ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆ ಬೋಧನೆ: ಹೆಚ್.ಡಿ.ಕೆ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದುದು

ಸಿಪಿಐ(ಎಂ) ಆಕ್ಷೇಪ

ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆಯ ಬೋಧನೆಯನ್ನು ಸೇರಿಸುವಂತೆ ಕೇಂದ್ರ ಶಿಕ್ಷಣ ಸಚಿವರಿಗೆ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪತ್ರದ ಮುಖೇನ ಮನವಿ ಮಾಡಿರುವುದು ಭಾರತದ ಸಂವಿಧಾನದ ಮತನಿರಪೇಕ್ಷತೆ (ಸೆಕ್ಯುಲರ್)ಯ ತತ್ವ ಹಾಗೂ ವೈಜ್ಞಾನಿಕ ಮನೋಭಾವ ರೂಢಿಸುವ ನಿರ್ದೇಶನಕ್ಕೆ ವ್ಯತಿರಿಕ್ತವಾದುದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಂವಿಧಾನದ ಆರ್ಟಿಕಲ್ 51ಎ(ಹೆಚ್) ವೈಜ್ಞಾನಿಕ ಮನೋಭಾವವನ್ನು ಪ್ರಸರಿಸುವುದನ್ನು ಪ್ರಜೆಯ ಮೂಲಭೂತ ಕರ್ತವ್ಯ ಎಂದು ಸಂವಿಧಾನ ವಿಧಿಸುತ್ತದೆ. ಸಂವಿಧಾನದ ಪೀಠಿಕೆ ‘ಮತನಿರಪೇಕ್ಷತೆಯನ್ನು (ಸೆಕ್ಯುಲರಿಸಂ) ಧೃಢೀಕರಿಸಿದೆ.

ರಾಜ್ಯದಿಂದ ಆಯ್ಕೆಯಾಗಿರುವ ಸಚಿವರು ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಸಂಪನ್ಮೂಲ, ಅಭಿವೃದ್ಧಿಯ ಪ್ರಶ್ನೆಗಳತ್ತ ಗಮನ ವಹಿಸುವುದಕ್ಕೆ ಆದ್ಯತೆ ನೀಡಬೇಕು, ಧಾರ್ಮಿಕ  ಭಾವನೆಗಳನ್ನು ರಾಜಕೀಯವಾಗಿ  ಬಳಸಲು ಅಲ್ಲ ಎಂದು ಸಿಪಿಐ(ಎಂ) ಹೇಳಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಬೋಧಿಸಲು ಮಾಡಿದ ಪ್ರಯತ್ನಕ್ಕೆ ಕುಮಾರಸ್ವಾಮಿಯವರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಈಗಿನ ಅವರ ಪತ್ರ ಹಿಂದಿನ ಅವರದೇ ನಿಲುವಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ.

ಯಾರೇ ಆಗಲಿ ಭಗವದ್ಗೀತೆ, ಕುರಾನ್, ಬೈಬಲ್, ಗ್ರಂಥ ಸಾಹೇಬ್ ಗಳಂತಹ ಮತಧರ್ಮದ ಗ್ರಂಥಗಳನ್ನು ವೈಯುಕ್ತಿಕವಾಗಿ ಓದಬಹುದು, ಅದರಲ್ಲಿ ತಮಗಿಷ್ಟವಾದ ಅಂಶಗಳನ್ನು ಮೌಲ್ಯಗಳೆಂದು ಪರಿಭಾವಿಸಬಹುದು, ಅನುಸರಿಸಲೂಬಹುದು. ಸಿಪಿಐ(ಎಂ) ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ.  ಆದರೆ ಎಲ್ಲ ಜಾತಿ, ಜನಾಂಗಗಳು, ಮತಧರ್ಮ ಮತ್ತು ಹಲವು ಧಾರ್ಮಿಕ ನಂಬಿಕೆಗಳಿಗೆ ಸೇರಿದ ವಿದ್ಯಾರ್ಥಿಗಳಿರುವ ಶೈಕ್ಷಣಿಕ ತರಗತಿಗಳಲ್ಲಿ ಒಂದು ಮತಧರ್ಮದ ಗ್ರಂಥದ ಬೋಧನೆ ಏನು ಪರಿಣಾಮ ಬೀರಲಿದೆ ಹಾಗೂ ಎಷ್ಟು ಸರಿ ಎಂಬುದನ್ನು ಸಚಿವರು ಸರಿಯಾಗಿ ಅರಿಯಬೇಕಿತ್ತು. ಮೇಲಾಗಿ ಭಗವದ್ಗೀತೆಯು ಸಾರುವ ಮೌಲ್ಯಗಳು, ಒಟ್ಟು ಸಂದೇಶಗಳ ಬಗ್ಗೆ ತೀವ್ರವಾದ ಟೀಕೆ, ಆಕ್ಷೇಪಗಳು ಇರುವಾಗ ಅದನ್ನು ಸಾರ್ವಕಾಲಿಕ ಮೌಲ್ಯ ಸಾರುವ ಗ್ರಂಥ ಎಂದು ಹೇಗೆ ಭಾವಿಸಲು ಸಾಧ್ಯ. ಸಚಿವರು ಪ್ರಸ್ತಾಪಿಸಿರುವಂತೆ ಅದು ಭಾರತೀಯ ಸಂಸ್ಕೃತಿಯ ಪ್ರತೀಕವೂ ಅಲ್ಲ, ಕಾಲಾತೀತವೂ ಅಲ್ಲ. ಭಾರತೀಯ ಸಂಸ್ಕೃತಿ ಎನ್ನುವುದು ಬಹು ನಂಬಿಕೆ, ಆಚಾರ ವಿಚಾರಗಳ ವೈವಿಧ್ಯತೆಯ, ಸಮಭಾವದ ಸಂಸ್ಕೃತಿ. ಅದನ್ನು ಗೌರವಿಸಿ ಸೌಹಾರ್ದತೆಯಿಂದ ಬದುಕಿ ಬಾಳುವುದೇ ನಾಡಿನ ಪರಂಪರೆ. ಒಂದು ವಿಭಾಗದ ಧಾರ್ಮಿಕ ನಂಬಿಕೆಗಳನ್ನು ಇಡೀ ಭಾರತದ ಸಂಸ್ಕೃತಿ ಎಂದು ನಂಬಿಸುವುದು ಅಸಂಬದ್ಧ ಹಾಗೂ ಅವೈಜ್ಞಾನಿಕ. ಇತರರ ಮೇಲೆ ತಮ್ಮ ನಂಬಿಕೆಗಳನ್ನು ಹೇರುವ ವಿಭಜಕ ಕ್ರಮ ಎಂದು ಸಿಪಿಐ(ಎಂ) ತೀವ್ರವಾಗಿ ಟೀಕಿಸಿದೆ.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಆರ್.ಎಸ್.ಎಸ್. ಅನ್ನು ಫ್ಯಾಸಿಸ್ಟ್ ಮನೋಭಾವದ `ಹಿಂದುತ್ವದ ಸ್ವಯಂಸೇವಕರಾಗಿರುವ ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಹಾಗೂ ಅಧಿಕಾರದಲ್ಲಿ ಮುಂದುವರಿಯಲು ಜೆಡಿಎಸ್ ನಾಯಕರು ಮಾಡುತ್ತಿರುವ ಓಲೈಕೆಯ ರಾಜಕಾರಣ ಇದು ಎಂದು ಸಿಪಿಐ(ಎಂ) ಟೀಕಿಸಿದೆ.

ಬಿಜೆಪಿಯ ಕೋಮುವಾದಿ ರಾಜಕಾರಣವನ್ನೇ ಅಂಗೀಕರಿಸಿ ಅಳವಡಿಸಿಕೊಳ್ಳಲು ಮತ್ತು ಇಡೀ ಜಾತ್ಯಾತೀತ ಜನತಾ ದಳವನ್ನು ಹಾಗೂ ಅದರ ಬೆಂಬಲಿಗರನ್ನು ಆರ್ ಎಸ್ ಎಸ್ ಅಪೋಶನ ತೆಗೆದುಕೊಳ್ಳಲು ಕುಮಾರಸ್ವಾಮಿಯವರ ಪತ್ರ ಸಹಕಾರಿಯಾಗಿದೆ. ದಕ್ಷಿಣ ಕರ್ನಾಟಕವನ್ನು ಕೋಮುದ್ವೇಷದ ಮತೀಯವಾದಿಗಳ ಕೈಗೊಪ್ಪಿಸುವ ಆತ್ಮಹತ್ಯಾ ರಾಜಕಾರಣಕ್ಕೆ ಕುಮಾರಸ್ವಾಮಿಯವರು ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರೂ ಮತ್ತು ಕೇಂದ್ರ ಮಂತ್ರಿಗಳೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಅಪಾಯಕಾರಿ ನಿಲುವಿನಿಂದ ಹೊರಬರಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕರ್ನಾಟಕ ಒಳಗೊಂಡು ಇಡೀ ಕರ್ನಾಟಕದ ಜನತೆ ಶಾಲಾ ಮಕ್ಕಳಲ್ಲಿ ವೈಚಾರಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಜಾಗೃತಿಯಿಂದ ಇರಬೇಕೆಂದು ಎಚ್ಚರಿಸಿದೆ.

Leave a Reply

Your email address will not be published. Required fields are marked *