ಇಂಡಿಗೋ ಮತ್ತು ವಿಮಾನಯಾನ ಬಿಕ್ಕಟ್ಟು: ಜೆಪಿಸಿ ಅಥವ ನ್ಯಾಯಾಂಗ ತನಿಖೆ ನಡೆಸಿ

ಪ್ರಧಾನಿಗೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪತ್ರ

“ಇದು ಶಾಮೀಲಿನ ಮತ್ತು ಲಾಭಕೋರತನದ ರಾಷ್ಟ್ರೀಯ ಹಗರಣವಾಗಿ ಪರಿವರ್ತನೆಗೊಂಡಿದೆ”

ನವದೆಹಲಿ: ನಾಗರಿಕ ವಿಮಾನಯಾನ ‍ನಿರ್ದೇಶನಾಲಯವು (ಡಿಜಿಸಿಎ) ‘ವಿಮಾನ ಹಾರಾಟದ ವೇಳೆಯ ಕೆಲಸದ ಸಮಯ ಮಿತಿ’ (ಎಫ್‌ಡಿಟಿಎಲ್) ಕುರಿತಂತೆ ಹೊರಡಿಸಿದ ಆದೇಶದ ಪರಿಣಾಮವಾಗಿ, ನಂತರ ದೇಶಾದ್ಯಂತ ವಾಯುಯಾನ ಸೇವೆಗಳಲ್ಲಿ ಹಿಂದೆಂದೂ ಕಾಣದ ಅಸ್ತವ್ಯಸ್ತತೆ ಮತ್ತು ವಿಮಾನ ದರಗಳಲ್ಲಿ ತೀವ್ರ ಏರಿಕೆಯ ಬಗ್ಗೆ ಜಂಟಿ ಸಂಸದೀಯ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಡಿಸೆಂಬರ್ 6 ರಂದು  ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪೈಲಟ್‌ಗಳು ಮತ್ತು ಪ್ರಯಾಣಿಕರ ಸುರಕ್ಷತೆಗೆಂದು ರೂಪಿಸಲಾದ ಒಂದು ನಿಯಮವನ್ನು ಬುಡಮೇಲು ಮಾಡಿ, ಇಡೀ ವಿಮಾನಯಾನ ಪ್ರಕ್ರಿಯೆಯನ್ನು ಅವ್ಯವಸ್ಥೆಗೆ ದೂಡಲಾಯಿತು, ಸುಲಿಗೆ-ಮಟ್ಟದ ವಿಮಾನ ದರಗಳನ್ನು ಹರಿಯಬಿಡಲು ಬಳಸಲಾಯಿತು ಮತ್ತು ವಿಮಾನಯಾನ ವ್ಯವಸ್ಥೆ ಕುಸಿದ ನಂತರ ಆ ಸುರಕ್ಷತಾ ನಿಯಮವನ್ನೇ ದರ್ಬಲಗೊಳಿಸಲಾಯಿತು ಎಂದು ಜಾನ್‍ ಬ್ರಿಟ್ಟಾಸ್‍ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ಈ ಕುಸಿತವನ್ನೇ ಒಂದು ಲಾಭ ಲೂಟಿಯ ಅವಕಾಶವಾಗಿ ಮಾಡಿಕೊಂಡಿರುವುದಂತೂ ಈ ಕಾರ್ಯಾಚರಣೆಯ ವೈಫಲ್ಯವನ್ನು ರಾಷ್ಟ್ರೀಯ ಹಗರಣವಾಗಿ ಪರಿವರ್ತಿಸಿದೆ ಮತ್ತು ಡಿಜಿಸಿಎ ಹಾಗೂ  ಇಂಡಿಗೊ ಸುರಕ್ಷಿತತೆಯನ್ನು  ಖಚಿತಪಡಿಸದಿರುವಲ್ಲಿ ಮತ್ತು ನಿಯಂತ್ರಿತ ಕುಸಿತವನ್ನು ಸೃಷ್ಟಿಸಿ ಸಮಯಸಾಧಕ ಲಾಭಕೋರತನಕ್ಕೆ ಅವಕಾಶ ನೀಡುವಲ್ಲಿ ಪರಸ್ಪರ “ಕೈಜೋಡಿಸಿ ಕೆಲಸ ಮಾಡಿವೆ” ಎಂದು ಜಾನ್ ಬ್ರಿಟ್ಟಾಸ್ ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪರೀತ ಖಾಸಗಿ ಕೇಂದ್ರೀಕರಣದ ದುಷ್ಫಲ

ಕಳೆದ ಹಲವಾರು ದಿನಗಳಿಂದ ನಾಗರಿಕ ವಿಮಾನಯಾನ ಸೇವೆಗಳ ಅಭೂತಪೂರ್ವ ಕುಸಿತಕ್ಕೆ  ಮತ್ತು ಲಂಗುಲಗಾಮಿಲ್ಲದೆ ವಿಮಾನ ದರಗಳಲ್ಲಿ  ಏರಿಕೆಯ ಮೂಲಕ ವ್ಯವಸ್ಥಿತ ಆರ್ಥಿಕ ಶೋಷಣೆ ಎಂದೇ ಹೇಳಬಹುದಾದ ಪ್ರಸಂಗದಲ್ಲಿ ದೇಶಾದ್ಯಂತ ಲಕ್ಷಾಂತರ ವಿಮಾನ ಪ್ರಯಾಣಿಕರನ್ನು ಕಷ್ಟ-ನಷ್ಟಗಳಿಗೆ ಈಡುಮಾಡಲಾಗಿದೆ.  ಎಫ್‍ಡಿಟಿಎಲ್‍ ನಿಯಮಾವಳಿಗಳನ್ನು ಜಾರಿಗೊಳಿಸಿದ ನಂತರ ಉಂಟಾಗಿರುವ ಅಸ್ತವ್ಯಸ್ತತೆಯ ಪ್ರಮಾಣ, ವೇಗ ಮತ್ತು ತೀವ್ರತೆಯು ನಿಯಂತ್ರಕ ವ್ಯವಸ್ಥೆಯ ಸಿದ್ಧತೆ, ಮಾರುಕಟ್ಟೆ ಉಸ್ತುವಾರಿ ಮತ್ತು ಗ್ರಾಹಕ ರಕ್ಷಣೆಯಲ್ಲಿ ಆಳವಾದ ಸಂರಚನಾತ್ಮಕ ವೈಫಲ್ಯಗಳನ್ನು ಮತ್ತು ಹೇಗೆ ಇದರಿಂದ ಸಾಮಾನ್ಯ ಪ್ರಯಾಣಿಕರು ಅಪಾಯಕ್ಕೆ ಈಡಾಗಬೇಕಾಗುತ್ತದೆ ಎಂಬುದನ್ನು  ಬಯಲಿಗೆ ತಂದಿದೆ ಎಂದು ಬ್ರಿಟ್ಟಾಸ್‍ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಆಂತರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಪ್ರಬಲವಾದ ಶೇಕಡ 63-65 ಪಾಲನ್ನು ಹೊಂದಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ 1500ಕ್ಕೂ ಹೆಚ್ಚು ವಿಮಾನ ಹಾರಾಟಗಳ ಹಠಾತ್ ರದ್ದು ಮತ್ತು ವಿಳಂಬವು ದೇಶಾದ್ಯಂತ ವಿಮಾನ ಪ್ರಯಾಣವನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಿದೆ. ಮಾರುಕಟ್ಟೆ ಶಕ್ತಿಯ ಈ ಅಸಾಧಾರಣ ಕೇಂದ್ರೀಕರಣದಿಂದಾಗಿ, ಒಂದೇ ಖಾಸಗಿ ನಿರ್ವಾಹಕರ ವೈಫಲ್ಯವು ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣವಾಯಿತು. ವೈದ್ಯಕೀಯ ತುರ್ತುಗಳಿಂದ , ಬಾಂಧವರ ಸಾವಿನ ಸುದ್ದಿ ಕೇಳಿ ಧಾವಿಸಿದವರು, ಪರೀಕ್ಷೆಗಳು, ವಿವಾಹಗಳು ಮತ್ತು ಪ್ರಮುಖ ಉದ್ಯೋಗದ ಕರ್ತವ್ಯದ ಮೇಲೆ ಹೊರಟವರು ಹೀಗೆ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡರು.  ವಿಮಾನ ಟರ್ಮಿನಲ್ ಗಳ ನೆಲಗಳಲ್ಲೇ ಅವರು ಮಲಗಬೇಕಾಯಿತು.

ಪರಿಣಾಮವಾಗಿ ಉಂಟಾಗಿರುವ ಮಾನವ ಸಂಕಷ್ಟಗಳು  ಮತ್ತು ಆರ್ಥಿಕ ನಷ್ಟಗಳು ಎರಡೂ ಅಭೂತಪೂರ್ವ ಮತ್ತು ಅಸಮರ್ಥನೀಯ ಎನ್ನುತ್ತ,  ಇಂತಹ ಬಿಕ್ಕಟ್ಟು ಉಂಟಾಗಿರುವುದು ಯಾವುದೇ ನೈಸರ್ಗಿಕ ವಿಕೋಪದಿಂದಲೋ, ಯುದ್ಧ ಅಥವ ಬಾಹ್ಯ ಘಾತದಿಂದಲೋ ಅಲ್ಲ, ಡಿಜಿಸಿಎ ಯ ಪರಿಷ್ಕೃತ ಎಫ್‍ಡಿಟಿಎಲ್‍ ನಿಯಮಗಳ ಜಾರಿಗೆ ಹೊರಟದ್ದರ ಪರಿಣಾಮವಾಗಿ ಉದ್ಭವಿಸಿದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಸಂಸದರು ಪ್ರಧಾನಿಗಳ ಗಮನ ಸೆಳೆದಿದ್ದಾರೆ.

ರಾಷ್ಟ್ರೀಯ ಹಗರಣವಾಗಿ ಪರಿವರ್ತಿಸಿದೆ

ಪೈಲಟ್ ಗಳಿಗೆ ಆಗುವ  ಆಯಾಸವನ್ನು ತಡೆಗಟ್ಟುವ ಮೂಲಕ ಪ್ರಯಾಣದ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶವನ್ನು  ಪರಿಷ್ಕೃತ ನಿಯಮಾವಳಿಗಳು ಹೊಂದಿದ್ದರೂ, ಸರಿಯಾದ ಕಾರ್ಯಾಚರಣೆಯ ಯೋಜನೆಯಿಲ್ಲದೆ, ಸಂಕ್ರಮಣ ಘಟ್ಟದ ಸಿದ್ಧತೆಗಳಿಲ್ಲದೆ, ಪರಿಣಾಮದ ಮೌಲ್ಯಮಾಪನ ಮಾಡದೆ ಮತ್ತು ನಿಯಂತ್ರಕ ದೂರದೃಷ್ಟಿಯೇ ಇಲ್ಲದೆ  ಅವುಗಳ ಅನುಷ್ಠಾನಕ್ಕೆ ಇಳಿದಿರುವುದನ್ನು ಇದು ಪ್ರದರ್ಶಿಸಿದೆ. ಇನ್ನೂ ಹೆಚ್ಚು ಕಳವಳಕಾರಿ ಸಂಗತಿಯೆಂದರೆ, ಇದರಿಂದಾದ ಒತ್ತಡದಲ್ಲಿ ಇಡೀ ವ್ಯವಸ್ಥೆಯು ಕುಸಿದ ನಂತರ, ಆರಂಭದಲ್ಲಿ ಜಾರಿಗೊಳಿಸಲಾದ ಸುರಕ್ಷತಾ ನಿಯಮಾವಳಿಗಳನ್ನು ಆತುರಾತುರವಾಗಿ  ದುರ್ಬಲಗೊಳಿಸಲಾಯಿತು ಅಥವಾ ಹಿಂತೆಗೆದುಕೊಳ್ಳಲಾಯಿತು, ಅಂದರೆ ಪ್ರಯಾಣಿಕರ ಸುರಕ್ಷತೆಯನ್ನು ವಾಣಿಜ್ಯ ಅನುಕೂಲಕ್ಕೆ ಅಧೀನಗೊಳಿಸಲಾಗಿದೆ ಎಂಬುದರ ಪ್ರದರ್ಶನವೂ ಆಗಿದೆ.

