ಕೋಗಿಲು ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು-ಕೋಮುವಾದೀಕರಣ ನಿಲ್ಲಿಸಲು ಅಗ್ರಹ

ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ಮನೆಗಳ ತೆರವು ಹೆಸರಿನಲ್ಲಿ ನಡೆದ ಘಟನೆಯನ್ನು ಕೋಮುವಾದೀಕರಣ ಗೊಳಿಸುತ್ತಿರುವ ಬಿಜೆಪಿಯ ಕುಟಿಲ ರಾಜಕೀಯವನ್ನು ಸಿಪಿಐ(ಎಂ) ಖಂಡಿಸಿದೆ. ಹಲವು ವರ್ಷಗಳಿಂದ ಅಲ್ಲಿ ಬದುಕುತ್ತಿದ್ದು ಆಧಾರ್ ಕಾರ್ಡ್, ಮತದಾರರ ಚೀಟಿ, ರೇಷನ್ ಕಾರ್ಡ್ ಗಳಂತಹ ಸರಕಾರದ ಅಧಿಕೃತ ದಾಖಲೆಗಳನ್ನು ಹೊಂದಿದವರನ್ನು ಬಾಂಗ್ಲಾದೇಶದವರೆಂದು ಬಿಜೆಪಿ ಗುಲ್ಲೆಬ್ಬಿಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಇರುವ ವಸತಿಹೀನರಿಗೆ ವಸತಿ ಸೌಕರ್ಯ ಒದಗಿಸುವುದು ಯಾವುದೇ ಸರಕಾರದ ಜವಾಬ್ದಾರಿಯಾಗಿದ್ದು, ದುಡಿಯುವ ಬಡ ಜನರ ಪರವಾಗಿ ಸಿಪಿಐ(ಎಂ) ಸದಾ ಧ್ವನಿ ಎತ್ತುತ್ತದೆ. ಬಿಜೆಪಿ ಇದನ್ನು ಕೋಮುವಾದೀಕರಣ ಗೊಳಿಸುತ್ತಿರುವುದು ಖಂಡನೀಯ.

ದೇಶದ ಸಂವಿಧಾನವು ದೇಶದ ಯಾವುದೇ ಭಾಗದಲ್ಲಿ ವಾಸಿಸುವ, ಉದ್ಯೋಗ, ಶಿಕ್ಷಣ, ವ್ಯಾಪಾರ, ಮಾಡುವ ಹಕ್ಕನ್ನು ಧರ್ಮಾತೀತವಾಗಿ ನೀಡಿದೆ. ಅದನ್ನು ನಿರೋಧಿಸುವ ಭಾರತೀಯ ಜನತಾ ಪಕ್ಷದ ನಡೆ ಸಂವಿಧಾನ ವಿರೋಧಿಯಾಗಿದೆ. ಧರ್ಮ ದ್ವೇಷವನ್ನು ಹುಟ್ಟಿಸುವ ಅವರ ನಡೆಯನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ.

ಜೀವನೋಪಾಯಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರುಪಾಯರಾಗಿ ವಲಸೆ ಹೋಗುವ ಸ್ಥಿತಿಗೆ ಅಧಿಕಾರದಲ್ಲಿ ಇರುವವರ ಜನವಿರೋಧಿ ನೀತಿಗಳೇ ಕಾರಣವಾಗಿದೆ.

ಕಾರ್ಪೊರೇಟ್ ಉದ್ಯಮಿಗಳಿಗೆ ಲೂಟಿ ಹೊಡೆಯಲು ವಿಫುಲ ಅವಕಾಶ ಕೊಡುವಾಗ ಅಡ್ಡಬರದ ಸಂಗತಿಗಳನ್ನು ಬಡ ಅಸಹಾಯಕ ದುಡಿಯುವ ಜನರ ಮೇಲೆ ಹೇರುತ್ತಿರುವುದು ಭಾಜಪ ಯಾರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಮರ್ಯಾದೆ ಗೇಡು ಹತ್ಯೆ ನಿಷೇಧ ಕಾಯ್ದೆಗೆ ಸ್ವಾಗತ

ಹುಬ್ಬಳ್ಳಿಯ ಮಾನ್ಯಾ ಪಾಟೀಲ್ ಹತ್ಯೆಯ ನಂತರ ಭುಗಿಲೆದ್ದ ಆಕ್ರೋಶಕ್ಕೆ ಪ್ರತಿಯಾಗಿ ಕರ್ನಾಟಕ ಸರಕಾರ ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಮಾಡಲು ಮುಂದಾಗಿರುವುದನ್ನು ಸಿಪಿಐ(ಎಂ) ಸ್ವಾಗತಿಸಿದೆ. ಯುವಜನರ ಆಯ್ಕೆ ಸ್ವಾತಂತ್ರ್ಯದ ಹಕ್ಕು ಮಹಿಳೆಯರ ಸ್ವತಂತ್ರವಾದ ಘನತೆಯ ಬದುಕಿನ ಹಕ್ಕಿನ ರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಿದೆ.

ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ತಂದ ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರಕಾರ ನಿಷೇಧ ಮಾಡಿದೆಯಾದರೂ, ಅದು ಇನ್ನೂ ಸಮರ್ಪಕ ಜಾರಿಗೆ ಬಂದಿಲ್ಲ. ಹಾಗೇಯೇ ಮೌಢ್ಯಾಚರಣೆ ನಿಷೇಧ ಕಾಯ್ದೆಯೂ ಕಾಗದದ ಮೇಲಿನ ಅಕ್ಷರಗಳಾಗಿ ಉಳಿದಿದ್ದು, ಅದರ ಜೊತೆ ಈ ಕಾಯ್ದೆಯೂ ಇನ್ನೊಂದಾಗದಂತೆ ಗಮನಿಸಿ ಸಮರ್ಪಕ ಜಾರಿಗೆ ಮುಂದಾಗಬೇಕು. ಆ ಮೂಲಕ ರಾಜ್ಯದಲ್ಲಿ ಜಾತಿ, ಧರ್ಮ, ಅಂತಸ್ತಿನ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ವಿಜಯಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದೌರ್ಜನ್ಯ ಖಂಡನೀಯ

ವಿಜಯಪುರದಲ್ಲಿ ಸರಕಾರಿ ಮೆಡಿಕಲ್ ಕಾಲೇಜ್‌ ಗಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ 106 ದಿನಗಳು ಸಂದಿವೆ. ಸರಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಬದಲು, ಖಾಸಗಿಯವರಿಗೆ ಬಲ ತುಂಬುವ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ.

ಪ್ರತಿಭಟನಾಕಾರರನ್ನು ಎಳೆದು ಹಾಕಿ ಬಂಧಿಸಿದ ಘಟನೆಯ ಖಂಡನೀಯ. ರಾಜ್ಯ ಸರಕಾರ ಜನರನ್ನು ಸುಲಿಗೆ ಮಾಡಲು ದಾರಿ ಮಾಡಿಕೊಡುವ ಖಾಸಗೀ ಸಹಭಾಗಿತ್ವವನ್ನು ಬಿಟ್ಟು, ಸಂಪೂರ್ಣ ಸರಕಾರೀ ಸ್ವಾಮ್ಯದ ಸುಸಜ್ಜಿತ ಸಾರ್ವಜನಿಕ ಅಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ತೆರೆಯಲು ಮುಂದಾಗಬೇದು ಸಿಪಿಐ(ಎಂ) ಒತ್ತಾಯಿಸಿದೆ.

Leave a Reply

Your email address will not be published. Required fields are marked *