ವಾಸ್ತವ ಸಂಗತಿಗಳನ್ನು ಜನರ ಮುಂದಿಟ್ಟು, ತಪ್ಪು ಮಾಹಿತಿಗಳು ಹರಡುವುದನ್ನು ತಡೆಯಬೇಕು

ಸರ್ವಪಕ್ಷ ಸಭೆಯಲ್ಲಿ ಸಿಪಿಐ(ಎಂ) ಮುಖಂಡ ಜಾನ್ ಬ್ರಿಟ್ಟಾಸ್

‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಮೇ 8. 2025 ರಂದು ಭಾರತ ಸರ್ಕಾರವು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಸಿಪಿಐ(ಎಂ) ಪರವಾಗಿ, ರಾಜ್ಯಸಭೆಯಲ್ಲಿ ಪಕ್ಷದ ನಾಯಕ ಜಾನ್ ಬ್ರಿಟ್ಟಾಸ್ ಭಾಗವಹಿಸಿದ್ದರು. ಸತತ ಎರಡನೇ ಬಾರಿಗೆ ಇಂತಹ ಮಹತ್ವದ ಸರ್ವಪಕ್ಷ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸದಿದ್ದಕ್ಕೆ ಜಾನ್ ಬ್ರಿಟ್ಟಾಸ್ ವಿಷಾದ ವ್ಯಕ್ತಪಡಿಸಿದರು. ಪ್ರಧಾನಿ ಭಾಗವಹಿಸುವಿಕೆಯೊಂದಿಗೆ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

‘ಕಾರ್ಯಾಚರಣೆಯ ಉದ್ದೇಶಿತ ಗುರಿಗಳನ್ನು ಸಾಧಿಸಲಾಗಿದೆ’ ಎಂದು ಸರ್ಕಾರ ವರದಿ ಮಾಡಿರುತ್ತದೆ. ಹಿಂದಿನ ಅನುಭವವನ್ನು ಗಮನಿಸಿದರೆ. ಇಂತಹ ಮಿಲಿಟರಿ ಕಾರ್ಯಾಚರಣೆಯಿಂದ ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಸಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಅನುಮಾನ ವ್ಯಕ್ತಪಡಿಸಿದ ಬ್ರಿಟ್ಟಾಸ್, ಸರ್ಕಾರವು ರಾಜತಾಂತ್ರಿಕ ಕ್ರಮಗಳನ್ನು ಮುಂದುವರಿಸಬೇಕು ಮತ್ತು ಭಯೋತ್ಪಾದಕರನ್ನು ಶಿಕ್ಷೆಗೆ ಒಳಪಡಿಸಲು ಅಂತರರಾಷ್ಟ್ರೀಯ ಒತ್ತಡವನ್ನು ನಿರ್ಮಿಸಬೇಕು ಎಂದು ಒತ್ತಿ ಹೇಳಿದರು.

ಪರಿಸ್ಥಿತಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು, ಗಡಿ ಪ್ರದೇಶಗಳ ಜನರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪರಿಸ್ಥಿತಿಯಿಂದ ತೊಂದರೆಗೊಳಗಾದವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಬೇಕು ಎಂದು ಬ್ರಿಟ್ಟಾಸ್ ಆಗ್ರಹಪಡಿಸಿದರು.

ಎಲ್ಲಾ ವಾಸ್ತವ ಸಂಗತಿಗಳನ್ನು ಜನರ ಮುಂದಿಡಬೇಕು ಮತ್ತು ಎಲ್ಲಾ ರೀತಿಗಳ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟಬೇಕು ಎಂದು ಅವರು ಸರ್ಕಾರವನ್ನು ಕೇಳಿದ ಬ್ರಿಟ್ಟಾಸ್, ದ್ವೇಷ ಹರಡುವುದನ್ನು ತಡೆಯುವುದು ಸರ್ಕಾರದ ಕರ್ತವ್ಯ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ದ್ವೇಷ ಹರಡುವುದರ ವಿರುದ್ಧ ಹೋರಾಡದೆ ಭಯೋತ್ಪಾದನೆಯ ವಿರುದ್ಧ ಯುದ್ಧ ನಡೆಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಪಹಲ್ಗಾಮ್ ಮತ್ತು ಕಾಶ್ಮೀರದ ಜನತೆ ಭಯೋತ್ಪಾದನೆಯಿಂದ, ಅದರ ಎಲ್ಲಾ ದುಷ್ಪರಿಣಾಮಗಳಿಂದ ಬಳಲುತ್ತಿದ್ದರೂ ಸಹ, ಅದನ್ನು ಒಟ್ಟಾಗಿ ಸಂವೇದನಾಶೀಲರಾಗಿ ಖಂಡಿಸುವ ಮೂಲಕ ಇಡೀ ದೇಶಕ್ಕೆ ದಾರಿ ತೋರಿಸಿದ್ದಾರೆ ಎಂದು ಕಾಶ್ಮೀರದ ಜನತೆಯನ್ನು ಬ್ರಿಟ್ಟಾಸ್ ಶ್ಲಾಘಿಸಿದರು. ತೊಂದರೆಗೊಳಗಾಗಿರುವ ಕಾಶ್ಮೀರದ ಜನರ ಬೆಂಬಲಕ್ಕೆ ನಿಲ್ಲಲು ಸರ್ಕಾರ ಒಂದು ಸೂಕ್ತ ಸಮಯದಲ್ಲಿ ಕಾಶ್ಮೀರಕ್ಕೆ ಸರ್ವಪಕ್ಷ ನಿಯೋಗಕ್ಕೆ ನೇತೃತ್ವ ನೀಡಬೇಕು ಎಂದು ಅವರು ಒತ್ತಾಯಿಸಿದರು.

 

Leave a Reply

Your email address will not be published. Required fields are marked *