ಸೆಸ್ ತನ್ನ ವಿರೋದವನ್ನು ವ್ಯಕ್ತಪಡಿಸಿ ದೇಶದ ಹೆಸರನ್ನು `ಹಿಂದೂಸ್ತಾನ್’ ಎಂದು ಬದಲಾಯಿಸಲು ಪ್ರಯತ್ನಿಸಿತು. ನಮ್ಮ ರಾಷ್ಟ್ರೀಯ ಧ್ವಜವನ್ನು ಕೂಲಂಕಷವಾದ ಚರ್ಚೆಗಳ ನಂತರ ರೂಪಿಸಲಾಗಿತ್ತು. ಆದರೆ ಆರೆಸ್ಸೆಸ್ ಅದರ ಬದ್ಧ ವಿರೋಧಿಯಾಗಿತ್ತು. ಜುಲೈ 17, 1947 ರ “ಆರ್ಗನೈಸರ್” ಪತ್ರಿಕೆಯಲ್ಲಿ “ರಾಷ್ಟ್ರೀಯ ಧ್ವಜ” ಎಂಬ ಸಂಪಾದಕೀಯ ಬರೆದು ಅದರಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಯಾವ ಅಂಶಗಳೂ ಇಲ್ಲ. ಅದು ಸರಿಯಾಗಿಲ್ಲ ಎಂದು ಹೇಳಿತ್ತು. ಮೊದಲಿನಿಂದಲೂ ಭಾರತವನ್ನು ಧರ್ಮ-ಆಧಾರಿತ ದೇಶವಾಗಿಸುವುದೇ ಆರೆಸ್ಸೆಸ್ ನೀತಿಯಾಗಿತ್ತು. ಭಾರತ ಸೆಕ್ಯುಲರ್ ದೇಶವಾಗುವುದು ಅವರಿಗೆ ಬೇಕಾಗಿರಲಿಲ್ಲ.  ಇದೀಗ ಅಧಿಕಾರದಲ್ಲಿರುವ ಆರೆಸ್ಸೆಸ್ ನಿಯಂತ್ರಣದ ಕೇಂದ್ರ ಸರಕಾರದ ಗೃಹಮಂತ್ರಿ ಸಂವಿದಾನದಲ್ಲಿ “ಸೆಕ್ಯುಲರಿಸಂ” ಎಂಬ ಪದ ಇರುವುದೇ ನಮ್ಮೆಲ್ಲಾ ಸಮಸ್ಯೆಗಳಿಗೆ ಮೂಲಕಾರಣ ಎಂದು ಹೇಳಿದ್ದಾರೆ. ಅಂದರೆ ಜಾತ್ಯಾತೀತ ರಾಷ್ಟ್ರ ಇರುವುದು ಆರೆಸ್ಸೆಸ್ ನವರಿಗೆ ಈಗಲೂ ಬೇಕಾಗಿಲ್ಲ.

