ಪಶ್ಚಿಮ ಬಂಗಾಲ ಪಂಚಾಯತ್‍ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಸೀತಾರಾಮ್‍ ಯೆಚುರಿ

ಟಿಎಂಸಿ ಹಿಂಸಾಚಾರದೊಂದಿಗೇ ಆರಂಭವಾದ ಪಶ್ಚಿಮ ಬಂಗಾಲದ ಪಂಚಾಯತ್‍ ಚುನಾವಣೆಗಳ ಪ್ರಕ್ರಿಯೆ ಮತದಾನದ ದಿನ ವ್ಯಾಪಕ ಹಿಂಸಾಚಾರವನ್ನು ಕಂಡಿತು. ಇದಕ್ಕೆ 1ಬಲಿಯಾದವರ ಸಂಖ್ಯೆ ಈಗ  20ಕ್ಕೇರಿದೆ.. ಈ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಪಂಚಾಯತುಗಳಲ್ಲಿ ನೂರಕ್ಕೆ ನೂರನ್ನು ವಶಪಡಿಸಿಕೊಳ್ಳಬೇಕೆಂಬ ಟಿಎಂಸಿ ಪ್ರಾಜೆಕ್ಟ್  ಈಡೇರಿಸಿಕೊಳ್ಳಲು ನಡೆಸಿರುವ  ಬರ್ಬರತೆಯನ್ನು ಎಷ್ಟು ಬಲವಾಗಿ ಖಂಡಿಸಿದರೂ ಕಡಿಮೆಯೇ ಎಂದು ಹೇಳಿದರು.

34ಶೇಕಡಾ ಸ್ಥಾನಗಳನ್ನು ಸ್ಪರ್ಧೆಯೇ ನಡೆಯಲು ಬಿಡದೆ ಬಲವಂತದಿಂದ ವಶಪಡಿಸಿಕೊಂಡ ನಂತರವೂ ಉಳಿದೆಲ್ಲ ಸ್ಥಾನಗಳನ್ನೂ ವಶಪಡಿಸಿಕೊಳ್ಳಲು ಇಂತಹ ಹೀನ ಕೃತ್ಯಗಳಿಗೆ ಇಳಿದಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಬುದಖಲಿಯಲ್ಲಿ ದೇಬುದಾಸ್‍ ಮತ್ತು ಆತನ ಪತ್ನಿ ಉಷಾದಾಸ್‍ ಅವರನ್ನು ಜೀವಂತ ಸುಟ್ಟು ಹಾಕಿದ ಭೀಕರ ಘಟನೆ ವರದಿಯಾಗಿದೆ. ಎಡಪಕ್ಷಗಳ ಇನ್ನೂ ಹಲವು ಅಭ್ಯಥಿಗಳು ಮತ್ತು ಕಾರ್ಯಕರ್ತರು ಪ್ರಾಣ ಕಳಕೊಂಡಿದ್ದಾರೆ. ಅಪಹರಣ, ಬೆಂಕಿ ಹಚ್ಚುವುದು ಎಗ್ಗಿಲ್ಲದೆ ನಡೆದಿದೆ. ಪೋಲೀಸರೂ ಈ ಕೃತ್ಯಗಳಲ್ಲಿ ಗೂಂಡಾಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಯೆಚುರಿ ಹೇಳಿದರು.

ಹಿಂಸಾಚಾರದ ಪ್ರಮಾಣವನ್ನು ನೋಡಿದರೆ ಮುಕ್ತ ಮತ್ತು ನ್ಯಾಯಯುತ ಚುನಾವಣೆ  ಇಲ್ಲಿ ಅಸಾಧ್ಯ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಕೊಲ್ಕತಾ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಕೂಡ ಈ ಪ್ರಕ್ರಿಯೆಯ ಬಗ್ಗೆ ಖಾರವಾಗಿ ಮಾತಾಡಿವೆ. ಆದರೂ ಭದ್ರತಾ ವ್ಯವಸ್ಥೆ ಏರ್ಪಡಿಸಬೇಕಾದವರು ನ್ಯಾಯಾಂಗದ ನಿರ್ದಿಷ್ಟ ನಿರ್ದೇಶನಗಳಲ್ಲಿ ಯಾವುದನ್ನೂ  ಪಾಲಿಸಿಲ್ಲ ಎಂದ ಯೆಚುರಿ ರಾಜ್ಯ ಚುನಾವಣಾ ಆಯೋಗದ ಪಾತ್ರ ಕೂಡ ಇದರಲ್ಲಿ ಅಸಹ್ಯಕರವಾದದ್ದು ಎಂದು ಬೇಸರ ವ್ಯಕ್ತಪಡಿಸಿದರು. ಟಿಎಂಸಿ, ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗದ ನಡುವಿನ ವ್ಯತ್ಯಾಸವನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿದೆ ಎಂದು ಅವರು ಟೀಕಿಸಿದರು.

ಈ ಹಿಂಸಾಚಾರದ ಸ್ವರೂಪ ಮತ್ತು ಹರಹನ್ನು ನೋಡಿದರೆ ಟಿಎಂಸಿ ಸಂಪೂರ್ಣವಾಗಿ ಮೂಲೆಗೊತ್ತಲ್ಪಟ್ಟಿದೆ ಎಂಬ ಸಂಗತಿಯನ್ನು ಬಯಲಿಗೆ ಬಂದಿರುವುದು  ಸ್ಪಷ್ಟವಾಗುತ್ತದೆ. ತಮ್ಮ ಆಧಿಪತ್ಯವನ್ನು ಉಳಿಸಿಕೊಳ್ಳಲು ಇಂತಹ ಹೀನ ವಿಧಾನಗಳಿಂದಲ್ಲದೆ ಬೇರೆ ರೀತಿಗಳಲ್ಲಿ ಸಾಧ್ಯವಿಲ್ಲ ಎಂದು ಕಂಡು ಬಂದುದರಿಂದ ಅವರು ಈ ಹಿಂಸಾಚಾರ ನಡೆಸುತ್ತಿದ್ದಾರೆ.  ಕಾರ್ಮೋಡದಲ್ಲಿನ ಒಂದು ಬೆಳ್ಳಿಗೆರೆ ಎಂದರೆ ಈ ಸರ್ವವ್ಯಾಪಿ ಹಿಂಸಾಚಾರ, ಹೆದರಿಕೆ-ಬೆದರಿಕೆಗಳನ್ನೂ ಲೆಕ್ಕಿಸದೆ ಜನಗಳೇ ಸ್ವಯಂಸ್ಫೂರ್ತಿಯಿಂದ ಪ್ರತಿರೋಧ ಒಡ್ಡುತ್ತಿದ್ದಾರೆ ಎಂಬ ಗಮನಾರ್ಹ ಸುದ್ದಿಗಳು ಬರುತ್ತಿವೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ ಯೆಚುರಿ ಸಿಪಿಐ(ಎಂ) ಮತ್ತು ಎಡಪಕ್ಷಗಳು ಇಂತಹ ಪ್ರತಿರೋಧ ಮತ್ತು ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾವೆ ಎಂದು ಹೇಳಿದರು.

ಟಿಎಂಸಿ ಈ ರೀತಿ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿರುವುದರ ವಿರುದ್ಧ  ಮತ್ತು ಟಿಎಂಸಿಯಿಂದ ಪ್ರಜಾಪ್ರಪ್ರಭುತ್ವದ ಕೊಲೆಯ ವಿರುದ್ಧ ದೇಶದ ಎಲ್ಲ ಶಾಂತಿಪ್ರಿಯ ಮತ್ತು ಪ್ರಜಾಪ್ರಭುತ್ವ-ಪ್ರಿಯ ಜನತೆ ತಮ್ಮ ದನಿಯೆತ್ತಬೇಕು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ ಎನ್ನುತ್ತ ಯೆಚುರಿಯವರು ಪ್ರಜಾಪ್ರಭುತ್ವದ ಮತ್ತು ಜನತೆಯ ಮತದಾನದ ಹಕ್ಕಿನ ಕಗ್ಗೊಲೆಯ ವಿರುದ್ಧ ತುರ್ತಾಗಿ ಪಕ್ಷದ ಎಲ್ಲ ಘಟಕಗಳು ಪ್ರತಿಭಟನೆಗಳನ್ನು ತುರ್ತಾಗಿ ನಡೆಸಬೇಕು, ಜನಗಳನ್ನು ಅಣಿನೆರೆಸಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.

ನೆರೆದಿದ್ದ ಪತ್ರಕರ್ತರಿಗೆ ಪಶ್ಚಿಮ ಬಂಗಾಲದಲ್ಲಿ ಪಂಚಾಯತು ಚುನಾವಣೆಯ ಪ್ರಕ್ರಿಯೆಯಲ್ಲಿ ನಡೆಸಿರುವ ಹಿಂಸಾಚಾರದ ಪಟ್ಟಿಯನ್ನೂ ನೀಡಲಾಯಿತು.

Leave a Reply

Your email address will not be published. Required fields are marked *