ಬಜರಂಗದಳ ಮತ್ತು ಇತರ ಅಂಗಸಂಸ್ಥೆಗಳಂತಹ ಹಿಂದುತ್ವ ಕೋಮುವಾದಿ ಸಂಘಟನೆಗಳು ವಿವಿಧ ಸ್ಥಳಗಳಲ್ಲಿ ಕ್ರೈಸ್ತರ ಮೇಲೆ ಘೋರ ಹೀನ ದಾಳಿಗಳನ್ನು ನಡೆಸಿ, ಕ್ರಿಸ್ಮಸ್ ಆಚರಣೆಗಳಿಗೆ ಅಡ್ಡಿಪಡಿಸಿವೆ. ಇದರಲ್ಲಿ ಸರ್ಕಾರದ ನಿಷ್ಕ್ರಿಯತೆಯು ಉದ್ದೇಶಪೂರ್ವಕವಾಗಿದೆ ಮತ್ತು ಅಂತಹ ದಾಳಿಗಳಿಗೆ ಅವಕಾಶ ನೀಡುವ ಆಶಯ ಹೊಂದಿದೆ. ಇದೆಲ್ಲವೂ ಜಾತ್ಯತೀತ ಪ್ರಭುತ್ವವನ್ನು ಕಳಚಿ ಹಾಕಿ, ಹಿಂದೂ ರಾಷ್ಟ್ರ ಎಂಬೊಂದನ್ನು ಸ್ಥಾಪಿಸಲು ಆರ್ಎಸ್ಎಸ್-ಬಿಜೆಪಿ ಅನುಸರಿಸುತ್ತಿರುವ ನೀತಿಯ ಭಾಗವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಈ ದಾಳಿಗಳನ್ನು ಖಂಡಿಸಿರುವ ಅದು, ಸರ್ಕಾರವು ತಾನು ಯಾವ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದೆಯೋ, ಅಂತಹ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದೆ. ಈ ದಾಳಿಗಳನ್ನು ನಡೆಸಿದ ಅಪರಾಧಿಗಳನ್ನು ತಕ್ಷಣವೇ ವಿಚಾರಣೆಗೆ ಒಳಪಡಿಸಬೇಕು ಮತ್ತು ಶಿಕ್ಷಿಸಬೇಕು ಎಂದು ಅದು ಆಗ್ರಹಿಸಿದೆ.
ನವದೆಹಲಿಯಲ್ಲಿ ಡಿಸೆಂಬರ್ 26ರಂದು ಸಭೆ ಸೇರಿದ ಪೊಲಿಟ್ಬ್ಯುರೊ ಅಲ್ಪಸಂಖ್ಯಾತರ ಮೇಲೆ ದಾಳಿ, ಮನರೇಗ ರದ್ದು, ಕಾರ್ಮಿಕ ಸಂಹಿತೆಗಳ ಅಧಿಸೂಚನೆ, ಅಸ್ಸಾಂನಲ್ಲಿ ದಾಳಿಗಳು, ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷಗೊಳಗಾದ ಬಿಜೆಪಿ ಮಾಜಿ ಶಾಸಕನಿಗೆ ಜಾಮೀನು, ಅರಾವಳಿ ಬೆಟ್ಟ ಶ್ರೇಣಿಗಳ ನಾಶ, ಬಾಂಗ್ಲಾದೇಶದ ಪರಿಸ್ಥಿತಿ ಮತ್ತು ವೆನೆಜುವೆಲಾದ ಮೇಲೆ ದಾಳಿಯ ಬಗ್ಗೆ ಚರ್ಚಿಸಿತು.
ದೇಶದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತ ಸಿಪಿಐ(ಎಂ) ಪೊಲಿಟ್ ಬ್ಯೂರೋ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಸೋಲಿಸುವುದು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಅದರ ಪ್ರಯತ್ನಗಳನ್ನು ವಿಫಲಗೊಳಿಸುವುದು ನಮ್ಮ ಒಗ್ಗಟ್ಟಿನ ಪ್ರಯತ್ನಗಳ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದೆ.
ಸಭೆಯ ನಂತರ ಸಿಪಿಐ(ಎಂ) ಪೊಲಿಟ್ಬ್ಯುರೊ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಇತರ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:
ಮನರೇಗ ರದ್ದು:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು MGNREGA ಜಾಗದಲ್ಲಿ, ಅದನ್ನು ತೀವ್ರವಾಗಿ ದುರ್ಬಲಗೊಳಿಸಿದ VBGRAMG ಎಂಬುದನ್ನು ತಂದು, ಇದು ಬೇಡಿಕೆ ಮತ್ತು ಹಕ್ಕುಆಧಾರಿತ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನು ಮೂಲಭೂತವಾಗಿ ಬದಲಾಯಿಸಿದೆ. ಹೊಸದಾಗಿ ಜಾರಿಗೆ ತಂದ ಕಾಯ್ದೆಯು ಆರ್ಥಿಕ ಹೊರೆಯನ್ನು ಕೇಂದ್ರದಿಂದ ರಾಜ್ಯಗಳಿಗೆ ವರ್ಗಾಯಿಸುತ್ತದೆ ಮತ್ತು ಅದರ ಅನುಷ್ಠಾನದಲ್ಲಿ ರಾಜ್ಯಗಳಿಗೆ ಯಾವುದೇ ಪಾತ್ರವನ್ನು ನಿರಾಕರಿಸುತ್ತದೆ. ಸರ್ಕಾರ ಕೋಟ್ಯಂತರ ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಈ ಮಸೂದೆಯನ್ನು ಪಾಸು ಮಾಡಿಸಲು ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿಕೊಂಡಿದೆ . ಈ ಬದಲಾವಣೆಯ ವಿರುದ್ಧ ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟಗಳಿಗೆ ಸಿಪಿಐ(ಎಂ) ತನ್ನ ಬೆಂಬಲ ನೀಡುವುದಾಗಿ ಹೇಳಿರುವ ಪೊಲಿಟ್ಬ್ಯುರೊ, ಮುಂದಿನ ದಿನಗಳಲ್ಲಿ ಸಿಪಿಐ(ಎಂ) ಈ ಶಕ್ತಿಗಳೊಂದಿಗೆ ಸೇರಿಕೊಂಡು ಈ ಹೋರಾಟಗಳನ್ನು ಬಲಪಡಿಸುವುದಾಗಿ ಹೇಳಿದೆ.
ಕಾರ್ಮಿಕ ಸಂಹಿತೆಗಳ ಅಧಿಸೂಚನೆ:
ತನ್ನ ಕಾರ್ಮಿಕ ವಿರೋಧಿ ನೀತಿಗಳ ಮತ್ತೊಂದು ನಿದರ್ಶನವಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರ ವ್ಯಾಪಕ ವಿರೋಧದ ಹೊರತಾಗಿಯೂ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕಾರ್ಮಿಕ ಕಾನೂನು ಸುಧಾರಣೆಗಳು ಎಂಬುದು ಪ್ರಸ್ತುತ ಸರ್ಕಾರಕ್ಕೆ ಹತ್ತಿರವಿರುವ ಬಂಡವಾಳಶಾಹಿ ಬಂಟರುಗಳಿಗೆ ಉಡುಗೊರೆಯಾಗಿದೆ. ದೇಶದ ಕಾರ್ಮಿಕ ವರ್ಗವು ಈ ಬದಲಾವಣೆಗಳ ವಿರುದ್ಧ ಪ್ರತಿಭಟನೆಯಲ್ಲಿ ಈಗಾಗಲೇ ಸಜ್ಜುಗೊಳ್ಳುತ್ತಿದೆ. ಸಿಪಿಐ(ಎಂ) ಈ ಹೋರಾಟಕ್ಕೆ ತನ್ನ ಬೆಂಬಲವನ್ನು ನೀಡುತ್ತದೆ ಮತ್ತು ಅದರಲ್ಲಿ ಸಕ್ರಿಯವಾಗಿ ಸೇರಲಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಅಸ್ಸಾಂನಲ್ಲಿ ದಾಳಿಗಳು:
ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಪೊಲಿಟ್ ಬ್ಯೂರೋ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇದು ಎರಡು ಸಾವುಗಳು ಮತ್ತು ಆಸ್ತಿಪಾಸ್ತಿಗಳ ಗಣನೀಯ ನಾಶಕ್ಕೆ ಕಾರಣವಾಗಿದೆ. ಜನಾಂಗೀಯ ಆಧಾರದಲ್ಲಿ ಗುಂಪುಗಳ ನಡುವಿನ ಘರ್ಷಣೆಗಳಿಂದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಈ ಪ್ರತಿಕೂಲ ಬೆಳವಣಿಗೆಯು ಅಸ್ಸಾಂನಲ್ಲಿನ ‘ಡಬಲ್-ಎಂಜಿನ್’ ಸರ್ಕಾರ ಮತ್ತು ಜನಾಂಗೀಯ ವಿಷಮತೆಗಳು ಕೀವುಗಟ್ಟಿಕೊಳ್ಳು ಬಿಡುವ, ಆ ಮೂಲಕ ಧ್ರುವೀಕರಣಕ್ಕೆ ದಾರಿ ಮಾಡಿಕೊಡುವ ಅದರ ನಡೆಯ ಫಲಿತಾಂಶವಾಗಿದೆ. ಇದು ಒಕ್ಕಲೆಬ್ಬಿಸುವುದಕ್ಕೆ ಸಂಬಂಧಿಸಿದ ಆಕ್ರಮಣಕಾರಿ ನೀತಿಗಳ ಪರಿಣಾಮವೂ ಆಗಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷಗೊಳಗಾದ ಬಿಜೆಪಿ ಮಾಜಿ ಶಾಸಕನಿಗೆ ಜಾಮೀನು:
ಉನ್ನಾವ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಸಂತ್ರಸ್ತೆ ಮತ್ತು ಇತರ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು, ಅವರು ಮಾಡಿದ ವಿವಿಧ ಹಿಂಸಾತ್ಮಕ ಮತ್ತು ಬಲವಂತದ ಪ್ರಯತ್ನಗಳನ್ನು ಸಂತ್ರಸ್ತೆ ವಿವರಿಸಿದ್ದಾರೆ. ಸಂತ್ರಸ್ತೆಯ ತಂದೆಯ ಕಸ್ಟಡಿ ಹತ್ಯೆಯಲ್ಲೂ ಸೆಂಗಾರ್ ಶಿಕ್ಷೆಗೊಳಗಾಗಿದ್ದಾರೆ. ಜಾಮೀನು ನೀಡುವಾಗ ನ್ಯಾಯಾಲಯವು ಈ ಗಂಭೀರ ಸಂಗತಿಗಳನ್ನು ಗಮನಿಸಲು ವಿಫಲವಾಗಿರುವುದು ದುರದೃಷ್ಟಕರ. ತಾಂತ್ರಿಕ ಕಾರಣಗಳಿಂದ ಅವರನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲವಾದರೂ, ಈ ಆದೇಶವು ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದ್ದು, ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ವಿಶ್ವಾಸ ಮೂಡಿಸುವುದಿಲ್ಲ ಎಂದು ಪೊಲಿಟ್ಬ್ಯುರೊ ಟಿಪ್ಪಣಿ ಮಾಡಿದೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲಿನ ಹಿಂಸಾಚಾರದ ಘಟನೆಗಳು, ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿ ಹೆಚ್ಚಿವೆ. ಆರೋಪಿಗಳ ವಿರುದ್ಧ ನಿರ್ಣಾಯಕವಾಗಿ ಕ್ರಮಕೈಗೊಳ್ಳಲು ಸರ್ಕಾರಗಳು ವಿಫಲವಾಗಿದ್ದು, ಅವರ ಪರೋಕ್ಷ ಬೆಂಬಲದೊಂದಿಗೆ, ಅಂತಹ ಅಪರಾಧಿಗಳಿಗೆ ಧೈರ್ಯ ತುಂಬಿದೆ. ಇದು ಪ್ರಸ್ತುತ ಆಡಳಿತ ವ್ಯವಸ್ಥೆಯ ಮಹಿಳಾ ವಿರೋಧಿ, ದಲಿತ ವಿರೋಧಿ, ಮನುವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಅರಾವಳಿ ಬೆಟ್ಟ ಶ್ರೇಣಿಗಳ ನಾಶ:
ಅರಾವಳಿಗಳ ವ್ಯಾಖ್ಯಾನಕ್ಕೆ ಬಿಜೆಪಿ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿದ, ಸುಪ್ರೀಂ ಕೋರ್ಟ್ ಸ್ವೀಕರಿಸಿರುವ ಬದಲಾವಣೆಗಳು, ಈ ಪರಿಸರ ಸೂಕ್ಷ್ಮ ಬೆಟ್ಟ ಶ್ರೇಣಿಗಳ ಶೋಷಣೆಯ ಸಾಧ್ಯತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತವೆ. ಬೆಟ್ಟಗಳಿಗೆ ಹಾನಿಯುಂಟುಮಾಡುವ ಮತ್ತು ಸೂಕ್ಷ್ಮ ಪರಿಸರ ಭೂಪ್ರದೇಶದಲ್ಲಿ ಹಾವಳಿಯನ್ನು ಉಂಟುಮಾಡುತ್ತಿರುವ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸುವ ಆಶಯವನ್ನು ಈ ಬದಲಾವಣೆಗಳು ತೋರುತ್ತಿವೆ. ಸರ್ಕಾರ ಹೊರಡಿಸಿದ ಸ್ಪಷ್ಟೀಕರಣಗಳು ವಿಶ್ವಾಸ ಮೂಡಿಸುವುದಿಲ್ಲ. ಪರಿಸರ ಸಚಿವಾಲಯದ ನೀತಿಯಲ್ಲಿ ಮೂಲಭೂತ ಬದಲಾವಣೆಯಾಗದ ಹೊರತು, ಅದರೊಂದಿಗೆ ಅರಾವಳಿ ಬೆಟ್ಟ ಶ್ರೇಣಿಗಳ ಮೂಲ ವ್ಯಾಖ್ಯಾನವನ್ನು ಪುನಃಸ್ಥಾಪಿಸದ ಹೊರತು, ಈ ಶ್ರೇಣಿಗಳಿಗೆ ನಿಜವಾದ ರಕ್ಷಣೆ ಇರುವುದಿಲ್ಲ.
