ಧರ್ಮಸ್ಥಳ: ಅಸಹಜ ಸಾವುಗಳ ಪ್ರಕರಣಗಳ ತನಿಖೆಗೆ ಎಸ್ಐಟಿ ರಚನೆ: ಸಿಪಿಐ(ಎಂ) ಸ್ವಾಗತ

ಪ್ರಾರಂಭಿಕ ಹಂತದಲ್ಲೇ ಪ್ರಶ್ನೆಗೆ ಒಳಪಟ್ಟು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದ ಧರ್ಮಸ್ಥಳದ ಸುತ್ತ ನಡೆದ ಹಲವು ಅಸಹಜ ಸಾವುಗಳ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ. ಈ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಪಕ್ಷ ಒತ್ತಾಯಿಸಿದೆ.

80ರ ದಶಕದಲ್ಲಿ ನಡೆದ ಪದ್ಮಲತಾ ಪ್ರಕರಣದ ಸಂದರ್ಭದಿಂದಲೇ ಸಿಪಿಐ(ಎಂ) ಅಲ್ಲಿನ ವಿದ್ಯಮಾನಗಳಿಗೆ ವಿರೋಧ ವ್ಯಕ್ತಪಡಿಸಿದೆ. ಹಲವು ಹಂತಗಳ ಹೋರಾಟವನ್ನೂ ಮಾಡಿದೆ. ಆ ನಂತರವಷ್ಟೇ ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.

ಹಲವು ವರ್ಷಗಳ ಹಿಂದೆ ಪ್ರಕರಣಗಳು ನಡೆದಿವೆ, ಉದ್ದೇಶಪೂರ್ವಕವಾಗಿ ಸಾಕ್ಷಿನಾಶ ಮಾಡಲಾಗಿದೆ. ಇವುಗಳಲ್ಲಿ ಕುಖ್ಯಾತವಾಗಿದ್ದ ಪ್ರಕರಣಗಳಿರುವುದರಿಂದ ಕೂಲಂಕುಷವಾದ ತನಿಖೆ ನಡೆಯಬೇಕಿದೆ.

ಈ ಹಿನ್ನೆಲೆಯಲ್ಲಿ, ಎಸ್ಐಟಿ ಸ್ಥಳೀಯವಾಗಿ ಪ್ರಾರಂಭದ ದಿನಗಳಿಂದ ಪ್ರಕರಣಗಳ ಬೆನ್ನು ಹತ್ತಿ ಹೋರಾಟ ಪ್ರತಿಭಟನೆಗಳನ್ನು ಮಾಡಿದ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆದು ಸತ್ಯವನ್ನು ಹೊರಗೆಳೆಯಬೇಕು. ಸಿಬಿಐ ನ್ಯಾಯಾಲಯದ ತೀರ್ಪು ಸೂಚಿಸಿರುವಂತೆ ಸೌಜನ್ಯ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ತನಿಖೆಯ ದಾರಿ ತಪ್ಪಿಸಲು, ಸಾಕ್ಷಿ ನಾಶಮಾಡಿದ ತನಿಖಾಧಿಕಾರಿಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು.

ನ್ಯಾಯದ ಪರ ನಿಂತು, ಸತ್ಯವನ್ನು ಹೊರಗೆಳೆದು, ನಿಜವಾದ ಆರೋಪಿಗಳನ್ನು ಮತ್ತು ಅವರ ರಕ್ಷಣೆಗೆ ನಿಂತವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸಿದೆ.

Leave a Reply

Your email address will not be published. Required fields are marked *