ಜಮ್ಮು ಮತ್ತು ಕಾಶ್ಮೀರದ ಜನರ ‘ಹುತಾತ್ಮ ದಿನ’ ಆಚರಣೆಗೆ ಅಡ್ಡಿ

ಮುಖ್ಯಮಂತ್ರಿಗಳ ಮೇಲೆಯೇ ಕೈಮಾಡಿದ ಪೊಲೀಸ್

ರಾಜಕೀಯ ಮುಖಂಡರ ಗೃಹಬಂಧನ

ಜಮ್ಮು ಮತ್ತು ಕಾಶ್ಮೀರ ಡೋಗ್ರಾ ರಾಜರ ಊಳಿಗಮಾನ್ಯ ದಬ್ಬಾಳಿಕೆಯ ವಿರುದ್ಧ ಕಾಶ್ಮೀರಿಗಳು ನಡೆಸಿದ ಹೋರಾಟಗಳಲ್ಲಿ ಜುಲೈ 13, 1931 ಒಂದು ಮಹತ್ವದ ದಿನ. ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಲು ಮತ್ತು ಬಂಧಿಸಿದ್ದ ತಮ್ಮ ಮುಖಂಡರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಲು  ಜುಲೈ 13, 2031ರಂದು ಸೇರಿದ್ದ ಜನರ ಮೇಲೆ ಡೋಗ್ರಾ ಮಹಾರಾಜನ ಸೈನ್ಯ ಸಿಕ್ಕಾಪಟ್ಟೆ ಗುಂಡು ಹಾರಿಸಿ 22 ಮಂದಿಯನ್ನು ಕೊಂದಿತು.  ಪ್ರತಿಭಟನಾಕಾರರು ಆ ಹುತಾತ್ಮರ ದೇಹಗಳನ್ನು ಶ್ರೀನಗರದ ನಕ್ಷ್‌ಬಂದ್ ಸಾಹಿಬ್ ಎಂಬ ಸ್ಥಳದಲ್ಲಿ ದಫನ್‍ ಮಾಡಿದರು. ಮುಂದೆ ಇದು, ಬ್ರಿಟಿಷ್ ಆಳರಸರು ಮತ್ತು ಅವರ ಹಿಡಿತಕ್ಕೆ ಒಳಗಾದ ಡೋಗ್ರ ಮಹಾರಾಜರ ಪಾಳೆಯಗಾರೀ ದಬ್ಬಾಳಿಕೆಯ ವಿರುದ್ಧ ರೈತರು, ಕಾರ್ಮಿಕರು ಮತ್ತು ಇತರ ಜನವಿಭಾಗಗಳವರು ಒಟ್ಟುಗೂಡಿ ನಡೆಸಿದ ‘ನಯಾ ಕಾಶ್ಮೀರ್’ ಹೋರಾಟದ ಇತಿಹಾಸದಲ್ಲಿ ಒಂದು ತಿರುಗು ಬಿಂದುವಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 13ನ್ನು ‘ಹುತಾತ್ಮ ದಿನ’ವಾಗಿ ಆಚರಿಸಲಾಗುತ್ತಿದೆ. ಜುಲೈ 13 ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ರಜಾದಿನವಾಗಿತ್ತು. ಆದರೆ 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಮಾಡಿದ ನಂತರ ಇದರ ಆಚರಣೆಗೆ ಅಡೆ ತಡೆ ಉಂಟಾಗುತ್ತಿದೆ.

ಈ ವರ್ಷ,  ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹುತಾತ್ಮರಿಗೆ ಗೌರವ ಸಲ್ಲಿಸಲು ನಕ್ಷ್‌ಬಂದ್ ಸಾಹಿಬ್ ಸ್ಮಶಾನಕ್ಕೆ ಹೋದಾಗ ಅವರ ಮೇಲೆಯೇ  ಪೊಲೀಸರು ಕೈಮಾಡಿದರು. ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯ ಮೊಹಮ್ಮದ್ ಯೂಸುಫ್ ತಾರಿಗಾಮಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಅನೇಕ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿ, ಅವರುಗಳು  ಹುತಾತ್ಮರಿಗೆ ಗೌರವ ಸಲ್ಲಿಸಲು ಹೋಗದಂತೆ ತಡೆಯಲಾಯಿತು. ಇದನ್ನು  ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸಿ

ಈಗ ಕೇಂದ್ರಾಡಳಿತ ಮಟ್ಟಕ್ಕೆ ಇಳಿಸಲಾದ  ರಾಜ್ಯದಲ್ಲಿ ಚುನಾಯಿತ ಸರಕಾರ ಇದ್ದರೂ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನದೇ ಆದ ಆದೇಶಗಳು ಮತ್ತು ಪ್ರತಿಗಾಮಿ ದೃಷ್ಟಿಕೋನಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ, ಇದಕ್ಕೆ ಉದಾಹರಣೆಯೆಂದರೆ ಹುತಾತ್ಮರ ದಿನವಾದ ಜುಲೈ 13ರ  ರಜಾದಿನವನ್ನು ಉಪರಾಜ್ಯಪಾಲರು  ರದ್ದುಗೊಳಿಸಿರುವುದು. ಮತ್ತೊಂದೆಡೆ, ಹೋರಾಟಗಾರರ ಮೇಲೆ ಗೋಲೀಬಾರ್ ಮತ್ತು ಹತ್ಯೆಗೆ ಕಾರಣರಾದ ಮಹಾರಾಜರ ಜನ್ಮದಿನವನ್ನು ರಜಾದಿನವೆಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಉಪರಾಜ್ಯಪಾಲರು ವಿಧ್ಯುಕ್ತವಾಗಿ ಚುನಾಯಿತವಾದ ರಾಜ್ಯ ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.

ಬಿಜೆಪಿ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು, ಜುಲೈ 13ರ  ಹುತಾತ್ಮರ ದಿನವನ್ನುಮತ್ತೆ ರಜಾದಿನವಾಗಿ ಮಾಡಬೇಕು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಗೌರವಿಸಿ ರಕ್ಷಿಸಬೇಕು ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿರುವ ಸಿಪಿಐ(ಎಂ)  ಪೊಲಿಟ್ ಬ್ಯುರೊ, ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಮೇಲಿನ ಈ ಪ್ರಹಾರಕ್ಕೆ  ಉಪರಾಜ್ಯಪಾಲರು ಕ್ಷಮೆಯಾಚಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *