ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಉಲ್ಲಂಘಿಸುವ ಕ್ರೀಡಾ ಮಸೂದೆ: ಸಿಪಿಐ(ಎಂ)

ಸಂಸತ್ತಿನ ಮಳೆಗಾಲದ ಅಧಿವೇಶನವು ಎಲ್ಲಾ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಯಿತು. ಬಿಹಾರದಲ್ಲಿ ಎಸ್‍ಐಆರ್‍ ವಿಷಯದ ಕುರಿತು ಚರ್ಚೆಗೆ ಸರ್ಕಾರ ಅವಕಾಶ ನೀಡಲು ನಿರಾಕರಿಸಿತು. ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಉಲ್ಲಂಘಿಸುವ ಕ್ರೀಡಾ ಮಸೂದೆ ಸೇರಿದಂತೆ ಹಲವಾರು ಮಸೂದೆಗಳನ್ನು ಮಂಡಿಸಿತು. ಗಣಿ ಮತ್ತು ಖನಿಜ ಕಾಯ್ದೆ ಮತ್ತು ಪರಮಾಣು ಹೊಣೆಗಾರಿಕೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಗಳನ್ನು ಪರಿಚಯಿಸಲು ಸರ್ಕಾರ ಉದ್ದೇಶಿಸಿದೆ. ಖನಿಜ ಪರಿಶೋಧನೆ ಮತ್ತು ಪರಮಾಣು ಇಂಧನ ಉತ್ಪಾದನೆಯ ಪ್ರಮುಖ ವಲಯಗಳಿಗೆ ಖಾಸಗಿ ಮತ್ತು ವಿದೇಶಿ ಬಂಡವಾಳದ ಪ್ರವೇಶವನ್ನು ಸುಗಮಗೊಳಿಸಲು ಈ ಮಸೂದೆಗಳನ್ನು ಪರಿಚಯಿಸಲಾಗುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಈ ಮಸೂದೆಗಳನ್ನು ವಿರೋಧಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ. ಗಂಭೀರ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಲು ಸರ್ಕಾರದ ಹಠಮಾರಿ ನಿರಾಕರಣೆಯು ಅದರ ಸರ್ವಾಧಿಕಾರಿ ಸ್ವರೂಪವನ್ನು ಬಿಂಬಿಸುತ್ತದೆ. ಪರಿಣಾಮವಾಗಿ, ಸಂಸತ್ತಿನಲ್ಲಿ ಚರ್ಚಿಸಬೇಕಾದ ಜನರ ಮೇಲೆ ಪರಿಣಾಮ ಬೀರುವ ಅನೇಕ ವಿಷಯಗಳು ಎಂದಿಗೂ ಪ್ರಸ್ತಾಪಕ್ಕೇ ಬರುವುದಿಲ್ಲ ಎಂದು ಅದು ಖೇದ ವ್ಯಕ್ತಪಡಿಸಿದೆ.

ಉಪರಾಷ್ಟ್ರಪತಿ ಚುನಾವಣೆ: ಧಂಕರ್ ಅವರ ಹಠಾತ್ ರಾಜೀನಾಮೆಯಿಂದ ಅನಿವಾರ್ಯವಾದ ಉಪಾಧ್ಯಕ್ಷ ಹುದ್ದೆಗೆ ನಡೆಯಬೇಕಾದ ಚುನಾವಣೆಯ ಬಗ್ಗೆ ಪೊಲಿಟ್ ಬ್ಯುರೊ ಚರ್ಚಿಸಿತು. ‘ಇಂಡಿಯ’ ಬಣದ  ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರ ಯಶಸ್ಸಿಗೆ ಸಿಪಿಐ(ಎಂ) ಇತರ ವಿರೋಧ ಪಕ್ಷಗಳು ಮತ್ತು ‘ಇಂಡಿಯ’ ಬಣದೊಂದಿಗೆ ಸಂಯೋಜಿಸಿ ಕೆಲಸ ಮಾಡುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಆಗಸ್ಟ್ 18, 2025 ರಂದು ನಡೆದ ಪೊಲಿಟ್‍ಬ್ಯುರೊ ಸಭೆಯ ನಂತರ  ಈ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *