ಕಾರ್ಪೊರೇಟ್ ಲೂಟಿಗೆ ಅನುವು ಮಾಡಿಕೊಡುವ ಕಾರ್ಮಿಕ ಸಂಹಿತೆಗಳು, ದೇಶದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ವಿದ್ಯುತ್ ತಿದ್ದುಪಡಿ ಮಸೂದೆ, ರೈತರಿಗೆ ಮಾರಕವಾದ ಬೀಜ ಮಸೂದೆ, ಗ್ರಾಮೀಣ ಕೂಲಿಕಾರರ ಬದುಕನ್ನು ನಾಶ ಮಾಡುವ ವಿಬಿ ಗ್ರಾಮ್ ಜಿ ಕಾಯ್ದೆ, ಮುಂತಾದವುಗಳನ್ನು ರದ್ದು ಮಾಡಬೇಕೆಂದು ಕಾರ್ಮಿಕರು, ರೈತರು ಮತ್ತು ಇತರೆ ದುಡಿಯುವ ಜನರು ಫೆಬ್ರವರಿ 12ರಂದು ನಡೆಸಿದ ಸಾರ್ವತ್ರಿಕ ಮುಷ್ಕರ ಅತ್ಯಂತ ಯಶಸ್ವಿಯಾಗಿದ್ದು, ಇದನ್ನು ಅಭೂತಪೂರ್ವಾಗಿ ಯಶಸ್ಸುಗೊಳಿಸಿದ ಶ್ರಮಜೀವಿ ವರ್ಗಕ್ಕೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಅಭಿನಂದನೆ ಸಲ್ಲಿಸಿದೆ.
ರಾಜ್ಯದ ಹಲವು ಕಡೆಗಳಲ್ಲಿ ಬನ್ ಸ್ವರೂಪದ ಪ್ರತಿಭಟನೆಗಳು ನಡೆದಿದ್ದು, ಜನರ ಪ್ರತಿರೋಧದ ತೀವ್ರತೆಯನ್ನು ಇದು ತೋರಿಸುತ್ತದೆ. ರಾಜ್ಯದಲ್ಲಿ ಲಕ್ಷಾಂತರ ಕೈಗಾರಿಕಾ ಕಾರ್ಮಿಕರು, ರೈತರು, ಕೂಲಿಕಾರರು, ಮಹಿಳೆಯರು, ಬ್ಯಾಂಕ್, ವಿಮೆ ಮುಂತಾದ ಹಣಕಾಸು ವಲಯದ ನೌಕರರು, ವಿದ್ಯಾರ್ಥಿ-ಯುವಜನರು ಇಂದಿನ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ಜನತೆಯ ಆಕ್ರೋಶವನ್ನು ಅರ್ಥ ಮಾಡಿಕೊಂಡು ಜನವಿರೋಧಿ ನೀತಿಗಳನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತು ತೀವ್ರವಾದ ಹೋರಾಟದ ಅಲೆಗಳು ಎದ್ದು ಬರುತ್ತವೆ ಎಂಬುದನ್ನು ಅರಿಯಬೇಕು.
ಪ್ರತಿಭಟನಾಕಾರರ ಬಂಧನ: ಖಂಡನೆ
ರಾಜ್ಯದಲ್ಲಿ ಅತ್ಯಂತ ಶಾಂತಿಯುತವಾಗಿ ನಡೆದ ಮುಷ್ಕರವನ್ನು ಹತ್ತಿಕ್ಕಲು ಸರ್ಕಾರ ಪೊಲೀಸರನ್ನು ಬಳಸಿ ಹಲವಾರು ಕಡೆಗಳಲ್ಲಿ ಬಂಧನಗಳನ್ನು ಮಾಡಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಮೆರವಣಿಗೆ, ಧರಣಿ, ಮುಂತಾದ ಶಾಂತಿಯುತ ಪ್ರತಿಭಟನೆಗಳಿಗೂ ಅವಕಾಶ ಕೊಡದೆ ಅತಿರೇಕದ ಕ್ರಮಗಳಿಗೆ ಮುಂದಾದ ರಾಜ್ಯ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸಿದೆ.
