ಭಾರತದ ಒಕ್ಕೂಟ ಸರ್ಕಾರ ಮಂಡಿಸಿರುವ 2026-27 ರ ಆಯ-ವ್ಯಯ ಕರ್ನಾಟಕದ ಜನತೆಯ ನಿರೀಕ್ಷೆಗೆ ತಣ್ಣೀರೆರಚಿದೆ. ಕಳೆದ ಹಲವಾರು ವರ್ಷಗಳಿಂದ ಸತತ ಕೇಳುತ್ತಲೇ ಬಂದಿರುವ ರಾಜ್ಯದ ಅಭಿವೃದ್ಧಿಗೆ ಅತೀ ಅಗತ್ಯವಾಗಿರುವ ಯೋಜನೆಗಳಿಗೆ ಅನುದಾನ, ಅಂಗೀಕಾರ ನೀಡದೇ ನಿರ್ಲಕ್ಷಿಸಿರುವುದು ವಿಷಾದನೀಯ. ಬಜೆಟ್ ಪೂರ್ವದಲ್ಲಿ ರಾಜ್ಯ ಸರ್ಕಾರ ಮಾಡಿದ ಮನವಿಗೂ ಕೇಂದ್ರ ಸರ್ಕಾರ ಬೆಲೆ ನೀಡಿಲ್ಲ. ರಾಜ್ಯದ ಅಭಿವೃದ್ದಿಗೆ ಅನುದಾನ ನೀಡಿಕೆಯಲ್ಲೂ ತಾರತಮ್ಯ ಎಸಗಲಾಗಿದೆ. ಹಿಂದಿನಂತೆಯೇ ಈ ಬಾರಿಯೂ ಬಿಜೆಪಿ- ಅಥವಾ ಬಿಜೆಪಿ ಮೈತ್ರಿಯ ಎನ್.ಡಿ.ಎ. ಭಾಗೀದಾರ ಪಕ್ಷಗಳ ಆಡಳಿತದ ರಾಜ್ಯಗಳಿಗೆ ಹೆಚ್ಚಿನ ಪುರಸ್ಕಾರ ನೀಡಿದೆ. ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ. ವಿಶೇಷವಾಗಿ, ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂಬ ಕೂಗು ಮತ್ತೇ ಕೇಳಿ ಬಂದಿರುವುದು ಈ ಹಿನ್ನೆಲೆಯಲ್ಲೇ. ಮೇಲಾಗಿ ಬಿಜೆಪಿಯನ್ನು ತಿರಸ್ಕರಿಸಿರುವ ರಾಜ್ಯಗಳ ಜನತೆಯ ಮೇಲೆ ರಾಜಕೀಯ ಸೇಡನ್ನು ತೀರಿಸಿಕೊಂಡಂತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಸರ್ಕಾರದ ಹೇಳಿಕೆ ಬಾಯಿ ಚಪಲದ ಮಾತಾಗಿದೆ.
ಕರ್ನಾಟಕದ ಸರ್ಕಾರ ತನ್ನ ಪಾಲಿಗೆ ಸಿಗಬೇಕಾದ ತೆರಿಗೆಯ ಪಾಲನ್ನು ನೀಡಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಾ ಬಂದಿತ್ತು. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ. 4.71 ತೆರಿಗೆ ಪಾಲು ನಿರ್ಧರಿಸಲಾಗಿತ್ತು, ಆದರೆ ಅದು ಶೇ. 3.64ಕ್ಕೆ ಇಳಿಸಲಾಗಿದ್ದರಿಂದ ಒಟ್ಟಾರೆ ರಾಜ್ಯಕ್ಕೆ ಸಿಗಬೇಕಾದ ತೆರಿಗೆಯ ಪಾಲಿನಲ್ಲಿ ಶೇ. 