ಮನರೇಗ ರದ್ಧತಿ ವಿರುದ್ದ ಜ. 30ರಿಂದ ವಾರಾಚರಣೆ;
ಫೆ. 12 ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ
2026ರ ಜನವರಿ 16 ರಿಂದ 18 ರವರೆಗೆ ತಿರುವನಂತಪುರದ ಇಎಂಎಸ್ ಅಕಾಡೆಮಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿಯು ಬಿಜೆಪಿ ಮತ್ತು ಹಿಂದುತ್ವ ಕೋಮುವಾದಿ ಶಕ್ತಿಗಳ ವಿರುದ್ಧ ತನ್ನ ದೃಢ ಹೋರಾಟವನ್ನು ಮುಂದುವರಿಸಲು ಮತ್ತು ಅದೇ ವೇಳೆಗೆ ಪಕ್ಷದ ಸ್ವತಂತ್ರ ಬಲವನ್ನು ಹೆಚ್ಚಿಸಲು ಕೆಲಸ ಮಾಡಲು ಪ್ರತಿಜ್ಞೆ ಮಾಡಿತು.
ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ – ಈ ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಕೇಂದ್ರ ಸಮಿತಿ ಪರಿಶೀಲಿಸಿತು. ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಜನವಿರೋಧಿ ನೀತಿಗಳ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿತು; ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ಕರೆಗೆ ಕೇಂದ್ರ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು; ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸುವುದರ ವಿರುದ್ಧ ಗಾಂಧೀಜಿ ಹುತಾತ್ಮ ದಿನವಾದ ಜನವರಿ 30ರಿಂದ ಒಂದು ವಾರದ ಅಭಿಯಾನ ನಡೆಸಲು ನಿರ್ಧರಿಸಿತು; ವೆನೆಜುವೆಲಾ ಮೇಲೆ ಯುಎಸ್ ಆಕ್ರಮಣ ಮತ್ತು ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ಆಕ್ರಮಣವನ್ನು ಮತ್ತು ಈ ಎರಡರ ಕುರಿತಾದ ಭಾರತ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಚರ್ಚಿಸಿತು.
ಸಭೆಯ ನಂತರ ಪ್ರಕಟಿಸಿರುವ ಕೇಂದ್ರ ಸಮಿತಿಯ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ:
ರಾಜ್ಯದೊಳಗಿನ ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಕೇರಳದ ಎಲ್ಡಿಎಫ್ ಸರ್ಕಾರವನ್ನು ಕೇಂದ್ರ ಸಮಿತಿಯು ಅಭಿನಂದಿಸಿತು. ಈ ಯಶಸ್ಸು ಪ್ರಗತಿಪರ ರಾಜಕೀಯ, ವಿಕೇಂದ್ರೀಕೃತ ಆಡಳಿತ ಮತ್ತು ಹಕ್ಕು ಆಧಾರಿತ ವಿಧಾನವನ್ನು ಆಧರಿಸಿದ ಕೇರಳ ಅಭಿವೃದ್ಧಿ ಮಾದರಿಯು ಪರಿಣಾಮಕಾರಿಯಾಗಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿದೆ. ವಿಪಕ್ಷಗಳು ಆಳುವ ರಾಜ್ಯಗಳಿಗೆ ವ್ಯವಸ್ಥಿತವಾಗಿ ಹಣದ ಕೊರತೆ ಬಾಧಿಸುವಂತೆ ಮಾಡಿರುವ ಕೇಂದ್ರ ಸರ್ಕಾರವು ನಡೆಸಿದ ಒಂದು ನಿರಂತರ ಹಣಕಾಸು ಯುದ್ಧದ ಹೊರತಾಗಿಯೂ ಕೇರಳದ ಈ ಯಶಸ್ಸನ್ನು ಸಾಧಿಸಲಾಗಿದೆ. ಈ ಸಾಧನೆ ನಿರ್ಬಂಧಗಳ ಹೊರತಾಗಿಯೂ, ಉನ್ನತ ಕಲ್ಯಾಣ ಫಲಿತಾಂಶಗಳನ್ನು ಸಾಧಿಸಲು ಎಡ ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಇದು ಪ್ರದರ್ಶಿಸುವುದರಿಂದ ಇನ್ನಷ್ಟು ಮಹತ್ವದ್ದಾಗಿ ಮಾಡುತ್ತದೆ ಎಂದು ಕೇಂದ್ರ ಸಮಿತಿ ಹೇಳಿದೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ನಿಗದಿಪಡಿಸಿದಂತೆ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಎಲ್ಡಿಎಫ್ ಸರ್ಕಾರ, ಈ ಮೂಲಕ ಮತ್ತೊಮ್ಮೆ ತನ್ನ ಕಾರ್ಮಿಕರ ಪರ ಮುಖವನ್ನು ಪ್ರದರ್ಶಿಸಿದೆ ಎಂದು ಕೇಂದ್ರ ಸಮಿತಿ ಶ್ಲಾಘಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಜನರು ಐತಿಹಾಸಿಕ ಮೂರನೇ ಅವಧಿಗೆ ಎಲ್ಡಿಎಫ್ಗೆ ಮತ್ತೊಮ್ಮೆ ಮತ ಹಾಕುತ್ತಾರೆ ಎಂಬ ವಿಶ್ವಾಸವನ್ನು ಕೇಂದ್ರ ಸಮಿತಿ ವ್ಯಕ್ತಪಡಿಸಿದೆ.
ವಿಧಾನಸಭಾ ಚುನಾವಣೆಗಳು:
ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ – ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಕೇಂದ್ರ ಸಮಿತಿ ಪರಿಶೀಲಿಸಿತು.
ಕೇರಳದಲ್ಲಿ, ಪಕ್ಷವು ಎಲ್ಡಿಎಫ್ ಸರ್ಕಾರದ ಮರು ಆಯ್ಕೆಗೆ ಕೆಲಸ ಮಾಡುತ್ತದೆ, ಅದರ ಸಾಧನೆಗಳ ಕುರಿತು ಪ್ರಚಾರ ಮಾಡುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇರಳಕ್ಕೆ ನ್ಯಾಯಯುತವಾದ ಬಾಕಿಗಳನ್ನು ನಿರಾಕರಿಸುವುದು, ವಿಧಿಸಲಾದ ಹಣಕಾಸಿನ ನಿರ್ಬಂಧಗಳು ಮತ್ತು ಒಕ್ಕೂಟದ ಮೇಲಿನ ಒಟ್ಟಾರೆ ದಾಳಿಯನ್ನು ಪಕ್ಷವು ಬಯಲಿಗೆಳೆಯುತ್ತದೆ. ಸಂಸತ್ತಿನಲ್ಲಿ ಅತಿದೊಡ್ಡ ವಿಪಕ್ಷವಾಗಿ ಒಕ್ಕೂಟದ ಮೇಲಿನ ಈ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾಂಗ್ರೆಸ್ ನ ವೈಫಲ್ಯವನ್ನು ಕೂಡ ಪಕ್ಷವು ಬಹಿರಂಗಪಡಿಸುತ್ತದೆ. ವಿಶೇಷವಾಗಿ ಕೇರಳದಲ್ಲಿ, ಕೋಮುವಾದಿ ಆರ್ಎಸ್ಎಸ್-ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸೈದ್ಧಾಂತಿಕವಾಗಿ ಕಾಂಗ್ರೆಸ್ ನಲ್ಲಿ ಕೊರತೆಯಿರುವುದು ಕಂಡುಬಂದಿದೆ, ಇದನ್ನು ಸಹ ಜನರ ಮುಂದೆ ಬಯಲಿಗೆ ತರಲಾಗುವುದು.
ಬಂಗಾಳದಲ್ಲಿ, ಸಮಾಜವನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಟಿಎಂಸಿ ಮತ್ತು ಬಿಜೆಪಿ ಎರಡರ ಸೋಲಿಗೂ ಪಕ್ಷವು ಕೆಲಸ ಮಾಡುತ್ತದೆ. ಅವರ ವಿರುದ್ಧ ಕೆಲಸ ಮಾಡಲು ಸಿದ್ಧವಾಗಿರುವ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಕೇಂದ್ರ ಸಮಿತಿ ಹೇಳಿದೆ.
ತಮಿಳುನಾಡಿನಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಲು ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೊಂದಿಗೆ ಸಿಪಿಐ(ಎಂ) ಸ್ಪರ್ಧಿಸುತ್ತದೆ.
ಅಸ್ಸಾಂನಲ್ಲಿ, ಪಕ್ಷವು ಎಲ್ಲಾ ಬಿಜೆಪಿ-ವಿರೋಧಿ ಪಕ್ಷಗಳು ಮತ್ತು ಶಕ್ತಿಗಳನ್ನು ಸಜ್ಜುಗೊಳಿಸಲು ಮತ್ತು ಉನ್ಮತ್ತ ಕೋಮುವಾದಿ ಮತ್ತು ವಿಭಜನಕಾರೀ ಬಿಜೆಪಿ ಸರ್ಕಾರವನ್ನು ಸೋಲಿಸಲು ಕೆಲಸ ಮಾಡುತ್ತದೆ.
ಪುದುಚೇರಿಯಲ್ಲಿ, ಬಿಜೆಪಿ ಮೈತ್ರಿಕೂಟ ಸರ್ಕಾರದ ಸೋಲಿಗೆ ಪಕ್ಷವು ಕೆಲಸ ಮಾಡುತ್ತದೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಜನವಿರೋಧಿ ನೀತಿಗಳು:
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಸರಿಯಾದ ಚರ್ಚೆಗೆ ಅವಕಾಶ ನೀಡದೆ, ಜನರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಹಲವಾರು ಪ್ರಮುಖ ಮಸೂದೆಗಳನ್ನು ಮಂಡಿಸಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬಳಸಿಕೊಂಡಿತು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅಧಿಸೂಚಿಸಲಾಯಿತು; ಮನರೇಗದ ಸ್ಥಾನದಲ್ಲಿ ಜಿರಾಮ್-ಜಿ ಅನ್ನು ತರಲಾಯಿತು; ಬೀಜ ಮಸೂದೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಗಳು ಬರುವ ದಾರಿಯಲ್ಲಿವೆ.
ವಿಮೆಯಲ್ಲಿ 100 ಶೇ. ಎಫ್ಡಿಐ ಮತ್ತು ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಖಾಸಗಿ ಮತ್ತು ವಿದೇಶಿ ಕಾರ್ಪೊರೇಷನ್ಗ ಳ ಪ್ರವೇಶಕ್ಕೆ ಅನುಮತಿ ನೀಡುವ ಮಸೂದೆಗಳಿಗೆ ಒಕ್ಕೂಟ ಸಚಿವ ಸಂಪುಟವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಪಡೆದಿದೆ. ಪರಮಾಣು ಶಕ್ತಿಯಂತಹ ಆಯಕಟ್ಟಿನ ಮತ್ತು ನಿರ್ಣಾಯಕ ವಲಯವನ್ನು ಖಾಸಗಿ ಕಂಪನಿಗಳಿಗೆ ತೆರೆಯುವುದು ಹಾನಿಕಾರಕವಾಗಿದೆ.
ಬಿಜೆಪಿ ಉದ್ದೇಶಪೂರ್ವಕವಾಗಿ ಸಂಸತ್ತಿನ ಕಾರ್ಯನಿರ್ವಹಣೆಯನ್ನು ದುರ್ಬಲಗೊಳಿಸುತ್ತಿದೆ ಮತ್ತು ಆ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಅಂಶವಾದ ಕಾರ್ಯಾಂಗವನ್ನು ಶಾಸಕಾಂಗದ ಪರಿಶೀಲನೆಗೆ ಒಳಪಡಿಸಲು ನಿರಾಕರಿಸುತ್ತಿದೆ. ಈ ಕ್ರಮಗಳು ದೇಶದ ಪ್ರಜಾಪ್ರಭುತ್ವ ರಚನೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಸರ್ವಾಧಿಕಾರಿ ಸ್ವಭಾವವನ್ನು ಬಲಪಡಿಸುತ್ತವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್ಐ ಆರ್) ಬಹಳ ಲೆಕ್ಕಾಚಾರ ಮಾಡಿರುವ ಬಿಜೆಪಿ-ಆರ್ಎಸ್ಎಸ್ ಕೂಟದ ರಾಜಕೀಯ ಯೋಜನೆಯಾಗಿದ್ದು, ಇದನ್ನು ಹೇಳಿದಂತೆ ಮಾಡಲು ಸಿದ್ಧವಿರುವ ಭಾರತದ ಚುನಾವಣಾ ಆಯೋಗದ (ಇಸಿಐ) ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಪೌರತ್ವವನ್ನು ನಿರ್ಧರಿಸುವ ಹಕ್ಕನ್ನು ತನ್ನ ವಶ ಮಾಡಿಕೊಳ್ಳುವ ಚುನಾವಣಾ ಆಯೋಗದ ಪ್ರಯತ್ನದ ವಿರುದ್ಧ ಪಕ್ಷವು ವ್ಯಾಪಕವಾಗಿ ಪ್ರಚಾರ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಯಾವುದೇ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ನೋಡಿಕೊಳ್ಳುತ್ತದೆ. ಅದೇ ರೀತಿ, ನಾವು ಜಾಗರೂಕರಾಗಿರುತ್ತೇವೆ ಮತ್ತು ಬಿಜೆಪಿ ಮತ್ತು ಚುನಾವಣಾ ಆಯೋಗದ ವ್ಯವಸ್ಥೆಗಳ ಮೂಲಕ ನಕಲಿ ಮತದಾರರು ಪಟ್ಟಿಯಲ್ಲಿ ದಾಖಲಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸಮಿತಿ ಹೇಳಿದೆ.
ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇಬ್ಬರ ಮೇಲೂ ದಾಳಿಗಳು ಹೆಚ್ಚುತ್ತಿವೆ. ಈ ದಾಳಿಗಳಿಗೆ ಹಿಂದುತ್ವ ಕೋಮುವಾದಿ ಗುಂಪುಗಳು ಕಾರಣವಾಗಿವೆ. ಇದರಲ್ಲಿ ಬಿಜೆಪಿ ಸರ್ಕಾರಗಳ ನಿಷ್ಕ್ರಿಯತೆಯು ಉದ್ದೇಶಪೂರ್ವಕವಾಗಿದೆ ಮತ್ತು ಅಂತಹ ದಾಳಿಗಳನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ.
ವಿಶೇಷವಾಗಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಕೇಂದ್ರ ಸಮಿತಿ ಖಂಡಿಸಿದೆ.
ಇವೆಲ್ಲವೂ ಜಾತ್ಯತೀತ ಪ್ರಭುತ್ವವನ್ನು ಕೆಡವಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಆರ್ಎಸ್ಎಸ್-ಬಿಜೆಪಿ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿವೆ ಎಂದಿರುವ ಕೇಂದ್ರ ಸಮಿತಿ, ಜಮ್ಮು ಮತ್ತು ಕಾಶ್ಮೀರಕ್ಕೆ ತಕ್ಷಣದ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಮತ್ತು ಅವರ ಎಲ್ಲಾ ಪ್ರಜಾಪ್ರಭುತ್ವ ಹಕ್ಕುಗಳನ್ನು ಪುನಃಸ್ಥಾಪಿಸಲು ಒತ್ತಾಯಿಸುವ ವಿಶೇಷ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರ:
ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಅಧಿಸೂಚನೆಯ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ಕರೆಗೆ ಕೇಂದ್ರ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಸಾರ್ವತ್ರಿಕ ಮುಷ್ಕರದ ಕರೆಯನ್ನು ಪಕ್ಷವು ಸಕ್ರಿಯವಾಗಿ ಬೆಂಬಲಿಸುತ್ತದೆ. ಮುಷ್ಕರದ ದಿನದಂದು, ಟ್ರೇಡ್ ಯೂನಿಯನ್ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಅದು ಹೇಳಿದೆ.
ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸುವುದರ ವಿರುದ್ಧ ಅಭಿಯಾನ:
ಒಂದು ಹೊಸ ಕಾಯ್ದೆಯನ್ನು ತಂದು ಸೀಮಿತ ಉದ್ಯೋಗದ ಹಕ್ಕನ್ನು ಒದಗಿಸುವ ಸಾರ್ವತ್ರಿಕ, ಬೇಡಿಕೆ ಆಧಾರಿತ ಕಾನೂನಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯ ನಾಶದ ವಿರುದ್ಧ ಪಕ್ಷವು ತೀವ್ರ ಅಭಿಯಾನವನ್ನು ಕೈಗೊಳ್ಳಲಿದೆ. ಈ ಅಭಿಯಾನವು ಜನವರಿ 30 ರಿಂದ (ಮಹಾತ್ಮ ಗಾಂಧಿಯವರ ಮರಣ ವಾರ್ಷಿಕ ದಿನದಿಂದ) ಪ್ರಾರಂಭವಾಗಿ ಫೆಬ್ರವರಿ 5 ರವರೆಗೆ ಒಂದು ವಾರ ನಡೆಯಲಿದೆ.
ವೆನೆಜುವೆಲಾ ಮೇಲೆ ಯುಎಸ್ ಆಕ್ರಮಣದ ವಿರುದ್ಧ:
ವೆನೆಜುವೆಲಾ ವಿರುದ್ಧ ಯುಎಸ್ ಆಕ್ರಮಣದ ಅಭೂತಪೂರ್ವ ಕೃತ್ಯವನ್ನು ಕೇಂದ್ರ ಸಮಿತಿ ಖಂಡಿಸಿತು. ವೆನೆಜುವೆಲಾ ಮೇಲಿನ ಯುಎಸ್ ಆಕ್ರಮಣದ ವಿರುದ್ಧ ಪಕ್ಷವು ವ್ಯಾಪಕ ಪ್ರಚಾರ ನಡೆಸುತ್ತದೆ ಮತ್ತು ಎಲ್ಲಾ ಬಿಜೆಪಿಯೇತರ ಕ್ಷಗಳನ್ನು ಸಜ್ಜುಗೊಳಿಸುವ ಮೂಲಕ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸುತ್ತದೆ.
