ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದ ಪ್ರಕಟಣೆಯು ಕಾರ್ಪೊರೇಟ್ ಮಾಧ್ಯಮಗಳಲ್ಲಿ ಸಂಭ್ರಮ ಉಂಟುಮಾಡಿದೆ. ಆದರೆ ಒಪ್ಪಂದದ ವಿವರಗಳು ಇನ್ನೂ ಲಭ್ಯವಿಲ್ಲದ ಕಾರಣ ಇಂತಹ ಸಂಭ್ರಮ ಸಂಪೂರ್ಣವಾಗಿ ಅನುಚಿತವಾದದು. ವ್ಯಾಪಾರ ಒಪ್ಪಂದದ ಸಂಪೂರ್ಣ ವ್ಯಾಪ್ತಿ ಮತ್ತು ವಿವರಗಳು ಲಭ್ಯವಾದಾಗ ಮಾತ್ರ, ಯಾರಾದರೂ ಸರಿಯಾದ ಮೌಲ್ಯಮಾಪನ ಮಾಡಲು ಸಾಧ್ಯ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಮಾಡಿದ ಪ್ರಕಟಣೆಯು ಭಾರತದ ಸರಕುಗಳ ಆಮದು ಶೇ. 18 ರಷ್ಟು ಸುಂಕವನ್ನು ಎದುರಿಸಲಿದೆ, ಆದರೆ ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸುತ್ತದೆ ಎಂದು ಹೇಳುತ್ತದೆ. ಈ ರೀತಿ ಸುಂಕಗಳ ನಿರ್ಮೂಲನೆ ಮಾಡಿದರೆ ಅದು ದೇಶದೊಳಕ್ಕೆ ಅಮೆರಿಕದ ಸರಕುಗಳ ಪ್ರವಾಹವೇ ಹರಿದು ಬರಲು ಕಾರಣವಾಗುತ್ತದೆ. ಇದು ನಮ್ಮ ಕೈಗಾರಿಕೆಗಳು ಮತ್ತು ಕಾರ್ಮಿಕರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸುಂಕೇತರ ಅಡೆತಡೆಗಳನ್ನು ತೆಗೆದುಹಾಕುವುದೆಂದರೆ ಸಬ್ಸಿಡಿಗಳು ಮತ್ತು ಭಾರತದ ರೈತರಿಗೆ ಬೆಂಬಲ ನೀಡುವ ಇತರ ಕ್ರಮಗಳನ್ನು ತೆಗೆದುಹಾಕುವುದು. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು 500 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಇಂಧನ, ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ಟ್ರಂಪ್ ಹೇಳಿರುವುದು ನಿಜವಾಗಿದ್ದರೆ, ಈ ವ್ಯಾಪಾರ ಒಪ್ಪಂದ ಭಾರತದ ಸಾರ್ವಭೌಮತ್ವವನ್ನು ಬದಿಗೊತ್ತಿ ಅದನ್ನು ಅಧೀನ ಸ್ಥಾನದಲ್ಲಿಟ್ಟು ಮಾಡಿದ ಅತ್ಯಂತ ಅಸಮಾನ ಸ್ವರೂಪದ್ದು ಎಂದೇ ತೋರಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಸರ್ಕಾರವು ಸಂಪೂರ್ಣ ವ್ಯಾಪಾರ ಒಪ್ಪಂದವನ್ನು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸುವುದು, ಈ ಮೂಲಕ ಇದರ ಮೇಲೆ ಕೂಲಂಕುಷ ಚರ್ಚೆ ನಡೆಯುವುದು ಬಹಳ ಮುಖ್ಯ. ಭಾರತದ ಉದ್ದಿಮೆ, ಕೃಷಿ ಮತ್ತು ದುಡಿಯುವ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಯಾವುದೇ ಹಾನಿಕಾರಕ ನಿಬಂಧನೆಗಳನ್ನು ರದ್ದುಗೊಳಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