23 ರಷ್ಟು ನಷ್ಟವಾಗುತ್ತದೆ ಎಂದು ಸರ್ಕಾರ ಹೇಳಿದೆ. ಅನುದಾನ ನೀಡಿಕೆಯಲ್ಲೂ ರಾಜ್ಯಗಳಿಂದ ರಾಜ್ಯಕ್ಕೆ ಬಹಳ ದೊಡ್ಡ ವ್ಯತ್ಯಾಸ ಇರುವುದು ಕೂಡ ಕಂಡುಬರುತ್ತದೆ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆಯ ಹಣವನ್ನು ಪಾವತಿಸುತ್ತದೆ. ಆದರೆ ರಾಜ್ಯಕ್ಕೆ ದೊರೆಯುತ್ತಿರುವುದು ಒಂದು ರೂಪಾಯಿಯಲ್ಲಿ ಕೇವಲ 14 ಪೈಸೆಯಷ್ಟು ಮಾತ್ರ. ಇಂತಹ ಧೋರಣೆಯಿಂದಾಗಿ ರಾಜ್ಯಗಳು ಅಭಿವೃದ್ದಿ, ಮೂಲ ಸೌಕರ್ಯ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ತೀವ್ರ ಆರ್ಥಿಕ ಕೊರತೆಯನ್ನು ಅನುಭವಿಸುತ್ತಿವೆ. ಹೆಚ್ಚಿನ ಅನುದಾನವೂ ಇಲ್ಲದೇ, ರಾಜ್ಯಗಳ ಮೇಲೆಯೇ ಶೇ. 40 ರಷ್ಟು ಹಣದ ಪಾಲು ನೀಡಬೇಕಾದ ಒತ್ತಡದಿಂದ ಗ್ರಾಮೀಣ ಅಭಿವೃದ್ದಿ ಉದ್ಯೋಗ ಖಾತ್ರಿ ಯೋಜನೆ ಕುಸಿತ ಈ ಬಜೆಟ್ ನ ಬಳಿಕವೂ ತಪ್ಪಿದ್ದಲ್ಲ.
ಕರ್ನಾಟಕ ಸರ್ಕಾರದ 24 ಇಲಾಖೆಗಳ ಪ್ರಸ್ತಾವಗಳು ಹಲವು ವರ್ಷಗಳಿಂದ ಅನುಮೋದನೆ ಹಾಗೂ ಅನುದಾನಕ್ಕೆ ಕಾಯುತ್ತಲೇ ಕುಳಿತಿವೆ. ಇತ್ತೀಚಿಗಿನ 17 ತಿಂಗಳ ಅವಧಿಯಲ್ಲಿ ಅಂಗೀಕಾರ ದೊರೆತಿರುವುದು ಕೇವಲ ಎರಡಕ್ಕೆ ಮಾತ್ರ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶಿಫಾರಸು ಮಾಡಿರುವ ಆರೋಗ್ಯ ಅನುದಾನ ಈಗಲೂ ಎರಡು ವರ್ಷಗಳು ಕಳೆದರೂ ಬಿಡುಗಡೆ ಆಗಿಲ್ಲ. ಜಲಜೀವನ್ ಮಿಷನ್ ಗೆ ಹಂಚಲಾದ 4574 ಕೋಟಿ.ರೂ.ಗಳ ಅನುದಾನವೂ ಬಂದಿಲ್ಲ. ವಿಪತ್ತು ಪರಿಹಾರ ಅನುದಾನಕ್ಕೂ ತಡೆ ಬಿದ್ದಿದೆ. 9 ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಹಣದ ಪಾಲು ಮತ್ತು ಮೂಲ ಸೌಲಭ್ಯಗಳಿಲ್ಲದೆ ಹಿನ್ನಡೆಯನ್ನು ಅನುಭವಿಸುತ್ತಿವೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ಬೆಂಗಳೂರು ಅಭಿವೃದ್ಧಿ, ಮಲೆನಾಡು ಕರಾವಳಿಗೆ ವಿಶೇಷ ನೆರವು ನೀಡಲು ಕೋರಲಾಗಿತ್ತು. ಇದರತ್ತ ಸಹಾಯದ ಹಸ್ತ ನೀಡಲಾಗಿಲ್ಲ. ಬೆಂಗಳೂರು ಅಭಿವೃದ್ಧಿಗೆ 27,093 ಕೋಟಿ ರೂ.ಗಳ ಹಾಗೂ ಉಳಿದೆಡೆಗೂ ಅನುದಾನ ಕೇಳಲಾಗಿತ್ತು. ಕೇಂದ್ರ ಸರ್ಕಾರ ಎಸ್.ಡಿ.ಎಂ.ಎಫ್ ನಿಧಿಯಲ್ಲಿ ಕರ್ನಾಟಕಕ್ಕೆ 5 ವರ್ಷಗಳಲ್ಲಿ 1712 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ ಮಹಾರಾಷ್ಟ್ರಕ್ಕೆ 7,895 ಕೋಟಿ ನೀಡಿರುವುದು ತಾರತಮ್ಯಕ್ಕೆ ಒಂದು ಉದಾಹರಣೆ.
