ಜುಲೈ 9, 2025 ರಂದು ನಡೆದ ಯಶಸ್ವಿ ಸಾರ್ವತ್ರಿಕ ಮುಷ್ಕರಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಕಾರ್ಮಿಕ ವರ್ಗವನ್ನು ಅಭಿನಂದಿಸಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೋ, ವಿವಿಧ ಸ್ಥಳಗಳಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಮತ್ತು ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸದಂತೆ ಕಾರ್ಮಿಕರನ್ನು ಬೆದರಿಸಲು ಪ್ರಯತ್ನಿಸಲಾಗಿದೆ ಎಂದು ವರದಿಗಳು ತೋರಿಸುತ್ತವೆ. ಅಂತಹ ಎಲ್ಲಾ ದಾಳಿಗಳನ್ನು ಎದುರಿಸಿ, ಮುಷ್ಕರ ಯಶಸ್ವಿಯಾಗಿ ನಡೆಯಿತು. ರೈತರು, ಕೃಷಿ ಕಾರ್ಮಿಕರು ಮತ್ತು ವಿವಿಧ ವರ್ಗದ ಜನರು ಸಹ ಒಗ್ಗಟ್ಟಿನಿಂದ ಕಾರ್ಮಿಕರೊಂದಿಗೆ ಸೇರಿಕೊಂಡು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು.
ಕಾರ್ಮಿಕ ವರ್ಗದ ಜೊತೆ ನಿಂತು ಈ ಸಾರ್ವತ್ರಿಕ ಮುಷ್ಕರವನ್ನು ದೊಡ್ಡ ರೀತಿಯಲ್ಲಿ ಯಶಸ್ವಿಗೊಳಿಸಿದ ಎಲ್ಲ ಜನರನ್ನು ಸಿಪಿಐ(ಎಂ) ಅಭಿನಂದಿಸುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳು ಮತ್ತು ಅದರ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧದ ಧ್ವನಿಯನ್ನು ಆಲಿಸಬೇಕು. ಅದು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪೊಲಿಟ್ ಬ್ಯುರೋ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ.
