ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಕರೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್, ಹಲವಾರು ಗಣ್ಯ ಸಾಹಿತಿಗಳು, ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ ನಂತರವೂ, ಕರ್ನಾಟಕ ಸರಕಾರ ನಿನ್ನೆ ದಿನ ರಾಜ್ಯಪಾಲರ ಭಾಷಣದ ಮೂಲಕ ಮುಂಬರುವ ದಿನಗಳಲ್ಲಿ ಪ್ರಾಥಮಿಕ ಹಂತದಲ್ಲಿ 1000 ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಕುರಿತು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ), ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಕೂಡಲೇ ಈ ಜನವಿರೋಧಿ ನಿಲುಮೆಯನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿಗಳು ಎಲ್ಲೆಲ್ಲೂ ಇಂಗ್ಲೀಷ್ ಭಾಷೆ ಅನಿವಾರ್‍ಯವೆಂಬ ಹುಸಿ ಭಾವನೆಯನ್ನು ಹುಟ್ಟು ಹಾಕಿರುವುದರಿಂದ ಬಹುತೇಕ ಮಧ್ಯಮ ವರ್ಗದ ಜನತೆ, ತಮ್ಮ ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುವುದನ್ನು ಕಲಿಯಬೇಕೆಂಬ ಭಾವನೆಯನ್ನು ಹೊಂದಿರುವುದು ನಿಜವೇ ಆಗಿದ್ದು, ಅಂತಹ ಭಾವನೆಯನ್ನು ಪುರಸ್ಕರಿಸಲು ಒಂದು ಭಾಷೆಯಾಗಿ ಇಂಗ್ಲೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಪರಿಣಾಮಕಾರಿಯಾಗಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಕಲಿಸಲು ಅಗತ್ಯ ಕ್ರಮಗಳನ್ನು ಸರಕಾರವು ವಹಿಸಿದಲ್ಲಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ವ್ಯಾಪಕವಾಗಿ ಆಕರ್ಷಿಸಲು ಸಾಧ್ಯವಿದ್ದು ಈ ಕ್ರಮವನ್ನು ಅನುಸರಿಸ ಬೇಕೆಂದು ರಾಜ್ಯ ಸರಕಾರವನ್ನು ಸಿಪಿಐ(ಎಂ) ಒತ್ತಾಯಿಸುತ್ತದೆ.

ಬಡವರ ಮಕ್ಕಳಿಗೆ ಇಂಗೀಷ್ ಮಾಧ್ಯಮದ ಶಿಕ್ಷಣವನ್ನು ಒದಗಿಸುವ ಮೂಲಕ ಅವರಿಗೆ ನೆರವಾಗುವ ಸದುದ್ದೇಶದಿಂದ ಇದನ್ನು ಜಾರಿಗೊಳಿಸಲಾಗುತ್ತದೆಂಬ ನೆಪವನ್ನು ಮುಂದೆ ಮಾಡುವ ಮೂಲಕ, ಕರ್ನಾಟಕ ಸರಕಾರ ಬಹುಸಂಖ್ಯಾತ ದುಡಿಯುವ ಜನತೆಯನ್ನು ಅದಾಗಲೇ, ತೀವ್ರ ತೆರನಾದ ದುಸ್ಥಿತಿಗೆ ತಳ್ಳಿರುವ ಬಹುರಾಷ್ಠ್ರೀಯ ಸಂಸ್ಥೆಗಳ ಲೂಟಿಯ ಪರವಾದ ಜಾಗತೀಕರಣದ ನೀತಿಗಳ ಜಾರಿಯ ಭಾಗವಾಗಿ ಇದನ್ನು ಹೇರಲು ಮುಂದಾಗುತ್ತಿದೆ. ಇದು ಕರ್ನಾಟಕದ ಜನತೆಯ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕುಗಳ ಮೇಲೆ ಮತ್ತು ರಾಷ್ಠ್ರ ಭಾಷೆಗಳಲ್ಲೊಂದಾದ ಕನ್ನಡದ ಮೇಲೆ ಬಹುರಾಷ್ಠ್ರೀಯ ಸಂಸ್ಥೆಗಳು ನಡೆಸುತ್ತಿರುವ ದಾಳಿಂii ಮುಂದುವರೆದ ಭಾಗವಾಗಿದೆ. ಆದ್ದರಿಂದ ಇದನ್ನು ಪ್ರತಿರೋಧಿಸಿ ರಾಜ್ಯದಾದ್ಯಂತ ನಾಳೆ ದಿನ (ಫೆ.೮) ಪ್ರತಿಭಟನೆ ನಡೆಸಲು ಸಿಪಿಐ(ಎಂ) ರಾಜ್ಯ ಸಮಿತಿ ತನ್ನ ಘಟಕಗಳಿಗೆ ಮತ್ತು ಜನತೆಗೆ ಕರೆ ನೀಡಿದೆ.

