ಭಯೋತ್ಪಾದನೆ ವಿರುದ್ಧ ಐಕ್ಯ ಸಮರವನ್ನು ಬಿಜೆಪಿ ಚುನಾವಣಾ ಲಾಭಕ್ಕಾಗಿ ಛಿದ್ರಗೊಳಿಸುತ್ತಿದ್ದಾರೆ

ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಪ್ರದೇಶದ ಒಳಗೆ ಭಾರತೀಯ ವಾಯುಪಡೆಯ ವಾಯುಪ್ರಹಾರ, ಮರುದಿನ ಪಾಕಿಸ್ತಾನದ ಪ್ರತ್ಯುತ್ತರ ಮತ್ತು ತದನಂತರ ವಿಂಗ್‍ ಕಮಾಂಡರ್ ಅಭಿನಂದನ್‍ ಬಿಡುಗಡೆ-ಇವೆಲ್ಲ ಭಾರತ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಮಾಡಬೇಕು ಮತ್ತು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳನ್ನು ಹಾಗೂ ಗಡಿಯಾಚೆ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಅದರ ಮೇಲೆ ಅಂತರ್ರಾಷ್ಟ್ರೀಯ ಒತ್ತಡಗಳನ್ನು ಹೆಚ್ಚಿಸುವಂತೆ ಮಾಡಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಭಯೋತ್ಪಾದನೆಯ ವಿರುದ್ಧ ಭಾರತ ಐಕ್ಯತೆಯಿಂದ ಎದ್ದು ನಿಂತಿತು. ಇದನ್ನು ಬಲಪಡಿಸುವ ಬದಲು, ಪುಲ್ವಾಮಾದ ಬೆಳವಣಿಗೆಗಳು ಬಿಜೆಪಿ ಮತ್ತು ಸಂಘ ಪರಿವಾರ ಸಂಕುಚಿತ ದೇಶಪ್ರೇಮವನ್ನು ಬಡಿದೆಬ್ಬಿಸಲು ಮತ್ತು ರಾಷ್ಟ್ರೋನ್ಮಾದವನ್ನು ಹರಡಲು ಉದ್ದೇಶಪೂರ್ವಕ ಪ್ರಯತ್ನಗಳನ್ನು ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ದೇಶದ ವಿವಿಧ ಭಾಗಗಳಲ್ಲಿ ಕಾಶ್ಮೀರಿಗಳ ಮೇಲೆ ಗುರಿಯಿಡುತ್ತಿರುವುದು, ಸಂವಿಧಾನದ ಕಲಮು 370, 35ಎ ಗಳನ್ನು ರದ್ದು ಪಡಿಸಬೇಕೆಂಬ ಕರೆಗಳು ಇವೆಲ್ಲವೂ ಭಯೋತ್ಪಾದನೆಯ ವಿರುದ್ಧ ಭಾರತೀಯರ ಸಮರವನ್ನು ಕಾಶ್ಮೀರಿಗಳು ಮತ್ತು ಮುಸ್ಲಿಮರ ವಿರುದ್ಧ ಸಮರಗಳಾಗಿ ತಿರುಗಿಸುತ್ತಿವೆ, ಕೋಮುಧ್ರುವೀಕರಣವನ್ನು ಆಳಗೊಳಿಸುತ್ತಿವೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಭಯೋತ್ಪಾದನೆಯ ವಿರುದ್ಧ ಭಾರತದ ಐಕ್ಯ ಸಮರವನ್ನು ಬಿಜೆಪಿ ಮತ್ತು ಅದರ ಸರಕಾರದ ಮುಖಂಡರು ಛಿದ್ರಗೊಳಿಸುತ್ತಿದ್ದಾರೆ ಎಂದು ಖಂಡಿಸಿದೆ.

ಮಾರ್ಚ್ 3 ಮತ್ತು 4ರಂದು ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ ಪುಲ್ವಾಮಾ ದಾಳಿ, ಕಾಶ್ಮೀರದ ಪರಿಸ್ಥಿತಿ ಮತ್ತು ದೇಶದಲ್ಲಿನ ಇತರ ಬೆಳವಣಿಗೆಗಳನ್ನು ವಿಶ್ಲೇಷಿಸಿದ ನಂತರ ಹೊರಡಿಸಿದ ಹೇಳಿಕೆಯ ಇತರ ಅಂಶಗಳು ಹೀಗಿವೆ:

ಮೋದಿಯ ಜಮ್ಮು ಮತ್ತು ಕಾಶ್ಮೀರ ಧೋರಣೆ ವಿಫಲ:

ಈ ಮೋದಿ ಸರಕಾರದ ಆಳ್ವಿಕೆಯಲ್ಲಿ, ಭಯೋತ್ಪಾದನೆಯ ಘಟನೆಗಳ ಸಂಖ್ಯೆಯಲ್ಲಿ 176% ಹೆಚ್ಚಳವಾಗಿದೆ. ಇಂತಹ ದಾಳಿಗಳಲ್ಲಿ ಹತರಾದ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಂಖ್ಯೆಯೂ ಏರಿದೆ. ಭದ್ರತಾ ಸಿಬ್ಬಂದಿಯ ಸಾವುಗಳ ಸಂಖ್ಯೆಯಲ್ಲಿ 93% ಹೆಚ್ಚಳ ಕಂಡು ಬಂದಿದೆ. 2014ರಿಂದ 2018ರ ನಡುವೆ ಸರಾಸರಿ ಪ್ರತಿ ತಿಂಗಳು 11 ರ ಸಂಖ್ಯೆಯಲ್ಲಿ ಭಯೋತ್ಪಾದಕರು ನುಸುಳಿದ್ದಾರೆ.

ಹೆಚ್ಚು ಅಪಾಯಕಾರಿಯಾದ ಪ್ರವೃತ್ತಿ ಎಂದರೆ, ಸ್ಥಳೀಯ ಕಾಶ್ಮೀರಿ ಯುವಜನರು ಭಯೋತ್ಪಾದಕ ಗುಂಪುಗಳನ್ನು ಸೇರಿಕೊಳ್ಳುತ್ತಿರುವ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ, 2013ರಲ್ಲಿ 16 ಇದ್ದದ್ದು 2018ರಲ್ಲಿ 164ಕ್ಕೆ ಏರಿದೆ. ಕಾಶ್ಮೀರಿ ಯುವಜನರಲ್ಲಿ ಪರಕೀಯ ಭಾವ ಇಷ್ಟೊಂದು ಆಳಗೊಳ್ಳಲು ಮೋದಿ ಸರಕಾರವೇ ಕಾರಣ. ಅದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೆ ಸಂವಾದದ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವ, ಮತ್ತು ಕಾಶ್ಮೀರಿ ಜನಗಳಲ್ಲಿ ವಿಶ್ವಾಸ ಮೂಡಿಸುವ ಕ್ರಮಗಳನ್ನು ಜಾರಿಗೊಳಿಸುವ ತನ್ನ ಆಶ್ವಾಸನೆಗಳನ್ನು ಈಡೇರಿಸದೆ ವಚನಭಂಗ ಮಾಡಿದೆ. ಇದರಿಂದಾಗಿ ಭಯೋತ್ಪಾದಕರ ಪ್ರಹಾರಗಳು ಮುಂದುವರೆದವು ಎಂಬುದು ಸ್ಪಷ್ಟ, ಸಪ್ಟಂಬರ್‍ 2016ರಲ್ಲಿ ಉರಿಯಲ್ಲಿ ಸೇನಾ ಘಟಕಗಳ ಮೇಲೆ ಭಯೋತ್ಪಾದಕ ದಾಳಿಗಳ ನಂತರ ಭಾರತೀಯ ಬಾಯುಪಡೆ ನಡೆಸಿದ ಮಿಂಚಿನ ನಿರ್ದಿಷ್ಟ ಪ್ರಹಾರಗಳ ನಂತರವೂ ಅವು ತೀವ್ರಗೊಂಡವು.

ಈ ವಿಷಯವನ್ನು ರಾಜಕೀಯಕರಣಗೊಳಿಸುತ್ತಿರುವವರು ಮತ್ತು ತಮ್ಮ ಪಕ್ಷದ ಚುನಾವಣಾ ಲಾಭಕ್ಕಾಗಿ ಭಯೋತ್ಪಾದನೆಯ ವಿರುದ್ಧ ಭಾರತೀಯರ ಐಕ್ಯ ಹೋರಾಟವನ್ನು ಛಿದ್ರಗೊಳಿಸುತ್ತಿರುವವರು ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ಮುಖಂಡರೇ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೇಷಿಸಿದೆ.

ಆರ್ಥಿಕ ಬಿಕ್ಕಟ್ಟು ಆಳಗೊಳ್ಳುತ್ತಿದೆ:

ಜಿಡಿಪಿ ಲೆಕ್ಕಾಚಾರದ ವಿಧಾನವನ್ನು ಮೋದಿ ಸರಕಾರ ಬದಲಿಸಿದ ನಂತರವೂ 2018-19ರ 7 ಶೇಕಡಾ ಜಿಡಿಪಿ ಬೆಳವಣಿಗೆ ಕಳೆದ ಐದು ವರ್ಷಗಳಲ್ಲೇ ಅತೀಕಡಿಮೆ ಮಟ್ಟಕ್ಕಿಳಿದಿದೆ. 2018 ರ ಕೊನೆಯ ತ್ರೈಮಾಸಿಕದ ಬೆಳವಣಿಗೆ ದರ ಇನ್ನೂ ಕೆಳಗೆ, 6.6ಶೇಕಡಾಕ್ಕೆ ಇಳಿದಿದೆ. ಇದರ ಅರ್ಥ, ನಮ್ಮ ಆರ್ಥಿಕ ವ್ಯವಸ್ಥೆ ಇನ್ನಷ್ಟು ಕಳೆಗುಂದುತ್ತಿದೆ, ಇದರಿಂದಾಗಿ ನಿರುದ್ಯೋಗದ ಏರಿಕೆ ಇನ್ನಷ್ಟು ತೀವ್ರಗೊಳ್ಳಲಿದೆ ಮತ್ತು ನಮ್ಮ ಬಹುಪಾಲು ಜನಗಳ ಜೀವನ ಪರಿಸ್ಥಿತಿಗಳು ಮತ್ತಷ್ಟು ಹದಗೆಡಲಿವೆ.

ಕೃಷಿ ಸಂಕಟ ಮತ್ತಷ್ಟು ಆಳಗೊಳ್ಳುತ್ತಿದೆ. 2017-18 ಮತ್ತು 2018-19ರ ನಡುವೆ ಒಟ್ಟು ಮೌಲ್ಯ ಸೇರ್ಪಡೆಯಲ್ಲಿ 46 ಶೇಕಡಾದಷ್ಟು ಬೃಹತ್‍ ಪ್ರಮಾಣದ ಇಳಿಕೆ ಆಗಿದೆ ಎಂಬ ಸಂಗತಿಯತ್ತವೂ ಕೇಂದ್ರ ಸಮಿತಿ ಗಮನ ಸೆಳೆದಿದೆ.

ಚಮಚಾ ಬಂಡವಾಳಶಾಹಿ:

ವಿಮಾನ ನಿಲ್ದಾಣಗಳ ಖಾಸಗೀಕರಣ: ಚುನಾವಣೆಗಳ ಮುನ್ನಾದಿನಗಳಲ್ಲಿ ಮೋದಿ ಸರಕಾರ ಐದು ಪ್ರಮುಖ ಸಾರ್ವಜನಿಕ ವಿಮಾನ ನಿಲ್ದಾಣಗಳನ್ನು ಅಡಾಣಿ ಗುಂಪಿಗೆ ವಹಿಸಿ ಕೊಟ್ಟಿದೆ. ಟೆಂಡರುಗಳಿಗೆ ತಲಾ ಪ್ರಯಾಣಿಕ ಆದಾಯವಷ್ಟೇ ಏಕಮಾತ್ರ ಪರಿಗಣನೆಯ ಅಂಶವಾಗಿದೆ. ವಿಮಾನ ನಿಲ್ದಾಣಗಳ ನಿರ್ವಹಣೆಯ ಅನುಭವದ ವಿಷಯವನ್ನು ಬದಿಗೊತ್ತಲಾಗಿದೆ. ಈ ಮೂಲಕ ವಿಮಾನ ನಿಲ್ದಾಣಗಳ ನಿರ್ವಹಣೆಯ ಏನೇನೂ ಅನುಭವವಿಲ್ಲದ ಅಡಾಣಿ ಗುಂಪಿಗೆ ಅವನ್ನು ವಹಿಸಿ ಕೊಡಲಾಗಿದೆ. ಇದು ರಫೆಲ್‍ ಆಫ್‍ಸೆಟ್‍ ವ್ಯವಹಾರಗಳು ರಕ್ಷಣಾ ಉತ್ಪಾದನೆಯ ಕ್ಷೇತ್ರದಲ್ಲಿ ಏನೇನೂ ಅನುಭವವಿಲ್ಲದ ಅನಿಲ್‍ ಅಂಬಾನಿಗೆ  ದೊರಕಿದ ಮಾದರಿಯಲ್ಲೇ ಇದೆ.

ಖಾಸಗಿಯವರಿಗೆ ಆಧಾರ್ ಮಾಹಿತಿ ನೆಲೆಯ ಬಳಕೆಗೆ ಅವಕಾಶ: ಕೇಂದ್ರ ಸಂಪುಟ ಫೆಬ್ರುವರಿ 28ರಂದು ಆಧಾರ್‍ ಮಾಹಿತಿ ನೆಲೆಯನ್ನು ಖಾಸಗಿ ಕಾರ್ಪೊರೇಟ್‍ಗಳು ತಮ್ಮ ಲಾಭ ಗಳಿಕೆಗಾಗಿ ಬಳಸಲು ಅವಕಾಶ ನೀಡುವ ಸುಗ್ರೀವಾಜ್ಞೆಯನ್ನು ಮಂಜೂರು ಮಾಡಿದೆ.   ಮಾಹಿತಿ ರಕ್ಷಣೆಯ ಕಾಯ್ದೆಯನ್ನು ತರದೆಯೇ ಇದನ್ನು ಮಾಡಲಾಗಿದೆ. ಈ ಕಾಯ್ದೆಯನ್ನು ತರುವ ಆಶ್ವಾಸನೆಯನ್ನು ನೀಡಲಾಗಿತ್ತು. ಆದರೆ ಅದಿನ್ನೂ ಬೆಳಕು ಕಂಡಿಲ್ಲ. ಇದೊಂದು ಸಂವಿಧಾನಿಕ ಧಕ್ಕೆಯಾಗಿದೆ. ಏಕೆಂದರೆ ರಾಜ್ಯಸಭೆ ಈ ಶಾಸನವನ್ನು ಪಾಸು ಮಾಡಿಲ್ಲ, ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ನಡೆದ ನಂತರವೇ ಸಭೆ ಸೇರಬೇಕಾಗಿದೆ.

ಈ ಸುಗ್ರೀವಾಜ್ಞೆಗೆ ಮಂಜೂರಾತಿ ನೀಡಬಾರದು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಭಾರತದ ರಾಷ್ಟ್ರಪತಿಗಳಿಗೆ ಕರೆ ನೀಡಿದೆ.

ಸಾಮಾಜಿಕ ನ್ಯಾಯದ ಮೇಲೆ ಪ್ರಹಾರ:

ಸಾರ್ವಜನಿಕ ನಿಧಿಯಿಂದ ನಡೆಯುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿಗಳಿಗೆ ಒಂದು ಹೊಸ ರೋಸ್ಟರ್ ಪದ್ಧತಿಯನ್ನು ಮೋದಿ ಸರಕಾರದ ಅಧಿಸೂಚನೆ ಆರಂಭಿಸಿದೆ. ಇದರಿಂದಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ಮತ್ತಷ್ಟು ಅಬಲೀಕರಣವಾಗುತ್ತಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಲಭ್ಯಗೊಳಿಸಬೇಕು ಎನ್ನುವ ಸಂವಿಧಾನಿಕ ನಿರ್ದೇಶನವನ್ನು ಶಿಥಿಲಗೊಳಿಸುತ್ತದೆ.

ಇದನ್ನು ಹಿಂತೆಗೆದುಕೊಳ್ಳಬೇಕು, ಇದಕ್ಕೆ ಮೊದಲಿನ ಪರಿಸ್ಥಿತಿ ಮುಂದುವರೆಯುವಂತೆ ಮಾಡಲು ಒಂದು ಕೇಂದ್ರೀಯ ಸುಗ್ರೀವಾಜ್ಞೆಯನ್ನು ಜಾರಿ ಮಾಡಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ. ಈ ರೋಸ್ಟರ್‍ ಪದ್ಧತಿ ತಂದು ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು ಮತ್ತು ಒಬಿಸಿಗಳ ಅಧ್ಯಾಪಕ ಹುದ್ದೆಗಳ ಹಕ್ಕಿನಲ್ಲಿ ವಿಶ್ವಾಸಘಾತ ಮಾಡಿ   ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಮಾರ್ಚ್‍ 5, 2019 ರಂದು ಹಲವು ಸಂಘಟನೆಗಳು ಪ್ರತಿಭಟನಾ ಹೋರಾಟದ ಕರೆಯನ್ನು ನೀಡಿವೆ. ಸಿಪಿಐ(ಎಂ) ಈ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಸಂಪೂರ್ಣ ಬೆಂಬಲ ನೀಡಿದೆ.

ಆದಿವಾಸಿಗಳ ಹಕ್ಕುಗಳು:

ಮೋದಿ ಸರಕಾರ ಅರಣ್ಯ ಹಕ್ಕುಗಳ ಕಾಯ್ದೆಗೆ ಸವಾಲು ಹಾಕಿದ ಮೊಕದ್ದಮೆಯಲ್ಲಿ ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿದ್ದಾಗ ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿ ಆದಿವಾಸಿಗಳ ಹಕ್ಕುಗಳ ವಿಷಯದಲ್ಲಿ ವಿಶ್ವಾಸಘಾತ ಮಾಡಿದೆ. ಈಗ ಆದೇಶವನ್ನು ಜುಲೈ 2019ರ ವರೆಗೆ ಅಮಾನತಿನಲ್ಲಿಟ್ಟಿದ್ದರೂ, 23 ಲಕ್ಷ ಬುಡಕಟ್ಟು ಜನಗಳ ಭೂಮಿಯ ಹಕ್ಕನ್ನು ವಂಚಿಸುವ ಬೆದರಿಕೆ ಮುಂದುವರೆದಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಲೋಕಸಭಾ ಚುನಾವಣೆಗಳು:

ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಕುರಿತಂತೆ ಪಕ್ಷ ಅಂಗೀಕರಿಸಿರುವ ಹಿಂದಿನ ನಿರ್ಧಾರವನ್ನು ಕೇಂದ್ರ ಸಮಿತಿ ಪುನರುಚ್ಚರಿಸಿದೆ. ಈ ಚುನಾವಣಾ ಕಾರ್ಯತಂತ್ರ ಕೆಳಗಿನ ಮೂರು ಅಂಶಗಳ ಮೇಲೆ ನಿಂತಿದೆ:

  1. ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು
  2. ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸುವುದು, ಮತ್ತು ‘
  3. ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯಾತೀತ ಸರಕಾರ ರಚನೆಯಾಗುವಂತೆ ಮಾಡುವುದು.

ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸಲು ರಾಜ್ಯ ಮಟ್ಟದ ಚುನಾವಣಾ ತಂತ್ರಗಳನ್ನು ರೂಪಿಸಲಾಗುತ್ತಿದೆ. ಕಾಂಗ್ರೆಸ್‍ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿರುವ ರಾಜ್ಯಗಳಲ್ಲಿ ಸಿಪಿಐ(ಎಂ) ಒಂದು ಅಥವ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಒಟ್ಟಾರೆಯಾಗಿ ಬಿಜೆಪಿಯನ್ನು ಸೋಲಿಸಲು ಪ್ರಚಾರ ನಡೆಸುತ್ತದೆ.

ತಮಿಳುನಾಡಿನಲ್ಲಿ, ಡಿಎಂಕೆ ಯೊಂದಿಗೆ ಸೀಟು ಹಂಚಿಕೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.

ಮಹಾರಾಷ್ಟ್ರದಲ್ಲಿ, ದಿಂಡೋರಿ ಅಥವ ಪಾಲ್ಘರ್ ನಲ್ಲಿ ಸ್ಪರ್ಧಿಸುವ ಬಗ್ಗೆ ಎನ್.ಸಿ.ಪಿ. ಯೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಈ ಎರಡೂ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಸ್ವತಂತ್ರವಾಗಿ ತಲಾ ಒಂದು ಲಕ್ಷ ಮತಗಳನ್ನು ಪಡೆಯುತ್ತಿದೆ.

ಬಿಹಾರದಲ್ಲಿ, ಸಮಸ್ತಿಪುರ ಜಿಲ್ಲೆಯ ಉಜಿಯಾರ್ಪುರದಲ್ಲಿ ಸ್ಪರ್ಧಿಸಲು ಆರ್.ಜೆ.ಡಿ. ಯೊಂದಿಗೆ ಮಾತುಕತೆಗಳು ನಡೆಯುತ್ತಿವೆ.

ಒಡಿಶಾದಲ್ಲಿ, ವಿಧಾನಸಭೆಗೂ ಜತೆಗೇ ಚುನಾವಣೆಗಳು ನಡೆಯಲಿದ್ದು, ಸಿಪಿಐ(ಎಂ) ಭುವನೇಶ್ವರ ಲೋಕಸಭಾ ಸ್ಥಾನಕ್ಕೆ ಮತ್ತು ಈಗ ಪಡೆದಿರುವ ಬೊನ್ನೈ ಸೇರಿದಂತೆ ಕೆಲವು ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತದೆ. ಬಿಜೆಪಿಯನ್ನು ಸೋಲಿಸುವಂತೆ ಒಡಿಶಾದ ಜನತೆಗೆ ಕರೆ ನೀಡುತ್ತದೆ. ರಾಜ್ಯ ಸರಕಾರದ ವಿರುದ್ಧ ಸಿಪಿಐ(ಎಂ) ನಡೆಸಿರುವ ಹಲವು ಹೋರಾಟಗಳ ಹಿನ್ನೆಲೆಯಲ್ಲಿ ಇತರ ಎಡಪಕ್ಷಗಳೊಂದಿಗೆ ವಿವರಗಳನ್ನು ಚರ್ಚಿಸುತ್ತಿದೆ.

ಪಶ್ಚಿಮ ಬಂಗಾಲದಲ್ಲಿ, ಬಿಜೆಪಿ-ವಿರೋಧಿ ಮತ್ತು ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸಲು ಸಾಧ್ಯವಾಗುವಂತೆ ಸೂಕ್ತ ಕಾರ್ಯತಂತ್ರಗಳನ್ನು ಅಂಗೀಕರಿಸಬೇಕು ಎಂದು ಕೇಂದ್ರ ಸಮಿತಿ ಈ ಹಿಂದೆ ನಿರ್ಧರಿಸಿತ್ತು. ಅದರ ಪ್ರಕಾರ, ಕಾಂಗ್ರೆಸ್‍ ಮತ್ತು ಎಡರಂಗ ಈಗ ಹೊಂದಿರುವ ಆರು ಸ್ಥಾನಗಳಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸಬಾರದು ಎಂಬ ಪ್ರಸ್ತಾವನೆಯನ್ನು ಸಿಪಿಐ(ಎಂ) ಮುಂದಿಟ್ಟಿದೆ. ಇತರ ಸ್ಥಾನಗಳನ್ನು ಅಂತಿಮಗೊಳಿಸಲು ಮಾರ್ಚ್ 8ರಂದು ಎಡರಂಗ ಸಭೆ ಸೇರುತ್ತಿದೆ.

ವಿಕಲಚೇತನರನ್ನು ಗೇಲಿ ಮಾಡಿದ ಮೋದಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಚ್ 2ರಂದು ಸ್ಮಾರ್ಟ್‍ ಇಂಡಿಯ ಹ್ಯಾಕಥಾನ್‍ 2019ರಲ್ಲಿ ವಿದ್ಯಾರ್ಥಿಗಳೊಂದಿಗೆ ಒಂದು ಸಂವಾದದ ವೇಳೆಯಲ್ಲಿ ಡಿಸ್ಲೆಕ್ಸಿಯ ಇರುವ ಜನಗಳನ್ನು ಗೇಲಿ ಮಾಡಿರುವುದರ ಬಗ್ಗೆ ಕೇಂದ್ರ ಸಮಿತಿ ವ್ಯಥೆ ವ್ಯಕ್ತಪಡಿಸಿದೆ. ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ಪ್ರತಿಗಾಮಿ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಉನ್ನತ ಹುದ್ದೆಯಲ್ಲಿ ಇರುವವರಿಂದ ಇಂತಹ ಸಂವೇದನಾಶೂನ್ಯ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಶಿಸ್ತು ಕ್ರಮ:

ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಕಾಮ್ರೇಡ್‍ ನರಸಯ್ಯ ಆದಂ ಅವರನ್ನು ಮೂರು ತಿಂಗಳ ಕಾಲ ಅಮಾನತು ಮಾಡಲು ನಿರ್ಧರಿಸಲಾಗಿದೆ. ಇದು ಅವರು ಪ್ರಧಾನ ಮಂತ್ರಿಗಳು ಮತ್ತು ರಾಜ್ಯ ಮುಖ್ಯಮಂತ್ರಿಗಳ ಸಮ್ಮುಖ ಒಂದು ಸಾರ್ವಜನಿಕ ಸಭೆಯಲ್ಲಿ ಮಾಡಿದ ಭಾಷಣದ ಒಂದು ಪರಿಣಾಮವಾಗಿದೆ, ಅದು ಪಕ್ಷದ ಪ್ರತಿಷ್ಠೆಗೆ ಘಾಸಿಯುಂಟು ಮಾಡಿದೆ ಎಂದು ಕೇಂದ್ರ ಸಮಿತಿ ಹೇಳಿದೆ.

Leave a Reply

Your email address will not be published. Required fields are marked *