ರಾಹುಲ್ ಗಾಂಧಿಗೆ ಸಿಪಿಐ(ಎಂ) ಪ್ರಶ್ನೆ
ಆರೆಸ್ಸೆಸ್ ವಿರುದ್ಧ ಮತ್ತು ಸಿಪಿಐ(ಎಂ) ವಿರುದ್ಧ ತಾವು ಸೈದ್ಧಾಂತಿಕವಾಗಿ ಹೋರಾಡುತ್ತಿದ್ದೇವೆ. ‘ಅವರಿಗೆ ಜನರ ಭಾವನೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ. ಕೇರಳದಲ್ಲಿ ಸಂಘ ಪರಿವಾರದ ಶಕ್ತಿಗಳ ಜೊತೆ ಸೇರಿ ಸಿಪಿಐ(ಎಂ) ವಿರುದ್ಧ ನಿರಂತರವಾಗಿ ತಪ್ಪು ಮಾಹಿತಿ ಹರಡುತ್ತಿರುವ ಕಾಂಗ್ರೆಸ್ ನಾಯಕರಿಂದ ಇಂತಹ ಹೇಳಿಕೆಗಳು ಬಂದಿರುವುದು ಆಶ್ಚರ್ಯವೇನಿಲ್ಲ ಎಂದು ಅದು ಹೇಳಿದೆ. “ಸಾಧ್ಯವಾದಾಗಲೆಲ್ಲಾ ಸಂಘ ಪರಿವಾರದ ಜೊತೆ ತಂಡ ಕಟ್ಟುವ ನೀವಾ, ಆರ್‌ಎಸ್‌ಎಸ್ ವಿರುದ್ಧ ಹೋರಾಡುವುದು’ ಎಂದು ಅದು ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಸಾಮಾಜಿಕ ಮಾಧ್ಯಮ ಒಂದರಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಸಂಪೂರ್ಣವಾಗಿ ಕೋಮುವಾದಿಯಾಗಿರುವ ಆರ್‌ಎಸ್ಎಸ್ ಅನ್ನು, ಶ್ರಮಿಕ ವರ್ಗದ ಜನರಿಗಾಗಿ ನಿರಂತರವಾಗಿ ಹೋರಾಡುವ ಸಿಪಿಐ(ಎಂ) ಅನ್ನು ಸಮಾನವಾಗಿ ನೋಡುವ ರಾಹುಲ್ ಮಾಡಿದ ಹೇಳಿಕೆಗಳನ್ನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಕೇರಳದಲ್ಲಿ ದಿನನಿತ್ಯ ಹೋರಾಡುತ್ತಿರುವುದು ಸಿಪಿಐ(ಎಂ) ಎಂಬುದನ್ನು ರಾಹುಲ್ ಮರೆತಿದ್ದಾರೆ. ಸಂಘಪರಿವಾರ ನಡೆಸಿದ ಉದ್ರಿಕ್ತ ದಾಳಿಯಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ ಅನೇಕ ಮಂದಿ ಕಾರ್ಯಕರ್ತರನ್ನು ಸಿಪಿಐ(ಎಂ) ಕಳೆದುಕೊಂಡಿದೆ. ಕೇರಳದಲ್ಲಿ ಎಡಪಂಥೀಯರ ವಿರುದ್ಧ ತಪ್ಪು ಮಾಹಿತಿ ಹರಡಲು ಕಾಂಗ್ರೆಸ್ ಮತ್ತು ಆರೆಸ್ಸೆಸ್ ಒಂದೇ ತಂಡವಾಗಿ ಕೆಲಸ ಮಾಡುತ್ತಿವೆ. ಕೇರಳದಲ್ಲಿ ರಾಹುಲ್ ಕಾಲಿಟ್ಟ ತಕ್ಷಣ ಅವರಿಗೆ ಅಂತಹ ಹೇಳಿಕೆಗಳನ್ನು ನೀಡುವುದು ಒಂದು ಅಭ್ಯಾಸವಾಗಿಬಿಟ್ಟಿದೆ ಎಂದು ಅವರು ಟೀಕಿಸಿದರು.
ಎಂ.ಎ. ಬೇಬಿ ತಮ್ಮ ವೀಡಿಯೊದಲ್ಲಿ ಏನು ಹೇಳಿದರೆಂದರೆ…
ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳನ್ನು ಕೆಲವು ಸ್ನೇಹಿತರು ನನ್ನ ಗಮನಕ್ಕೆ ತಂದರು. ಆರೆಸ್ಸೆಸ್ ಮತ್ತು ಸಿಪಿಐ(ಎಂ) ಎದುರು ಸೈದ್ಧಾಂತಿಕವಾಗಿ ಹೋರಾಡಲು ಸಮರ್ಪಿತವಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಇದು ತುಂಬಾ ದುರದೃಷ್ಟಕರ. ಕೇರಳದಲ್ಲಿ ಆರೆಸ್ಸೆಸ್ ವಿರುದ್ಧ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಹೋರಾಟದಲ್ಲಿ ಸಿಪಿಐ(ಎಂ) ಮುಂಚೂಣಿಯಲ್ಲಿದೆ.
ಆರೆಸ್ಸೆಸ್ ನವರು ನೂರಾರು ಸಿಪಿಐ(ಎಂ) ಕಾರ್ಯಕರ್ತರನ್ನು, ವಿದ್ಯಾರ್ಥಿ, ಯುವಜನ ಸಂಘಗಳ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಆದರೂ, ಆರೆಸ್ಸೆಸ್ ಜೊತೆ ಸೈದ್ಧಾಂತಿಕವಾಗಿ, ರಾಜಕೀಯವಾಗಿ ಹೋರಾಡಲು ಸಿಪಿಐ(ಎಂ) ಬದ್ಧವಾಗಿದೆ. ರಾಹುಲ್ ಗಾಂಧಿಗೆ ಕೇರಳದಲ್ಲಿ ಆರ್ ಎಸ್ ಎಸ್ ಪಾತ್ರ ಏನಿದೆ? ಸಿಪಿಎಂ ನಿರ್ವಹಿಸುತ್ತಿರುವ ಪಾತ್ರ ಏನಿದೆ ಎನ್ನುವುದು ತಿಳಿದಿದೆಯೋ? ಇಲ್ಲವೋ? ಆರೆಸ್ಸೆಸ್, ಬಿಜೆಪಿ ವಿರುದ್ಧ ನಾವು ಎಷ್ಟು ನಿರ್ಣಾಯಕವಾಗಿ ಹೋರಾಡುತ್ತಿದ್ದೇವೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಸಿಪಿಐ(ಎಂ) ಮತ್ತು ಇತರ ಎಡ ಪಕ್ಷಗಳು ಬೆಂಬಲಿಸದಿದ್ದರೆ, 2004ರಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ರಚಿಸಲು ಸಾಧ್ಯವಾಗುತ್ತಿತ್ತೇ? ಇಲ್ಲವೇ? ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು. ಏನೇ ಇರಲಿ, ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸಂಸದರಾಗಿ ಗೆದ್ದಿದ್ದಾರೆ. ಅವರು ಯಾರ ವಿರುದ್ಧ ಹೋರಾಡಿದರು? ಆರ್‌ಎಸ್‌ಎಸ್ ವಿರುದ್ಧವೋ, ಬಿಜೆಪಿ ವಿರುದ್ಧವೋ ಹೋರಾಡಿ ಗೆದ್ದಿದ್ದಾರೆಯೇ? ಅವರ ವಿರುದ್ಧ ಸ್ಪರ್ಧಿಸಿದ್ದು ಸಿಪಿಐ(ಎಂ) ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಸಿಪಿಐ(ಎಂ) ವಿರುದ್ಧ ಮಾತನಾಡುವಾಗ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರು ಸಿಪಿಐ(ಎಂ) ಅನ್ನು ಟೀಕಿಸಬಹುದು.
