370 ನೇ ವಿಧಿಯನ್ನು ರದ್ದುಪಡಿಸಿ ,ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಐದು ವರ್ಷಗಳು ಕಳೆದಿವೆ. ಆಗ ಮುಂದಿಟ್ಟ ಯಾವುದೇ ಗುರಿ ಈಡೇರಿಲ್ಲ. ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ತೊಡೆದುಹಾಕಲು ಅಥವಾ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಭದ್ರತೆಯನ್ನು ಒದಗಿಸಲು ವಿಫಲವಾಗಿದೆ. ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸುಳ್ಳು ಹೇಳಿಕೆಗಳನ್ನು ಬಯಲಿಗೆ ತಂದಿತು. ಆರು ತಿಂಗಳೊಳಗೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಸುಪ್ರೀಂ ಕೋರ್ಟ್, ಪಹಲ್ಗಾಮ್ ದಾಳಿಯಿಂದಾಗಿ ರಾಜ್ಯ ಸ್ಥಾನಮಾನದ ಬಗ್ಗೆ ಚರ್ಚಿಸಲು ಇದು ಸಮಯವಲ್ಲ ಎಂದು ಗಮನಿಸಿದ್ದು ದುರದೃಷ್ಟಕರ ಎಂದು ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ. ಕೇಂದ್ರದ ಈ ಐದು ವರ್ಷಗಳ ನೇರ ಆಡಳಿತದ ಉದ್ದಕ್ಕೂ, ಜಮ್ಮು ಮತ್ತು ಕಾಶ್ಮೀರದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ತುಳಿದು ಹಾಕಲಾಗಿದೆ. ಆಶ್ವಾಸನೆ ನೀಡಿದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ಜಮ್ಮು, ಕಾಶ್ಮೀರ ಮತ್ತು ಲಡಾಖ್ – ಎಲ್ಲಾ ಪ್ರದೇಶಗಳ ಜನರಲ್ಲಿ ವ್ಯಾಪಕ ಅಸಮಾಧಾನ ಮತ್ತು ಕೋಪವಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಮತ್ತು ಅದರ ಸ್ವಾಯತ್ತತೆಯನ್ನು ಒತ್ತಾಯಿಸಲು ಜನರನ್ನು ಸಜ್ಜುಗೊಳಿಸಬೇಕು ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಆಗಸ್ಟ್ 18, 2025 ರಂದು ನಡೆದ ಪೊಲಿಟ್‍ಬ್ಯುರೊ ಸಭೆಯ ನಂತರ ಈ ಹೇಳಿಕೆ ನೀಡಿದೆ.
