ತಪ್ಪು ಸಮಯದಲ್ಲಿ ಇಸ್ರೇಲ್ ಭೇಟಿ ಮತ್ತು ಪಶ್ಚಿಮ ಏಷ್ಯಾದಲ್ಲಿ ಮಿಲಿಟರಿ ಸಂಘರ್ಷ ಸ್ಫೋಟ

ಹೊಲೊಕಾಸ್ಟ್ ಸಂತ್ರಸ್ತರ ಸ್ಮರಣೆಯಲ್ಲಿ ಭಾಗವಹಿಸಿದ್ದ ಮೋದಿ ಗಾಜಾ ನರಮೇಧದ ಬಗ್ಗೆ ಮೌನ ತಾಳಿದ್ದು ಎಲ್ಲವನ್ನೂ ಹೇಳುತ್ತದೆ. ಗಾಜಾ ನರಮೇಧ ಕುರಿತ ಭಾರತದ ಅಸಮ್ಮತಿಯನ್ನು ಪ್ರಧಾನಿ ಮೋದಿ ವಸ್ತುಶಃ ತಿರುವುಮುರುವು ಮಾಡಿದರು. ಜಗತ್ತಿನಾದ್ಯಂತ ಮಾತ್ರವಲ್ಲದೆ ಸ್ವತಃ ತನ್ನ ಜನರ ವಿಶ್ವಾಸವನ್ನೇ ಕಾಪಾಡಿಕೊಳ್ಳಲು ಹೆಣಗುತ್ತಿರುವ ಇಸ್ರೇಲ್‌ನ ನೆತನ್ಯಾಹು ನಿಲುವನ್ನು ಮೋದಿ ಅಂಗೀಕರಿಸಿದ್ದು ರಾಜತಾಂತ್ರಿಕ ಮೂಲನೀತಿಗೇ ವಿರುದ್ಧವಾಗಿದೆ. ಅದು ಭಾರತದ ಸಂಸ್ಥಾಪಿತ ಸಾಮ್ರಾಜ್ಯಶಾಹಿ ವಿರೋಧಿ ಸಿದ್ಧಾಂತ ಮತ್ತು ಅಲಿಪ್ತ ಪರಂಪರೆಗೇ ಮಹಾಘಾತಕವಾದುದು.

ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ತಪ್ಪಾದ ಸಲಹೆಯಿಂದ ಕೂಡಿದ್ದಾಗಿದ್ದು ಭೇಟಿಯ ಸಮಯ ಕೂಡ ತಪ್ಪಾಗಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆ. ಇದೊಂದು ನೈತಿಕತೆಯ ಪ್ರಶ್ನೆ ಮಾತ್ರವಲ್ಲ; ವಿಶ್ವರಾಜಕಾರಣ (ಜಿಯೋಪಾಲಿಟಿಕ್ಸ್) ಮತ್ತು ರಾಷ್ಟ್ರೀಯ ಕಾರ್ಯತಂತ್ರದ ಪರಿಧಿಯ ಆಚೆಗೂ ಇದು ಹೋಗುತ್ತದೆ. ಗಾಜಾ ನರಹತ್ಯೆಯ ರಾಕ್ಷಸತ್ವವು ಪ್ಯಾಲೆಸ್ತೀನಿ ಜನರು ಮತ್ತು ಗಾಜಾಪಟ್ಟಿಯ ವಿನಾಶದ ಜ್ವಾಲೆಯನ್ನು ಸಂಪೂರ್ಣವಾಗಿ ಆರಿಸಿಲ್ಲ. ಅಲ್ಲದೆ, ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಳ ವಿಸ್ತರಣೆಯು ಎರಡು ರಾಷ್ಟ್ರ ಪರಿಹಾರವನ್ನು ವ್ಯವಸ್ಥಿತವಾಗಿ ಹಾಳುಗೆಡವುತ್ತದೆ. ಕದನ ವಿರಾಮಕ್ಕೆ ಸಹಿ ಹಾಕಿದ್ದರೂ ಅಪಾಯಕಾರಿ ಮಟ್ಟದಲ್ಲಿ ಹತ್ಯೆಗಳು ನಡೆಯುತ್ತಿರುವುದನ್ನು ಜಗತ್ತು ಗುರುತಿಸಿದೆ. ಟ್ರಂಪ್ ನೇತೃತ್ವದ ಶಾಂತಿಮಂಡಳಿಗೆ ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಸಾಧ್ಯವಾಗಿಲ್ಲ ಅಥವಾ ಅದಕ್ಕೆ ಆ ಉದ್ದೇಶವೂ ಇಲ್ಲ. ವಿಶ್ವ ಸಂಸ್ಥೆ ವ್ಯವಸ್ಥೆಯ ಬುಡವನ್ನೇ ಉಧ್ವಸ್ತಗೊಳಿಸುವುದು ಮಂಡಳಿ ಸ್ಥಾಪನೆಯ ಉದ್ದೇಶವಾಗಿದೆ. ಡೊನಾಲ್ಡ್ ಟ್ರಂಪ್‌ರ ಅಧ್ಯಕ್ಷತೆ ಮಾತ್ರವಲ್ಲ, ಪ್ರಕ್ರಿಯೆಯನ್ನು ಮುಂದುವರಿಸುವ ಚುಕ್ಕಾಣಿಯನ್ನು ಇರಾಕ್ ಮೇಲಿನ ಆಕ್ರಮಣದ ಕುಖ್ಯಾತ ಹಾಗೂ ಅತ್ಯಂತ ದ್ವೇಷಿತ ವ್ಯಕ್ತಿ ಟೋನಿ ಬ್ಲೇರ್‌ಗೆ ವಹಿಸಲಾಗಿದೆ. ನೀತಿಪಾಠದಾಚೆಗೂ ನೋಡಿದರೆ, ಭಾರತದ ಕಾರ್ಯತಂತ್ರಾತ್ಮಕ ಹಿತಾಸಕ್ತಿಯು ಪಶ್ಚಿಮ ಏಷ್ಯಾದಲ್ಲಿ ಅಡಕವಾಗಿದೆ. ಹಲವು ಕೊಲ್ಲಿ ರಾಷ್ಟ್ರಗಳು ಮತ್ತು ಇರಾನ್ ಜತೆಗಿನ ಭಾರತದ ಹಿಂದಿನ ನಾಗರಿಕತೆಯ ಸಂಪರ್ಕಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವಂಥದ್ದೇ ಆಗಿದೆ.

ಆಧುನಿಕ ಕಾಲದಲ್ಲಿ, ಭಾರಿ ಸಂಖ್ಯೆಯ ವಲಸೆ ಕಾರ್ಮಿಕರು ಈ ವಲಯದಲ್ಲಿ ಇರುವುದು ಕೂಡ ಅಷ್ಟೇ ವಾಸ್ತವವಾಗಿದೆ. ಪಶ್ಚಿಮ ಏಷ್ಯಾದಲ್ಲಿರುವವರು ಕಳಿಸುವ ದುಡಿಮೆಯ ಹಣವು ಹಲವು ರಾಜ್ಯಗಳ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತದೆ. ಹೊರ್ಮುಜ್ ಜಲಸಂಧಿ ಮೂಲಕ ನಮ್ಮ ದೇಶಕ್ಕೆ ಬಹುತೇಕ ಇಂಧನ ಸರಬರಾಜಾಗುತ್ತದೆ. ಗಾಜಾ ನರಮೇಧದ ಸಮಯದಿಂದ ಆರಂಭಿಸಿ ಜನಾಂಗವಾದಿ (ಝಿಯೋನಿಸ್ಟ್) ಇಸ್ರೇಲ್‌ನ ಕೃತ್ಯಗಳು ಅರಬ್ ಜನರು ಭಾವನಾತ್ಮಕವಾಗಿ ಬೀದಿಗಿಳಿಯಲು ಕಾರಣವಾಗಿದ್ದವು. ಇಸ್ರೇಲ್‌ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೊಲ್ಲಿ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾ ಸರಕಾರಗಳು ಪರಿಣಾಮವನ್ನು ಎದುರಿಸಬೇಕಾಯಿತು. ಅದು ಎಷ್ಟರಮಟ್ಟಿಗಿತ್ತೆಂದರೆ ಅಬ್ರಹಾಂ ಒಪ್ಪಂದಗಳನ್ನೇ ಸ್ಥಗಿತಗೊಳಿಸಲಾಯಿತು. ಈ ಪ್ರತಿರೋಧದ ಮುಂಚೂಣಿಯಲ್ಲಿದ್ದುದು ಇರಾನ್ ಇಸ್ಲಾಮಿಕ್ ಗಣರಾಜ್ಯ ಎಂಬುದು ನಿಸ್ಸಂಶಯ.

ಅಲಿಪ್ತ ಪರಂಪರೆಗೇ ಮಹಾಘಾತಕವಾದುದು

ಈ ಹಿನ್ನೆಲೆಯಲ್ಲಿ ಮೋದಿ ಮತ್ತು ನೆತನ್ಯಾಹು ನಡುವಿನ ಮಧುಚಂದ್ರದಷ್ಟು ಕೆಟ್ಟದ್ದು ಬೇರೊಂದಿರಲಾರದು. ಹೊಲೊಕಾಸ್ಟ್ ಸಂತ್ರಸ್ತರ ಸ್ಮರಣೆಯಲ್ಲಿ ಭಾಗವಹಿಸಿದ್ದ ಮೋದಿ ಗಾಜಾ ನರಮೇಧದ ಬಗ್ಗೆ ಮೌನ ತಾಳಿದ್ದು ಎಲ್ಲವನ್ನೂ ಹೇಳುತ್ತದೆ. ಗಾಜಾ ನರಮೇಧ ಕುರಿತ ಭಾರತದ ಅಸಮ್ಮತಿಯನ್ನು ಪ್ರಧಾನಿ ಮೋದಿ ವಸ್ತುಶಃ ತಿರುವುಮುರುವು ಮಾಡಿದರು. ಜಗತ್ತಿನಾದ್ಯಂತ ಮಾತ್ರವಲ್ಲದೆ ಸ್ವತಃ ತನ್ನ ಜನರ ವಿಶ್ವಾಸವನ್ನೇ ಕಾಪಾಡಿಕೊಳ್ಳಲು ಹೆಣಗುತ್ತಿರುವ ಇಸ್ರೇಲ್‌ನ ನೆತನ್ಯಾಹು ನಿಲುವನ್ನು ಮೋದಿ ಅಂಗೀಕರಿಸಿದ್ದು ರಾಜತಾಂತ್ರಿಕ ಮೂಲನೀತಿಗೇ ವಿರುದ್ಧವಾಗಿದೆ. ಅದು ಭಾರತದ ಸಂಸ್ಥಾಪಿತ ಸಾಮ್ರಾಜ್ಯಶಾಹಿ ವಿರೋಧಿ ಸಿದ್ಧಾಂತ ಮತ್ತು ಅಲಿಪ್ತ ಪರಂಪರೆಗೇ ಮಹಾಘಾತಕವಾದುದು.

ಅಪಾಯದ ಇನ್ನೊಂದು ಕರೆಗಂಟೆ

ಇಸ್ರೇಲ್ ಸಂಸತ್ತು ಕೆಸೆಟ್ ಉದ್ದೇಶಿಸಿ ಮೋದಿ ಮಾಡಿದ ಭಾಷಣವನ್ನು ಇಡೀ ಪ್ರತಿಪಕ್ಷ ಬಹಿಷ್ಕರಿಸಿದ್ದರಿಂದ ಇದು ಸ್ಪಷ್ಟವಾಗುತ್ತದೆ. ಇದಲ್ಲದೆ, ಅಮೆರಿಕ ಮತ್ತು ಭಾರತ ಸಕ್ರಿಯ ಸಹಾಯಕರಾಗಿರುವ ಷಡ್ಭುಜೀಯ ಮೈತ್ರಿಕೂಟವನ್ನು ನೆತನ್ಯಾಹು ಪ್ರತಿಪಾದಿಸಿದ್ದು, ಇಸ್ರೇಲ್ ಮೂಲಕ ಭಾರತಕ್ಕೆ ಗಣನೀಯ ಭದ್ರತಾ ಮತ್ತು ಮಿಲಿಟರಿ ಸರಬರಾಜು ಆಗುವ ಸಂದೇಶ ಸಾರುವ ಅಪಾಯದ ಇನ್ನೊಂದು ಕರೆಗಂಟೆ ಆಗಿದೆ. ಮೋದಿ ಇಸ್ರೇಲ್ ಭೇಟಿಯು ಭಾರತದ ಕಾರ್ಯತಂತ್ರಾತ್ಮಕ ಸ್ವಾಯತ್ತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಯಾವುದೇ ರೀತಿಯಿಂದ ಸಂಬಂಧಿಸಿರಲಿಲ್ಲ ಎನ್ನುವುದನ್ನು ಮೋದಿ-ನೆತನ್ಯಾಹು ನಡುವಿನ ಮಧುಚಂದ್ರ ಮುಚ್ಚಿಡಲು ಸಾಧ್ಯವಿಲ್ಲ. ಅದು ಅಮೆರಿಕದ ಜಿಯೋಪಾಲಿಟಿಕಲ್ ಆಟಾಟೋಪಕ್ಕೆ ಅಧೀನವಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಭಾರತದ ರಾಜಕೀಯ ಬೇಹುಗಾರಿಕೆ ವ್ಯವಸ್ಥೆಯ ವಂಚನೆ

ಇರಾನ್ ವಿರುದ್ಧದ ಆಕ್ರಮಣಕ್ಕೆ ಅಮೆರಿಕ-ಇಸ್ರೇಲ್ ಸನ್ನದ್ಧತೆ ನಡೆಸುತ್ತಿದ್ದುದಕ್ಕೆ ಕುರುಡಾಗಿರುವುದು ಭಾರತದ ರಾಜಕೀಯ ಬೇಹುಗಾರಿಕೆ ವ್ಯವಸ್ಥೆಯ ವಂಚನೆಯಾಗುತ್ತದೆ. ಗಾಜಾದಲ್ಲಿ ನರಮೇಧ ನಡೆಸಿದ ಇಸ್ರೇಲ್‌ನ ರಾಕ್ಷಸೀ ನಡವಳಿಕೆಗೆ ಪ್ರಾದೇಶಿಕ ಪ್ರತಿರೋಧದ ಚುಕ್ಕಾಣಿ ಪಾತ್ರವನ್ನು ಇರಾನ್ ನಿರ್ವಹಿಸಿದೆ. ಇಸ್ರೇಲ್ ಮತ್ತು ಅಮೆರಿಕದ ವಿಶ್ವರಾಜಕೀಯ ಉದ್ದೇಶಗಳ ವಿರುದ್ಧ ದೃಢವಾಗಿ ನಿಲ್ಲಲು ಚೀನಾ ಮತ್ತು ರಷ್ಯಾದೊಂದಿಗೆ ಇರಾನ್ ನಿಕಟ ಬಾಂಧವ್ಯ ಬೆಳೆಸುತ್ತಿದ್ದುದುರಿಂದ ಅದು (ಇರಾನ್) ಅನಿವಾರ್ಯ ಆಕ್ರಮಣದ ಗುರಿಯಾಗುವುದು ಸ್ಪಷ್ಟವಾಗಿತ್ತು.

ಅಮೆರಿಕದ ವಿದೇಶಾಂಗ ನೀತಿಯ ಇಬ್ಬಂದಿತನಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ. ಅದು ಹಿಂದೆಂದಿಗಿಂತಲೂ ಈಗ ಹೆಚ್ಚು ಸ್ಪಷ್ಟವಾಗಿದೆ. ಬಂಡವಾಳವಾದವನ್ನು ಸಮರ್ಥಿಸುವ ಸಮಕಾಲೀನರಲ್ಲಿ ಅನೇಕರು ಲೆನಿನ್ ಮೃತಪಟ್ಟಿದ್ದಾರೆ ಎಂದು ಅತ್ಯುತ್ಸಾಹದಿಂದ ಸಾರುತ್ತಾರೆ. ಆದರೆ, ಸಾಮ್ರಾಜ್ಯಶಾಹಿ ಮತ್ತು ಯುದ್ಧವು ಅವಳಿಜವಳಿ ಎಂಬ ಲೆನಿನ್‌ರ ಅಂದಾಜು ಈಗಲೂ ಹೆಚ್ಚು ಜೀವಂತವಾಗಿದೆ ಮತ್ತು ಸ್ಪಷ್ಟಗೊಳ್ಳುತ್ತಿದೆ. ಈಗ ನಡೆಯುತ್ತಿರುವುದು ಅದಕ್ಕೆ ಬಲವಾದ ಪುರಾವೆಯಾಗಿದೆ.

ಝೀಯೋನಿಸ್ಟ್ ರ ʻಮಹಾ ಇಸ್ರೇಲ್’ ಯೋಜನೆಗೆ ಇರಾನ್‌ನ ಪ್ರತಿರೋಧವನ್ನು ನಿಷ್ಟ್ರಿಗೊಳಿಸಲು ಅಧ್ಯಕ್ಷ ಟ್ರಂಪ್‌ರನ್ನು ಇಸ್ರೇಲ್ ಹಾಡಿಹೊಗಳುತ್ತದೆ. ಅದೇ ವೇಳೆ, ಈ ಪ್ರಮುಖವಾದ ಜಾಗತಿಕ ಕಾರ್ಯತಂತ್ರಾತ್ಮಕವಾದ ವಲಯದಲ್ಲಿ ರಷ್ಯಾ ಮತ್ತು ಚೀನಾದ ಬೆಳೆಯುತ್ತಿರುವ ಪ್ರಭಾವವನ್ನು ಕುಗ್ಗಿಸಿ ತನ್ನ ಏಕಸ್ವಾಮ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದು ಅಮೆರಿಕದ ಬಯಕೆಯಾಗಿದೆ.

`ಶಾಂತಿ ಅಧ್ಯಕ್ಷ’ ಎಂದು ತನ್ನನ್ನು ತಾನು ಟ್ರಂಪ್ ವರ್ಣಿಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಪದೇ ಪದೇ ಹೇಳುವುದು ಮೇಲ್ನೋಟಕ್ಕೇ ಕಾಣಿಸುವಂತೆ ತೀರಾ ಇಬ್ಬಗೆಯ ನಡೆಯಾಗಿದೆ. ಇಸ್ರೇಲ್ ಒಂದು ರಹಸ್ಯ ಅಣ್ವಸ್ತ್ರ ಸಾಮರ್ಥ್ಯ ಹೊಂದಿದೆಯೆನ್ನುವುದು ಬಹಿರಂಗ ರಹಸ್ಯವಾಗಿದೆ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ತಾನು ಯಾವುದೇ ಅಣ್ವಸ್ತ್ರವನ್ನು ತಯಾರಿಸುತ್ತಿಲ್ಲ ಎಂದು ಇರಾನ್ ಬಹಿರಂಗವಾಗಿಯೇ ಘೋಷಿಸಿದ್ದು ಪರೀಕ್ಷಕರಿಗೆ ಮುಕ್ತ ಪರಿಶೀಲನೆಯ ಅವಕಾಶ ಕಲ್ಪಿಸಿದೆ. ಅವರ ಪಾರದರ್ಶಕತೆಯ ಮಟ್ಟದ ಬಗ್ಗೆ ಐಎಇಎ ಒಂದು ಕಠೋರ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಿದ ನಂತರವಷ್ಟೇ ಸಂಘರ್ಷ ಸ್ಫೋಟಗೊಂಡಿತು.

2025ರಲ್ಲಿ ಇರಾನ್‌ನ ಪರಮಾಣು ತಾಣಗಳ ಮೇಲೆ ಭಾರಿ ಬಾಂಬ್ ದಾಳಿ ನಡೆಸಿ ಅವುಗಳನ್ನು ನಾಶ ಮಾಡಲಾಗಿದೆ ಎಂದು ಟ್ರಂಪ್ ಘೋಷಿಸಿದ್ದರು. ಸದ್ಯೋಭವಿಷ್ಯದಲ್ಲಿ ಉತ್ಪಾದನೆ ಸಾಮರ್ಥ್ಯ ಅಸಾಧ್ಯವಾಗುವಂತೆ ನಾಶಪಡಿಸಲಾಗಿದೆ ಎಂದು ಹೇಳಿದ್ದರು.

ಒಮನ್ ಮಧ್ಯಸ್ಥಿಕೆಯೊಂದಿಗೆ ಅಮೆರಿಕದ ಜತೆ ರಾಜತಾಂತ್ರಿಕ ಸಂಧಾನಕ್ಕೆ ಇರಾನ್ ಮುಂದಾಗಿತ್ತು. ಆದರೆ, ಕೊಲ್ಲಿಯಲ್ಲಿ ಮಿಲಿಟರಿ ಜಮಾವಣೆಗಾಗಿ, ಅಮೆರಿಕದ ವೈಮಾನಿಕ ದಾಳಿಯ ಶಕ್ತಿಯನ್ನು ಇರಾನ್‌ನತ್ತ ನಿರ್ದೇಶಿಸಲು ಸಾಕಷ್ಟು ಸಮಯಾವಕಾಶವನ್ನು ಗಳಿಸಲು ನಡೆಸಿದ ವಂಚನೆಯ ತಂತ್ರ ಅದಾಗಿತ್ತು. ಈಗ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆಕ್ರಮಣ ನಡೆಸಿದೆಯೆಂದರೆ ಅದನ್ನು ನಿಖರವಾಗಿ ಯೋಜಿಸಲಾಗಿತ್ತು. ರಾಜತಾಂತ್ರಿಕ ಸಂವಾದದ ಪ್ರಸ್ತಾಪವನ್ನು ನಿರಾಕರಿಸಿತ್ತು ಎನ್ನುವುದು ಸ್ಪಷ್ಟವಾಗಿದೆ. ತನ್ನ ಶಸ್ತ್ರಾಸ್ತ್ರ ಸಂಗ್ರಹವನ್ನು ಗಣನೀಯವಾಗಿ ಕಡಿತಗೊಳಿಸಲು ಮತ್ತು ʼಯಾವತ್ತೂ’ ಬಾಂಬ್ ತಯಾರಿಸುವುದಿಲ್ಲ ಎಂಬುದನ್ನು ಪರಿಶೀಲಿಸುವ ಪ್ರಸ್ತಾಪವನ್ನು ಒಮನ್ ವಿದೇಶಾಂಗ ಸಚಿವರ ಮೂಲಕ ಇರಾನ್ ಮಂಡಿಸಿತ್ತು. ಅದನ್ನೇ ನಿರ್ಲಕ್ಷಿಸಿ ದಾಳಿ ಮಾಡಿರುವುದು ಸ್ಪಷ್ಟವಾಗಿದೆ.

ಮೋದಿ ಭಾರತಕ್ಕೆ ಮರಳಿದ ಕೇವಲ 48 ಗಂಟೆಯೊಳಗೆ ಈ ಬೆಳವಣಿಗೆಗಳು ನಡೆದಿವೆ. ಈ ಮಿಲಿಟರಿ ದುಸ್ಸಾಹಸದಲ್ಲಿ ಭಾರತವೂ ಶಾಮೀಲಾಗಿದೆ ಎನ್ನುವುದು ʼಘಟನಾವಳಿಗಳ ಅನುಕ್ರಮಣಿಕೆ’ಯಿಂದ ಗೊತ್ತಾಗುತ್ತದೆ.

ಇರಾನ್‌ನ ಪ್ರತಿದಾಳಿ

ಅಮೆರಿಕದ ಮಿಲಿಟರಿ ನೆಲೆಗಳು ಇರುವ ಪಶ್ಚಿಮ ಏಷ್ಯದಾದ್ಯಂತ ಇರಾನ್ ಪ್ರತಿದಾಳಿ ನಡೆಸುವುದರೊಂದಿಗೆ ಅಮೆರಿಕದ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ. ಟೆಲ್ ಅವೀವ್ ಸಹಿತ ಇಸ್ರೇಲ್‌ನ ಹಲವು ನಗರಗಳಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿ ವಿಶೇಷವಾಗಿ ಗಮನಾರ್ಹವಾಗಿದೆ.

