ಎಪ್‌ಸ್ಟೀನ್ ಫೈಲ್ಸ್: ವ್ಯವಸ್ಥಿತ ಅಪರಾಧಗಳ ಕೊಚ್ಚೆಯ ಮಹಾಗಾಥೆ

ಬಂಡವಾಳವು ಈಗಿನ ನವ ಉದಾರವಾದಿ ಅವತಾರಕ್ಕೆ ಬೆಳೆದು ಬಂದಿರುವುದು ಮತ್ತು ಅದರೊಂದಿಗೆ ಕ್ರೋನಿಸಂ ಸೇರಿಕೊಂಡಿರುವುದರಿಂದ ಅಗಾಧ ಅಸಮಾನತೆ ಮತ್ತು ನಿರುದ್ಯೋಗ ಉಂಟಾಗುತ್ತದೆ. ಇದು ವಿನಾಶಕಾರಿ ನವ ಉದಾರವಾದಿ ಸಿದ್ಧಾಂತಕ್ಕೆ ಎಡೆ ಮಾಡಿಕೊಡುತ್ತದೆ ಹಾಗೂ ಅದು ಆರ್ಥಿಕ ಮಾನದಂಡವನ್ನೂ ಮೀರುತ್ತದೆ. ಅನೇಕ ವೀಕ್ಷಕರು ಗುರುತಿಸಿರುವಂತೆ, ಅತಿಯಾದ ಅಸಮಾನತೆಯಿಂದಾಗಿ, ಜಾಗತಿಕ ಪರಭಕ್ಷಕರ ʻಎಪ್‌ಸ್ಟೀನ್ ವರ್ಗಹುಟ್ಟಿಕೊಂಡಿದೆ. ಮೋದಿ ಸರಕಾರದ ಪೆಟ್ರೋಲಿಯಂ ಸಚಿವ ಹಾಗೂ ಉದ್ಯಮಿ ಅನಿಲ್ ಅಂಬಾನಿ, ಪಾತಕಿ ಜೆಫ್ರಿ ಎಪ್‌ಸ್ಟೀನ್ ಜತೆ ಸಂವಹನ ನಡೆಸಿದ್ದಕ್ಕೆ ದಾಖಲೆಗಳಿವೆ. ಸೂಕ್ತ ತನಿಖೆಯಿಲ್ಲದೆ ಅವರ ನಡುವೆ ಏನು ಮಾತುಕತೆ ನಡೆಯಿತು ಮತ್ತು ಅದಕ್ಕೆ ಪ್ರಚೋದನೆ ಏನು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಅಮೆರಿಕದ ನ್ಯಾಯ ಇಲಾಖೆ 2026 ಜನವರಿ 30ರಂದು ಎಪ್‌ಸ್ಟೀನ್ ಫೈಲ್‌ಗಳನ್ನು ಬಿಡುಗಡೆ ಮಾಡಿದಾಗಿನಿಂದ ಅಮೆರಿಕ ಮತ್ತು ಯುರೋಪ್‌ನಾದ್ಯಂತ ಆಕ್ರೋಶದ ಅಲೆ ಎದ್ದಿದೆ. 30 ಲಕ್ಷಕ್ಕೂ ಅಧಿಕ ಇಮೇಲ್ ವಿನಿಮಯಗಳು, ಒಂದು ಲಕ್ಷಕ್ಕೂ ಹೆಚ್ಚು ಫೋಟೋಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವಿಡಿಯೋ ತುಣುಕುಗಳು… ಇವೇ ಮೊದಲಾದವುಗಳು ಸ್ವಯಂಘೋಷಿತ ಹಣಕಾಸು ಸಲಹೆಗಾರ ಮತ್ತು ಅಧಿಕಾರದ ದಲ್ಲಾಳಿ ಜೆಫ್ರಿ ಎಪ್‌ಸ್ಟೀನ್ ಮತ್ತು ಆತನ ನಿಕಟ ಸಹಾಯಕರು ನಡೆಸಿದ ಭಯಾನಕ ಅಪರಾಧಗಳನ್ನು ಅನಾವರಣಗೊಳಿಸುತ್ತವೆ. ಆತನ ಜಾಲ, ಬ್ಲಾಕ್ಮೇಲ್ ಮತ್ತು ಪ್ರಭಾವಶಾಲಿ ಪೆಡ್ಲಿಂಗ್‌ನ ಹೂರಣವನ್ನು ಬಯಲುಗೊಳಿಸುತ್ತದೆ. ನೆರೆಹೊರೆ ಪ್ರದೇಶಗಳಿಂದ ಅಸಹಾಯಕ ಎಳೆಯ ಹುಡುಗಿಯರು, ಅನಾಥರು ಮತ್ತು ನಿರಾಶ್ರಿತರ ಶಿಬಿರಗಳಿಂದ ಅಪಹರಣ ಮತ್ತು ಶೋಷಣೆ ಮೊದಲಾದ ಆರೋಪಗಳನ್ನು ಹೊರಿಸಲಾಗಿದೆ. ಈ ಕರಾಳ ಕಥೆಯು ಎಪ್‌ಸ್ಟೀನ್ ಮೇಲೆ ಅಸಮಾನವಾಗಿ ಗಮನಹರಿಸಿದೆ ಮತ್ತು ಟಾರ್ಗೆಟ್ ಮಾಡಲಾಗಿದೆ ಎನ್ನುವುದು ಸತ್ಯ. ಆದರೆ, ಘಟನಾವಳಿಗಳ ಕಾಲಾನುಕ್ರಮವನ್ನು ನೋಡಿದರೆ ಎಪ್‌ಸ್ಟೀನ್‌ನ ಅಮಾನವೀಯ ಅಪರಾಧಗಳು ವ್ಯಕ್ತಿಗತ ಕೊರತೆಗಳ ಉದಾಹರಣೆಗಳಲ್ಲ ಎನ್ನುವುದು ತುಂಬಾ ಸ್ಪಷ್ಟವಾಗಿದೆ. ವ್ಯವಸ್ಥೆಯ ಪರಿಸರದ ಫಲವಾಗಿಯೇ ಅದು ನಡೆದಿದೆ. ಅನೇಕ ದಶಕಗಳ ಕಾಲ ತಪ್ಪುಗಳು ನಡೆದಿವೆ. ಆರಂಭಿಕ ಚಿಕ್ಕಪುಟ್ಟ ಆರೋಪಗಳಿಂದ ಶುರುವಾಗಿ ಹೈ ಪ್ರೊಫೈಲ್ ಕ್ರಿಮಿನಲ್ ತನಿಖೆವರೆಗೆ ಹಗರಣ ಬೆಳೆದು ನಿಂತಿದೆ. 2008ರಲ್ಲಿ ವಿವಾದಾತ್ಮಕ ಮೇಲ್ಮನವಿಯ ಡೀಲ್ ನಡೆದಿದ್ದು ನಂತರ ಆತನ ಬಂಧನ ಹಾಗೂ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಎನ್ನುವವರೆಗೆ ಅದು ಪಸರಿಸಿದೆ.

1980 ಮತ್ತು 1990ರ ದಶಕಗಳಲ್ಲಿ ಆತ ಮಹಿಳೆಯರು ಮತ್ತು ಬಾಲಕಿಯರನ್ನು ರಫ್ತು ಮಾಡಲು ಆರಂಭಿಸಿದ್ದ ಎಂದು ಹೇಳಲಾಗಿದೆ. 1996ರ ಒಂದು ವರದಿಯ ಪ್ರಕಾರ, ತನ್ನ ಯುವ ಸಹೋದರಿಯರ ಫೋಟೋಗಳನ್ನು ಎಪ್‌ಸ್ಟೀನ್ ಕದ್ದು ಆ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದಾನೆಂದು ಕಲಾವಿದರೊಬ್ಬರು ಎಫ್‌ಬಿಐಗೆ ದೂರಿದ್ದರು. ಆತ 1998ರಲ್ಲಿ ಅಮೆರಿಕದ ವರ್ಜಿನ್ ಐಲ್ಯಾಂಡ್‌ನಲ್ಲಿ ಲಿಟ್ಲ್ ಸೇಂಟ್ ಜೇಮ್ಸ್ ಖಾಸಗಿ ದ್ವೀಪವನ್ನು ಖರೀದಿಸಿದ್ದ. ಇದು ಆತನ ಲೈಂಗಿಕ ಕಳ್ಳಸಾಗಾಣಿಕೆ ಚಟುವಟಿಕೆಗಳ ಕೇಂದ್ರವಾಗಿತ್ತು. ಮುಂದೆ ಎಪ್‌ಸ್ಟೀನ್‌ನ ಮಸಾಜುಗಾತಿಯಾದವಳು 2000ನೇ ಇಸವಿಯಲ್ಲೇ ಲೈಂಗಿಕ ಗುಲಾಮಳಾಗಿದ್ದಳು.‌

