ELI ಯೋಜನೆಯನ್ನು ಸ್ಕ್ರ್ಯಾಪ್ ಮಾಡಿ; ಸಿಪಿಐ(ಎಂ) ಪೊಲಿಟ್‍ ಬ್ಯುರೊ

ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಹಣ ವರ್ಗಾಯಿಸುವ ಉದ್ದೇಶವನ್ನು ಹೊಂದಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನ (ಇಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪೊಲಿಟ್‌ಬ್ಯುರೊ ವಿರೋಧಿಸಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಬಲಿಕೊಟ್ಟು ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡಲು ಮಾಡುತ್ತಿರುವ ಮತ್ತೊಂದು ಪ್ರಯತ್ನವಾಗಿದೆ. ಇದು ಅದರ ಸ್ವಜನ ಪಕ್ಷಪಾತಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಪೊಲಿಟ್ ಬ್ಯುರೊ ಹೇಳಿದೆ. ಈ ಕುರಿತು ಜುಲೈ 2, 2025ರಂದು ಪತ್ರಿಕಾ ಪ್ರಕಟಣೆ ನೀಡಿದೆ.

ಉದ್ಯೋಗ ಸೃಷ್ಟಿ, ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಭರವಸೆಯಲ್ಲಿ ಸಾರ್ವಜನಿಕ ಹಣವನ್ನು ಕಾರ್ಪೊರೇಟ್‌ಗಳಿಗೆ ವರ್ಗಾಯಿಸುವ ಮತ್ತೊಂದು ಮೋಸದ ಯೋಜನೆಯೇ ಇಎಲ್‌ಐ ಯೋಜನೆ. ಈ ಯೋಜನೆಯು ದುರ್ಬಲ ಮತ್ತು ಅನಿಶ್ಚಿತ ಉದ್ಯೋಗಗಳನ್ನು ಉತ್ತೇಜಿಸುತ್ತದೆ. ಹೂಡಿಕೆ ವೆಚ್ಚ, ಉತ್ಪಾದನಾ ವೆಚ್ಚಗಳು, ಕಾರ್ಮಿಕ ವೆಚ್ಚಗಳು ಮತ್ತು ದೇಶೀಯ ಮತ್ತು ವಿದೇಶಿ ಉದ್ಯೋಗದಾತರ ಶಾಸನಬದ್ಧ ಹೊಣೆಗಾರಿಕೆಗಳನ್ನು ಸಾರ್ವಜನಿಕ ಖಜಾನೆಯಿಂದ ಭರಿಸುತ್ತದೆ.

ಬಿಜೆಪಿ ನೇತೃತ್ವದ ಸರ್ಕಾರವು ಗ್ರಾಮೀಣ ಪ್ರದೇಶದ ಬಡವರಿಗೆ ಅನುಕೂಲವಾಗುವ MGNREGA ಗೆ ಹಂಚಿಕೆಗಳನ್ನು ಕಡಿತಗೊಳಿಸುತ್ತಿದೆ ಮತ್ತು ನಗರ ಪ್ರದೇಶಗಳಿಗೆ ಅಂತಹ ಉದ್ಯೋಗ ಖಾತರಿ ಕಾಯ್ದೆಯನ್ನು ರೂಪಿಸುವ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದೆ. ಅದೇ ಸಮಯದಲ್ಲಿ ಅದು ಕಾರ್ಪೊರೇಟ್‌ಗಳಿಗೆ ಪ್ರೋತ್ಸಾಹದ ಹೆಸರಿನಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

ಬೃಹತ್ ಪ್ರಮಾಣದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸಾರಿಗೆ ಮುಂತಾದ ಸಾರ್ವಜನಿಕ ಸೇವೆಗಳನ್ನು ವಿಸ್ತರಿಸುವ ಮೂಲಕ, ಕಾರ್ಪೊರೇಟ್ ವರ್ಗಕ್ಕೆ ಸಬ್ಸಿಡಿ ನೀಡುವ ಬದಲು ಸಾಕಷ್ಟು ಹಣವನ್ನು ಹಂಚಿಕೆ ಮಾಡುವ ಮೂಲಕ, ಕನಿಷ್ಠ ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯೊಂದಿಗೆ ಯೋಗ್ಯ ಉದ್ಯೋಗವನ್ನು ಖಚಿತಪಡಿಸಿಕೊಳ್ಳಬೇಕು. ಮತ್ತು ಸರ್ಕಾರವು ತಕ್ಷಣವೇ ಇಎಲ್ಐ ಯೋಜನೆಯನ್ನು ರದ್ದುಗೊಳಿಸಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಬೇಕೆಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಒತ್ತಾಯಿಸಿದೆ.

Leave a Reply

Your email address will not be published. Required fields are marked *