ದೇಶದ ಭವಿಷ್ಯ ನಿರ್ಧರಿಸುವ ಅಧಿಕಾರ ಇರುವ ಆರೆಸ್ಸೆಸ್, ಅದನ್ನು ಅತ್ಯಂತ ಅಸಹಿಷ್ಣುತೆಯಿಂದ ನಿರ್ವಹಿಸುತ್ತಿದೆ. ಆರೆಸ್ಸೆಸ್ ನ ಅಸಹಿಷ್ಣುತೆ ಬಗ್ಗೆ ಹೇಳುವುದಾದರೆ ಹಲವು ಗಂಟೆಗಳು ಬೇಕಾಗಬಹುದು. ಆರೆಸ್ಸೆಸ್ ಅಸಹಿಷ್ಣುತೆಯ ಸಾಕಾರ ರೂಪವಾಗಿ ಬಿಟ್ಟಿದೆ. ಅದು ದೇಶದ ಆಳುವವರೆಲ್ಲರಿಗೂ ಮುಟ್ಟಿದೆ. ಮಹಾತ್ಮ ಗಾಂಧಿಯವರಂಂತೆ ದೇಶಕ್ಕೆ ಬೇಕಾದ ಜನಪ್ರಿಯರಾದ ಹಲವರನ್ನು ಕೊಲೆ ಮಾಡಲಾಗುತ್ತಿದೆ. ಅಸಹಿಷ್ಣುತೆ ಎಲ್ಲಿಗೆ ಮುಟ್ಟಿದೆ ಎಂದರೆ ಕರ್ನಾಟಕದ ಚಿಂತಕ ಸಂಶೋಧಕ ಪ್ರೊ. ಎಂ.ಎಂ. ಕಲಬುರ್ಗಿ ಯವರ ಕೊಲೆ ಮಾಡಲಾಯಿತು. ಇದು ದೇಶದ ಜಾತ್ಯಾತೀತ ಮನಸ್ಸುಗಳಿಗೆ ತುಂಬಾ ನೋವನ್ನು ತಂದಿದೆ. ಹಾಗೆಯೇ ಕಾ. ಗೋವಿಂದ ಪನ್ಸಾರೆ, ನರೇಂದ್ರ ದಾಬೊಲ್‍ಕರ್ ಹತ್ಯೆ. ಇವೆಲ್ಲಾ ಸಂಘಪರಿವಾರದ ನಾಯಕತ್ವದಲ್ಲಿ ಮಾಡಿದ ಕೃತ್ಯಗಳಾಗಿವೆ. ಇವರಿಗೆ ಇತರರು ವ್ಯಕ್ತಪಡಿಸುವ ಮಾತುಗಳನ್ನು ಕೇಳುವಷ್ಟು ತಾಳ್ಮೆ ಇಲ್ಲ. ಮಾತ್ರವಲ್ಲ ಸಂಘಪರಿವಾರದ ಮಾತುಗಳನ್ನು ನೀತಿಗಳನ್ನು ಒಪ್ಪ್ಪದವರನ್ನೂ ನಾಶಮಾಡುವುದೇ ಅವರ ಜಾಯಮಾನವಾಗಿದೆ.

ಕರ್ನಾಟಕದಲ್ಲೂ ಆರೆಸ್ಸೆಸ್ ನವರ ಅಸಹಿಷ್ಣುತೆಗೆ ಒಳಗಾಗಿ ದಾಳಿಯನ್ನು ಎದುರಿಸಿದವರು ಶ್ರೀ ಕೆ.ಎಸ್. ಭಗವಾನ್, ಜ್ಞಾನಪೀಠ ಪ್ರಶಶ್ತಿ ವಿಜೇತ ಗಿರೀಶ್ ಕಾರ್ನಾಡ್. ತಮಗೆ ಇಷ್ಟವಾಗದ ಕವನ ಬರೆದ ಶ್ರೀ ಹುಚ್ಚಂಗಿ ಪ್ರಸಾದರ ಅಂಗೈಯನ್ನು ಕಡಿಯಲಾಯಿತು. ಪತ್ರಕರ್ತೆ ಲೇಖಕಿ ಚೇತನ ತೀರ್ಥಹಳ್ಳಿಯವರ ಮೇಲೆ `ಅತ್ಯಾಚಾರ’ದ ಹಾಗೂ `ಆಸಿಡ್’ ಹಾಕುವ ಬೆದರಿಕೆ ಹಾಕಲಾಯಿತು. ತಮಿಳುನಾಡಿನ ಮುರುಗನ್ ಮೇಲೆ ದಾಳಿ ಮಾಡಲಾಯಿತು. ಅನಾರೋಗ್ಯದಲ್ಲಿದ್ದ ಡಾ|| ಯು.ಆರ್. ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಹೋಗುವ ವಿಮಾನದ ಟಿಕೇಟನ್ನು ಕೊಡಲಾಯಿತು. ಚಲನ ಚಿತ್ರದ ಶಾರೂಖ್ ಖಾನ್, ಅಮೀರ್ ಖಾನ್, ಕೇರಳದ ಫಿಲಂ ನಿರ್ದೇಶಕ ಕಮಲ್, ನಂದಿತಾ ದಾಸ್‍ರವರಿಗೂ ಪಾಕಿಸ್ತಾನಕ್ಕೆ ಹೋಗಬೇಕೆಂಬ ಎಚ್ಚರಿಕೆಯನ್ನೂ ಆರೆಸ್ಸೆಸ್ ನಿಂದ ಕೊಡಲಾಯಿತು. ಕೇರಳದ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ಎಂ.ಟಿ. ವಾಸುದೇವನ್ ನಾಯರ್‍ರವರು ನೋಟು ಅನಾಣ್ಯೀಕರಣದಿಂದಾಗಿ ಬಡಜನರಿಗಾದ ಸಂಕಷ್ಟಗಳ ಬಗ್ಗೆ ತಮ್ಮ ಅಭಿಪ್ರಾಯ ಪ್ರಕಟಿಸಿದಾಗ ಅವರನ್ನು ಪಾಕಿಸ್ತಾನಕೆ ಕಳುಹಿಸಬೇಕೆನ್ನುವ ಕೂಗು ಆರೆಸ್ಸೆಸ್ ನಿಂದ ಬಂತು. ಅದು ಇನ್ನೂ ಮುಂದುವರಿಯುತ್ತಾ ಇದೆ. ಇದೇನು? ಎಲ್ಲಾ ನಮ್ಮ ಪ್ರತಿಷ್ಟಿತ ವಿಶಿಷ್ಟ ಸೃಜನಶೀಲ ಮನಸ್ಸುಗಳು ಆರೆಸ್ಸೆಸ್ ಹೇಳಿದ ಹಾಗೇ ಕೇಳಬೇಕಾ? ಹೇಳಿದ ಹಾಗೆಯೇ ನಡೆಯಬೇಕಾ? ಇಲ್ಲದಿದ್ದರೆ ಭಾರತದಲ್ಲಿ ವಾಸ ಮಾಡುವ ಹಾಗಿಲ್ಲವೆ?

ನನಗೆ ಆರೆಸ್ಸೆಸ್ ನವರೊಡನೆ ಒಂದೇ ಹೇಳಲಿಕ್ಕಿರುವುದು. ಭಾರತ ದೇಶ ಆರೆಸ್ಸೆಸ್ ನವರ ದೇಶವಲ್ಲ. ಇದು ಜಾತ್ಯಾತೀತ ಜನರ ದೇಶ. ಇದು ಎಲ್ಲರ ದೇಶ. ಆರೆಸ್ಸೆಸ್ ಗೆ ವಿಶೇóಷ ಸವಲತ್ತುಗಳೇನೂ ಇಲ್ಲ. ಮಾನವರಾಗಿ ಜೀವಿಸಲು, ಸ್ವತಂತ್ರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಅಂತಹ ಅವಕಾಶವನ್ನು ವಿರೋದಿಸುವ ಆರೆಸ್ಸೆಸ್ ನ ಅಸಹಿಷ್ಣುತೆಗೆ ವಿರುದ್ಧವಾಗಿ ಎಲ್ಲಾ ಪ್ರಜಾಪ್ರಭುತ್ವ, ಜಾತ್ಯಾತೀತ ಶಕ್ತ್ತಿಗಳು ಐಕ್ಯತೆಯಿಂದ ಪ್ರತಿಭಟಿಸಬೇಕಾಗಿದೆ.

ಜನತೆ ಯಾವ ಆಹಾರ ಸೇವಿಸಬೇಕು. ಯಾವ ಕೆಲಸ ಮಾಡಬೇಕು, ಯಾವ ಬಟ್ಟೆ ಹಾಕಬೇಕು ಎಂದು ಆರೆಸ್ಸೆಸ್ ನವರು ಆದೇಶ ಕೊಡುವುದನ್ನು ನಾವು ನೋಡುತ್ತಿದ್ದೇವೆ. ಉತ್ತರಪ್ರದೇಶದ ದಾದ್ರಿಯಲ್ಲಿ ಮುಸ್ಲಿಂ ಒಬ್ಬನನ್ನು ಗೋಮಾಂಸ ಸೇವಿಸಿದ್ದಾನೆಂದು ಮನೆಯಿಂದ ಎಳೆದು ಹಾಕಿ ಆರೆಸ್ಸೆಸ್ ನವರು ಕೊಂದರು. ನಂತರ ಅವರ ಮನೆಯಿಂದ ತೆಗೆದುಕೊಂಡು ಹೋದ ಮಾಂಸವನ್ನು ಪರೀಕ್ಷಿಸಿದಾಗ, ಅದು ಗೋಮಾಂಸ ಅಲ್ಲವೆಂದೂ, ಆಡಿನ ಮಾಂಸವೆಂದು ಗೊತ್ತಾಯಿತು.

ಗುಜರಾತ್‍ನಲ್ಲಿ 4 ಮಂದಿ ದಲಿತರನ್ನು ನಗ್ನರಾಗಿ ಕಾರಿಗೆ ಕಟ್ಟಿ, ಕರಾಳವಾಗಿ ಬಡಿದಿದ್ದಾರೆ. ಅವರು ಸತ್ತ ದನಗಳ ಧರ್ಮ ಸುಲಿಯಲಿಲ್ಲ. ಕಕ್ಕಸುಗಳನ್ನು ತೊಳಿಯಲಿಲ್ಲ ಎಂಬುದೇ ಕಾರಣ. ಚಾತುರ್ವರ್ಣದಲ್ಲಿ ಅವರ ಜಾತಿಗೆ ಕೊಟ್ಟ ಕೆಲಸ ಮಾತ್ರವೇ ಮಾಡಬೇಕೆಂಬ ಆದೇಶ ಆರೆಸ್ಸೆಸ್ ನವರದ್ದು. ಇದೆ ರೀತಿ ಹರಿಯಾಣದಲ್ಲಿ ವೃದ್ದ ರೈತ ಮತ್ತು ಅವನ ಹೆಂಡತಿಯನ್ನು ಕೊಲೆ ಮಾಡಿದಾಗ, ಓಡಿದ ಅವರ ಇಬ್ಬರು ಯುವತಿ ಹೆಣ್ಣುಮಕ್ಕಳನ್ನು ಓಡಿಸಿ, ಅವರು ಸಿಗದಾಗ ಅವರ ಚಿಕ್ಕಮಕ್ಕಳ ಕುತ್ತಿಗೆಗೆ ಚಾಕುತೋರಿಸಿ, ಅವರನ್ನು ಬರುವಂತೆ ಮಾಡಿ, ಆ ಇಬ್ಬರ ಯುವತಿಯರ ಮೇಲೆ ಸರಣಿ ಅತ್ಯಾಚಾರ ಮಾಡಲಾಯಿತು. ಇಂತಹ ಕೃತ್ಯಗಳು ಪಂಜಾಬ್, ಜಾರ್ಖಂಡ್, ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಲಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಮುಂದಾಳುಗಳನ್ನು ಅವರೇ ಕೊಲೆಮಾಡಿರುವುದನ್ನು ನಾವು ನೋಡುತ್ತಿದ್ದೇವೆ. ಇದೇ ಪೆಬ್ರವರಿ 19 ಕ್ಕೆ, ಕಟೀಲು ಯಕ್ಷಗಾನದಲ್ಲಿ ಆಡುವವರ ಹಣ ದೋಚಿದ ಪ್ರಕರಣ ಹೊರಗೆ ಬರುತ್ತದೆ ಎಂಬ ಕಾರಣದಿಂದ ಪ್ರತಾಪ್ ಪೂಜಾರಿ ಎಂಬ ಹಿಂದೂ ಜಾಗರಣ ವೇದಿಕೆಯ ಸದಸ್ಯನನ್ನು ಸಂಘ-ಪರಿವಾರದವರೇ ಕೊಲೆ ಮಾಡಿದ್ದಾರೆ. ವಿನಾಯಕ ಬಾಳಿಗಾ ಎಂಬುವರು ಬಿಜೆಪಿ ಪಕ್ಷದ ಕಾರ್ಯಕತರು. ಅವರು ದೇವಸ್ಥಾನಕ್ಕೆ ಹೋಗುವಾಗ ದಾರಿಯಲ್ಲಿ ಕೊಲೆ ಮಾಡಲಾಯಿತು. ನಮೋ ಬ್ರಿಗೇಡ್‍ನ ಸ್ಥಾಪಕ ನರೇಂದ್ರ ಶೆಣೈ ಮತ್ತು ಲೋಕಸಭಾ ಸದಸ್ಯ ನಳಿನ ಕುಮಾರ್ ಕಟೀಲ್ ಕೂಡಾ ಈ ಪ್ರಕರಣದಲ್ಲಿ ಆರೋಪಿಗಳು.  ಇನ್ನೊಬ್ಬ ಬಿಜೆಪಿ ಕಾರ್ಯಕರ್ತ ಉಡುಪಿಯ ಪ್ರವೀಣ ಪೂಜಾರಿಯನ್ನು ಗೋಸಾಗಾಟದ ಹೆಸರಲ್ಲಿ ಕೊಲೆ ಮಾಡಲಾಯಿತು.

ಕೇರಳದಲ್ಲಿ ಶ್ರೀ ನಾರಾಯಣ ಗುರುವಿನಿಂದಾಗಿ ಒಂದು ನವೋದಯ ಚಳುವಳಿ ನಡೆದದ್ದು ಮತ್ತು ಅದರ ಮುಂಧುವರಿಕೆಯಾಗಿದ್ದು, ಈ ಪ್ರದೇಶಕ್ಕೂ ನಾರಾಯಣ ಗುರುಗಳು ಬಂದು ಅವರ ಪ್ರಭಾವ ಬೀರಿದ್ದರು ಎಂದು ನಿಮಗೆ ಗೊತ್ತಿದೆ. ಈ ನವೋದಯ ಚಳುವಳಿ ಮುಂದುವರೆದು ಕೇರಳ ಒಂದು ಪ್ರಬಲ ಸೆಕ್ಯುಲರ್ ಸಮಾಜವಾಗಿ ವಿಕಾಸವಾಯಿತು. ಜಾತ್ಯಾತೀತ ಶಕ್ತಿಗಳು ಒಂದಾದುವು. ಹಿಂದುಳಿದ ವರ್ಗದ ಜನರು ಒಂದಾದರು. ಈ ಶಕ್ತಿಯನ್ನು ಒಡೆದು ಹಾಕಲು ಆರೆಸ್ಸೆಸ್ ತಂತ್ರ ಪ್ರಾರಂಭವಾಯಿತು. ಕಮ್ಯೂನಿಸ್ಟ್ ಪಕ್ಷದ ಮೇಲೆ ಆಕ್ರಮಣಾಕಾರಿ ದಾಳಿಗಳು ಪ್ರಾರಂಭವಾದುವು. ಸುಮಾರು ಆರುನೂರು ಮಂದಿ ಕಮ್ಯುನಿಸ್ಟ್ ಸಂಗಾತಿಗಳು ವಿಚ್ಛಿದ್ರಕಾರಿ ಶಕ್ತಿಗಳನ್ನು ಎದುರಿಸಿ ಪ್ರಾಣತ್ಯಾಗ ಮಾಡಿದ್ದಾರೆ. ಅದರಲ್ಲಿ 205 ಮಂದಿ ನಮ್ಮ ಯುವ ಕಣ್ಣಣಿಗಳನ್ನು ಸಂಘ ಪರಿವಾರದವರೇ ಕೊಲೆ ಮಾಡಿದ್ದಾರೆ. ಅವರು ಯಾವ ತಪ್ಪನ್ನೂ ಮಾಡಿಲ್ಲ. ಅವರ ಒಂದೇ ಒಂದು ತಪ್ಪು ಎಂದರೆ ಸೆಕ್ಯುಲರ್ ವಾದದ ಪರವಾಗಿ ಕೋಮುವಾದದ ವಿರುದ್ಧವಾಗಿ ಪ್ರಬಲ ನಿಲುವು ತೆಗೆದುಕೊಂಡದ್ದು.

ಮಂಗಳೂರಿನ ಸೌಹಾರ್ದ ರ್ಯಾಲಿಗೆ ಆಗಮಿಸಬೇಕೆಂದು 4 ತಿಂಗಳ ಮೊದಲು ಕಾ| ಶ್ರೀರಾಮ ರೆಡ್ಡಿಯವರು ದೂರವಾಣಿಯಲ್ಲಿ ಮಾತನಾಡಿದ್ದರು. ಇದೀಗ ಕಾಲ ಪರಿಪಕ್ವವಾಗಿ ನಾನು ಸಮ್ಮತಿಯನ್ನು ಸೂಚಿಸಿದ್ದೆ. ಯಾವಾಗ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುತ್ತಾರೆಂದು ತಿಳಿಯಿತೊ, ಅಂದಿನಿಂದಲೇ ಆರೆಸ್ಸೆಸ್ ನವರ ಅಸಹಿಷ್ಟುತೆ ತಾರಕಕ್ಕೇರಿದೆ. ಆರೆಸ್ಸೆಸ್, ಬಿಜೆಪಿ ಹಾಗೂ ಸಂಘ ಪರಿವಾರದವರು ನನ್ನನ್ನು ಮಂಗಳೂರಿಗೆ ಕಾಲಿಡಲು ಬಿಡುವುದಿಲ್ಲ ಎಂದು ವೀರಾವೇಶದಿಂದ ಹೇಳಿಕೆ ಕೊಟ್ಟರು. ಮಂಗಳೂರು ಬಂದ್ ನಡೆಸಿದ್ದಾರೆ. ಪಕ್ಷದ ಬ್ಯಾನರ್ ಪ್ಲೆಕ್ಸ್‍ಗಳನ್ನು ಹರಿದಿದ್ದಾರೆ.

ಕೇರಳದ ಒಬ್ಬ ಮುಖ್ಯಮಂತ್ರಿಯಾಗಿ ಬರುವಾಗ ಆಡಳಿತ ಯಂತ್ರದ ಸಂಪ್ರದಾಯದಂತೆ ನನಗೆ ಭದ್ರತೆಯನ್ನು ಕೊಟ್ಟು ಕರ್ನಾಟಕದ ಸರಕಾರ ಎಲ್ಲಾ ಸಹಾಯಗಳನ್ನು ಒದಗಿಸಿ ಕೊಟ್ಟಿದ್ದಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ರೀತಿ ಭದ್ರತೆ ನಿಯಮಗಳನ್ನು ಪಾಲಿಸಿದ್ದಲ್ಲಿ ಮಾತ್ರ ಈ ಆರೆಸ್ಸೆಸ್ ಶಕ್ತಿಗಳನ್ನು ತಡೆಯಬಹುದಾಗಿದೆ. ಇದೊಂದು ಪಾಠವಾಗಿದೆ.

ನನ್ನ ವಿರುದ್ಧ ವೀರಾವೇಶದಿಂದ ಮಾತನಾಡಿದ ಸಂಘಪರಿವಾರದವರಿಗೆ ನಾನು ಇಷ್ಟು ಮಾತ್ರ ಹೇಳಬಯಸುತ್ತೇನೆ. ರಾತ್ರಿ ಬೆಳಗಾಗುವಾಗ ಆಕಾಶದಿಂದ ಉದುರಿ ಬಿದ್ದು ನಾನು ಮುಖ್ಯಮಂತ್ರಿಯಾಗಿಲ್ಲ. ಆರೆಸ್ಸೆಸ್ ನ ಬಗ್ಗೆ ಗೊತ್ತಿಲ್ಲದವನೂ ನಾನಲ್ಲ. ನಾನು ತಲಚ್ಚೇರಿಯಲ್ಲಿ ಕಾಲೇಜಿನಲ್ಲಿ ಓದು ಮುಗಿಸಿ ಒಬ್ಬ ಸಾಮಾನ್ಯ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ಆರೆಸ್ಸೆಸ್ ನ ಲಾಠಿ, ಕಠಾರಿ, ಖಡ್ಗಗಳ ಝಳಪಿಸುವಿಕೆಯ ಮಧ್ಯದಲ್ಲೇ ಓಡಾಡಿದ್ದೇನೆ. ಆಗ ನನಗೆ ಏನೂ ಮಾಡಲಾಗದವರು ಈಗೇನು ಮಾಡುತ್ತೀರಿ?

