ಕೋಮುವಾದಿ ಬಿಜೆಪಿಗೆ ಮುಖಭಂಗ – ಜಾತ್ಯಾತೀತ ಶಕ್ತಿಗಳಿಗೆ ಜಯ

ಉಪಚುನಾವಣೆ ಫಲಿತಾಂಶ: ಸಿಪಿಐ(ಎಂ) ಸ್ವಾಗತ

ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಚುನಾವಣೆಯ ಫಲಿತಾಂಶಗಳು ಇದೀಗ ಪ್ರಕಟವಾಗಿವೆ. ಒಟ್ಟು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡನ್ನು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಗಳು ಗೆದ್ದಿವೆ. ಬಿಜೆಪಿಯಿಂದ ಬಳ್ಳಾರಿ ಕ್ಷೇತ್ರವನ್ನು ಕಸಿದುಕೊಂಡಿವೆ. ಬಿಜೆಪಿ ಶಿವಮೊಗ್ಗ ಕ್ಷೇತ್ರವನ್ನು ಕಡಿಮೆ ಅಂತರದಲ್ಲಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳು ಉಳಿಸಿಕೊಂಡಿವೆ. ರಾಮನಗರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಚುನಾವಣೆಯ ಪೂರ್ವದಲ್ಲಿಯೇ ಕಣದಿಂದ ನಿವೃತ್ತಿ ಘೋಷಿಸಿ ಬಿಜೆಪಿಗೆ ತೀವ್ರ ಮುಖ ಭಂಗ ಉಂಟಾಗಿತ್ತು.

ಈ ಫಲಿತಾಂಶಗಳು ಕೋಮುವಾದವನ್ನು ತಿರಸ್ಕರಿಸಿದ ಹಾಗೂ ಜಾತ್ಯಾತೀತತೆಯನ್ನು ಎತ್ತಿ ಹಿಡಿದ ಫಲಿತಾಂಶಗಳಾಗಿದ್ದು ಸ್ವಾಗತಾರ್ಹವಾಗಿವೆ ಎಂದು ಸಿಪಿಐಎಂ ಮತದಾರರನ್ನು ಅಭಿನಂದಿಸಿದೆ. ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಕೋಮುವಾದಿ ಶಕ್ತಿಯ ವಿರುದ್ದ ನಿಂತಿದ್ದು ಈ ಫಲಿತಾಂಶದ ಮೂಲವಾಗಿದೆ ಎಂದು ವಿಶ್ಲೇಷಣೆ ಮಾಡಿದೆ.

ಕೋಮುವಾದಿ ಬಿಜೆಪಿಗೆ ಈ ಉಪ ಚುನಾವಣೆಗಳಲ್ಲಿ ಭಾರೀ ಮುಖಭಂಗ ಅನುಭವಿಸುವಂತೆ ಮಾಡಿ ಅದಕ್ಕೆ ಸರಿಯಾದ ಪಾಠವನ್ನು ಕಲಿಸಿದ್ದಾರೆಂದು ಸಿಪಿಐಎಂ ವಿವರಿಸಿದೆ.

ಈ ಫಲಿತಾಂಶವು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ.

ಕೋಮುವಾದಿ ಬಿಜೆಪಿಯ ವಿರುದ್ಧ ಜಾತ್ಯಾತೀತ ಶಕ್ತಿಗಳು ಮತ್ತಷ್ಠು ಬಲವಾಗಿ ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಿದಲ್ಲಿ, ರಾಜ್ಯದಲ್ಲಿ ಇಂತಹುದ್ದೆ ಆದ ಫಲಿತಾಂಶ ನೀಡುವುದಾಗಿ ರಾಜ್ಯದ ಜಾತ್ಯಾತೀತ ಮತದಾರರು ಈ ಮೂಲಕ ಮುನ್ಸೂಚನೆ ನೀಡಿದ್ದಾರೆಂದು ಸಿಪಿಐಎಂ ಬಣ್ಣಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮತದಾರರ ಈ ಭಾವನೆಗಳನ್ನು ಗೌರವಿಸುವ ಹೊಣೆಗಾರಿಕೆ ಮೈತ್ರಿ ಸರಕಾರದ ಮೇಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೋಮುಸೌಹಾರ್ಧತೆಯನ್ನು ಸಂರಕ್ಷಿಸಲು ಮತ್ತು ಅದೇ ರೀತಿ ಜನರನ್ನು ತೀವ್ರ ಸಂಕಷ್ಠಕ್ಕೆ ದೂಡುವ ಜಾಗತೀಕರಣದ ದುರ್ನೀತಿಗಳನ್ನು ಕೈ ಬಿಟ್ಟು ಜನಪರವಾದ ಅರ್ಥಿಕ ನೀತಿಗಳನ್ನು ಜಾರಿಗೆ ತರಲು ಗಂಭೀರವಾದ ಕ್ರಮವಹಿಸಬೇಕೆಂದು ಮೈತ್ರಿ ಸರಕಾರವನ್ನು ಸಿಪಿಐಎಂ ರಾಜ್ಯ ಸಮಿತಿ ಒತ್ತಾಯಿಸಿದೆ.

ಜಿ.ವಿ.ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿಗಳು

Leave a Reply

Your email address will not be published. Required fields are marked *