ತನ್ನ ಹಕ್ಕುಗಳ ರಕ್ಷಣೆಗಾಗಿ ಹಾಗೂ ಒಕ್ಕೂಟ ತತ್ವದ ಮೇಲಿನ ಕೇಂದ್ರ ಸರ್ಕಾರದ ದಾಳಿ ಮತ್ತು ರಾಜ್ಯದ ಹಕ್ಕುಗಳ ನಿರಾಕರಣೆಯ ವಿರುದ್ಧ ಕೇರಳದ ಎಲ್‌ಡಿಎಫ್ ಸರ್ಕಾರ ನಡೆಸುತ್ತಿರುವ ಹೋರಾಟದಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸೌಹಾರ್ದವನ್ನು ವ್ಯಕ್ತಪಡಿಸುವ ಮೂಲಕ, ಕೇರಳದ ಸತ್ಯಾಗ್ರಹಕ್ಕೆ ತನ್ನ ಪೂರ್ಣ ಹೃದಯದ ಬೆಂಬಲವನ್ನು ನೀಡಿದೆ. ಈ ಹೋರಾಟವು ಕೇಂದ್ರ ಸರ್ಕಾರವು ರಾಜ್ಯದ ಬಗ್ಗೆ ಹೊಂದಿರುವ ಆರ್ಥಿಕ ನಿರ್ಲಕ್ಷ್ಯದ ವಿರುದ್ಧವೂ ಆಗಿದೆ ಎಂದು ಅದು ಹೇಳಿದೆ.
ಕಳೆದ ಐದು ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಕೇರಳದ ವಿರುದ್ಧ ನಡೆಸಿದ ಹಣಕಾಸು ತಾರತಮ್ಯದ ಪರಿಣಾಮವಾಗಿ, ಕೇರಳವು ರೂ. 57,000 ಕೋಟಿಗಳಷ್ಟು ಭಾರೀ ಆದಾಯ ನಷ್ಟವನ್ನು ಅನುಭವಿಸಿದೆ. ತೆರಿಗೆ ಹಂಚಿಕೆ, ಅನುದಾನಗಳು ಮತ್ತು ಯೋಜನಾ ನಿಧಿಗಳಲ್ಲಿ ಕೇರಳದ ಪಾಲನ್ನು ಕಡಿತಗೊಳಿಸಲಾಗಿದೆ. ಸಂವಿಧಾನಾತ್ಮಕ ವಿಧಿಗಳನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಅದರ ಸಾಲ ಪಡೆಯುವ ಮಿತಿಗಳ ಮೇಲೂ ನಿರ್ಬಂಧಗಳನ್ನು ವಿಧಿಸಲಾಗಿದೆ.
10ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ತೆರಿಗೆಗಳಲ್ಲಿ ಕೇರಳದ ಪಾಲು ಶೇ. 3.875 ಇದ್ದದ್ದು, ಪ್ರಸ್ತುತ 15ನೇ ಹಣಕಾಸು ಆಯೋಗದಲ್ಲಿ ಕೇವಲ ಶೇ. 1.925ಕ್ಕೆ ಇಳಿಸಲಾಗಿದೆ. ಇದರಿಂದಾಗಿ 2024–25ನೇ ವರ್ಷವೊಂದರಲ್ಲೇ ರಾಜ್ಯಕ್ಕೆ ರೂ. 27,000 ಕೋಟಿಗಳಷ್ಟು ನಷ್ಟ ಉಂಟಾಗಿದೆ. ರಾಜ್ಯಕ್ಕೆ ಬರಬೇಕಾಗಿರುವ ಹಲವಾರು ಪಾವತಿಗಳನ್ನು ಕೇಂದ್ರ ಸರ್ಕಾರ ಬಾಕಿ ಇಟ್ಟುಕೊಂಡಿದೆ. ಇವೆಲ್ಲವೂ ರಾಜ್ಯದ ಹಣಕಾಸಿನ ಮೇಲೆ ಗಂಭೀರ ನಿರ್ಬಂಧಗಳನ್ನು ಉಂಟುಮಾಡುತ್ತಿವೆ.
ಅಭಿವೃದ್ಧಿ ಮತ್ತು ಕಲ್ಯಾಣ ಎರಡೂ ಕ್ಷೇತ್ರಗಳಲ್ಲಿ ಕೇರಳವು ಇಡೀ ದೇಶಕ್ಕೆ ಮಾದರಿಯಾಗಿದೆ. ರಾಜ್ಯವು ಕೇಂದ್ರ ಸರ್ಕಾರದಿಂದ ಯಾವುದೇ ಉದಾರತೆ ಬೇಡುತ್ತಿಲ್ಲ, ತನಗೆ ನ್ಯಾಯಸಮ್ಮತವಾಗಿ ಬರಬೇಕಾದ ಬಾಕಿಯಿರುವುದನ್ನು ಮಾತ್ರವೇ ಕೇಳುತ್ತಿದೆ. ಕೇರಳದ ನ್ಯಾಯಸಮ್ಮತ ಕಾಳಜಿಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಮತ್ತು ರಾಜ್ಯದ ವಿರುದ್ಧ ತನ್ನ ಆರ್ಥಿಕ ಹಗೆತನ ಸಾಧಿಸುವುದನ್ನು ತಕ್ಷಣವೇ ಅಂತ್ಯಗೊಳಿಸಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ಮುಖ್ಯಮಂತ್ರಿಗಳು, ಸಚಿವರು, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ, ದೊಡ್ಡ ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವ ಕೇರಳದ ಜನತೆಗೆ ಪೊಲಿಟ್ ಬ್ಯೂರೋ ಅಭಿನಂದನೆ ಸಲ್ಲಿಸಿದೆ.