ಮಧ್ಯಪ್ರದೇಶದಲ್ಲಿ ನಾನು ಭಾಗವಹಿಸಬೇಕಾಗಿದ್ದ ಒಂದು ಸಭೆಗೆ ಹೋಗದಂತೆ ತಡೆದದ್ದರ ಬಗ್ಗೆ ನೀವು ಕೊಚ್ಚಿಕೊಳ್ಳುತ್ತೀದ್ದೀರಿ. ಒಬ್ಬ ಮುಖ್ಯಮಂತ್ರಿಯಾಗಿ ಇನ್ನೊಂದು ರಾಜ್ಯಕ್ಕೆ ಹೋದಾಗ, ಆ ರಾಜ್ಯ ಸರ್ಕಾರದ ನಿರ್ದೇಶನಕ್ಕೆ ಮರ್ಯಾದೆ ಕೊಡುವುದು ನಮ್ಮ ಧರ್ಮ. ಅದಕ್ಕಾಗಿ ಅಲ್ಲಿಯ ಸರ್ಕಾರದ ನಿರ್ದೇಶನದಂತೆ ನಾನು ಆ ಸಭೆಗೆ ಹೋಗಲಿಲ್ಲ. ಆದರೆ ನಾನು ಮುಖ್ಯಮಂತ್ರಿ ಅಲ್ಲದೆ ಇರುತ್ತಿದ್ದರೆ ಖಂಡಿತವಾಗಿಯೂ ಇಂದ್ರ-ಚಂದ್ರರೂ ನನ್ನನ್ನು ತಡೆಯುವುದು ಸಾಧ್ಯವಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಿಮ್ಮ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ.

ಇಂತಹ ಬೆದರಿಕೆಗಳಿಗೆ ನಮ್ಮ ದೇಶದಲ್ಲಿ ಯಾವತ್ತೂ ದೃಢವಾದ ವಿರೋಧ ಬಂದಿದೆ. ಮಂಗಳೂರು ಈ ಸೌಹಾರ್ದ ರ್ಯಾಲಿಗೆ ಎಲ್ಲಾ ರೀತಿಯ ಸಹಕಾರ ಮಾಡಿದ ಮತ್ತು ನಾನು ಇಲ್ಲಿ ಬಂದು ಮಾತನಾಡಬಾರದೆಂಬ ಸಂಘಪರಿವಾರದ ಹಠಮಾರಿ ನಿಲುವನ್ನು ಪ್ರತಿಭಟಿಸಿ, ಈ ರ್ಯಾಲಿಯಲ್ಲಿ ಭಾಗವಹಿಸಿದ ಜನತೆಗೆ, ಮಾಧ್ಯಮ ಮಿತ್ರರಿಗೆ, ಪಕ್ಷದ ಸಂಗಾತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ನನ್ನ ಮಾತುಗಳನ್ನು ಕೊನೆಗೊಳಿಸುತ್ತೇನೆ.

ಕಾ| ಪಿಣರಾಯಿ ವಿಜಯನ್ ಮಂಗಳೂರಿನ ಸೌಹಾರ್ದ ರ್ಯಾಲಿಯಲ್ಲಿ ಫೆಬ್ರುವರಿ 25, 2017 ರಂದು ಮಾಡಿದ ಭಾಷಣದ ಕನ್ನಡ ಅನುವಾದ

ಅನುವಾದ : ಬಿ.ಎಂ. ಮಾಧವ

Leave a Reply

Your email address will not be published. Required fields are marked *