
ಸಾರಿಗೆ ನೌಕರರ ಮುಖಂಡ 84 ವರ್ಷ ಅನಂತ್ ಸುಬ್ಬರಾವ್ ತೀವ್ರ ಹೃದಯಾಘಾತದಿಂದ ಇಂದು (ಜನವರಿ, 28, 2026) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅನಂತ್ ಸುಬ್ಬರಾವ್ ಅವರಿಗೆ ಬೆಂಗಳೂರಿನ ತಮ್ಮ ಮನೆಯಲ್ಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಎಐಟಿಯುಸಿ ಮಾಜಿ ರಾಜ್ಯಾಧ್ಯಕ್ಷರಾಗಿ ಬಹಳ ದೀರ್ಘ ಕಾಲ ಕಾರ್ಮಿಕ ಚಳವಳಿಯನ್ನು ಮುನ್ನಡೆಸಿದ್ದ ರಾಜ್ಯದ ಹಿರಿಯ ಕಾರ್ಮಿಕ ನಾಯಕರು ಕಾಂ.ಅನಂತ ಸುಬ್ಬರಾವ್ ರವರ ನಿಧನ ರಾಜ್ಯದ ಹಾಗೂ ದೇಶದ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದೆ.
ಸುಮಾರು 60 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಬೆಂಗಳೂರು ನಗರ ಹಾಗೂ ರಾಜ್ಯದ ಕಾರ್ಮಿಕರನ್ನು ಸಂಘಟಿಸಿ, ಅವರ ಹಕ್ಕುಗಳಿಗಾಗಿ ದಣಿವರೆಯದೇ ದುಡಿದ ಕಾಂ. ಅನಂತಸುಬ್ಬರಾವ್ ರವರ ನಿಧನದಿಂದ ಕರ್ನಾಟಕ ರಾಜ್ಯ ಒಬ್ಬ ಅನುಭವಿ ಕಾರ್ಮಿಕ ನಾಯಕರನ್ನು ಕಳೆದುಕೊಂಡಂತಾಗಿದೆ. ಘನ ಕೈಗಾರಿಕೆಗಳು, ವಿಶೇಷವಾಗಿ ಸಾರಿಗೆ ಕಾರ್ಮಿಕರನ್ನು ಸಂಘಟಿಸಿದ್ದ ಕಾಮ್ರೆಡ್ ಅನಂತಸುಬ್ಬರಾವ್ ರವರು ಲಕ್ಷಾಂತರ ಕಾರ್ಮಿಕರ ಬದುಕನ್ನು ಉತ್ತಮಪಡಿಸಲು ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಮಿಕ ವರ್ಗ ಹೋರಾಡಿ ಗಳಿಸಿದ್ದ ಎಲ್ಲಾ ರೀತಿಯ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸುತ್ತಿರುವ ಈ ಸಂದರ್ಭದಲ್ಲಿ ಹಲವಾರು ದಶಕಗಳ ಹೋರಾಟದ ಅನುಭವ ಇದ್ದ ನಾಯಕರ ಸಾವಿನಿಂದಾಗಿ ಬಹಳ ದೊಡ್ಡ ಶೂನ್ಯವೊಂದು ಅವರಿಸಿದಂತಾಗಿದೆ ಎಂದು ಸಿಪಿಐ(ಎಂ) ಭಾವಿಸಿದೆ. ಅನಂತಸುಬ್ಬರಾವ್ ರವರ ಕುಟುಂಬಕ್ಕೆ, ಎಐಟಿಯುಸಿ ಮತ್ತು ಸಿಪಿಐ ಪಕ್ಷದ ರಾಜ್ಯ ಸಮಿತಿಗೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದೆ.