ಪ್ಯಾಲೆಸ್ಟೈನ್ ಮೇಲೆ ಇಸ್ರೇಲಿ ಆಕ್ರಮಣ:
ಪ್ಯಾಲೆಸ್ಟೈನ್ ಮೇಲೆ ನಡೆಯುತ್ತಿರುವ ಇಸ್ರೇಲಿ ಆಕ್ರಮಣವನ್ನು ಕೇಂದ್ರ ಸಮಿತಿ ಖಂಡಿಸಿತು. ಯುಎಸ್ ಈಗ ಗಾಜಾಗೆ ಶಾಂತಿ ಮಂಡಳಿಯನ್ನು ರಚಿಸುವುದಾಗಿ ಪ್ರಕಟಿಸಿದೆ. ಪ್ರಸ್ತಾವಿತ ಮಂಡಳಿಯು ಗಾಜಾವನ್ನು ಪುನರ್ನಿರ್ಮಿಸಲು ಅಲ್ಲ, ಆದರೆ ಲಾಭಕ್ಕಾಗಿ ಅದರ ನಾಶವನ್ನು ಬಳಸಿಕೊಳ್ಳಲು ಮಾತ್ರ. ಗಮನಾರ್ಹ ಸಂಗತಿಯೆಂದರೆ, ಪ್ಯಾಲೆಸ್ಟೀನಿಯನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದನ್ನು ಕೊನೆಗೊಳಿಸುವ ಬಗ್ಗೆ ಶಾಂತಿ ಯೋಜನೆ ಅಸ್ಪಷ್ಟವಾಗಿದೆ.
ವೆನೆಜುವೆಲಾ ಮತ್ತು ಪ್ಯಾಲೆಸ್ಟೈನ್ ಎರಡರ ಬಗ್ಗೆಯೂ ಭಾರತ ಸರ್ಕಾರದ ವಿದೇಶಾಂಗ ನೀತಿಯು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಭಾರತದ ಸಾಮರಿಕ ಸ್ವಾಯತ್ತತೆಯಲ್ಲಿ ರಾಜಿ ಮಾಡಿಕೊಂಡಿರುವುದನ್ನು ತೋರಿಸುತ್ತದೆ ಮತ್ತು ಅದರ ನೀತಿಗಳು ಅಮೆರಿಕದ ಮಿಲಿಟರಿ ಮತ್ತು ವಿದೇಶಾಂಗ ನೀತಿಯ ಆದೇಶಗಳು ಮತ್ತು ಅದರ ಯಜಮಾನಿಕೆಯ ಯೋಜನೆಗೆ ಹೇಗೆ ಬದ್ಧವಾಗಿವೆ ಎಂಬುದನ್ನು ತೋರಿಸುತ್ತದೆ ಎಂದು ಕೇಂದ್ರ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ನಮ್ಮ ಕೃಷಿ, ಕೈಗಾರಿಕೆಗಳನ್ನು ನಾಶಮಾಡಲು ಮತ್ತು ನಮ್ಮ ಜನರ ಜೀವನದಲ್ಲಿ ಭಾರೀ ವಿನಾಶಕ್ಕೆ ಕಾರಣವಾಗಲಿರುವ ವ್ಯಾಪಾರ ಒಪ್ಪಂದವನ್ನು ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಳ್ಳಲು ಭಾರತ ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಕೇಂದ್ರ ಸಮಿತಿ ತನ್ನ ವಿರೋಧವನ್ನು ವ್ಯಕ್ತಪಡಿಸಿತು.
ಸಿಪಿಐ(ಎಂ) ಕೇಂದ್ರ ಸಮಿತಿಯು ಬಿಜೆಪಿ ಮತ್ತು ಹಿಂದುತ್ವ ಕೋಮುವಾದಿ ಶಕ್ತಿಗಳ ವಿರುದ್ಧ ತನ್ನ ದೃಢ ಹೋರಾಟವನ್ನು ಮುಂದುವರಿಸಲು ಮತ್ತು ಅದೇ ವೇಳೆಗೆ ಪಕ್ಷದ ಸ್ವತಂತ್ರ ಬಲವನ್ನು ಹೆಚ್ಚಿಸಲು ಕೆಲಸ ಮಾಡಲು ಪ್ರತಿಜ್ಞೆ ಮಾಡಿತು.