ತಪ್ಪಿಸಲ್ಪಟ್ಟ ಮೊದಲ ವಿಚಾರಣೆ

14 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳದ ವರದಿ ಪ್ರಕಟವಾದ ನಂತರ, 2005ರ ಮಾರ್ಚ್ನಲ್ಲಿ ಪಾಮ್ ಬೀಚ್‌ನಲ್ಲಿ ತನಿಖೆಯೊಂದು ಆರಂಭವಾಗಿತ್ತು. 2006ರ ಜುಲೈನಲ್ಲಿ ವೇಶ್ಯೆಯನ್ನು ಬಯಸಿದ್ದ ಆರೋಪದ ಮೇಲೆ ಎಪ್‌ಸ್ಟೀನ್‌ನನ್ನು ಬಂಧಿಸಲಾಗಿತ್ತು. ಅಪ್ರಾಪ್ತ ಬಾಲಕಿಯಿಂದ ವೇಶ್ಯಾ ಸೇವೆ ಬಯಸಿದ್ದು ಹೌದೆಂದು ಫ್ಲೋರಿಡಾದ ಕೋರ್ಟ್ ನಲ್ಲಿ ಎಪ್‌ಸ್ಟೀನ್ ತಪ್ಪೊಪ್ಪಿಕೊಂಡಿದ್ದ. ನಂತರ, ಅಮೆರಿಕದ ಅಟಾರ್ನಿ ಅಲೆಕ್ಸಾಂಡರ್ ಅಕೋಸ್ಟಾ ಜತೆಗೆ ಎಪ್‌ಸ್ಟೀನ್ ಮಾಡಿಕೊಂಡ `ಸ್ವೀಟ್‌ಹಾರ್ಟ್’ ಮನವಿ ಡೀಲ್ (ಪ್ಲೀ ಡೀಲ್) ಆತ ಫೆಡರಲ್ ಸರ್ಕಾರದ ಆರೋಪಗಳನ್ನು ತಡೆಯುವುದಕ್ಕೆ ನೆರವಾಯಿತು. ಆತನಿಗೆ 18 ತಿಂಗಳು ಶಿಕ್ಷೆಯಾಯಿತು.

2011ರಲ್ಲಿ, ವರ್ಜೀನಿಯಾ ಗುಫ್ರೆ (ಹಿಂದಿನ ವರ್ಜೀನಿಯಾ ರಾಬರ್ಟ್ಸ್) ಸಾರ್ವಜನಿಕವಾಗಿ ಕಾಣಿಸಿಕೊಂಡು ತನ್ನನ್ನು ಪ್ರಿನ್ಸ್ ಆಂಡ್ರ್ಯೂಗೆ ಕಳ್ಳಸಾಗಾಟ ಮಾಡಲಾಗಿತ್ತು ಎಂದು ಆರೋಪಿಸಿದ್ದಳು. ಮಿಯಾಮಿ ಹೆರಾಲ್ಡ್ 2018ರ ನವೆಂಬರ್‌ನಲ್ಲಿ ಪ್ರಕಟಿಸಿದ ಸರಣಿ ವರದಿಯು 2008ರ ಪ್ಲೀ ಡೀಲ್‌ನ ವಿವರಗಳನ್ನು ಬಹಿರಂಗಪಡಿಸಿತು. ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ ಕಾನೂನಿನ ಗಮನವನ್ನೂ ಸೆಳೆಯಿತು. ಅಪ್ರಾಪ್ತರನ್ನು ಒಳಗೊಂಡ ಫೆಡರಲ್ ಲೈಂಗಿಕ ಕಳ್ಳಸಾಗಾಟ (ಸೆಕ್ಸ್ ಟ್ರಾಫಿಕಿಂಗ್) ಮತ್ತು ಪಿತೂರಿ ಆರೋಪದ ಮೇಲೆ ನ್ಯೂಯಾರ್ಕ್ ನಲ್ಲಿ 2019ರ ಜುಲೈ 6ರಂದು ಎಪ್‌ಸ್ಟೀನ್‌ನನ್ನು ಬಂಧಿಸಲಾಯಿತು. 2019ರ ಆಗಸ್ಟ್ 10ರಂದು ಎಪ್‌ಸ್ಟೀನ್ ತನ್ನ ಜೈಲಿನ ಸೆಲ್‌ನಲ್ಲಿ ಶವವಾಗಿ ಕಂಡು ಬಂದಿದ್ದ. ಆತ ಅನುಮಾನಾಸ್ಪದ ಸನ್ನಿವೇಶದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು.

ಅವರ ಮರಣದ ನಂತರವೂ…

ಎಪ್‌ಸ್ಟೀನ್‌ನ ಸಾವಿನ ನಂತರವೂ ಅಂತಿಮವಾಗಿ ತೆರೆ ಬಿದ್ದಿರಲಿಲ್ಲ. ಎಪ್‌ಸ್ಟೀನ್‌ನ ಅತ್ಯಾಪ್ತ ಘಿಸ್ಲೇನ್ ಮ್ಯಾಕ್ಸ್ವೆಲ್ ಮೇಲೆ 2021ರಲ್ಲಿ ಸೆಕ್ಸ್ ಟ್ರಾಫಿಕಿಂಗ್ ಆರೋಪ ಹೊರಿಸಲಾಯಿತು ಹಾಗೂ ನಂತರ 20 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಸುದೀರ್ಘ ಕಾನೂನು ಸಮರದ ನಂತರ, ತಪ್ಪುಗಳ ನಿರ್ದಿಷ್ಟ ಆರೋಪಗಳನ್ನು ಉಲ್ಲೇಖಿಸದೆ ಗ್ರಾಹಕರ ಹೆಸರುಗಳುಳ್ಳ ಎಪ್‌ಸ್ಟೀನ್ ಫೈಲ್‌ಗಳನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶಿಸಿತು. ಈ ಹಿನ್ನೆಲೆ ಮತ್ತು ಸುಮಾರು ಒಂದು ಸಾವಿರಕ್ಕೂ ಅಧಿಕ ಸಂತ್ರಸ್ತರು ಮಾಡಿದ ಆರೋಪಗಳಿಂದಾಗಿ ಪ್ರತಿಭಟನೆಯ ಅಲೆ ಎದ್ದಿದ್ದು ಮತ್ತು ಸಾರ್ವಜನಿಕ ಹಿತಾಸಕ್ತಿಯ ಪತ್ರಕರ್ತರು ಮತ್ತು ಇತರ ವಿಭಾಗದವರು ತನಿಖೆಗೆ ಒತ್ತಾಯಪಡಿಸಿದ್ದರಿಂದ ಅಮೆರಿಕದ ಕಾಂಗ್ರೆಸ್ (ಸಂಸತ್ತು) ಎಪ್‌ಸ್ಟೀನ್ ಫೈಲ್ಸ್ ಪಾರದರ್ಶಕತೆ ಕಾನೂನು ಅಂಗೀಕರಿಸುವ ಒತ್ತಡಕ್ಕೆ ಒಳಗಾಯಿತು. ಇದರಿಂದಾಗಿ ಇನ್ನಷ್ಟು ತನಿಖಾ ದಾಖಲೆಗಳನ್ನು ಬಿಡುಗಡೆ ಮಾಡಬೇಕಾಯಿತು.

ಈ ಎಪ್‌ಸ್ಟೀನ್ ಫೈಲ್‌ಗಳು ಇಮೇಲ್, ಭಾವಚಿತ್ರಗಳು ಮತ್ತು ವಿಡಿಯೋ ಕ್ಲಿಪ್‌ಗಳ ದೊಡ್ಡ ಭಂಡಾರದ ಭಾಗಗಳಾಗಿವೆ. ಹಗರಣದಲ್ಲಿ ಒಳಗೊಂಡಿರುವ ಅಮೆರಿಕ ಮತ್ತು ಯುರೋಪ್‌ನ ಆಡಳಿತಾರೂಢ ಪ್ರಭಾವಿಗಳ ಹೆಸರುಗಳು ಅವುಗಳಲ್ಲಿವೆ. ರಾಜಕಾರಣಿಗಳು ಮಾತ್ರವಲ್ಲದೆ ಲ್ಯಾರಿ ಸಮ್ಮರ್ಸ್, ಪೀಟರ್ ಮಂಡೇಲ್ಸನ್‌ ರಂಥ ನೀತಿ ನಿರೂಪಕರು, ರಾಜಮನೆತನದವರು, ಅಕಾಡೆಮಿಯಾ ಮತ್ತು ಬಿಲ್ ಗೇಟ್ಸ್, ಎಲಾನ್ ಮಸ್ಕ್ ಮತ್ತು ರಿಚರ್ಡ್ ಬ್ರಾನ್ಸನ್‌ ರಂಥ ದಿಗ್ಗಜ ಉದ್ಯಮಿ ಮೊದಲಾದವರ ಹೆಸರನ್ನು ಅವು ಒಳಗೊಂಡಿವೆ. ಎಪ್‌ಸ್ಟೀನ್‌ನ ಜಾಲ ಇಷ್ಟೊಂದು ವೈವಿಧ್ಯಮಯ ಹಾಗೂ ಅನೇಕ `ಸೆಲೆಬ್ರಿಟಿಗಳ’ ಜತೆ ಕಾರ್ಯನಿರ್ವಹಿಸಿತ್ತೆನ್ನುವುದು ನಿಜಕ್ಕೂ ಕಂಗೆಡಿಸುವ ವಿಚಾರವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು 1,00,000 ಕ್ಕೂ ಹೆಚ್ಚು ಸಲ ಉಲ್ಲೇಖಗೊಂಡಿದೆ. ಟ್ರಂಪ್ ತನ್ನ `ಅತ್ಯಾಪ್ತ ಮಿತ್ರ’ ಎಂದು ಎಪ್‌ಸ್ಟೀನ್ ವರ್ಣಿಸಿದ್ದಾನೆ. ಎಪ್‌ಸ್ಟೀನ್, ಇಸ್ರೇಲ್ ಮತ್ತು ಮಾಜಿ ಇಸ್ರೇಲಿ ಪ್ರಧಾನಿ ಯಹುದ್ ಬರಾಕ್ ಜತೆಗೆ ಭದ್ರತಾ ಸೂಕ್ಷ್ಮ ಸಂಪರ್ಕವನ್ನೂ ಹೊಂದಿದ್ದ.

ಎಪ್‌ಸ್ಟೀನ್ ಕಡತಗಳನ್ನು ಬಹುತೇಕವಾಗಿ ಅತ್ಯಂತ ಬೆಲೆಬಾಳುವ ಆಸ್ತಿಗಳಲ್ಲಿ ಒಂದಾದ ಎಪ್‌ಸ್ಟೀನ್‌ನ ನ್ಯೂಯಾರ್ಕ್ ಮ್ಯಾನ್ಶನ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಅಲ್ಲಿ ಶಿಸ್ತುಬದ್ಧವಾಗಿ ಜೋಡಿಸಿ ಸಂಗ್ರಹಿಸಿಡಲಾಗಿತ್ತು. ಆದರೆ, ನ್ಯಾಯ ಇಲಾಖೆ ಈಗ ಅವುಗಳನ್ನು ಬಿಡುಗಡೆ ಮಾಡುವುದರೊಂದಿಗೆ ಎಲ್ಲವೂ ಅಯೋಮಯವಾಗಿದೆ. ಇನ್ನೂ ಮಿಲಿಯಗಟ್ಟಲೆ ಪುರಾವೆಗಳನ್ನು ಬಿಡುಗಡೆ ಮಾಡಬೇಕಾಗಿದೆ ಎನ್ನಲಾಗಿದೆ. ಅಮೆರಿಕ ಸಂಸತ್ತಿನ ನ್ಯಾಯ ಕುರಿತ ಸಮಿತಿಯು ಸಾರ್ವಜನಿಕ ವಿಚಾರಣೆಗಳನ್ನು ನಡೆಸುತ್ತಿದೆ. ಪ್ರಮುಖವಾಗಿ, ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬಾಂಡಿ ಮತ್ತು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್‌ರನ್ನು ಅದು ತರಾಟೆಗೆ ತೆಗೆದುಕೊಂಡಿದೆ.

`ಉನ್ನತ ಹಾಗೂ ಪ್ರಭಾವಶಾಲಿಗಳಗುರುತನ್ನು ಅಡಗಿಸಲಾಗಿದೆ

ವಿಳಂಬಗೊಳಿಸಲು ಮತ್ತು ತಪ್ಪುಗಳು ಹಾಗೂ ಕ್ರಿಮಿನಲ್ ಸಂಪರ್ಕಗಳನ್ನು ಮುಚ್ಚಿಹಾಕಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎನ್ನುವುದು ಈ ಎಲ್ಲ ಪ್ರಕ್ರಿಯೆಗಳಿಂದ ಗೊತ್ತಾಗುತ್ತದೆ. ಅಲ್ಲದೆ, ಈಗ ಬಿಡುಗಡೆಯಾಗಿರುವ ಸಾಕ್ಷ್ಯಗಳು ಪೂರ್ಣ ಸತ್ಯವನ್ನು ಹೊರತರಲು ಸಮರ್ಥವಲ್ಲ ಎನ್ನುವುದು ಕೂಡ ಸ್ಪಷ್ಟವಾಗಿದೆ. ಸಂತ್ರಸ್ತರ ಗುರುತುಗಳನ್ನು ಕೂಡ ಬಹಿರಂಗಪಡಿಸಲಾಗಿದೆ; ಆದರೆ, `ಉನ್ನತ ಹಾಗೂ ಪ್ರಭಾವಶಾಲಿಗಳ’ ಗುರುತನ್ನು ಅಡಗಿಸಲಾಗಿದೆ. ಮುಖ್ಯವಾಹಿನಿ ಮಾಧ್ಯಮದವರು ಎಪ್‌ಸ್ಟೀನ್ ಮೇಲೆ ಮಾತ್ರವೇ ಗಮನವನ್ನು ಕೇಂದ್ರೀಕರಿಸುತ್ತಿವೆ. ಆತ ಮಾಡಿದ ಕೆಲವು ಒರಟು ಕೆಲಸಗಳಿಗೆ ಮಾತ್ರವೇ ಒತ್ತು ಕೊಟ್ಟು ಭಯಾನಕ ಅಪರಾಧಗಳನ್ನು ಮರೆಮಾಚಲಾಗುತ್ತಿದೆ. ಇಂಥ ಅಗಾಧ ಪ್ರಮಾಣದ ಅಪರಾಧಗಳನ್ನು ಎಸಗಲು ಇದು ಉತ್ತೇಜನಕಾರಿಯಾಗಿದೆ.

ದಾಖಲೆಗಳ ಮೇಲ್ನೋಟದ ಓದು ಕೂಡ ಹಗರಣದ ವ್ಯವಸ್ಥಿತ ಲಕ್ಷಣವನ್ನು ಅನಾವರಣಗೊಳಿಸುತ್ತದೆ. 150 ವರ್ಷಕ್ಕೂ ಹಿಂದೆ, ಕಾರ್ಲ್ ಮಾರ್ಕ್ಸ್ ತಮ್ಮ ಬಂಡವಾಳ (ಕ್ಯಾಪಿಟಲ್) ಕೃತಿಯ ಕೈಗಾರಿಕಾ ಬಂಡವಾಳದ ಉಗಮ ಅಧ್ಯಾಯದಲ್ಲಿ ಹೀಗೆ ಬರೆದಿದ್ದಾರೆ: `ತಲೆಯಿಂದ ಕಾಲಿನವರೆಗೆ ಬಂಡವಾಳ ಹನಿಹನಿಯಾಗಿ ಬರುತ್ತದೆ. ಪ್ರತಿಯೊಂದು ರಂಧ್ರದಿಂದ ರಕ್ತ ಮತ್ತು ಕೊಳೆಯೊಂದಿಗೆ ಬರುತ್ತದೆ’. ಒಬ್ಬ ಕಾರ್ಮಿಕ ಹಾಗೂ ಟ್ರೇಡ್ ಯೂನಿಯನ್ ನಾಯಕ ಟಿ.ಜೆ. ಡನ್ನಿಂಗ್‌ರ ಹೇಳಿಕೆಯನ್ನು ಅದಕ್ಕೆ ಸಮರ್ಥನೆಯಾಗಿ ನೀಡಿದ್ದಾರೆ. ಅಲ್ಲಿ ನೀಡಲಾಗಿರುವ ವರ್ಣನೆಯಿಂದ ಮಾರ್ಕ್ಸ್ ವಾದವು ಸರಿಯೆಂಬುದನ್ನು ಎಪ್‌ಸ್ಟೀನ್ ಫೈಲ್‌ಗಳು ರುಜುಪಡಿಸಿವೆ.

ಬಂಡವಾಳವು ಈಗಿನ ನವ ಉದಾರವಾದಿ ಅವತಾರಕ್ಕೆ ಬೆಳೆದು ಬಂದಿರುವುದು ಮತ್ತು ಅದರೊಂದಿಗೆ ಕ್ರೋನಿಸಂ ಸೇರಿಕೊಂಡಿರುವುದರಿಂದ ಅಗಾಧ ಅಸಮಾನತೆ ಮತ್ತು ನಿರುದ್ಯೋಗ ಉಂಟಾಗುತ್ತದೆ. ಇದು ವಿನಾಶಕಾರಿ ನವ ಉದಾರವಾದಿ ಸಿದ್ಧಾಂತಕ್ಕೆ ಎಡೆ ಮಾಡಿಕೊಡುತ್ತದೆ ಹಾಗೂ ಅದು ಆರ್ಥಿಕ ಮಾನದಂಡವನ್ನೂ ಮೀರುತ್ತದೆ. ಅನೇಕ ವೀಕ್ಷಕರು ಗುರುತಿಸಿರುವಂತೆ, ಅತಿಯಾದ ಅಸಮಾನತೆಯಿಂದಾಗಿ, ಜಾಗತಿಕ ಪರಭಕ್ಷಕರ `ಎಪ್‌ಸ್ಟೀನ್ ವರ್ಗ’ ಹುಟ್ಟಿಕೊಂಡಿದೆ. ಸಾಮಾನ್ಯ ಮಾನವೀಯತೆಗೆ ಕುರುಡಾಗುವಂಥ ಮೌಲ್ಯಗಳಿಗೆ ಅದು ಹಾದಿ ಮಾಡುತ್ತದೆ. ಈ ಧಾರ್ಷ್ಟ್ಯತೆ ಮತ್ತು ಸಂಕುಚಿತ ಮನೋಭಾವದಿಂದಾಗಿ ಅವರು ಕಿಂಚಿತ್ತೂ ಹೊಣೆಗಾರಿಕೆಯನ್ನು ಹೊಂದದಂತೆ ಮಾಡುತ್ತದೆ. ಇಂಥ ಸಿದ್ಧಾಂತವನ್ನು ಕಾರ್ಪೊರೇಟ್ ಮಾಲಿಕತ್ವದ ಮಾಧ್ಯಮ ಮರುಸೃಷ್ಟಿಸುತ್ತದೆ ಹಾಗೂ ಪ್ರಸ್ತುತ ವ್ಯವಸ್ಥೆಯಲ್ಲಿ ಅದು ಸಹಜವೆನ್ನುವಂತೆ ಮಾಡುತ್ತದೆ. ಮಾಧ್ಯಮ ಮಾಲಿಕತ್ವದಲ್ಲಿ ಯಾವುದೇ ಮುಕ್ತ ಮಾರುಕಟ್ಟೆ ಇರಲಾರದು ಮತ್ತು ಮಾಹಿತಿ ಹಾಗೂ ಸಿದ್ಧಾಂತಗಳಲ್ಲಿ ಮುಕ್ತ ಮಾರುಕಟ್ಟೆ ಇರಲಾರದು.

ಮೋದಿ ಸರಕಾರದ ಪೆಟ್ರೋಲಿಯಂ ಸಚಿವ ಹಾಗೂ ಈಗ ಆರೋಪಕ್ಕೆ ಒಳಗಾಗಿರುವ ಉದ್ಯಮಿ ಅನಿಲ್ ಅಂಬಾನಿ, ಪಾತಕಿ ಜೆಫ್ರಿ ಎಪ್‌ಸ್ಟೀನ್ ಜತೆ ಸಂವಹನ ನಡೆಸಿದ್ದಕ್ಕೆ ದಾಖಲೆಗಳಿವೆ. ಸೂಕ್ತ ತನಿಖೆಯಿಲ್ಲದೆ ಅವರ ನಡುವೆ ಏನು ಮಾತುಕತೆ ನಡೆಯಿತು ಮತ್ತು ಅದಕ್ಕೆ ಪ್ರಚೋದನೆ ಏನು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಆದರೆ, ತನ್ನ ಭಯಾನಕ ಅಪರಾಧಗಳನ್ನು ಎಪ್‌ಸ್ಟೀನ್ ಒಪ್ಪಿಕೊಂಡ ಬಹುತೇಕ ಒಂದು ದಶಕದ ನಂತರ; 2014, 2016, 2017 ಮತ್ತು 2019ರಲ್ಲಿ ಅವೆಲ್ಲವೂ ನಡೆದಿದ್ದವು ಎನ್ನುವುದು ಸ್ಪಷ್ಟ. ಸತ್ಯವನ್ನು ಹೊರತರಲು ನಾವು ಪ್ರಯತ್ನಿಸಬೇಕು. ಇಂಥ ಮಾನವ-ವಿರೋಧಿ ಅಪರಾಧಗಳಿಗೆ ಅವಕಾಶ ಕೊಡುವಂಥ ವ್ಯವಸ್ಥಿತ ಮೂಲಸೌಕರ್ಯದ ಜಾಗತಿಕ ಪರಿಣಾಮವನ್ನು ಅಪ್ಪಿಕೊಳ್ಳಬೇಕು.

-ಕನ್ನಡಕ್ಕೆ: ವಿಶ್ವ

(19.07.2026)

Leave a Reply

Your email address will not be published. Required fields are marked *