ಇದೆಂತಹ ಸಮಾಜೋತ್ಸವಗಳು?

ಕರ್ನಾಟಕದಲ್ಲಿ ಹಿಂದೂ ಸಮಾಜೋತ್ಸವಗಳು ಸರಣಿ ಉಪಾದಿಯಲ್ಲಿ ನಡೆಯುತ್ತಿವೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕನಿಷ್ಠ 3000 ಕಾರ್ಯಕ್ರಮಗಳನ್ನು ಇದೇ 2026 ಜನವರಿ 18 ರಿಂದ  ಫೆಬ್ರವರಿ 1 ರವರೆಗೆ ಸಂಘಟಿಸಲು ಅದು ನಿರ್ಧರಿಸಿದೆ. ಇದನ್ನು ‘ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿ ಮತ್ತು ನಾಗರೀಕ ಜಾಗೃತಿ’ ತರುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಹೇಳಿಕೊಂಡರೂ ಇದರ ಅಂತಿಮ ಪರಿಣಾಮ ಸಮಾಜದೊಳಗೆ ಕೋಮು ವಿಭಜನೆಯನ್ನು ಉಂಟುಮಾಡಿ ಅದರ ಫಲ ಪಡೆಯುವುದೇ ಆಗಿದೆ ಎನ್ನುವುದು ಹಿಂದಿನ ಅನುಭವ ಮತ್ತು ಈಗಿನ ವಾಸ್ತವ.

‘ಹಿಂದೂ ಸಮಾಜೋತ್ಸವ’ ಎನ್ನುವುದನ್ನು ಒಂದು ಮತಧರ್ಮದ, ಸಮಾಜದ ಜನರ ಜಾಗೃತಿ ಅಥವಾ ಒಂದು ಧಾರ್ಮಿಕವಾದ ಕಾರ್ಯ ಎನ್ನುವಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ, ಇದು ಹಿಂದೂ ಧರ್ಮದ ಹೆಸರಿನಲ್ಲಿ ನಡೆಸಲಾಗುವ ಮತೀಯವಾದೀ ‘ಹಿಂದುತ್ವ’ದ ಕಾರ್ಯೋದ್ದೇಶದ ಉತ್ಸವ. ಅಂದರೆ ಇದು ಹಿಂದೂ ಧರ್ಮಕ್ಕಾಗಲಿ, ಹಿಂದೂ ಸಮಾಜಕ್ಕಾಗಲಿ ಒಳಿತಾಗುವುದನ್ನು ಒಳಗೊಂಡಿರುವಂಥದ್ದಲ್ಲ. ಬದಲಿಯಾಗಿ, ಮತಧರ್ಮದ ಹೆಸರಿನಲ್ಲಿ ಒಂದು ಅಸ್ಮಿತತೆ (ಐಡೆಂಟಿಟಿ) ಸೃಷ್ಟಿಸಿ, ಸಮಾಜದ ಹಲವು ಪ್ರಭಾವಿಗಳನ್ನು ಬಳಸಿ ಮತೀಯತೆ ಮತ್ತು ರಾಜಕೀಯ ಕ್ರೋಢೀಕರಣವನ್ನು ನಡೆಸುವ ಪ್ರಯತ್ನ. ಹೀಗೆ ಅದು ಮತಾಂಧತೆ ಬೆಳೆಸುವ  ಸ್ಪಷ್ಟ ರಾಜಕೀಯ ಕಾರ್ಯಕ್ರಮವೂ ಆಗಿದೆ. ಇಂತಹ ಸಮಾಜೋತ್ಸವಗಳಲ್ಲಿ  ಆರೆಸ್ಸೆಸ್ ನ ಪ್ರಚಾರಕರು ಮಾಡುವ ಭಾಷಣಗಳು ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ, ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಮತ್ತು ಕಾನೂನು ಸಂವಿಧಾನಾತ್ಮಕ ಆಡಳಿತದ ವಿರುದ್ಧ ಜನತೆಯನ್ನು ರೊಚ್ಚಿಗೆಬ್ಬಿಸುವ ದೃಷ್ಟಿಯಲ್ಲಿ ಬಹಳಷ್ಟು ನಡೆದಿವೆ. ಆ ಕಾರಣದಿಂದಲೂ ಹಿಂದೂ ಸಮಾಜೋತ್ಸವಗಳು ಮುಗಿದ ನಂತರದಲ್ಲಿ ಅನೇಕ ಕಡೆ ಕೋಮು ಗಲಭೆಗಳು ಸಂಭವಿಸಿರುವ ಉದಾಹರಣೆಗಳನ್ನು ಗಮನಿಸಬಹುದು. ಇದನ್ನು ಕೊಡಗು, ಕರಾವಳಿ ಜಿಲ್ಲೆಗಳಲ್ಲಿ, ಹುಬ್ಬಳ್ಳಿ-ಧಾರವಾಡ ದಂತಹ ಕಡೆಗಳಲ್ಲಿ ಗಮನಿಸಬಹುದಾದದ್ದು.

ಈ ಬಾರಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವದಲ್ಲಿ 2022 ರಿಂದಲೂ ಬಿಜೆಪಿ ಸಾಮಾಜಿಕ ಮಾದ್ಯಮದ ಮುಖ್ಯಸ್ಥ ದಕ್ಷಿಣ ಕನ್ನಡ ಜಿಲ್ಲೆಯ ವಿಕಾಸ ಪುತ್ತೂರು ಅವರ ಮೇಲೆ ಪೊಲೀಸರು ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ನೋಟೀಸ್ ಜಾರಿ ಮಾಡಿದ ಪ್ರಸಂಗ ಒಂದು ಉದಾಹರಣೆ. ದ್ವೇಷ ಹೆಚ್ಚಿಸುವುದಕ್ಕೆ ಆಕ್ಷೇಪಿಸದ ಬಿಜೆಪಿ ಅಲ್ಲಿಯ ಪೊಲೀಸ್ ಆಡಳಿತ ವ್ಯವಸ್ಥೆಯ ಕ್ರಮವನ್ನು ಪ್ರಶ್ನಿಸಿರುವುದು ವಿಪರ್ಯಾಸ. ಇದು ಸಂಘಪರಿವಾರದ ಬಯಕೆ ಏನಿದೆ ಎಂಬುದನ್ನು ತೋರಿಸುತ್ತದೆ.

ಸಮಾಜೋತ್ಸವಗಳು ನಡೆಯುತ್ತಿರುವುದು ನಿರಂತರವಾಗಿ ಸಂಘ ಪರಿವಾರ ಕೋಮುವಾದಿ ಹಿಂಸೆಯನ್ನು ಪ್ರತಿಪಾದಿಸುವ ಮತ್ತು ವಿಭಜನೆ ತರುವ ದ್ವೇಷದ ಹಲವು ಚಟುವಟಿಕೆಗಳ ವಾತಾವರಣದಲ್ಲಿ ಎನ್ನುವುದನ್ನು ಗಮನಿಸಬೇಕು.

ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ  ಅಖಂಡ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ

ದ್ವೇಷ ಭಾಷಣ, ಪ್ರಚೋದನಾ ಕೃತ್ಯ ಎಸಗಿದ ಹರ್ಷಿತಾ ಠಾಕೂರ್ ಮತ್ತು ಏಳು ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಂಚಿದ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿ ಮತ್ತವರ ಪುಂಡರ ಗ್ಯಾಂಗ್ ಮುಸ್ಲಿಂ ಸಮುದಾಯದ ಬಡ ಜನರ ಗಲ್ಲಿಗಳಿಗೆ ನುಗ್ಗಿ ಆಧಾರ್ ಕಾರ್ಡ್ ಗಳನ್ನು ಕಿತ್ತುಕೊಂಡು ಬಾಂಗ್ಲಾದವರೆಂದೂ, ಕಾರ್ಡ್ ಗಳು ನಕಲಿ ಎಂದು ವಿಡಿಯೋ ಮಾಡುತ್ತಿರುವುದು, ಧಮಕಿ ಹಾಕುತ್ತಿರುವುದು ಪೊಲೀಸರ ಸಮ್ಮುಖದಲ್ಲೇ ನಡೆದಿದೆ. ವಿಚಿತ್ರವೆಂದರೆ ಇಲ್ಲಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸದೇ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಇದಕ್ಕೆ ಬೆಂಬಲವಾಗುವಂತೆ ಗೃಹ ಸಚಿವರೇ ಮಾತನಾಡಿರುವುದು ಆಶ್ಚರ್ಯ ತಂದಿದೆ.

ಈ ಸರ್ಕಾರಕ್ಕೆ ಕೋಮುವಾದಿಗಳನ್ನು ಎದುರಿಸುವಲ್ಲಿ ಇಚ್ಛಾಶಕ್ತಿ ಇಲ್ಲದಿರುವುದನ್ನು ಹಲವು ಪ್ರಸಂಗಗಳು ಮನಗಾಣಿಸುತ್ತವೆ. ಉಡುಪಿ ಜಿಲ್ಲೆಯ ಕೃಷ್ಣ ದೇವಸ್ಥಾನದ ಪರ್ಯಾಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರೇ ಒಂದು ಧಾರ್ಮಿಕ ಸಂಕೇತವಾದ ಕೇಸರಿ ಭಗವಾದ್ವಜವನ್ನು ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೀಡಿರುವುದು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತೀಯ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವುದು ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮುಖ್ಯವಾಗಿ ಈ ಹಿಂದೂ ಸಮಾಜೋತ್ಸವಗಳಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರುಗಳು ಭಾಗಿಯಾಗುತ್ತಿದ್ದಾರೆ. ಈ ಹಿಂದೆಯೂ ಇಂತಹದೇ ವರ್ತನೆಗಳನ್ನು ಕಾಂಗ್ರೆಸ್ ಪಕ್ಷ ತೋರಿತ್ತು. ಈಗ ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕ ಮಂತರ್ ಗೌಡ ಅವರು ಆರ್ ಎಸ್ ಎಸ್  ನ ಈ ಸಮಾಜೋತ್ಸವಕ್ಕೆ ಅತಿಥಿಯಾಗಿ ಭಾಗವಹಿಸಿದ್ದಾರೆ. ಹಾಗೆಯೇ ಉಡುಪಿಯ ಕಾಂಗ್ರೆಸ್ ಮುಖಂಡರೊಬ್ಬರು ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಇಂತಹವರ ಮೇಲೆ ಯಾವುದೇ ಕ್ರಮಗಳಿಲ್ಲ. ಕೋಮುವಾದದ ವಿರುದ್ಧ ದೊಡ್ಡ ಗಂಟಲಿನಲ್ಲಿ ಮಾತನಾಡುವ ಕಾಂಗ್ರೆಸ್ ಪಕ್ಷ ತಲುಪಿರುವ ಸರ್ವ ರೀತಿಯ ದಿವಾಳಿ ಸ್ಥಿತಿಯನ್ನು ಇದು ತೋರಿಸುತ್ತದೆ.

ಈ ಬಾರಿಯ ಹಿಂದೂ ಸಮಾಜೋತ್ಸವಗಳು ಬಹಳ ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ನೆಲೆಯಲ್ಲಿ ಪ್ರಭಾವಿಸುವ ಸಂಭವಗಳಿವೆ.  ಈ ಹಿಂದೂ ಸಮಾಜೋತ್ಸವಗಳು ತರುವ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಗಂಭೀರವಾಗಿ ಅರಿತು ಅವನ್ನು ಎದುರಿಸುವುದರತ್ತ ಎಲ್ಲರೂ ಕ್ರಮ ವಹಿಸಬೇಕಾಗಿದೆ. ಇವೆಲ್ಲ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಒಳಗೊಂಡು ಮುಂಬರುವ ವಿಧಾನಸಭೆಯ ಚುನಾವಣೆಯನ್ನು ಪ್ರಭಾವಿಸಲಿವೆ ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿ ಕೋಮುವಾದಿಗಳು ಮತ್ತಷ್ಟು ನೆಲೆಯನ್ನು ವಿಸ್ತರಿಸಿ, ಬಲಗೊಳ್ಳದಂತೆ ಎಚ್ಚರಿಕೆಯ ಕ್ರಮಗಳನ್ನು ಪ್ರತಿ ಹಂತದಲ್ಲೂ ವಹಿಸಬೇಕು.

(ಜನಶಕ್ತಿ ಕನ್ನಡ ವಾರ ಪತ್ರಿಕೆ: ಜನವರಿ 31, 2026)

Leave a Reply

Your email address will not be published. Required fields are marked *