ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಕ್ರೂರ ಕ್ರಮ: ಸಿಪಿಐ(ಎಂ)

ಟ್ರಂಪ್ ಆಡಳಿತದ ಯುದ್ಧಕೋರ, ಯಜಮಾನಿಕೆಯ ನೀತಿಗಳ ಮುಂದೆ ಸರ್ಕಾರದ ಶರಣಾಗತಿ

ಗೃಹಬಳಕೆ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಗಳ ತೀವ್ರ ಏರಿಕೆಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಗೃಹಬಳಕೆದಾರರಿಗೆ ರೂ. 60 ರಷ್ಟು ಏರಿಕೆ ಉಜ್ವಲ ಯೋಜನೆಯ ಬಡ ಫಲಾನುಭವಿಗಳನ್ನು ಸಹ ಬಿಡುವುದಿಲ್ಲ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ರೂ. 114.50 ರಷ್ಟು ಏರಿಕೆಯನ್ನು ಕೂಡ ಅಂತಿಮವಾಗಿ ಗ್ರಾಹಕರ ಮೇಲೆಯೇ ದಾಟಿಸಲಾಗುತ್ತದೆ. ಇವೆರಡೂ ಒಟ್ಟಾಗಿ ಈಗಾಗಲೇ ನಿರಂತರ ಬೆಲೆ ಏರಿಕೆ ಮತ್ತು ಕುಗ್ಗುತ್ತಿರುವ ನೈಜ ಆದಾಯದಿಂದ ತತ್ತರಿಸುತ್ತಿರುವ ಮಧ್ಯಮ ವರ್ಗ ಮತ್ತು ದುಡಿಯುವ ಜನರ ಮೇಲೆ ಇನ್ನಷ್ಟು ಹೊರೆಗಳನ್ನು ಹೇರುತ್ತವೆ.

ಸಿಲಿಂಡರ್‌ಗಳ ಮೇಲಿನ ತೆರಿಗೆಯಿಂದ ಬರುವ ಆದಾಯವನ್ನು ಬಿಟ್ಟುಕೊಡಲು ನಿರಾಕರಿಸುವುದು  ಈ ಸರ್ಕಾರದ ಜನವಿರೋಧಿ ಸ್ವಭಾವವನ್ನು ಬಯಲಿಗೆ ತರುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಪಶ್ಚಿಮ ಏಷ್ಯಾದ ಸಂಘರ್ಷವನ್ನು ಉಲ್ಲೇಖಿಸುವ ಮೂಲಕ ಈ ಅನಿಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಮೋದಿ ಸರ್ಕಾರದ ಬೂಟಾಟಿಕೆಯ ಪ್ರಯತ್ನವು ಇದರಲ್ಲಿ ತನ್ನ ಸ್ವಂತ ಅಪರಾಧವನ್ನು ಮುಚ್ಚಿ ಹಾಕುವ ಒರಟು ಪ್ರಯತ್ನವಲ್ಲದೆ ಬೇರೇನೂ ಅಲ್ಲ. ವಾಸ್ತವದಲ್ಲಿ, ಇದು ಟ್ರಂಪ್ ಆಡಳಿತದ ಯುದ್ಧಕೋರ ನೀತಿಗಳ ಮುಂದೆ ಸರ್ಕಾರದ ಶರಣಾಗತಿಯನ್ನು ಮತ್ತು ನಮ್ಮ ದೇಶ ಮತ್ತು ಅದರ ಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಅಮೆರಿಕದ ಜಾಗತಿಕ ಯಜಮಾನಿಕೆಯ ಹಿತಾಸಕ್ತಿಗಳನ್ನು ಪೂರೈಸಲು ಅದು ಸಿದ್ಧವಾಗಿರುವುದನ್ನು ಬಿಂಬಿಸುತ್ತದೆ ಎಂದಿರುವ  ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾಡಲಾದ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *