‘ರಾಷ್ಟ್ರೀಯ ನಗರ ಪ್ರದೇಶ ಧೋರಣಾ ಚೌಕಟ್ಟು’: ಮುಂಬರುವ ಸರಕಾರಕ್ಕೇ ಬಿಡುವುದು ಸೂಕ್ತ

ಕೇಂದ್ರ ನಗರ ವ್ಯವಹಾರಗಳ ಮಂತ್ರಿಗಳಿಗೆ ಸೀತಾರಾಂ ಯೆಚುರಿ ಪತ್ರ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ‘ರಾಷ್ಟ್ರೀಯ ನಗರಪ್ರದೇಶ ಧೋರಣಾ ಚೌಕಟ್ಟು’ (ನ್ಯಾಶನಲ್ ಅರ್ಬನ್‍ ಪಾಲಿಸಿ ಫ್ರೇಮ್‍ವರ್ಕ್-ಎನ್.ಯು.ಪಿ.ಎಫ್.)ನ ಮೊದಲ ಕರಡನ್ನು ಬಿಡುಗಡೆಮಾಡಿದೆ. ‘ಇದು ಭಾರತದಲ್ಲಿ ನಗರ ಯೋಜನೆಯ ಭವಿಷ್ಯದ ಒಂದು ಮಾರ್ಗದರ್ಶಕ ದಸ್ತಾವೇಜು ಆಗಬೇಕು ಎಂದು ಪರಿಗಣಿಸಲಾಗಿದೆ. ಅಂದರೆ ಈ ಬಗ್ಗೆ ಬಹಳ ವಿಚಾರ-ವಿಮರ್ಶೆಗಳು ನಡೆಯಬೇಕಾಗಿದೆ. ಆದರೆ ಅದಕ್ಕೆ  ಕೊಟ್ಟಿರುವ ಗಡುವು ಮಾರ್ಚ್‍ 10,2019 ರ ವರೆಗೆ ಮಾತ್ರ.

ಇದು ಬಹುಪಾಲು ಜನರನ್ನು, ನಗರಪ್ರದೇಶಗಳ ವ್ಯವಹಾರಗಳನ್ನು ಕುರಿತಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೊರಗಿಡುವ ಗಡುವು ಆಗುತ್ತಿದೆ, ಕೇವಲ ಕನ್ಸಲ್ಟೆಂಟ್‍ಗಳಿಗೆ ಸೀಮಿತವಾಗುವ ಒಂದು ಕಸರತ್ತಾಗಿ ಉಳಿಯುತ್ತದೆ” ಎಂದು ಈ ಕುರಿತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಿಗಳಾದ ಹರ್ದೀಪ್‍ ಸಿಂಗ್‍ ಪುರಿಯವರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿಯವರು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಭಾರತದ ಬೆಳೆಯುತ್ತಿರುವ ನಗರಗಳ ಕ್ಲಿಷ್ಟತೆಗಳನ್ನು ಚಲನರಹಿತ ಯೋಜನಾ ಸಲಕರಣೆಗಳಿಂದ ಬಿಡಿಸಲು ಸಾಧ್ಯವಾಗದು, ನಗರ ಪ್ರದೇಶದ ಸತತವಾಗಿ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧವಿಲ್ಲದಂತಹ ಒಂದು ಸಿದ್ಧ ಭೂಮಿಕೆಯನ್ನು ಅವು ಪೋಷಿಸುತ್ತವೆ ಎಂದು ಈ ದಸ್ತಾವೇಜಿನಲ್ಲೇ ಹೇಳಲಾಗಿದೆ. ಇದು ಒಪ್ಪತಕ್ಕ ವಿಷಯ ಎಂದಿರುವ ಯೆಚುರಿಯವರು, ಈ ಮೂಲಕ ನಗರೀಕರಣದ ಧೋರಣೆಗಳು ಅಪೇಕ್ಷಿತ ಫಲಿತಾಂಶಗಳನ್ನು ಒದಗಿಸದೆ ತೀರಾ ವಿಫಲವಾಗಿರುವುದನ್ನು ಸ್ಪಷ್ಟವಾಗಿ ಇದು ಎತ್ತಿ ತೋರುತ್ತದೆ ಎಂದು ಟಿಪ್ಪಣಿ ಮಾಡಿದ್ದಾರೆ.