ಸಿಪಿಐ(ಎಂ) ಕೂಡಾ ಕಾಂಗ್ರೆಸ್ಸಿನ ಆರ್ಥಿಕ ನೀತಿಗಳನ್ನು ಟೀಕಿಸುತ್ತ ಬಂದಿದೆ. ಇದು ಸೌಹಾರ್ದಯುತವಾಗಿದೆ. ಇನ್ನು ಮುಂದೆಯೂ ಆರ್ಥಿಕ ನೀತಿಗಳ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ತಪ್ಪು ನೀತಿಗಳನ್ನು ಎತ್ತಿ ತೋರಿಸುವುದನ್ನು ನಾವು ಮುಂದುವರಿಸುತ್ತೇವೆ. ಆದರೆ ನಾವು ಅವೆಲ್ಲವನ್ನೂ ಒಂದೇ ರೀತಿಯಲ್ಲಿ ಟೀಕಿಸುತ್ತಿಲ್ಲ. ಆರ್‌ಎಸ್‌ಎಸ್ ಅನ್ನು ಪ್ರತ್ಯೇಕಿಸುವ ರೀತಿಯಲ್ಲಿ ಟೀಕಿಸುತ್ತೇವೆ. ಆದರೆ ರಾಹುಲ್ ಗಾಂಧಿ ಬಹಳ ಸಾಧಾರಣವಾಗಿ ಆರ್‌ಎಸ್‌ಎಸ್ ಮತ್ತು ಸಿಪಿಐ(ಎಂ) ಅನ್ನು ತನ್ನ ಸೈದ್ಧಾಂತಿಕ ಶತ್ರು ಎಂದು ಕರೆಯುವುದು ಸರಿಯಲ್ಲ. ಇದಕ್ಕೆ ಜನ ಖಂಡಿತ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂ.ಎ. ಬೇಬಿ ತಮ್ಮ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು, ಕೇರಳದ ಕೊಟ್ಟಾಯಂನಲ್ಲಿ ನಡೆದ ಒಂದು ಸಭೆಯಲ್ಲಿ ರಾಹುಲ್ ಮಾತನಾಡುತ್ತ, ಪಕ್ಷದ ಕಾರ್ಯಕರ್ತರೆಲ್ಲರೂ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯನ್ನು ಆದರ್ಶವನ್ನಾಗಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದರು. ಅದೇ ಸಮಯದಲ್ಲಿ, ಅವರು ಆರೆಸ್ಸೆಸ್ ವಿರುದ್ಧ ಮತ್ತು ಸಿಪಿಎಂ ವಿರುದ್ದ ಆರೋಪಗಳನ್ನು ಮಾಡಿದರು. “ಆರ್‌ಎಸ್‌ಎಸ್ ಮತ್ತು ಸಿಪಿಎಂ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡುತ್ತಿದ್ದೇವೆ. ಸೈದ್ಧಾಂತಿಕವಾಗಿ ಹೋರಾಡುತ್ತಿದ್ದರೂ… ಅವರ ಬಗ್ಗೆ ನನ್ನ ದೊಡ್ಡ ಟೀಕೆ ಎಂದರೆ, ಅವರು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಎಷ್ಟೇ ದೊಡ್ಡ ಭಾಷಣಗಳನ್ನು ಮಾಡಿದರೂ, ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರೊಂದಿಗೆ ಸಂಪರ್ಕ ಸಾಧಿಸದಿದ್ದರೆ, ಅವರನ್ನು ಅಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ನಾಯಕರಾಗಲು ಸಾಧ್ಯವಿಲ್ಲ” ಎಂದು ರಾಹುಲ್ ಹೇಳಿದರು. ಆದರೆ, ಆರೆಸ್ಸೆಸ್ ಮತ್ತು ಸಿಪಿಐ(ಎಂ) ಎರಡನ್ನೂ ಒಟ್ಟಿಗೆ ಜೋಡಿಸಿ ರಾಹುಲ್ ಆರೋಪಿಸಿದಾಗ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಕೂಡ ಆಘಾತಕ್ಕೊಳಗಾದರು.
