ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಮುಂದುವರೆದ ನಡೆಗೆ ಖಂಡನೆ

ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಿಂದಲೂ ತನಗೆ ಬಹುಮತವಿಲ್ಲದಿದ್ದರೂ ನಿರಂತರವಾಗಿ, ಕೇಂದ್ರ ಸರಕಾರ ಹಾಗೂ ರಾಜಭವನದ ಕಛೇರಿಯ ದುರುಪಯೋಗದ ಮೂಲಕ ಮತ್ತು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಕೆಲಸದಲ್ಲಿಯೇ ತನ್ನನ್ನು ತೊಡಗಿಸಿಕೊಂಡು ರಾಜ್ಯದ ಸಮ್ಮಿಶ್ರ ಸರಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುವ ಅನೈತಿಕ ಮತ್ತು ಭ್ರಷ್ಠ ರಾಜಕಾರಣದಲ್ಲಿ ತೊಡಗಿದೆ. ಅದು ಮಾತ್ರವೇ ಅಲ್ಲಾ, ಮತ್ತೊಂದು ರಾಜಕೀಯ ಪಕ್ಷದಲ್ಲಿನ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಅಸಂತೃಪ್ತ ಶಾಸಕರಿಗೆ ಸಲ್ಲದ ಅಮಿಶ ಒಡ್ಡಿ ತನ್ನ ಕಡೆ ಸೆಳೆಯುವ ಪ್ರಯತ್ನವನ್ನು ಸತತವಾಗಿ ಮಾಡುತ್ತಿದೆ.

ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರುಗಳು ವಿಫಲವಾಗಿ ರಾಜ್ಯ ಗಂಭಿರವಾದ ಬರಗಾಲಕ್ಕೆ ಸಿಲುಕಿದೆ. ಸರಕಾರದ ಸಾಲ ಮನ್ನಾ ಘೋಷಣೆಯ ನಡುವೆಯು ರೈತರ- ಕೂಲಿಕಾರರ ಆತ್ಮಹತ್ಯೆಗಳು ಮುಂದುವರೆದಿವೆ. ಕಾರ್ಮಿಕರು ದಿನೇ ದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ ಮತ್ತು ದೊರಕದ ಕನಿಷ್ಠ ವೇತನದಿಂದಾಗಿ ಕಂಗಾಲಾಗಿದ್ದಾರೆ. ಯುವಜನರ ನಿರುದ್ಯೋಗ ಬೆಳೆಯುತ್ತಿದೆ. ಇಂತಹ ಗಂಭೀರ ಪ್ರಶ್ನೆಗಳ ಕುರಿತು ಒಂದು ವಿರೋಧ ಪಕ್ಷವಾಗಿ ರಾಜ್ಯದ ಗಮನ ಸೆಳೆದು ಸರಕಾರದ ವಿರುದ್ದ ಚಾಟಿ ಬೀಸುವ ಮೂಲಕ ಒಂದು ಜನಪರ ರಾಜ್ಯ ಬಜೆಟ್ ಬರುವಂತೆ ಕ್ರಮವಹಿಸುವ ಬದಲು ಜನತೆಯ ನಡುವೆ ಹೇಸಿಗೆ ಹುಟ್ಟಿಸುವ ರಾಜಕಾರಣದಲ್ಲಿ ತೊಡಗಿದೆ.

ಜನತೆ ತನಗೆ ಬಹುಮತ ನೀಡದೇ, ವಿರೋಧ ಪಕ್ಷವಾಗಿ ಕೆಲಸ ಮಾಡಲು ನೀಡಿದ ಜನತೆಯ ಆದೇಶವನ್ನು ಪಾಲಿಸಲು ರಚನಾತ್ಮಕವಾಗಿ ತೊಡಗುವ ಬದಲು ಸರಕಾರವನ್ನು ಅಸ್ಥಿಗೊಳಿಸಲು ಮುಂದುವರೆಸಿರುವ ಅದರ ಪ್ರಯತ್ನವನ್ನು ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಜನತೆಯ ಆದೇಶಕ್ಕೆದುರಾಗಿ, ಮತ್ತು ಒಂದು ವಿರೋಧ ಪಕ್ಷವಾಗಿ ರಚನಾತ್ಮಕ ಕೆಲಸದಲ್ಲಿ ತೊಡಗದಿರುವ ಅದರ ಆಧಿಕಾರಶಾಹಿ ಪ್ರವೃತ್ತಿಯನ್ನು ಮತದಾರರು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಅದಕ್ಕೆ ತಕ್ಕ ಪಾಟ ಕಲಿಸಬೇಕೆಂದು ಸಿಪಿಐ(ಎಂ) ಕರೆ ನೀಡಿದೆ.

ಅದೇ ರೀತಿ, ಅಧಿಕಾರಶಾಹಿ ಹಾಗೂ ಭ್ರಷ್ಠ ಗಳಿಕೆಗಾಗಿ ಮತದಾರರ ತೀರ್ಪಿಗೆ ವಿರುದ್ಧವಾಗಿ ನಡೆದು ಕೊಳ್ಳುತ್ತಿರುವ, ಮತದಾರರ ಗೌರವಕ್ಕೆ ಕುಂದುಂಟು ಮಾಡುತ್ತಿರುವ ಅನೈತಿಕ ವ್ಯವಹಾರದಲ್ಲಿ ತೊಡಗಿರುವ ಶಾಸಕರಿಗೂ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಲು ಕೂಡಾ ಸಿಪಿಐ(ಎಂ) ಕರೆ ನೀಡಿದೆ.

Leave a Reply

Your email address will not be published. Required fields are marked *