ಅಮೆರಿಕ–ಭಾರತ ವ್ಯಾಪಾರ ಒಪ್ಪಂದ: ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ

ಬಿಜೆಪಿ ನೇತೃತ್ವದ ಸರಕಾರದ ಒಂದು ಲಜ್ಜಾಸ್ಪದ ಶರಣಾಗತಿ: ಸಿಪಿಐ(ಎಂ)

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿವರಗಳು ನಿಧಾನವಾಗಿ ಹೊರಬರುತ್ತಿರುವಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಥಾಕಥಿತ ‘ಮಧ್ಯಂತರ ಒಪ್ಪಂದ’ದಲ್ಲಿ ಅಮೆರಿಕಕ್ಕೆ ವಿಪರೀತ ರಿಯಾಯಿತಿಗಳನ್ನು ನೀಡಿರುವುದು ಸ್ಪಷ್ಟವಾಗುತ್ತಿದೆ. ಈ ರಿಯಾಯಿತಿಗಳು ಭಾರತದ ಅರ್ಥವ್ಯವಸ್ಥೆ, ಕೃಷಿ ಹಾಗೂ ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯನ್ನು ಉಂಟುಮಾಡುವಂತವುಗಳು ಎಂದು ಫೆಬ್ರುವರಿ 8ರಂದು ನೀಡಿರುವ ಹೇಳಿಕೆಯಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಸಾರ್ವಜನಿಕವಾಗಿ ಲಭ್ಯವಿರುವ ಅಪೂರ್ಣ ಮಾಹಿತಿಯ ಪ್ರಕಾರವೂ, ಅಮೆರಿಕದಿಂದ ಆಮದಾಗುವ ಹಣ್ಣುಗಳು, ಹತ್ತಿ, ಮರದ ಕಾಯಿ ಉತ್ಪನ್ನಗಳು, ಸೋಯಾಬೀನ್ ಎಣ್ಣೆ ಹಾಗೂ ಇನ್ನಿತರ ಕೆಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೆ ಯಾವುದೇ ಸುಂಕ (ಶೂನ್ಯ ಸುಂಕ) ವಿಧಿಸುವುದಿಲ್ಲ ಎಂದು ಭಾರತ ಸರ್ಕಾರ ಒಪ್ಪಿಕೊಂಡಿದೆ. ಈ ನಿರ್ಧಾರವು ದೇಶದಾದ್ಯಂತ ಲಕ್ಷಾಂತರ ಸೇಬು ಬೆಳೆಗಾರರು, ಹತ್ತಿ ಮತ್ತು ಸೋಯಾ ರೈತರ ಜೀವನೋಪಾಯಕ್ಕೆ ಭಾರೀ ಹಾನಿ ಉಂಟುಮಾಡಲಿದೆ.

ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ರಾಜ್ಯಗಳ ಸೇಬು ಬೆಳೆಯುವ ರೈತರು ಈಗಾಗಲೇ ನ್ಯೂಜಿಲ್ಯಾಂಡ್ ಮುಂತಾದ ದೇಶಗಳೊಂದಿಗೆ ಈ ಮೊದಲು ಸಹಿ ಹಾಕಿದ ವ್ಯಾಪಾರ ಒಪ್ಪಂದಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಮೆರಿಕದೊಂದಿಗೆ ಮಾಡಿರುವ ಪ್ರಸ್ತುತ ಒಪ್ಪಂದವು ಅವರ ಜೀವನೋಪಾಯಗಳನ್ನು ಇನ್ನಷ್ಟು ನಾಶಗೊಳಿಸುತ್ತದೆ. ಈಗಾಗಲೇ ಹೆಚ್ಚುತ್ತಿರುವ ಲಾಗುವಾಡು ವೆಚ್ಚಗಳು ಮತ್ತು ತೀವ್ರಗೊಳ್ಳುತ್ತಿರುವ ಕೃಷಿ ಸಂಕಷ್ಟದಿಂದ ನರಳುತ್ತಿರುವ ಹತ್ತಿ ರೈತರು ಕೂಡ ಇದೇ ರೀತಿಯ ವಿನಾಶವನ್ನು ಎದುರಿಸಬೇಕಾಗುತ್ತದೆ.

ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕೇತರ ಅಡೆತಡೆಗಳನ್ನು (non-tariff barriers) ತೆಗೆದುಹಾಕಲು ಕೂಡ ಭಾರತ ಸರ್ಕಾರ ಒಪ್ಪಿಕೊಂಡಿದೆ ಎಂಬುದನ್ನು ವರದಿಗಳು ಸೂಚಿಸುತ್ತಿವೆ. ಇದರ ಅರ್ಥವೆಂದರೆ, ಭಾರತೀಯ ರೈತರಿಗೆ ನೀಡಲಾಗುತ್ತಿರುವ ಬೆಂಬಲ ಮತ್ತು ಸಬ್ಸಿಡಿಗಳನ್ನು  ಹಿಂಪಡೆಯಲಾಗುವುದು. ಭಾರತದ ರೈತರನ್ನು ಇದು ಭಾರೀ ಸಬ್ಸಿಡಿಗಳನ್ನು ಪಡೆಯುತ್ತಿರುವ ಅಮೆರಿಕದ ಕೃಷಿ ಉತ್ಪನ್ನಗಳೊಂದಿಗೆ ಸ್ಪರ್ಧೆಗೆ ಒಡ್ಡುತ್ತದೆ ಮತ್ತು ಭಾರತೀಯ ಕೃಷಿ ಇನ್ನಷ್ಟು ಅವ್ಯವಹಾರಿಕವಾಗುವ ಸ್ಥಿತಿಗೆ ತಲುಪುತ್ತದೆ.

ಈ ವ್ಯಾಪಾರ ಒಪ್ಪಂದವು ನಮ್ಮ ಸಾರ್ವಭೌಮತ್ವಕ್ಕೆ ಭಾರೀ ಹೊಡೆತವಾಗಿದೆ, ಏಕೆಂದರೆ ರಷ್ಯಾದಿಂದ ತೈಲ ಖರೀದಿಸುವ ಕುರಿತು ನಮ್ಮ ಧೋರಣೆಯೂ ಸೇರಿದಂತೆ ನಮ್ಮ ಧೋರಣೆಗಳು ಏನಿರಬೇಕು ಎಂಬುದನ್ನು ಅಮೆರಿಕ ನಮಗೆ ಆದೇಶಿಸುವಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವು ಈ ನಿರ್ದೇಶನಗಳ ಪಾಲನೆಯ ಉಸ್ತುವಾರಿಗೆ ಒಂದು  ವ್ಯವಸ್ಥೆಯನ್ನು ಸ್ಥಾಪಿಸುತ್ತದೆ ಮತ್ತು ಅದನ್ನು ಉಲ್ಲಂಘಿಸಿದಲ್ಲಿ ಸುಂಕ ಹೇರುವ ಬೆದರಿಕೆಯನ್ನು ಒಡ್ಡುತ್ತದೆ. ಇದು ಬಿಜೆಪಿಯ ನೇತೃತ್ವದ ಸರ್ಕಾರದ ಒಂದು ಲಜ್ಜಾಸ್ಪದ ಶರಣಾಗತಿಯಾಗಿದೆ ಎಂದು ಪೊಲಿಟ್‍ಬ್ಯುರೊ ವರ್ಣಿಸಿದೆ.

ಅಮೆರಿಕದ ರಕ್ಷಣಾ ಸರಬರಾಜುಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದಕ್ಕೆ ಸರ್ಕಾರ ಬದ್ಧತೆ ತೋರಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಇದು ಭಾರತದ ಸಾಮರಿಕ ಹಿತಾಸಕ್ತಿಗಳಿಗೆ ಹಾನಿಕಾರಕವಾಗಲಿದೆ ಎಂದಿರುವ ಪೊಲಿಟ್‍ಬ್ಯುರೊ, ಈ ಒಪ್ಪಂದದ ಸಂಪೂರ್ಣ ವಿವರಗಳನ್ನು ತಕ್ಷಣವೇ ಸಂಸತ್ತಿನ ಮುಂದೆ ಮಂಡಿಸಬೇಕು ಮತ್ತು ಸಾರ್ವಜನಿಕಗೊಳಿಸಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಛರಿಸಿದೆ. ಭಾರತದ ಕಾರ್ಮಿಕರು, ರೈತರು ಮತ್ತು ಒಟ್ಟಾರೆಯಾಗಿ ಜನಸಾಮಾನ್ಯರ ಹಿತಾಸಕ್ತಿಗಳಿಗೆ ಹಾನಿಕಾರಕವಾಗುವ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸರ್ಕಾರ ತಕ್ಷಣವೇ ತ್ಯಜಿಸುವಂತೆ ಒತ್ತಾಯ ಹಾಕಬೇಕು ಎಂದು ಅದು ಕರೆ ನೀಡಿದೆ.

Leave a Reply

Your email address will not be published. Required fields are marked *