ಬಾಂಗ್ಲಾದೇಶದ ಪರಿಸ್ಥಿತಿ:
ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಪೊಲಿಟ್ ಬ್ಯೂರೋ ತನ್ನ ಆಳವಾದ ಕಳವಳವನ್ನು ವ್ಯಕ್ತಪಡಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಮಧ್ಯಂತರ ಸರ್ಕಾರ ವಿಫಲವಾಗಿದೆ ಮತ್ತು ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ನಿರ್ಭಯವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿದೆ. ಹಿಂದೂ ಯುವಕರ ದಹನ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಮಾಧ್ಯಮಗಳ ಮೇಲಿನ ದಾಳಿಗಳು ಸೇರಿದಂತೆ ಇತ್ತೀಚಿನ ಘಟನೆಗಳು ಅತ್ಯಂತ ಖಂಡನೀಯ. ಇಂತಹ ಬೆಳವಣಿಗೆಗಳು ದೇಶದ ಭದ್ರತೆ ಮತ್ತು ಏಕತೆಗೆ ಒಳ್ಳೆಯ ಲಕ್ಷಣಗಳಲ್ಲ. ಬಾಂಗ್ಲಾದೇಶದ ಜನರು ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ಬಲೆಗೆ ಬೀಳುವುದಿಲ್ಲ ಮತ್ತು 1971 ರ ವಿಮೋಚನಾ ಹೋರಾಟದ ಮೌಲ್ಯಗಳನ್ನು ರಕ್ಷಿಸಲು ಒಗ್ಗಟ್ಟಿನಿಂದ ನಿಲ್ಲುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿರುವ ಪೊಲಿಟ್ಬ್ಯುರೊ, ಬಾಂಗ್ಲಾದೇಶ ಸರ್ಕಾರವು ವಿಭಜಕ ಶಕ್ತಿಗಳನ್ನು ನಿಗ್ರಹಿಸಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ತಕ್ಷಣವೇ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.
ವೆನೆಜುವೆಲಾದ ಮೇಲೆ ದಾಳಿ:
ವೆನೆಜುವೆಲಾದ ವಿರುದ್ಧ ಅಮೆರಿಕದ ಆಕ್ರಮಣ ಮತ್ತು ಮಿಲಿಟರಿ ದಾಳಿ ನಡೆಸುವ ಅದರ ಯೋಜನೆಗಳನ್ನು ಪೊಲಿಟ್ ಬ್ಯೂರೋ ಖಂಡಿಸಿದೆ. ಹೊಸದಾಗಿ ಅಳವಡಿಸಿಕೊಂಡ ಅಮೆರಿಕದ ‘ರಾಷ್ಟ್ರೀಯ ಭದ್ರತಾ ರಣನೀತಿ’ (ಎನ್ಎಸ್ಎಸ್) ಲ್ಯಾಟಿನ್ ಅಮೇರಿಕನ್ ಪ್ರದೇಶದಲ್ಲಿ ಮನ್ರೋ ಸಿದ್ಧಾಂತವನ್ನು ಜಾರಿಗೊಳಿಸುವ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ವೆನೆಜುವೆಲಾದಂತಹ ದೇಶಗಳ ಸಾರ್ವಭೌಮತ್ವದ ಮೇಲಿನ ದಾಳಿಗಳು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವು ವಿಶ್ವಸಂಸ್ಥೆಯ ಚಾರ್ಟರ್ ನ ಉಲ್ಲಂಘನೆಯಾಗಿದೆ ಮತ್ತು ಯುಎಸ್ ನ ಪ್ರಾಬಲ್ಯ ಹೇರುವ ಹುನ್ನಾರಗಳನ್ನು ಬಯಲಿಗೆ ತರುತ್ತಿವೆ. ವೆನೆಜುವೆಲಾದ ವಿರುದ್ಧ ಮತ್ತು ಇಡೀ ಪ್ರದೇಶದಾದ್ಯಂತ ಅಮೆರಿಕದ ಆಕ್ರಮಣವನ್ನು ವಿರೋಧಿಸಲು ಮತ್ತು ಒಗ್ಗಟ್ಟಿನಿಂದ ನಿಲ್ಲಲು ಎಲ್ಲಾ ಪ್ರಗತಿಪರ, ಪ್ರಜಾಪ್ರಭುತ್ವವಾದಿ ಮತ್ತು ದೇಶಪ್ರೇಮಿ ಶಕ್ತಿಗಳಿಗೆ ಸಿಪಿಐ(ಎಂ) ಮನವಿ ಮಾಡಿದೆ.
ಸಿಪಿಐ(ಎಂ) ಕೇಂದ್ರ ಸಮಿತಿಯ ಮುಂದಿನ ಸಭೆ ಜನವರಿ 16 ರಿಂದ 18, 2026 ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿದೆ.