ಈ ಕರಡಿನಲ್ಲಿ ‘ಸ್ಮಾರ್ಟ್‍ಸಿಟಿ’ ಮುಂತಾದ ಬಹು-ಪ್ರಚಾರಿತ ಕಾರ್ಯಕ್ರಮಗಳ ಬಗ್ಗೆ ಒಂದು ಟಿಪ್ಪಣಿ ಕೂಡ ಕಾಣುತ್ತಿಲ್ಲ. ಇದೇ ಇಂತಹ ಎಲ್ಲ ಕಾರ್ಯಕ್ರಮಗಳು ವಿಫಲವಾಗಿರುವುದನ್ನು ತೋರಿಸುತ್ತದೆ, ಇದನ್ನೆಲ್ಲ ಎತ್ತಿ ತೋರುವ ಬೃಹತ್‍ ಪ್ರಮಾಣದ ಅಂಕಿ-ಅಂಶಗಳನ್ನು ಉದ್ಧರಿಸುವ ಅಗತ್ಯವೂ ಇಲ್ಲ ಎಂದು ಯೆಚುರಿಯವರು ತಮ್ಮ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಇದಲ್ಲದೆ ಈ ಕರಡಿನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಈ ಕುರಿತ ಅಭಿಪ್ರಾಯಗಳನ್ನು ತಿಳಿಸಲು ಒದಗಿಸಿರುವ ವಿಧಾನದಲ್ಲಿ ಧೋರಣೆ ಕುರಿತಂತೆ ಹೇಳಲು, ಶಿಫಾರಸು ಮಾಡಲು ಅವಕಾಶವಿಲ್ಲದಂತಾಗಿದೆ. ಅದು ಕೊಟ್ಟಿರುವ ಕೇವಲ 300 ಪದಗಳ ಮಿತಿಯಲ್ಲಿ ಸ್ಥೂಲಸ್ವರೂಪದ ವಿಷಯಗಳನ್ನಷ್ಟೇ ಹೇಳಲು ಸಾಧ್ಯ ಎಂಬ ಸಂಗತಿಯನ್ನೂ ಸೀತಾರಾಮ್‍ ಯೆಚುರಿಯವರು ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಇಷ್ಟೇ ಅಲ್ಲ, ಸದ್ಯದಲ್ಲೇ ಸಾರ್ವತ್ರಿಕ ಚುನಾವಣೆಗಳ ಪ್ರಕಟಣೆ ಬರಲಿದೆ, ಆದ್ದರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗುವ ಸಮಯ, ಆದ್ದರಿಂದ, ಈ ಕರಡಿನ ಕುರಿತು ಅಭಿಪ್ರಾಯಗಳನ್ನು, ಸ್ಪಂದನೆಗಳನ್ನು ತಿಳಿಸಲು ನೀಡಿರುವ ಸಮಯದ ಗಡುವನ್ನು ವಿಸ್ತರಿಸುವದಷ್ಟೇ ಅಲ್ಲ, ನಗರ ಧೋರಣಾ ಚೌಕಟ್ಟನ್ನು ಕುರಿತಂತೆ ಹೊಸ ಸರಕಾರವೇ ಯೋಚಿಸಲು ಬಿಡುವುದು ಸೂಕ್ತ, ಏಕೆಂದರೆ ಇದಕ್ಕೆ ಜನಾದೇಶವೂ ಬೇಕಾಗುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಿಗಳಾದ ಹರ್ದೀಪ್‍ ಸಿಂಗ್‍ ಪುರಿಯವರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *