ಅಮಿತ್ ಶಾ ಸಂವಿಧಾನ ವಿರೋಧಿ ಹೇಳಿಕೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಬರಿಮಲೆ ವಿಷಯದಲ್ಲಿ ಸುಪ್ರಿಂಕೋರ್ಟಿನ ತೀರ್ಪಿನ ಜಾರಿ ವಿಚಾರದಲ್ಲಿ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯಸಮಿತಿ ತೀವ್ರವಾಗಿ ಖಂಡಿಸಿದೆ.

ನಾಸ್ತಿಕರು ಸುಪ್ರಿಂಕೋರ್ಟಿನ ಆದೇಶದ ಅನುಷ್ಠಾನದ ನೆಪದಲ್ಲಿ ಅಯ್ಯಪ್ಪ ಭಕ್ತರ ಮೇಲೆ ಬಲಪ್ರಯೋಗ ಮಾಡುತ್ತಿದೆ ಎಂಬ ಹೇಳಿಕೆಯು ಸುಪ್ರಿಂಕೋರ್ಟ್ ವಿರೋಧಿಯಾಗಿದೆ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂಬ ಹೇಳಿಕೆಯು ಸಂವಿಧಾನ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆ.

ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ಕಲ್ಪಿಸುವ ಸುಪ್ರಿಂಕೋರ್ಟಿನ ತೀರ್ಪಿನ ವಿರುದ್ಧ ಬಿಜೆಪಿ ಗಲಭೆ ಸೃಷ್ಟಿಸಿದರೂ ಕೂಡ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರ ಯಾವುದೇ ಸಾವು-ನೋವು ಉಂಟಾಗದಂತೆ ನೋಡಿಕೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ.

ಆದರೆ ಬಿಜೆಪಿ ಸಂದರ್ಭಸಾಧಕತನ ಅನುಸರಿಸುತ್ತಿದ್ದು ಮಹಾರಾಷ್ಟ್ರದಲ್ಲಿ ಶನಿ ಸಂಗಾಪುರಕ್ಕೆ ಮಹಿಳೆಯರ ಪ್ರವೇಶಕ್ಕೂ ಅವಕಾಶ ನೀಡುವಂತೆ ತೀರ್ಪು ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷವೇ ಸುಪ್ರಿಂಕೋರ್ಟಿನ ತೀರ್ಪನ್ನು ಜಾರಿ ಮಾಡಿ ಕೇರಳದಲ್ಲಿ ವಿರೋಧ ಮಾಡಿ ಗಲಭೆ ಸೃಷ್ಟಿಸಿತ್ತಿರುವುದು ಬಿಜೆಪಿಯ ಇಬ್ಬಂದಿತನವನ್ನು ತೋರಿಸುತ್ತದೆ.

ಕೇರಳ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾಗ ಈ ಬಗ್ಗೆ ಮಾತನಾಡದ ಅಮಿತ್ ಶಾ ಶಬರಿಮಲೆ ತೀರ್ಪಿನ ಸಂದರ್ಭದಲ್ಲಿ ಕೇರಳಕ್ಕೆ ಭೇಟಿ ನೀಡಿ ಗಲಭೆಗೆ ಬೆಂಬಲ ನೀಡುತ್ತಿರುವುದು ಖಂಡನೀಯ.

ಸುಪ್ರಿಂಕೋರ್ಟಿನ ತೀರ್ಪನ್ನು ವಿರೋಧಿಸುತ್ತಿರುವುದು ಸಂವಿಧಾನ ಹಾಗೂ ನ್ಯಾಯಾಂಗ ವಿರೋಧಿ ನೀತಿಯಾಗಿದೆ ಹಾಗೂ ಆ ತೀರ್ಪನ್ನು ವಿರೋಧ ಮಾಡುವ ಮೂಲಕ ಬಿಜೆಪಿ ತನ್ನ ಕೋಮುವಾದಿ ನಗ್ನ ರೂಪವನ್ನು ಪ್ರದರ್ಶಿಸಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕರಾದ ಶ್ರೀರಾಮರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿ.ವಿ. ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *