ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಎಸ್‍ಐಆರ್ ಅನ್ನು ಕೈಬಿಡಬೇಕು

ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯವರ ಪತ್ರ

ಪ್ರಸ್ತುತ ಎಸ್‍ಐಆರ್ ನ ರೀತಿ, ಸಮಯ ಮತ್ತು ವಿಧಾನ ಸ್ಥಾಪಿತ ಕಾನೂನು ಈ ಹಿಂದಿನ ಆಚರಣೆ ಹಾಗೂ ಸಂವಿಧಾನಿಕ ತತ್ವಗಳಿಂದ ಬಹು ದೂರ ಹೋಗಿದೆ. ಒಂದು ವಾಡಿಕೆಯ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಪ್ರಕ್ರಿಯೆಯಾಗಿರಬೇಕಾದ ಇದು ಈಗ ಗೊಂದಲಗ್ರಸ್ತ, ಬೇಕಾಬಿಟ್ಟಿ ಮತ್ತು ಹೊರಗಿಡುವ ಕ್ರಮವಾಗಿ ಪರಿಣಮಿಸಿದ್ದು, ಮತದಾರರ ಪಟ್ಟಿಗಳ ಸಮಗ್ರತೆಗೂ ಹಾಗೂ ಮತದಾನದ ಮೂಲಭೂತ ಹಕ್ಕಿಗೂ ಬೆದರಿಕೆಯೊಡ್ಡಿದೆ. ಇದು ಜನತೆಯ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿದೆ. ಮತದಾನದ ಹಕ್ಕು ನಮ್ಮ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಅದರ ಸಾರ್ವತ್ರಿಕ ಮತ್ತು ಸಮಾನ ಚಲಾವಣೆಗೆ ಹಾನಿಯುಂಟು ಮಾಡುವ ಯಾವುದೇ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು  ಗಂಭೀರವಾಗಿ ಮರುಪರಿಶೀಲಿಸಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ  ಎಂ.ಎ. ಬೇಬಿ ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಫೆಬ್ರುವರಿ 10ರಂದು ಬರೆದ ಪತ್ರ ಬರೆದು ಒತ್ತಾಯಿಸಿದ್ದಾರೆ.

ಅವರ ಪತ್ರದ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:

ಮಾನ್ಯರೇ,

ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ  (ಎಸ್‍ಐಆರ್‍) ಕುರಿತು ನಮ್ಮ ಗಂಭೀರ ಆತಂಕವನ್ನು ವ್ಯಕ್ತಪಡಿಸುತ್ತಾ ನಾವು ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತಿದ್ದೇವೆ.

ಮತದಾರರ ಪಟ್ಟಿಗಳ ನಿಯತಕಾಲಿಕ ಪರಿಷ್ಕರಣೆ ಒಂದು ವಾಡಿಕೆಯ ಮತ್ತು ಅಗತ್ಯವಾದ ಪ್ರಜಾಪ್ರಭುತ್ವ ಕ್ರಮವೆಂಬುದನ್ನು ನಾವು ಗುರುತಿಸುತ್ತೇವೆ. ಆದರೆ ಪ್ರಸ್ತುತ ಎಸ್‍ಐಆರ್ ನ ರೀತಿ, ಸಮಯ ಮತ್ತು ವಿಧಾನ ಸ್ಥಾಪಿತ ಕಾನೂನು, ಈ ಹಿಂದಿನ ಆಚರಣೆ ಹಾಗೂ ಸಂವಿಧಾನಿಕ ತತ್ವಗಳಿಂದ ತೀವ್ರವಾಗಿ ವಿಚಲಿತಗೊಂಡಿದೆ. ಒಂದು ವಾಡಿಕೆಯ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಪ್ರಕ್ರಿಯೆಯಾಗಿರಬೇಕಾದ ಇದು ಈಗ ಗೊಂದಲಗ್ರಸ್ತ , ಬೇಕಾಬಿಟ್ಟಿ ಮತ್ತು ಹೊರಗಿಡುವ ಕ್ರಮವಾಗಿ ಪರಿಣಮಿಸಿದ್ದು, ಮತದಾರರ ಪಟ್ಟಿಗಳ ಸಮಗ್ರತೆಗೂ ಹಾಗೂ ಮತದಾನದ ಮೂಲಭೂತ ಹಕ್ಕಿಗೂ ಬೆದರಿಕೆಯೊಡ್ಡಿದೆ.

ಅವಾಸ್ತವಿಕ ಸಮಯ-ಚೌಕಟ್ಟು

ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿಯಿರುವ ಸಂದರ್ಭದಲ್ಲಿ, ಅವಾಸ್ತವಿಕವಾಗಿ ಕುಗ್ಗಿಸಿದ ಕಾಲಾವಧಿಯೊಳಗೆ ಒಂದು ವಿಸ್ತ್ರತ  ಮತ್ತು ಒಳಹೊಕ್ಕುವ ಪರಿಷ್ಕರಣೆ ನಡೆಸುವುದು ಚುನಾವಣಾ ವಾತಾವರಣವನ್ನು ಹಾಳುಮಾಡುವುದಷ್ಟೇ ಅಲ್ಲದೆ, ಭಾರೀ ಪ್ರಮಾಣದಲ್ಲಿ ದೋಷಗಳು ಮತ್ತು ಹೆಸರುಗಳನ್ನು ಕೈಬಿಡುವ ತಪ್ಪುಗಳು ಸಂಭವಿಸುವ ಅಪಾಯದಿಂದ ಕೂಡಿದೆ.

ಈ ಕಸರತ್ತಿನಿಂದಾಗಿ, ವರದಿಗಳು ಸೂಚಿಸುವ ಪ್ರಕಾರ, ಅನೇಕ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒಗಳು) ಒತ್ತಡಕ್ಕೆ ಬಲಿಯಾಗಿ ದುರದೃಷ್ಟವಶಾತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಅನೇಕ ಮತದಾರರು ಸಹ ತೀವ್ರ ಆತಂಕದಿಂದ ಅದೇ ದಾರಿ ಹಿಡಿಯುವಂತಹ  ಸಂಕಟವನ್ನು ಇದು ಸೃಷ್ಟಿಸಿದೆ.

ಸಮಾಲೋಚನೆಯ  ಕೊರತೆ: ನಾವು ಸಲ್ಲಿಸಿದ ನಮ್ಮ ಮೊದಲ ಮನವಿಯಲ್ಲೇ ಸೂಚಿಸಿದಂತೆ, ಈ ಕಸರತ್ತನ್ನು ಆರಂಭಿಸುವ ಮೊದಲು ನಮ್ಮ ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಮಾನ ಹಿತಾಸಕ್ತಿಯನ್ನು ಹೊಂದಿರುವ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ

ಮತದಾರರ ಮೇಲೆ ಹೊರೆ: ಸಾಮಾನ್ಯವಾಗಿ ಅನರ್ಹ ಮತದಾರರನ್ನು ಗುರುತಿಸಿ ತೆಗೆದುಹಾಕುವ ಜವಾಬ್ದಾರಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒಗಳು) ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‍ಒಗಳು) ಮೇಲಿದೆ ಎಂಬುದನ್ನು ಮತ್ತೊಮ್ಮೆ ಹೇಳಬೇಕಾಗಿದೆ. ಈಗಾಗಲೇ ನೋಂದಾಯಿತ ಮತದಾರರು ತಮ್ಮ ಅರ್ಹತೆಯನ್ನು ತಾವೇ ಸಾಬೀತುಪಡಿಸಬೇಕೆಂಬ ಹೊರೆ ಹಾಕುವುದು, ವಿಫಲವಾದಲ್ಲಿ ಅವರ ಹೆಸರುಗಳನ್ನು ತೆಗೆದುಹಾಕುವ ಬೆದರಿಕೆ ನೀಡುವುದು ಬೇಕಾಬಿಟ್ಟಿ ಕ್ರಮವಾಗುತ್ತದೆ, ಕಾನೂನುಬಾಹಿರ ಮತ್ತು ಸ್ಥಾಪಿತ ವಿಧಾನಗಳಿಗೆ ವಿರುದ್ಧವಾಗಿದೆ.

ಜಾರಿಗೆ ಸಂಬಂಧಿಸಿದ ಅನುಭವ

ಬಿಹಾರದಲ್ಲಿ ಮೊದಲು ಹಾಗೂ ಪ್ರಸ್ತುತ ಈ ಕ್ರಮ ನಡೆಯುತ್ತಿರುವ ಇತರ ರಾಜ್ಯಗಳಲ್ಲಿ ಜಾರಿಯ ವೇಳೆ ಹಲವು ಸಮಸ್ಯೆಗಳು ಎದುರಾದವು. ಅತಾರ್ಕಿಕ ದಾಖಲೆಗಳ ಪುರಾವೆಗಳನ್ನು ಕೇಳಿರುವುದಲ್ಲದೆ, ಗಣನೆ ನಮೂನೆಗಳ ವಿತರಣೆಯಲ್ಲಿ ವಿಳಂಬ, ಪರ್ಯಾಯ ವಿಧಾನಗಳ ಅರಿವಿನ ಕೊರತೆ, ಡಿಜಿಟಲ್ ಸೌಲಭ್ಯಗಳ ಲಭ್ಯತೆ ಸೀಮಿತವಾಗಿರುವುದು ಅಥವಾ ಲಭ್ಯವಿಲ್ಲದಿರುವುದರಿಂದಾಗಿ ಹಲವರನ್ನು ಪಟ್ಟಿಯಿಂದ ಹೊರಹಾಕಿದಂತಾಗಿದೆ. ಗ್ರಾಮೀಣ ಪ್ರದೇಶಗಳ ಮಹಿಳೆಯರು ಸೇರಿದಂತೆ ಅಂಚಿಗೆ ತಳ್ಳಲ್ಪಟ್ಟವರು ಮತ್ತು ಅಲ್ಪಸಂಖ್ಯಾತರ ಮೇಲೆ ಇದು ಪ್ರಮಾಣ ಮೀರಿ ದುಷ್ಪರಿಣಾಮ ಬೀರಿದೆ.

ಬಿಹಾರದಲ್ಲಿ ಜನಸಂಖ್ಯೆಯೊಂದಿಗೆ ಹೋಲಿಸಿದಾಗ ಮತದಾರರ ಪ್ರಮಾಣ ಕಡಿಮೆಯಾಗಿರುವುದನ್ನು ನಾವು ಕಂಡಿದ್ದೇವೆ; ಇದೇ ಸ್ಥಿತಿ ಇತರ ರಾಜ್ಯಗಳಲ್ಲಿಯೂ ಮರುಕಳಿಸುವ ಭೀತಿ ನಮಗಿದೆ.

ಅಸ್ಸಾಂ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ, ಕೆಲವರಿಂದ ನೂರಾರು ಫಾರ್ಮ್ 7ರ ದುರುಪಯೋಗದ ಘಟನೆಗಳು ಬಹಿರಂಗಕ್ಕೆ ಬಂದಿವೆ.

ಎಸ್‍ಐಆರ್‍ ನ ವಿನ್ಯಾಸ ಮತ್ತು ಜಾರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಇದು ಪ್ರಸ್ತಾಪಿತ ಎನ್‍.ಆರ್.ಸಿ. ಕ್ರಮವನ್ನು ಬಹಳಷ್ಟು ಹೋಲುವಂತಿರಬಹುದು ಹಾಗೂ ಕೆಲವು ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು  ದಾರಿಮಾಡಿ ಕೊಡಬಹುದು ಎಂಬ ನಮ್ಮ ಆತಂಕ ಈಗ ನಿಜವಾಗುತ್ತಿದೆ.

ರಾಜ್ಯವಾರು ನಿರ್ದಿಷ್ಟ ಅನುಭವಗಳು

ಅಸ್ಸಾಂ: ಅಸ್ಸಾಂನಲ್ಲಿ, ಚುನಾವಣಾ ಫೋಟೋ ಗುರುತಿನ ಚೀಟಿ (ಎಪಿಕ್) ಮತ್ತು ಮೊಬೈಲ್ ಸಂಖ್ಯೆಗಳ ದುರುಪಯೋಗದ ಮೂಲಕ ಮೂರನೇ ವ್ಯಕ್ತಿಗಳಿಂದ ಸಾಮೂಹಿಕ ಆಕ್ಷೇಪಣೆಗಳನ್ನು ಸಲ್ಲಿಸಿ ಫಾರ್ಮ್ 7 ದುರುಪಯೋಗವಾಗುತ್ತಿರುವುದು ವರದಿಯಾಗಿವೆ. ಶ್ರೀಭೂಮಿ (ಕರಿಮ್ಗಂಜ್) ಜಿಲ್ಲೆಯಂತಹ ಸ್ಥಳಗಳಲ್ಲಿ ಒಬ್ಬನೇ ವ್ಯಕ್ತಿ ನೂರಾರು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ರಾಜಕೀಯದ ಮಂದಿ ಬಂಗಾಲಿ ಭಾಷಿಕ ಮುಸ್ಲಿಂ ಮತದಾರರಿಗೆ ಕಿರುಕುಳ ಕೊಟ್ಟಿರುವ ಹಾಗೂ ಬಿಎಲ್‍ಒ ಗಳ ಮೇಲೆ ಒತ್ತಡಗಳ ಕುರಿತು ಮಾಧ್ಯಮ ವರದಿಗಳು ಮತ್ತು ಆರೋಪಗಳೂ ಕೇಳಿಬಂದಿವೆ.

ಕೇರಳ: ಕೇರಳದಲ್ಲಿ ತಪ್ಪಾಗಿ ತೆಗೆದುಹಾಕಲ್ಪಟ್ಟ ಮತದಾರರು ಫಾರ್ಮ್ 6 ಮೂಲಕ ಪುನಃ ಅರ್ಜಿ ಸಲ್ಲಿಸಲು ಬಾಧ್ಯರಾಗುತ್ತಿದ್ದಾರೆ; ಈ ಮೂಲಕ ಅವರ ಹಳೆಯ ಮತದಾರ ಗುರುತು ಚೀಟಿಗಳನ್ನು ಅಮಾನ್ಯಗೊಳಿಸಲಾಗುತ್ತಿದೆ ಮತ್ತು ಅವರದೇನೂ ತಪ್ಪಿಲ್ಲದೆ ಇದ್ದರೂ ಅವರನ್ನು ಹೊಸ ಮತದಾರರೆಂದು ಪರಿಗಣಿಸಲಾಗುತ್ತಿದೆ. ಚುನಾವಣಾ ಆಯೋಗದ ಬಳಿಯಿರುವ 2002ರ ಮೊದಲು ಇದ್ದ ಮತದಾರರ ಪಟ್ಟಿಗಳಲ್ಲಿ ಇರುವ ದೋಷಗಳನ್ನು ಆಧರಿಸಿ 2002ರ ನಂತರ ನೋಂದಾಯಿತರಾದವರ ವಿರುದ್ಧ ನೋಟಿಸ್ ನೀಡಲಾಗುತ್ತಿದೆ. ಫಾರ್ಮ್ 6, 6A ಮತ್ತು 8 ರ ಅಸಾಮಾನ್ಯ ಪ್ರಮಾಣದ ಅರ್ಜಿಗಳು, ದೊಡ್ಡ ಪ್ರಮಾಣದ ಕ್ಷೇತ್ರ ಬದಲಾವಣೆಗಳು ಹಾಗೂ ದತ್ತಾಂಶ ಪ್ರಕಟಣೆಯಲ್ಲಿ ಪಾರದರ್ಶಕತೆಯ ಕೊರತೆ ಗಂಭೀರ ಆತಂಕಗಳನ್ನು ಉಂಟುಮಾಡಿದೆ.

ತಮಿಳುನಾಡು: ತಮಿಳುನಾಡಿನಲ್ಲಿ ಮೂಲ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ; “ಮೃತರು” ಅಥವಾ “ಪತ್ತೆಯಾಗದವರು” ಎಂದು ಗುರುತಿಸಲಾದವರ ಸಂಖ್ಯೆ ಸಾಮಾನ್ಯ  ಜನಸಾಂಖ್ಯಿಕ ಪ್ರವೃತ್ತಿಗಳನ್ನು ಮೀರುವಷ್ಟು ಹೆಚ್ಚಾಗಿದೆ. ಸರಿಯಾದ ನೋಟಿಸ್ ನೀಡಲಾಗುತ್ತಿಲ್ಲ; ಹೆಸರುಗಳನ್ನು ಹುಡುಕಬಹುದಾದ ಪಟ್ಟಿಗಳು ಲಭ್ಯವಿಲ್ಲ; ಪರಿಶೀಲನೆಗಾಗಿ ರಾಜಕೀಯ ಪಕ್ಷಗಳಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿಲ್ಲ. ವಿವಾಹಿತ ಮಹಿಳೆಯರು, ಬಾಡಿಗೆದಾರರು ಮತ್ತು ಸ್ಥಳಾಂತರಿತರು ಅತಿಯಾಗಿ ಬಾಧಿತರಾಗಿದ್ದಾರೆ.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಲದಲ್ಲಿ ಪರೀಕ್ಷಿಸದ ಮತ್ತು ಅಪಾರದರ್ಶಕ ಸಾಫ್ಟ್‌ವೇರ್ ಬಳಸಿದ್ದರಿಂದ “ತಾರ್ಕಿಕ ವ್ಯತ್ಯಾಸಗಳು” ಇರುವ ಮತದಾರರು ಎಂದು ಹೇಳಿ, ಅವರಿಗೆ ಸಾಮೂಹಿಕ ಸ್ವಯಂಚಾಲಿತ ನೋಟಿಸ್‌ಗಳನ್ನು ಹೊರಡಿಸಲಾಗುತ್ತಿವೆ. ಇದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ನೀಡಿದ ವಿವರಗಳಿಗೆ ವಿರುದ್ಧವಾಗಿದೆ. ಸುಮಾರು 1.5 ಕೋಟಿಗೂ ಹೆಚ್ಚು ಮತದಾರರ ವಿಷಯದಲ್ಲಿ ಅಸಾಧ್ಯ ಕಾಲಮಿತಿಯೊಳಗೆ ಅರೆ-ನ್ಯಾಯಿಕ ತೀರ್ಮಾನಗಳನ್ನು ಕೈಗೊಳ್ಳಲು ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಚುನಾವಣಾ ಆಯೋಗದ ನಿಯಮಿತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೈಕ್ರೋ-ಪರಿವೀಕ್ಷಕರೆಂಬುವರ ನೇಮಕಾತಿಯ ಮೂಲಕ ಸಮಾಂತರ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‍ಐಆರ್ ಅತ್ಯಂತ ವಿವಾದಾತ್ಮಕವಾಗಿದ್ದು, ದೊಡ್ಡಸಂಖ್ಯೆಯಲ್ಲಿ ವಿವಿಧ ಜನವಿಭಾಗಗಳು ಭಯಭೀತ ಸ್ಥಿತಿಯನ್ನು ಅನುಭವಿಸುತ್ತಿವೆ; ಅನೇಕ ಮತದಾರರು ಈ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ.

ಕಾನೂನು ಸಂಬಂಧಿತ ಆತಂಕಗಳು

ಮತದಾರರ ನೋಂದಣಿಗೆ ನಾಗರಿಕತ್ವ ಪೂರ್ವ-ಷರತ್ತಾಗಿದ್ದರೂ, ಅದರ ನಿರ್ಧಾರವು ಭಾರತದ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಎಸ್‍ಐಆರ್ ಹೆಸರಿನಲ್ಲಿ ನಾಗರಿಕತ್ವ ನಿರ್ಧಾರ ಪ್ರಕ್ರಿಯೆಯನ್ನು ಆರಂಭಿಸುವ ಲಕ್ಷಣಗಳು ಕಾಣಿಸುತ್ತಿವೆ. ಅಸ್ಸಾಂ ಮುಖ್ಯಮಂತ್ರಿ ನೀಡಿದ ಹೇಳಿಕೆಗಳು ಈ ಅನುಮಾನಗಳಿಗೆ ಬಲ ನೀಡಿವೆ.

ಜನತಾ ಪ್ರಾತಿನಿಧ್ಯ ಕಾಯ್ದೆ, 1950 ಹಾಗೂ  ಮತದಾರರ ನೋಂದಣಿ ನಿಯಮಾವಳಿಗಳು, 1960 ಪ್ರಕಾರ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಯಮಗಳೇ ಅನ್ವಯವಾಗಬೇಕು. ಅಂದರೆ “ಖಾಲಿ ಪಟ್ಟಿಯಿಂದ” ಪ್ರಾರಂಭಿಸಿ ಸೇರ್ಪಡೆಗಳನ್ನು ಮಾಡಬೇಕು. ಆದರೆ ಪ್ರಸ್ತುತ ಎಸ್‍ಐಆರ್ ಖಾಲಿ ಪಟ್ಟಿಯಿಂದ ಪ್ರಾರಂಭವಾಗುತ್ತಿಲ್ಲ; ಮತ್ತು ವ್ಯವಸ್ಥಿತ ಸೇರ್ಪಡೆಗಳಿಗೂ ಅವಕಾಶ ನೀಡುವುದಿಲ್ಲ; ಬದಲಾಗಿ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ರೂಪಿತವಾಗಿದೆ.

ಹಿಂದಿನ ಕೆಲವು ವರ್ಷಗಳಲ್ಲಿ ವೃದ್ಧರು ಹಾಗೂ ವಿಕಲಾಂಗರಿಗೆ ಮನೆಯಿಂದಲೇ ಮತದಾನ ಮಾಡುವಂತಹ ಕ್ರಮಗಳನ್ನು ಜಾರಿಗೆ ತಂದಿದ್ದರೂ, ಈ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಈ ವಿಭಾಗಗಳ ಮತದಾರರನ್ನು ಅವರ ವಾಸಸ್ಥಳಗಳಿಂದ ಬಹಳ ದೂರದಲ್ಲಿರುವ, ಸುಲಭವಾಗಿ ತಲುಪಲಾಗದ ಕೇಂದ್ರಗಳಿಗೆ ವಿಚಾರಣೆಗಾಗಿ ಕರೆಯಲಾಗುತ್ತಿದೆ.

ಮತದಾನದ ಹಕ್ಕು ನಮ್ಮ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಅದರ ಸಾರ್ವತ್ರಿಕ ಮತ್ತು ಸಮಾನ ಚಲಾವಣೆಗೆ ಹಾನಿಯುಂಟು ಮಾಡುವ ಯಾವುದೇ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು  ಗಂಭೀರವಾಗಿ ಮರುಪರಿಶೀಲಿಸಬೇಕು.

ಮೇಲಿನ ವಿಚಾರಗಳನ್ನು ಪರಿಗಣಿಸಿ, ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಈ ಕ್ರಿಯೆಯನ್ನು ಕೈಬಿಡುವಂತೆ ನಾವು ಮತ್ತೊಮ್ಮೆ ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ.

ಎಂ. ಎ. ಬೇಬಿ

(ಪ್ರಧಾನ ಕಾರ್ಯದರ್ಶಿ)

Leave a Reply

Your email address will not be published. Required fields are marked *