ವೆನೆಜುವೆಲಾದ ವಿವಿಧ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಯುಎಸ್ ವೆನೆಜುವೆಲಾದ ಮೇಲೆ ಆಕ್ರಮಣದ ನಿರ್ಲಜ್ಜ ಕೃತ್ಯವನ್ನು ಎಸಗಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಕಳೆದ ಕೆಲವು ವಾರಗಳಿಂದ ಯುಎಸ್ ವೆನೆಜುವೆಲಾದಲ್ಲಿ ಆಳ್ವಿಕೆ ಬದಲಾವಣೆಯನ್ನು ಬಲವಂತವಾಗಿ ತರಲು ಅದರ ಸುತ್ತಲೂ ತನ್ನ ಮಿಲಿಟರಿ ಮತ್ತು ನೌಕಾ ಪಡೆಗಳನ್ನು ಸಜ್ಜುಗೊಳಿಸಿದೆ. ಇದು ಡಿಸೆಂಬರ್ 2025 ರ ಮೊದಲ ವಾರದಲ್ಲಿ ಪ್ರಕಟಿಸಲಾದ ಅಮೆರಿಕದ ರಾಷ್ಟ್ರೀಯ ಭದ್ರತಾ ರಣನೀತಿ, 2025 ರ ನಿಜವಾದ ಮುಖ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪಡೆಗಳನ್ನು ಕೂಡಿಹಾಕಿರುವುದು ಮತ್ತು ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತರುವ ಆಶಯದ ಬಹಿರಂಗ ಘೋಷಣೆಯು ಮನ್ರೋ ಸಿದ್ಧಾಂತಕ್ಕೆ ಟ್ರಂಪ್ ಉಪಪ್ರಮೇಯ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.
ಯುಎಸ್ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಕೆರಿಬಿಯನ್ ಸಮುದ್ರದಿಂದ ಅದು ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು ಮತ್ತು ಅಮೆರಿಕವು ಸಾರ್ವಭೌಮ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಬಿಡಬಾರದು ಎಂದು ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಮೆರಿಕದ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ವೆನೆಜುವೆಲಾದ ಮೇಲಿನ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ಅಮೆರಿಕದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹಾಕಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.