ಬೆಂಗಳೂರು ಮೆಟ್ರೋ ಯೋಜನೆಯ ವಿಸ್ತರಣೆ ಮತ್ತು ಸಬರ್ಬನ್ ರೈಲು ಯೋಜನೆ ಜಾರಿ ಕುರಿತು ಬಜೆಟ್ ನಲ್ಲಿ ಉಲ್ಲೇಖವೇ ಇಲ್ಲ. ಸದ್ಯ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು ಚೆನ್ನೈ ಮಾರ್ಗದಲ್ಲಿ ಹೈ ಸ್ಪೀಡ್ ರೈಲ್ವೆ ನೀಡಿರುವುದನ್ನೆ ಬಂಪರ್ ಕೊಡುಗೆ ಎಂದು ಭಾರತ ಸರ್ಕಾರ ಘೋಷಣೆ ಮಾಡಿದೆ. ರಾಜ್ಯವು ಬೆಂಗಳೂರು-ಮುಂಬೈ, ಬೆಂಗಳೂರು- ಮಂಗಳೂರು, ಬೆಂಗಳೂರು-ಪುಣೆ ಮಾರ್ಗದಲ್ಲಿ ಹೈ ಸ್ಪೀಡ್ ರೈಲಿಗೆ ಬೇಡಿಕೆಯನ್ನು ಇಟ್ಟಿತ್ತು. ಇದಾದಲ್ಲಿ ಕರ್ನಾಟಕ ರಾಜ್ಯದ ಒಳಗೆ ಅತಿ ಹೆಚ್ಚಿನ ಮೈಲುಗಳ ಅಂತರವನ್ನು ಇದು ಒಳಗೊಂಡು ರಾಜ್ಯದ ಜನರಿಗೆ ಪ್ರಯೋಜನ ಹೆಚ್ಚುತ್ತಿತ್ತು.
ರಾಜ್ಯದ ನೀರಾವರಿ ಯೋಜನೆಗಳಿಗೂ ಕೇಂದ್ರ ಸರ್ಕಾರ ಅನುದಾನವನ್ನಾಗಲಿ ಮತ್ತು ಯೋಜನೆಗಳ ಜಾರಿಗೆ ಅನುಮತಿಯನ್ನಾಗಲೀ ನೀಡಿಲ್ಲ. ಮಹದಾಯಿ ಸಮಸ್ಯೆ ಹಾಗೇ ಉಳಿದಿದೆ. ಪರಿಸರ ಇಲಾಖೆ ಯಾವುದೇ ಆದೇಶ ನೀಡಿಲ್ಲ.
ಕೃಷ್ಣ ಮೇಲ್ದಂಡೆ ಯೋಜನೆಗೆ ಸಹಾಯದ ನಿರೀಕ್ಷೆ ಇತ್ತು. ಕೃಷ್ಣಾ ನದಿ ನೀರು ಹಂಚಿಕೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. 2023-24ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯಿಂದ 5300 ಕೋಟಿಗಳ ಅನುದಾನ ಸಿಗಬೇಕಿತ್ತು, ಅದು ಲಭ್ಯವಾಗಿಲ್ಲ. ಮೇಕೆದಾಟು ಯೋಜನೆಗೂ ಅನುಮತಿ ಸಿಕ್ಕಿಲ್ಲ. ಹೀಗೆ ಕರ್ನಾಟಕದ ಕೈಗಾರಿಕೆ, ಕೃಷಿ ಮತ್ತು ಶಿಕ್ಷಣದಂತಹ ಅನೇಕ ರಂಗಗಳಲ್ಲಿನ ಪ್ರಶ್ನೆಗಳು ನೆನೆಗುದಿಗೆ ಬಿದ್ದಿವೆ.
ಕರ್ನಾಟಕದ ಹೆಮ್ಮೆಯ ಸಾರ್ವಜನಿಕ ಉದ್ಯಮವಾಗಿರುವ ಭದ್ರಾವತಿಯ ಶ್ರೀ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ 4000 ಕೋಟಿ ರೂಪಾಯಿಗಳ ಅನುದಾನ ಒದಗಿಸುವಂತೆ ಭಾರೀ ಕೈಗಾರಿಕೆಗಳ ಕೇಂದ್ರ ಮಂತ್ರಿಗಳಾಗಿರುವ ಜೆಡಿಎಸ್ಸಿನ ಎಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಮನವಿ ಮಾಡಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ದೊಡ್ಡ ಪ್ಯಾಕೇಜ್ ನೀಡಿರುವ ಕೇಂದ್ರ ಸರ್ಕಾರ ತನ್ನದೇ ಮಂತ್ರಿಯವರ ಬೇಡಿಕೆಗೆ ಕಿಂಚಿತ್ತು ಬೆಲೆ ನೀಡಿಲ್ಲ. ಹೀಗೆ ಹತ್ತಾರು ಇಲ್ಲವುಗಳನ್ನು ಪಟ್ಟಿ ಮಾಡಬಹುದು.
ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಇಲ್ಲಿನ ಮೂಲಭೂತ ಅಭಿವೃದ್ಧಿ ಮತ್ತು ಪ್ರಗತಿಗೆ ಎಲ್ಲ ರೀತಿಯಿಂದಲೂ ನೆರವನ್ನು ನೀಡಬೇಕಾದದ್ದು ಅದರ ಕರ್ತವ್ಯ. ರಾಜ್ಯಗಳು ಅದರಲ್ಲೂ ಕರ್ನಾಟಕದಂತಹ ವಿವಿಧ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಭಾರತ ದೇಶಕ್ಕೆ ಬಹುಮುಖ್ಯ ಕೊಡುಗೆಗಳನ್ನು ನೀಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಇಲ್ಲಿ ಮೋದಿಯವರ ವಿಕಸಿತ ಭಾರತದ ಮಾತು ಕೇವಲ ಬೊಗಳೆ ಎನ್ನುವುದು ಎದ್ದು ಕಾಣುತ್ತದೆ. ರಾಜ್ಯಗಳಿಗೆ ಈಗಲೂ ತಾರತಮ್ಯದ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರದ ಎದುರು ನ್ಯಾಯಯುತ ಪಾಲಿಗಾಗಿ ರಾಜ್ಯಗಳು ಬಹುದೊಡ್ಡ ರೀತಿಯಲ್ಲಿ ಹೋರಾಟವನ್ನು ನಡೆಸದೆ ಗತ್ಯಂತರವಿಲ್ಲ. ಆ ದೆಸೆಯಲ್ಲಿ ಈ ಸರ್ಕಾರ ಕ್ರಮ ವಹಿಸಬೇಕು.
ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ಸಿನ ಸಂಸದರು ವಹಿಸುತ್ತಿರುವ ಪಾತ್ರ ಅತ್ಯಂತ ನಕಾರಾತ್ಮಕ ಮತ್ತು ಕರ್ನಾಟಕದ ಜನತೆಗೆ ದ್ರೋಹ ಎಸಗುವಂತಹುದು. ಈ ಪಕ್ಷಗಳು ರಾಜ್ಯದ ಜನತೆಯ ಹಿತ, ತಮ್ಮ ಹೊಣೆಗಾರಿಕೆಯನ್ನು ಮರೆತು ಸದಾ ಮೋದಿಯವರ ಗುಣಗಾನದಲ್ಲಿಯೇ ಕಾಲ ಹರಣ ಮಾಡುತ್ತಿರುವುದು ಅತ್ಯಂತ ಖಂಡನೀಯ. ಈ ಪ್ರವೃತ್ತಿಗಳ ವಿರುದ್ಧವು ಜನತೆ ತೀವ್ರವಾಗಿ ಪ್ರತಿಭಟಿಸಬೇಕು. ಕರ್ನಾಟಕದ ಹಿತಕ್ಕೆ, ಸಂವಿಧಾನಾತ್ಮಕ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸಬೇಕಿದೆ.
