ಚುನಾವಣಾ ಆಯೋಗದ ಪಕ್ಷಪಾತದ ಮನೋಭಾವವು ಬಿಜೆಪಿಗೆ ಅನುಕೂಲ ಕಲ್ಪಿಸುವಂತಿದೆ: ಸಿಪಿಐ(ಎಂ)

ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್‍) ಆರಂಭದಿಂದಲೂ ವಿವಾದದಲ್ಲಿ ಸಿಲುಕಿತ್ತು, ಏಕೆಂದರೆ ಸ್ಥಾಪಿತ ಸಂಪ್ರದಾಯಕ್ಕೆ ವಿರುದ್ಧವಾಗಿ, ಜೂನ್ 24 ರಂದು ಅದರ ಘೋಷಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿಲ್ಲ. ತೀವ್ರ ಪರಿಷ್ಕರಣೆಗಳಿಗೆ ಯಾವಾಗಲೂ ದೀರ್ಘಾವಧಿಯ ತಯಾರಿ ಮತ್ತು ಸಮಾಲೋಚನೆಯ ಅಗತ್ಯವಿರುತ್ತದೆ. ಮೊತ್ತ ಮೊದಲ ಚುನಾವಣಾ ಆಯೋಗದ ಸಮಯದಿಂದಲೇ, ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಸಾರ್ವತ್ರಿಕವಾಗಿರಬೇಕು ಎಂಬುದು ಸಾಮಾನ್ಯ ತತ್ವವಾಗಿದೆ ಮತ್ತು ಮತದಾರರ ಪಟ್ಟಿಯನ್ನು ರಚಿಸುವ ಜವಾಬ್ದಾರಿಯು 326 ನೇ ವಿಧಿಯನ್ನು ಅನುಸರಿಸಿ ಸಂಪೂರ್ಣವಾಗಿ ಮತ್ತು ಪ್ರತ್ಯೇಕವಾಗಿ ಚುನಾವಣಾ ಆಯೋಗದ ಮೇಲೆ ನಿಂತಿದೆ. ನಿಗದಿಪಡಿಸಿದ ಕಾರ್ಯವಿಧಾನದ ಅಡಿಯಲ್ಲಿ, ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಪರಿಶೀಲಿಸಿದ ಆಕ್ಷೇಪಣೆಗಳ ಆಧಾರದ ಮೇಲೆ ಮಾತ್ರ ಕರಡು ಪಟ್ಟಿಯಿಂದ ಹೆಸರುಗಳನ್ನು ಅಳಿಸಬಹುದು.

ಎಸ್‍ಐಆರ್ ಮನೆ-ಮನೆಗೆ ಹೋಗಿ ಗಣತಿ ಮಾಡುವ, ಜೊತೆಗೆ ಹನ್ನೊಂದು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಲಿಖಿತ ಅರ್ಜಿಯೊಂದಿಗೆ ಸಲ್ಲಿಸಬೇಕು ಎಂಬ ಕಾರ್ಯವಿಧಾನವನ್ನು ಸೂಚಿಸಿದೆ.  ಈ ದಾಖಲೆಗಳಲ್ಲಿ ಹೆಚ್ಚಿನವು ಬಿಹಾರದಲ್ಲಿ ಅತ್ಯಂತ ಕಡಿಮೆ ವ್ಯಾಪ್ತಿಯನ್ನು ಹೊಂದಿವೆ. ಅಂದರೆ, ವಾಸ್ತವವಾಗಿ, ಇದು ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವುದನ್ನು ಸೂಚಿಸುತ್ತದೆ. ಏಕೆಂದರೆ ಇದು ದಾಖಲೆರಹಿತ ನಾಗರಿಕರನ್ನು ನಾಗರಿಕರಲ್ಲ ಎಂದು ಪರಿಗಣಿಸಲಾಗುವ ಒಂದು ಹೊಸದಾಗಿ ಆರಂಭಿಸುವ ಕಾರ್ಯಕ್ರಮ. ಅದರಿಂದಾಗಿ ಅವರ ಹೆಸರುಗಳು ತಂತಾನೇ ಅಳಿಸಿ ಹೋಗುತ್ತವೆ . ಇದು ಕಲಮು 326 ಮತ್ತು ಸಾರ್ವತ್ರಿಕ ಮತಾಧಿಕಾರದ ತತ್ವದ ಸಂಪೂರ್ಣ ಉಲ್ಲಂಘನೆಯಾಗಿದೆ. ವಿರೋಧ ಪಕ್ಷಗಳು ಸಾಮೂಹಿಕವಾಗಿ ಚುನಾವಣಾ ಆಯೋಗವನ್ನು ಭೇಟಿಯಾದವು. ಆದರೆ ಸಾಮೂಹಿಕವಾಗಿ ಮತಾಧಿಕಾರವನ್ನು ಕಿತ್ತುಕೊಳ್ಳುವ  ಬೆದರಿಕೆ ಉಂಟಾಗಿರುವ ಪರಿಸ್ಥಿತಿಯನ್ನು ಸರಿಪಡಿಸಲಾಗುವುದು ಎಂಬ ಯಾವುದೇ ಭರವಸೆ ನೀಡದೆ ಸಾರಾಸಗಟು ಬದಿಗೊತ್ತಲಾಯಿತು.

ಇದರ ಪರಿಣಾಮವಾಗಿ, ವಿರೋಧ ಪಕ್ಷಗಳು ನಾಗರಿಕರನ್ನು ಮತಾಧಿಕಾರ ವಂಚನೆಯಿಂದ ರಕ್ಷಿಸಲು ಮುಂದಾದವು. ದೀರ್ಘ ಚರ್ಚೆಗಳ ನಂತರ, ಸುಪ್ರೀಂ ಕೋರ್ಟ್ ಎಸ್‍ಐಆರ್ ಸಮಯದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ 65 ಲಕ್ಷ ಜನರ ಹೆಸರುಗಳನ್ನು ಮತ್ತು ಅವರನ್ನು ತೆಗೆದು ಹಾಕಲು ಕಾರಣಗಳನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ, ಏಕೆಂದರೆ ಈ ಪ್ರಕ್ರಿಯೆಯ ಉದ್ದಕ್ಕೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಚುನಾವಣಾ ಆಯೋಗ ವಿಫಲವಾಗಿದೆ. ಅನೇಕ ಸಂಶೋಧಕರು ಗಮನಸೆಳೆದಿರುವಂತೆ, ಮತಾಧಿಕಾರದಿಂದ ವಂಚಿತರಾಗಿರುವವರಲ್ಲಿ ಗಣನೀಯ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ಬಡ ಕುಟುಂಬಗಳಿಗೆ ಸೇರಿದವರು. ಈ ಪ್ರಕ್ರಿಯೆಯ ಬಗ್ಗೆ ಬಿಹಾರದಲ್ಲಿ ವ್ಯಾಪಕ ಅಸಮಾಧಾನವಿದೆ. ಈ ಪ್ರಕ್ರಿಯೆಯನ್ನು ವಿರೋಧಿಸುವಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ಮೋದಿಯವರು “ನುಸುಳುಕೋರರು” (ಘುಸ್‍ಪೈಟಿಯೇ) ವಿರುದ್ಧದ ಮಾತುಗಳಲ್ಲಿ ವ್ಯಕ್ತಪಡಿಸಿರುವ  ಆರ್‌ಎಸ್‌ಎಸ್‌ನ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿರುವ ಚುನಾವಣಾ ಆಯೋಗದ ಪಕ್ಷಪಾತೀ ಸ್ವರೂಪವನ್ನು ಜನರ ನಡುವೆ ಪ್ರಚಾರ ಮಾಡುವ ಮೂಲಕ ಬಯಲಿಗೆಳೆಯಬೇಕು ಮತ್ತು ಈ ವಿಷಯದ ಮೇಲೆ ಜನಗಳನ್ನು ಸಜ್ಜುಗೊಳಿಸಬೇಕು ಎಂದು  ಪೊಲಿಟ್‍ಬ್ಯುರೊ ಹೇಳಿದೆ.

ಎಸ್‌ಐಆರ್ ವಿರುದ್ಧದ ಪ್ರತಿಭಟನೆಗಳು ಸಂಸತ್ತನ್ನು ನಡುಗಿಸಿದವು ಮತ್ತು ಹೊರಗೆ, ದೆಹಲಿಯಲ್ಲಿ ಸಾರ್ವಜನಿಕವಾಗಿ ನಡೆದವು. ಈ ವಿಷಯದ ಬಗ್ಗೆ ತೆಗೆದುಕೊಳ್ಳಬೇಕಾದ ಜಂಟಿ ನಿಲುವನ್ನು ಚರ್ಚಿಸಲು ‘ಇಂಡಿಯ’ ಬಣವು ದೀರ್ಘ ಅಂತರದ ನಂತರ ಸಭೆ ಸೇರಿತು, ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದಿರುವ ಪೊಲಿಟ್‍ಬ್ಯುರೊ, ’ಇಂಡಿಯ’ ಬಣವು ಬಿಹಾರದ 25 ಜಿಲ್ಲೆಗಳನ್ನು ಒಳಗೊಂಡ 16 ದಿನಗಳ ‘ಮತದಾರ ಅಧಿಕಾರ ಯಾತ್ರೆ’ ನಡೆಸಲು ನಿರ್ಧರಿಸಿದೆ, ಇದು ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯೊಂದಿಗೆ ಕೊನೆಗೊಳ್ಳುತ್ತದೆ ಎಂದು ತಿಳಿಸಿದೆ.

ಒಂದು ಸ್ವತಂತ್ರ ಪಾತ್ರ ವಹಿಸುವ ಆದೇಶವನ್ನು ಪಡೆದಿರುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ ನಡೆದ ಬೃಹತ್ ‘ಮತಗಳ್ಳತನ’ ಅನಾವರಣಗೊಂಡಿರುವ ಪ್ರಶ್ನೆಯನ್ನು ನಿಭಾಯಿಸಲು ವಿಫಲವಾಗಿರುವುದರಿಂದ, ಆಯೋಗದ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಚುನಾವಣಾ ಆಯೋಗದ ಸ್ವಂತ ದಾಖಲೆಗಳಿಂದಲೇ ಪಡೆದ ಸಾಕ್ಷ್ಯಗಳನ್ನು ಆಧರಿಸಿಯೇ ಇದನ್ನು  ಬಯಲುಗೊಳಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು  ಈ ಆರೋಪಗಳನ್ನು ಸಾರ್ವಜನಿಕವಾಗಿಯೇ ಲೇವಡಿ ಮಾಡಿದರು, ಸುಳ್ಳುಗಳ ಹಂದರವನ್ನು ಹರಡಿದರು, ಈ ಮೂಲಕ ಸ್ಪಷ್ಟವಾಗಿ ಬಿಜೆಪಿಗೆ ಅನುಕೂಲ ಕಲ್ಪಿಸುವ ಚುನಾವಣಾ ಆಯೋಗದ ಪಕ್ಷಪಾತದ ಮನೋಭಾವವನ್ನು ಮತ್ತಷ್ಟು ಪ್ರತಿಷ್ಠಾಪಿಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಆಗಸ್ಟ್ 18, 2025 ರಂದು ನಡೆದ ಪೊಲಿಟ್‍ಬ್ಯುರೊ ಸಭೆಯ ನಂತರ  ಈ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *