ಅರ್ಥಿಕತೆಯ ತಳಹದಿಯನ್ನು ಖಾಸಗೀಕರಿಸುವ, ಅಭಿವೃದ್ಧಿಯ ಹಗಲು ಕನಸಿನ ಬಜೆಟ್

ಮಾರ್ಚ್ 7ರಂದು ಕಾಂಗ್ರೆಸ್ ಸರ್ಕಾರ ಮಂಡಿಸಿರುವ 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಹೆಚ್ಚು ಹೆಚ್ಚು ಸಾಲದ ಮೇಲೆ ಅವಲಂಬಿಸಿ, ಸುಮಾರು 19,000 ಕೋಟಿ ರೂ.ಗಳ ಕೊರತೆ ಬಜೆಟ್ ಆಗಿದೆ. ಈ ಬಜೆಟ್ ರೈತ-ಕಾರ್ಮಿಕರ ಕಲ್ಯಾಣವನ್ನು ಕಡೆಗಣಿಸಿದೆ. ಇವತ್ತಿನ ತೀವ್ರ ಬೆಲೆ ಏರಿಕೆಗೆ ಅನುಗುಣವಾಗಿ ಜೀವನಾಶ್ಯಕ ಕನಿಷ್ಠ ಕೂಲಿ ಖಾತರಿಪಡಿಸದೇ, ಕನಿಷ್ಠ ದುಡಿಮೆ ಅವಧಿಯನ್ನು ಮಾಲೀಕರ ಮರ್ಜಿಗೆ ಅನುಗುಣವಾಗಿ 12-14 ಗಂಟೆಗಳಷ್ಟು ಅಮಾನವೀಯಗೊಳಿಸಿರುವ ಬಂಡವಾಳ ಸ್ನೇಹಿ ನೀತಿಗಳನ್ನು ಅನುಸರಿಸುವ ಪ್ರಸ್ತಾಪಗಳ ಮೂಲಕ ಅರ್ಥಿಕತೆ ತಳಹದಿಯನ್ನು ಧ್ವಂಸಗೊಳಿಸುತ್ತಾ, ಅಭಿವೃದ್ಧಿಯ ಹಗಲು ಕನಸು ಕಾಣುತ್ತಿದೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸಿದೆ.

ಕೈಗಾರಿಕಾ ಮಾಲೀಕರು ಎಸುಗುವ ಕಾನೂನು ಉಲ್ಲಂಘನೆಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾಪವನ್ನು ಈ ಬಜೆಟ್ ನಲ್ಲಿ ಮಾಡಲಾಗಿದೆ. ಇದರ ಪರಿಣಾಮ ಕಾರ್ಮಿಕರ ಹಕ್ಕುಗಳ ಮೇಲೆ ಗಂಭೀರವಾದ ಪರಿಣಾಮಗಳು ಉಂಟಾಗಲಿವೆ. ಸಿದ್ದರಾಮಯ್ಯ ಸರ್ಕಾರದ ಈ ನಿಲುವು ಅತ್ಯಂತ ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದೆ.

ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಹಾಗೂ ಅನುದಾನ ವಿತರಣೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದೊಡ್ಡ ಪ್ರಮಾಣದ ತಾರತಮ್ಯ ಹಾಗೂ ಅನ್ಯಾಯವನ್ನು ಅನುಭವಿಸುತ್ತಿದೆ ಎಂಬುದು ವಾಸ್ತವ. ಇಂತಹ ಹಣಕಾಸು ಸಂಕಟದ ಪರಿಸ್ಥಿತಿಯನ್ನು ಸುಮಾರು ಶೇಕಡಾ 52ರಷ್ಟು ಸ್ವಂತ ತೆರಿಗೆ ಮಾತ್ರ ಹೊಂದಿರುವಂತಹ ಮತ್ತು ಹೆಚ್ಚು ಹೆಚ್ಚು ಸಾಲದ ಮೇಲೆ ಅವಲಂಬನೆ ಮೂಲಕ ಸರಿಪಡಿಸಲು ಸಾಧ್ಯವಿಲ್ಲ. ಇರುವ ಸೀಮಿತ ಸಂಪನ್ಮೂಲಗಳನ್ನು ದುಡಿಯುವ ಜನತೆಯ ಕೊಳ್ಳುವ ಶಕ್ತಿ ಹೆಚ್ಚಿಸಲು ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ. ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು ನಿವಾರಣೆ ಮತ್ತು ಕಾರ್ಮಿಕ ಸ್ನೇಹಿ ಕ್ರಮಗಳ ಮೂಲಕ ದುಡಿಯುವ ಜನರ ಕಲ್ಯಾಣವನ್ನು ಸಾಧಿಸದೇ ಖಾಸಗೀಕರಣ ಹಾಗೂ ಖಾಸಗಿ ಸಹಭಾಗಿತ್ವದ ಕ್ರಮಗಳ ಮೂಲಕ, ಅದೇ ಹಳಸಲು ಉದಾರೀಕರಣ ಕ್ರಮಗಳು ಅರ್ಥಿಕತೆಯ ತಳಹದಿಯನ್ನು ದುರ್ಬಲಗೊಳಿಸುತ್ತವೆ.

ಪ್ರತಿಯೊಂದು ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಪುನಶ್ಚೇತನ ಮಾಡದೇ ಬಹುತೇಕ ಅತಿಥಿ ಶಿಕ್ಷಕರನ್ನೇ ಆಶ್ರಯಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಇದು ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ನಿರ್ಧಾರವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸದೇ ಆರೋಗ್ಯ ಕುಟುಂಬ ಕಲ್ಯಾಣದ ತಾಯಿ-ಶಿಶು ಮರಣ ಪ್ರಮಾಣ ಇಳಿಕೆ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವಸತಿಯಂತಹ ಬಹಳ ಪ್ರಮುಖವಾದ ಕ್ಷೇತ್ರದಲ್ಲಿಯೂ ಖಾಸಗಿ ಸಹಭಾಗಿತ್ವವನ್ನು ಪ್ರತಿಪಾದಿಸಲಾಗಿದೆ. ಕನಿಷ್ಠ ದುಡಿಮೆ ಅವಧಿಯನ್ನು ಎಂಟು ಗಂಟೆಗೆ ಇಳಿಕೆ ಮಾಡಬೇಕೆಂಬ, ಕಾರ್ಮಿಕ-ರೈತ ಪರ ನೀತಿಗಳನ್ನು ಜಾರಿಗೊಳಿಸಬೇಕೆಂಬ ಆಗ್ರಹಗಳನ್ನು ನಿರ್ಲಕ್ಷಿಸಿ, ಈ ಬಜೆಟ್ ನಲ್ಲಿ ಬಂಡವಾಳಶಾಹಿಗಳ ಹಿತರಕ್ಷಣೆಗೆ ಅಧ್ಯತೆ ನೀಡಲಾಗಿದೆ.

ಕೃಷಿ ಬಿಕ್ಕಟ್ಟು, ಗ್ರಾಮೀಣ ನಿರುದ್ಯೋಗಕ್ಕೆ ಪರಿಹಾರದಂತಹ ಸುಸ್ಥಿರ ಕ್ರಮಗಳನ್ನು ಅನುಸರಿಸದೇ ನಗರೀಕರಣ ವಿಶೇಷವಾಗಿ, ಬೆಂಗಳೂರು ನಗರ ಕೇಂದ್ರಿತ ಖಾಸಗಿ ಸಹಭಾಗಿತ್ವದ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುತ್ತಿರುವ ಈ ಬಜೆಟ್ ಮತ್ತಷ್ಟು ನಗರೀಕರಣ ಹಾಗೂ ವಲಸೆಯನ್ನು ಹೆಚ್ವಲು ಕಾಣಿಕೆ ನೀಡುತ್ತದೆ. ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಂಡವಾಳ ಆಕರ್ಷಿಸಲು ಬೆಂಗಳೂರನ್ನು ಮಾತ್ರವೇ ಪರಿಗಣಿಸದೇ ರಾಜ್ಯದ ಸಮಗ್ರ ಬೆಳವಣಿಗೆಗೆ ಒತ್ತು ನೀಡುವಂತೆ ಯೋಜನೆಗಳನ್ನು ರೂಪಿಸುವುದು ಅಗತ್ಯ. ಖಾಸಗಿ ಸಹಭಾಗಿತ್ವದ ಮೂಲಭೂತ ಸೌಕರ್ಯಗಳು ಬೆಂಗಳೂರು ನಗರದ ಜನ ಜೀವನವನ್ನು ಮತ್ತಷ್ಟು ದುಬಾರಿಗೊಳಿಸಿ, ಈಗ ಇರುವ ನೀರು, ವಿದ್ಯುತ್, ವಸತಿ, ಸಂಚಾರ ಮುಂತಾದ ಎಲ್ಲಾ ರೀತಿಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿವೆ. ಬೆಂಗಳೂರು ಸುತ್ತ ಮುತ್ತ ಇರುವ ರಿಯಲ್ ಎಸ್ಟೇಟ್ ಕುಳಗಳನ್ನು ಬೆಳೆಸಲು ನಗರವನ್ನು ವಿರೂಪಗೊಳಿಸುವ ಪ್ರಯತ್ನಗಳಿಗೆ ಪ್ರೊತ್ಸಾಹ ನೀಡಬಾರದು ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

Leave a Reply

Your email address will not be published. Required fields are marked *