ಸಂಯೋಜಿತ ಶೋಷಣೆ

ಅಲ್ಲದೆ, ಈ ಕುಸಿತವನ್ನೇ ಒಂದು ಲಾಭ ಲೂಟಿಯ ಅವಕಾಶವಾಗಿ ಮಾಡಿಕೊಂಡಿರುವುದಂತೂ ಈ ಕಾರ್ಯಾಚರಣೆಯ ವೈಫಲ್ಯವನ್ನು ರಾಷ್ಟ್ರೀಯ ಹಗರಣವಾಗಿ ಪರಿವರ್ತಿಸಿದೆ ಎಂದು ಜಾನ್‍ ಬ್ರಿಟ್ಟಾಸ್‍ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.  ವೆಚ್ಚ, ಬೇಡಿಕೆ ಅಥವಾ ನ್ಯಾಯಸಮ್ಮತತೆಯ ಯಾವುದೇ ಕ್ರಮವನ್ನು ಧಿಕ್ಕರಿಸಿ, ಆಂತರಿಕ  ವಿಮಾನಯಾನ  ದರಗಳನ್ನು  ಸುಲಿಗೆಯ ಮಟ್ಟದವರೆಗೂ ಏರಿಸಲಾಗಿದೆ. ತುರ್ತು ಪ್ರಯಾಣಿಕರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳು ಒಂದೋ ಅಗತ್ಯ ಪ್ರಯಾಣವನ್ನು ಕೈಬಿಡುವಂತೆ, ಇಲ್ಲವೇ ಸುಲಿಗೆಯ ಮೊತ್ತವನ್ನು ತೆರಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ. ಈ ಏರಿಕೆ ಇಂಡಿಗೋಗೆ ಮಾತ್ರ ಸೀಮಿತವಾಗಿರಲಿಲ್ಲ; ಇತರ ವಿಮಾನಯಾನ ಸಂಸ್ಥೆಗಳು ಕೂಡ ದರಗಳನ್ನು ತೀವ್ರವಾಗಿ ಹೆಚ್ಚಿಸಿದವು, ಇದು ಸಂಯೋಜಿತ ಶೋಷಣೆ, ವಿಮಾನಯಾನ ಮಾರುಕಟ್ಟೆಯಲ್ಲಿ  ಪ್ರಾಬಲ್ಯದ ದುರುಪಯೋಗ ಮತ್ತು ನಿಯಂತ್ರಕ ವ್ಯವಸ್ಥೆಯ ವೈಫಲ್ಯದ ಗಂಭೀರ ಆತಂಕಗಳನ್ನು ಹೆಚ್ಚಿಸಿದೆ.

ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾದ ಲಾಭಕೋರತನ ಕೇವಲ ದರ ಏರಿಕೆಗೆ ಸೀಮಿತವಾಗಿರಲಿಲ್ಲ. ಹಲವಾರು ಅಂತರರಾಷ್ಟ್ರೀಯ ಪ್ರಯಾಣಿಕರ ಏರ್ ಇಂಡಿಯಾ ಟಿಕೆಟ್‌ಗಳನ್ನು, ಅವರ ವಿದೇಶ ಪ್ರಯಾಣಕ್ಕೆ ಸಂಪರ್ಕ ಕೊಡುವ  ದೇಶದೊಳಗಿನ ಇಂಡಿಗೋ ಹಾರಾಟಗಳನ್ನು  ರದ್ದುಗೊಳಿಸಿದ ಪರಿಣಾಮವಾಗಿ ರದ್ದುಗೊಳಿಸಲಾಯಿತು ಎಂದು ವರದಿಯಾಗಿದೆ. ಪ್ರಯಾಣಿಕರ ಮೇಲೆ ಹಾರಾಟ ರದ್ದತಿ ಮತ್ತು ಶುಲ್ಕ ಏರಿಕೆಗಳ ಈ ಇಮ್ಮಡಿ ಹೊರೆ ವಿಮಾನಯಾನ ಕಂಪನಿಗಳಿಗೆ ಸಾರ್ವಜನಿಕರ ಜೇಬುಗಳಿಂದ ಅನಿರೀಕ್ಷಿತ ಲಾಭವನ್ನು ದೋಚಲು ಅವಕಾಶ ಮಾಡಿಕೊಟ್ಟಿತು.

ಇಂತಹ ಪರಿಸ್ಥಿತಿಗೆ ಕಾರಣಗಳನ್ನು ವಿಶ್ಲೇಷಿಸುತ್ತ, ಪ್ರಧಾನಿಗಳಿಗೆ ಬರೆದ  ಸಿಪಿಐ(ಎಂ) ಸಂಸದರ ಪತ್ರ, ಭಾರತೀಯ ವಿಮಾನಯಾನದಲ್ಲಿ “ಸ್ಪರ್ಧೆ” ಎಂಬುದು ವಾಸ್ತವದಲ್ಲಿ ಇಬ್ಬರು ಪ್ರಬಲರು ಹೇರುವ ಲಾಕ್‌ಔಟ್ ಆಗಿಬಿಟ್ಟಿದೆ ಎಂದು ಹೇಳಿದೆ. ಪ್ರಮುಖ ಜಾಗತಿಕ ವಿಮಾನಯಾನ ಮಾರುಕಟ್ಟೆಗಳಲ್ಲಿಯೂ ಸಹ ಈ ರೀತಿಯ ಒಬ್ಬಿಬ್ಬರ ಪ್ರಾಬಲ್ಯದ ಸನ್ನಿವೇಶ ಕಾಣಬರುತ್ತಿಲ್ಲ. ಚೀನಾದಲ್ಲಿ, ಮೂರು ದೊಡ್ಡ ವಿಮಾನಯಾನ ಸಂಸ್ಥೆಗಳ ಒಟ್ಟು ಪಾಲು ಕೂಡ 60% ಮಾರುಕಟ್ಟೆ ಪಾಲನ್ನು ದಾಟುವುದಿಲ್ಲ, ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಾವುದೇ ಒಂದು ದೇಶೀ ವಿಮಾನಯಾನ ಸಂಸ್ಥೆಯು ಸುಮಾರು 25% ಕ್ಕಿಂತ ಹೆಚ್ಚು ಪಾಲನ್ನು ಹೊಂದಿಲ್ಲ. ಏರ್ ಇಂಡಿಯಾದ ಖಾಸಗೀಕರಣದಿಂದ ಭಾರತದ ಮಾರುಕಟ್ಟೆಯಲ್ಲಿ ಕೇವಲ ಎರಡೇ ಖಾಸಗಿ ಕಂಪನಿಗಳ ಅಗಾಧ ಪ್ರಾಬಲ್ಯ  ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಇದರೊಂದಿಗೆ ಪ್ರಮುಖ ಕಾರ್ಪೊರೇಟ್‍ಗಳಿಗೆ ಪ್ರಮುಖ ವಿಮಾನ ನಿಲ್ದಾಣಗಳ ಖಾಸಗೀಕರಣ ಮತ್ತು ಅವುಗಳ ವಾಣಿಜ್ಯ ಕಾರ್ಯಾಚರಣೆಯು ಹೊಸ ಅಥವಾ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅವಕಾಶಗಳನ್ನು ಹತ್ತಿಕ್ಕಲು ಕಾರಣವಾಗಿದೆ. ವಿಮಾನಯಾನ-ವಿಮಾನ ನಿಲ್ದಾಣ ಸೇರಿದಂತೆ ಕಾರ್ಪೊರೇಟ್‍ಗಳ  ದುಷ್ಟಕೂಟ ವಿಮಾನಯಾನ ಕ್ಷೇತ್ರವನ್ನು ಆವರಿಸಿಕೊಂಡು, ಪ್ರಾದೇಶಿಕ ಸಂಪರ್ಕ ಮತ್ತು ಸಮಾನತೆಯನ್ನು ದರ್ಬಲಗೊಳಿಸುತ್ತಿದೆ.

ನಿರ್ಲಕ್ಷ್ಯ ಮತ್ತು ಶಾಮೀಲಿನ ಪರಿಣಾಮ

ಕಾರ್ಯನಿರ್ವಹಣೆಯ ಈ ಕುಸಿತವು ನಿಯಂತ್ರಕ ಮತ್ತು ಕಾರ್ಪೋರೇಟ್ ನಿರ್ಲಕ್ಷ್ಯ ಮತ್ತು ಸಂರಚನಾತ್ಮಕ ಸುಧಾರಣೆಗಳಿಗೆ ಸಿದ್ಧಗೊಳ್ಳುವಲ್ಲಿನ ವಿಫಲತೆಯಲ್ಲಿ ಅವುಗಳ ಶಾಮೀಲಿನ ಅನಿವಾರ್ಯ ಪರಿಣಾಮವೆಂದು ಸಹ ನೋಡಬೇಕಾಗಿದೆ. ಪೈಲಟ್ ಗಳ ಆಯಾಸವನ್ನು ಪರಿಹರಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಡಿಜಿಸಿಎ ಜನವರಿ 2024ರಲ್ಲಿ ಎಫ್‌ಡಿಟಿಎಲ್ ನಿಯಮಾವಳಿಗಳನ್ನು ಪರಿಷ್ಕರಿಸಿತು; ಅವನ್ನು ಮೇ 31, 2024ರಂದು ಪ್ರಕಟಿಸಲಾಯಿತು, ಜೂನ್ 1, 2024ರ ಒಳಗೆ ಅವನ್ನು ಜಾರಿ ಮಾಡಬೇಕೆಂದಿತ್ತು, ನಂತರ ಅದನ್ನು ಮುಂದೂಡಲಾಯಿತು ಮತ್ತು ಜುಲೈ 1, 2025 ಮತ್ತು ನವೆಂಬರ್ 1, 2025ರ ನಡುವೆ ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಲಾಯಿತು. ಇಷ್ಟೊಂದು ಕಾಲಾವಕಾಶ ಕೊಟ್ಟರೂ, ಡಿಜಿಸಿಎ ಯಾಗಲೀ ಅಥವಾ ಇಂಡಿಗೊ ಆಗಲಿ ಪೈಲಟ್‌ಗಳ ಸಮರ್ಪಕ ನೇಮಕಾತಿ ಅಥವಾ ರೋಸ್ಟರಿಂಗ್ ನಡೆಯುವಂತೆ ಖಚಿತಪಡಿಸಲಿಲ್ಲ. ಆದ್ದರಿಂದ  ಸಹಜವಾಗಿಯೇ ಪ್ರಸ್ತುತ  ಬಿಕ್ಕಟ್ಟನ್ನು  ಕಾಣಬೇಕಾಯಿತು, ಇದು ನಿಯಂತ್ರಕ ವ್ಯವಸ್ಥೆಯ ಮತ್ತು ಕಾರ್ಪೊರೇಟ್ ಗಳ ನಿರ್ಲಕ್ಷ್ಯ ಮತ್ತು ಶಾಮೀಲನ್ನು ಬಿಂಬಿಸುತ್ತದೆ ಎಂದಿರುವ ಜಾನ್‍ ಬ್ರಿಟ್ಟಾಸ್,  ಇದರ ಒಟ್ಟು ಚಿತ್ರವೆಂದರೆ,  ಡಿಜಿಸಿಎ ಮತ್ತು ಇಂಡಿಗೊ ಸುರಕ್ಷಿತತೆಯನ್ನು  ಖಚಿತಪಡಿಸದಿರುವಲ್ಲಿ ಮತ್ತು ನಿಯಂತ್ರಿತ ಕುಸಿತವನ್ನು ಸೃಷ್ಟಿಸಿ ಸಮಯಸಾಧಕ ಲಾಭಕೋರತನಕ್ಕೆ ಅವಕಾಶ ನೀಡುವಲ್ಲಿ ಪರಸ್ಪರ “ಕೈಜೋಡಿಸಿ ಕೆಲಸ ಮಾಡಿವೆ” ಎಂದು ಆರೋಪಿಸಿದ್ದಾರೆ.

ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು ವಿಮಾನಯಾನ ಸಂಸ್ಥೆಗಳ ಸ್ವಯಂ ನಿಯಂತ್ರಣ ವಿಫಲವಾಗಿದೆ ಎಂದು ಸ್ಪಷ್ಟವಾಗಿ ಕಂಡುಕೊಂಡ ನಂತರ ಮಾರ್ಗ-ನಿರ್ದಿಷ್ಟ ವಿಮಾನ ದರ ಮಿತಿಗಾಗಿ ಮತ್ತು ವಿಮಾನ ಟಿಕೆಟ್ ಬೆಲೆಗಳ ಉಸ್ತುವಾರಿ ನಡೆಸಲು ಮತ್ತು ನಿಯಂತ್ರಿಸಲು ಪ್ರತ್ಯೇಕ ಶಾಸನಬದ್ಧ ನಿಯಂತ್ರಕ ಪ್ರಾಧಿಕಾರವನ್ನು ರಚಿಸಲು ಶಿಫಾರಸು ಮಾಡಿದ್ದರೂ, ಇದುವರೆಗೂ ಅದನ್ನು  ಜಾರಿಗೆ ತರಲಾಗಿಲ್ಲ. ಈ ಬಗ್ಗೆ ಸರ್ಕಾರದ ಸ್ಪಷ್ಟ ಮೌನದತ್ತ ಗಮನ ಸೆಳೆಯುತ್ತ,  ಬ್ರಿಟ್ಟಾಸ್ ಇತ್ತೀಚೆಗೆ 01.12.2025 ರಂದು ರಾಜ್ಯಸಭೆಯಲ್ಲಿ ತಾನು ಇದನ್ನು ಎತ್ತಿದಾಗಲೂ ಸರ್ಕಾರವು ಅದಕ್ಕೆ ಉತ್ತರ ನೀಡದೆ ತಪ್ಪಿಸಿಕೊಂಡಿತು ಎಂಬುದನ್ನು ಈ ಪತ್ರದ ಮೂಲಕ ಪ್ರಧಾನಿಗಳಿಗೆ ನೆನಪಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿನಾದ್ಯಂತ, ಇಂತಹ ಬಿಕ್ಕಟ್ಟುಗಳು ವಿಮಾನಯಾನ ಕಂಪನಿಗಳು ಇತ್ಯಾದಿಗಳಿಗೆ ಅನಿಯಂತ್ರಿತ ಹಬ್ಬದ ಮಟ್ಟಕ್ಕೆ ಇಳಿಯದಂತೆ,  ತೊಂದರೆಗೀಡಾದ ಪ್ರಯಾಣಿಕನನ್ನು ರಕ್ಷಿಸಬೇಕಾದ ನಾಗರಿಕ ಎಂದು ಪರಿಗಣಿಸಲಾಗುತ್ತದೆ, ಆದರೆ ಇಲ್ಲಿ, ನಾಗರಿಕರನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಲಿ ಎಂದು ಆತನ ಪಾಡಿಗೆ ಬಿಡಲಾಗುತ್ತದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯ

ಒಟ್ಟಿನಲ್ಲಿ,  ಈ ಪ್ರಸಂಗವು ಕೇವಲ ಒಂದು ವಿಮಾನಯಾನ ಸಂಸ್ಥೆಯ ವೈಫಲ್ಯವನ್ನಷ್ಟೇ ಅಲ್ಲ,  ಬದಲಿಗೆ ಸರಕಾರ ನಿರ್ಮಿಸಿರುವ ನಿಯಂತ್ರಕ ವ್ಯವಸ್ಥೆಯ ವಿಶ್ವಾಸರ್ಹತೆಯ ಕೊರತೆ, ಅನಿಯಂತ್ರಿತ ಮಾರುಕಟ್ಟೆ ಕೇಂದ್ರೀಕರಣ, ಗ್ರಾಹಕ ಶೋಷಣೆ ಮತ್ತು ದುರ್ಬಲ ಜಾರಿ ವ್ಯವಸ್ಥೆಯ ಆಳವಾದ ಬಿಕ್ಕಟ್ಟನ್ನು ಬಿಂಬಿಸುತ್ತದೆ.

ಇಂತಹ ಗಂಭೀರ ಹಿನ್ನೆಲೆಯಲ್ಲಿ, ಈ ವಿಷಯವನ್ನು ಇನ್ನು ಮುಂದೆ ಕೇವಲ ಆಂತರಿಕ ವಿಮರ್ಶೆಗಳು ಅಥವಾ ಸಲಹಾ ಸುತ್ತೋಲೆಗಳ ಮೂಲಕ ನಿಭಾಯಿಸಲು ಸಾಧ್ಯವಿಲ್ಲ  ಎಂದು ಹೇಳಲೇ ಬೇಕಾಗುತ್ತದೆ. ಆದ್ದರಿಂದ, ನಿಯಂತ್ರಕ ವ್ಯವಸ್ಥೆಯ ವೈಫಲ್ಯಗಳು, ವಿಮಾನಯಾನ ಸನ್ನದ್ಧತೆ, ಸುರಕ್ಷತಾ ಮಾನದಂಡಗಳನ್ನು ದರ್ಬಲಗೊಳಿಸುವುದು, ದರ ಏರಿಕೆ ಮಾದರಿಗಳು, ಮಾರುಕಟ್ಟೆ ಶಕ್ತಿಯ ಇಂತಹ ತೀವ್ರ ಕೇಂದ್ರೀಕರಣಕ್ಕೆ ಕಾರಣವಾದ ನೀತಿ ಚೌಕಟ್ಟು ಮುಂತಾದವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಇಂತಹ ಸಾಮೂಹಿಕ ಅಡಚಣೆಗಳ ಸಮಯದಲ್ಲಿ ತಂತಾನೇ ಪರಿಹಾರ ಒದಗಿಸುವುದು, ನ್ಯಾಯಯುತ ಚಿಕಿತ್ಸೆ ಮತ್ತು ಪಾರದರ್ಶಕ ಬೆಲೆ ನಿಗದಿಯನ್ನು ಖಾತರಿಪಡಿಸುವ ಪ್ರಯಾಣಿಕರ ಹಕ್ಕುಗಳ ಮಸೂದೆಯನ್ನು ತರಬೇಕಾದ  ತುರ್ತು ಅಗತ್ಯವನ್ನು ಪರಿಶೀಲಿಸಲು ಒಂದು ಜಂಟಿ ಸಂಸದೀಯ ಸಮಿತಿ ಅಥವಾ ನ್ಯಾಯಾಂಗ ವಿಚಾರಣಾ ಆಯೋಗವನ್ನು ರಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಾನ್‍ ಬ್ರಿಟ್ಟಾಸ್‍ ಈ ಪತ್ರದಲ್ಲಿ ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಮತ್ತು  ರಾಷ್ಟ್ರೀಯ ಪ್ರಾಮುಖ್ಯತೆಯ ಈ ವಿಷಯದ ಬಗ್ಗೆ ಅವರು ತುರ್ತು ಗಮನ ನೀಡುತ್ತಾರೆ ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *