ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರನ್ನು 30 ದಿನಗಳ ಬಂಧನದ ನಂತರ ಪದಚ್ಯುತಿಗೊಳಿಸಲು ಮೂರು ಮಸೂದೆಗಳನ್ನು ಮಂಡಿಸುವ ಮೋದಿ ಸರ್ಕಾರದ ನಡೆಯು, ಸ್ಥಾಪಿತ ಕಾನೂನು ಕಾರ್ಯವಿಧಾನಗಳನ್ನು ತಪ್ಪಿಸುವ ಅದರ ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿಯನ್ನು ಎತ್ತಿ ತೋರುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ.
ಈ ಹಿಂದೆಯೂ ಸಹ ಬಿಜೆಪಿ ಸದಾ ನ್ಯಾಯಾಂಗ ಪರಿಶೀಲನೆಯನ್ನು ತಪ್ಪಿಸಲು, ವಿಶೇಷವಾಗಿ ‘ಹೇಯ ಕೃತ್ಯಗಳು’ ಎಂದು ಪ್ರತ್ಯೇಕಿಸಿ ತೋರಿಸಿ ಒಂದು ಸಾರಾಸಗಟು ಶಾಸನವನ್ನು ಹೇರುವ ಪ್ರವೃತ್ತಿಯನ್ನು ತೋರಿಸಿದೆ. ಪ್ರಸ್ತುತ ಸರ್ಕಾರದ ನವ-ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ಗಮನಿಸಿದರೆ, ಇದನ್ನು ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಲು ಒಂದು ಅಸ್ತ್ರವಾಗಿ ಬಳಸಲಾಗುತ್ತದೆ ಎಂಬುದು ಸ್ವಯಂವೇದ್ಯ ಎಂದಿರುವ ಪೊಲಿಟ್‍ಬ್ಯುರೊ, ಈ ನಡೆ ಅಸಹ್ಯಕರವಾಗಿದೆ ಮತ್ತು ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವುದಕ್ಕೆ ಅಗತ್ಯವಾದ ತಡೆಗಳು ಮತ್ತು ಸಮತೋಲನಗಳನ್ನು ದುರ್ಬಲಗೊಳಿಸುತ್ತದೆ, ನಿಜವಾದ ಆಶಯವನ್ನು ಮರೆಮಾಚುವ ಆಶಯದಿಂದಷ್ಟೇ ಮಾತ್ರ ಅಪರಾಧದ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಹೇಳಿದೆ.
ಈ ಶಾಸನದ ಪ್ರಸ್ತಾವವನ್ನು ಸಿಪಿಐ(ಎಂ) ತನ್ನೆಲ್ಲಾ ಶಕ್ತಿಯನ್ನು ಹಾಕಿ ಎದುರಿಸಲು ನಿರ್ಧರಿಸಿದೆ ಮತ್ತು ಎಲ್ಲಾ ಸಮಾನ ಮನಸ್ಕ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಪಕ್ಷಗಳು ಈ ಅನಗತ್ಯ ನಡೆಯನ್ನು ಜಂಟಿಯಾಗಿ ಪ್ರತಿರೋಧಿಸಬೇಕು ಎಂದು ಆಗ್ರಹಿಸಿದೆ.