ಇರಾನ್‌ನ ಪ್ರತಿದಾಳಿಯು ಹೇಡಿತನದ್ದೆಂದು ಅಮೆರಿಕ ಮತ್ತು ಅದರ ಮಿತ್ರ ದೇಶಗಳು ವರ್ಣಿಸುವುದು ವಿರೋಧಾಭಾಸವಾಗಿದೆ. ಅಮೆರಿಕ-ಇಸ್ರೇಲ್ ಆಕ್ರಮಣಕ್ಕೆ ಅವರದ್ದೇ ಆದ ಪ್ರತ್ಯೇಕ ಗುರಿಗಳಿವೆ. ಆದರೆ, ಅಲಿ ಖಮೇನಿ ಸಹಿತ ತನ್ನ ಗಣನೀಯ ನಾಯಕತ್ವವನ್ನು ಹತ್ಯೆ ಮಾಡಿದ ನಂತರ ಇರಾನ್ ತೋರುತ್ತಿರುವ ಪ್ರತಿರೋಧವು ಅಸ್ತಿತ್ವಕ್ಕಾಗಿ ಅನಿವಾರ್ಯವಾಗಿ ನಡೆಸುವ ಹೋರಾಟದಿಂದ ಪ್ರೇರಿತವಾಗಿದೆ.

ಬಹುಪದರದ ಪರ್ಯಾಯ ನಾಯಕತ್ವ ಹಾಗೂ ಪ್ರಾದೇಶೀಕೃತ ಮಿಲಿಟರಿ ಸಂಘರ್ಷದ ಸಾಮರ್ಥ್ಯವನ್ನು ಇರಾನ್ ಸ್ಪಷ್ಟವಾಗಿ ಪ್ರದರ್ಶಿಸಿದೆ. ಭಾರತದ ವಿದೇಶಾಂಗ ನೀತಿಯ ಸ್ವ-ಸೋಲಿನ ಲಕ್ಷಣದ ಹೊರೆಯನ್ನು ಭಾರತೀಯ ಜನರು ಹೊರಬೇಕು. ಭಾರತಕ್ಕೆ ಬಹುತೇಕ ತೈಲ ಸಾಗಿಬರುವ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವುದರಿಂದ ತೈಲ ಬೆಲೆಗಳಲ್ಲಿ ಏಕಾಏಕಿ ಏರಿಕೆಯಾಗಿದೆ.

ಇದು, ಮರಕಡಿಯುವವನೊಬ್ಬ ತಾನು ಕುಳಿತ ರೆಂಬೆಯನ್ನೇ ಕಡಿಯುವ ಕಾಳಿದಾಸನ ಒಂದು ಕಥೆಯನ್ನು ನಮಗೆ ನೆನಪಿಸುತ್ತದೆ. ಭಾರತದ ವಿದೇಶಾಂಗ ನೀತಿಯನ್ನು ಅಮೆರಿಕದ ಕಾರ್ಯತಂತ್ರಾತ್ಮಕ ಆಟಾಟೋಪಕ್ಕೆ ಶರಣುಗೊಳಿಸುವುದರೊಂದಿಗೆ ಈ ಮಧುಚಂದ್ರ ಅಂತ್ಯಗೊಂಡಿದೆ. ಮತ್ತು ತಾನು ʼದಕ್ಷಿಣಾರ್ಧ ಗೋಳ’ದ ನಾಯಕ ಎಂದು ಪದೇ ಪದೇ ಕೊಚ್ಚಿಕೊಳ್ಳುವ ಭಾರತದ ಸ್ಥಾನ ಠುಸ್ಸಾಗಿದೆ. ಮಿಲಿಟರಿ ಸಂಘರ್ಷ ಕೊನೆಗೊಳ್ಳಬೇಕು ಮತ್ತು ಶಾಂತಿ ಮರುಸ್ಥಾಪನೆಯಾಗಬೇಕು ಎಂದು ನಾವು ಸಾಮೂಹಿಕವಾಗಿ ಆಗ್ರಹಿಸಬೇಕು.

ಪೀಪಲ್ಸ್‌ ಡೆಮಾಕ್ರಸಿ ಸಂಪಾದಕೀಯ (05.03.2026)

-ಕನ್ನಡಕ್ಕೆ: ವಿಶ್ವ

Leave a Reply

Your email address will not be published. Required fields are marked *