ಯಾವುದೇ ಮೂಲ ಸೌಕರ್ಯಗಳಿಲ್ಲದೇ, ಅಗತ್ಯ ಪರಿಣಿತರಿಲ್ಲದೇ, ಮತ್ತು ಕನ್ನಡ ಮಾದ್ಯಮದ ಶಾಲೆಗಳೆಂದು ಪರವಾನಿಗಿ ಪಡೆದು, ಸರಕಾರಕ್ಕೆ ಮತ್ತು ಸರಕಾರದ ನಿಯಮಾವಳಿಗಳಿಗೆ ನಾಮ ಹಾಕಿ, ಇಂಗ್ಲೀಷ್ ಮಾದ್ಯಮ ಶಾಲೆಗಳಾಗಿ ಪರಿವರ್ತಿಸಿ, ಜನತೆಯನ್ನು ಲೂಟಿಗೊಳಪಡಿಸುತ್ತಿರುವ ನಾಯಿಕೊಡೆಗಳಂತೆ ಮೇಲೇಳುತ್ತಿರುವ ಇವುಗಳನ್ನು ತಡೆಯುವಲ್ಲಿ ಕಣ್ಣಿದ್ದು ಕುರುಡನಂತೆ ವರ್ತಿಸುವ ರಾಜ್ಯ ಸರಕಾರ ಘೋರವಾಗಿ ವಿಫಲವಾಗಿರುವುದಲ್ಲದೇ, ಕನ್ನಡ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವಂತೆ ಕ್ರಮವಹಿಸುವಲ್ಲಿಯೂ ಸರಕಾರ ಎಡವಿದೆ. ಈ ಕಾರಣದಿಂದ ಕನ್ನಡ ಶಾಲೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮುಚ್ಚಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಮಾತೃ ಭಾಷೆಯಲ್ಲಿ ಆಗ ತಾನೆ ಬೆರಗಿನಿಂದ ಹೊರ ಜಗತ್ತನ್ನು ನೋಡುವ, ಯೋಚಿಸುವ ಎಳೆಯ ಮಗುವಿನ ಮೇಲೆ ತನ್ನದಲ್ಲದ ತನ್ನ ಪರಿಸರದಲ್ಲಿಲ್ಲದ ಅನ್ಯ ಭಾಷೆಯಲ್ಲಿ ವಿಷಯವನ್ನು ಗ್ರಹಿಸುವಂತೆ ಒತ್ತಡ ಹೇರುವುದು, ಆ ಮಗುವಿನ ಮಾನಸಿಕ ಪರಿಸರದ ವಿಕಾಸದ ಮೇಲೆ ಅಹಿತಕರ ಪರಿಣಾಮ ಬೀರುತ್ತದೆಂಬುದು ಜಗತ್ತಿನ ಹಲವು ಅಧ್ಯಯನಗಳು ಹೇಳುತ್ತಿರುವಾಗ ಸರಕಾರದ ಈ ನಡೆ ಸಾಧವಾಗಿಲ್ಲ.

ಅಪಾರವಾದ ತ್ಯಾಗ ಬಲಿದಾನದ ಹೋರಾಟಗಳ ಮೂಲಕ ರೂಪುಗೊಂಡ ಭಾಷಾವಾರು ಪ್ರಾಂತಗಳ ರಚನೆಯ ಉದ್ದೇಶಕ್ಕೆ ಕೂಡಾ ಸರಕಾರದ ಈ ನಡೆ ತದ್ವಿರುದ್ದವಾಗಿದೆ. ಕನ್ನಡದ ರಾಷ್ಠ್ರೀಯತೆಯನ್ನು ಉಳಿಸಿ ಬೆಳೆಸಬೇಕಾದ ರಾಜ್ಯ ಸರಕಾರವೇ ಇಂತಹ ಕ್ರಮಗಳ ಮೂಲಕ ಅದರ ಮೇಲಿನ ದಾಳಿಗೆ ಕಾರಣವಾಗುತ್ತಿರುವುದನ್ನು ತೀವ್ರವಾಗಿ ಪ್ರತಿರೋಧಿಸಬೇಕಾಗಿದೆ.

Leave a Reply

Your email address will not be published. Required fields are marked *