“ಕನ್ನಡನಾಡು ಇಷ್ಟು ದಿವಸ ಬಡತನದ ಬೀಡಾಗಿತ್ತು. ಸಂಪತ್ತುಗಳಿದ್ದರೂ ಜನತೆಗೆ ಅವು ದೊರೆಯುತ್ತಿರಲಿಲ್ಲ. ಹೋರಾಟಗಳ ಪರಂಪರೆ ಇದ್ದರೂ ಪಾಳೆಯಗಾರರ ಮತ್ತು ಪ್ರತಿಗಾಮಿಗಳ ಪ್ರಭಾವ ನಮ್ಮ ಪ್ರಾಂತದಲ್ಲಿ ಬಲವಾಗಿದೆ. ನಮ್ಮ ನೆರೆ ಹೊರೆಯ ಪ್ರಾಂತದಲ್ಲಿ ಪ್ರಜಾಪ್ರಭುತ್ವ ಶಕ್ತಿಗಳು ಪ್ರಬಲವಾಗಿ ಬೆಳೆದಿವೆ. ಆದರೆ ಕರ್ನಾಟಕದ ಜನತೆಯ ಪ್ರಜಾಪ್ರಭುತ್ವ ಶಕ್ತಿಗಳ ಬಲಹೀನತೆಯಿಂದ ಪ್ರತಿಗಾಮಿಗಳು ಸಮಾಜ ಜೀವನದಲ್ಲಿ ಮೆರೆಯುತ್ತಿದ್ದಾರೆ. ಜನತೆ-ಬಡತನ, ದಾರಿದ್ರ್ಯ, ನಿರುದ್ಯೋಗ, ಅರೆಉಪವಾಸಗಳಲ್ಲಿ ನರಳುತ್ತಿದೆ. ಜನತೆಯ ಸಾಮೂಹಿಕ ಸಂಘಟನೆ ಶಕ್ತಿಗಳನ್ನು ಬಲಪಡಿಸಿ ಕರ್ನಾಟಕದಲ್ಲಿ ಪ್ರಗತಿಗಾಮಿ ಶಕ್ತಿಗಳು ಬೆಳೆಯುವಂತೆ ಮಾಡುವುದು ನಮ್ಮ ಕರ್ತವ್ಯ ಪ್ರಗತಿಗಾಮಿ ಭಾವನೆ ಆರ್ಥಿಕ, ರಾಜಕೀಯ ಸಾಂಸ್ಕೃತಿಕ, ಸಾಮಾಜಿಕ; ಸಾಮಾಜಿಕ ರಂಗಗಳಲ್ಲೆಲ್ಲ ಬೆಳೆಯುವಂತೆ ಮಾಡಲು ನಾವು ದುಡಿಯಬೇಕು.”
ನವೆಂಬರ್ 1, 1956ರಂದು ಕರ್ನಾಟಕ ಉದಯವಾದಾಗ, “ಇಂದು ಕನ್ನಡಿಗರ ಕನಸು ನನಸಾಗಲಿದೆ. ಇದೊಂದು ಅತ್ಯಂತ ಮಹತ್ವದ ಚಾರಿತ್ರಿಕ ದಿನ” ಎಂದು ಸ್ವಾಗತಿಸುತ್ತಲೇ ಕಮ್ಯುನಿಸ್ಟ್ ಪಾರ್ಟಿಯ ಹೇಳಿಕೆ ತನ್ನ ಮತ್ತು ‘ಪ್ರಗತಿಗಾಮಿ ಶಕ್ತಿಗಳ’ ಮುಂದಿರುವ ಸವಾಲು ಹಾಗೂ ಕರ್ತವ್ಯಗಳ ಬಗ್ಗೆ ಹೀಗೆಂದಿತ್ತು. ಆ ವಾರದ ‘ಜನಶಕ್ತಿ’ಯ ಸಂಚಿಕೆಯಲ್ಲಿ ಈ ಭಾಗವನ್ನೊಳಗೊಂಡ ದೀರ್ಘ ಹೇಳಿಕೆ ಪ್ರಕಟವಾಗಿತ್ತು. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕರ್ನಾಟಕದ ಜನತೆ ಪ್ರಜಾಸತ್ತಾತ್ಮಕ, ಜಾತ್ಯತೀತ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಇರುವ ಸಮೃದ್ಧ ಕರ್ನಾಟಕದ ಕನಸು ಕಂಡಿದ್ದರು. ಕರ್ನಾಟಕ ಏಕೀಕರಣದ 60 ವರ್ಷಗಳ ನಂತರ ಅಂದು ಕಮ್ಯುನಿಸ್ಟ್ ಪಾರ್ಟಿ ಗುರುತಿಸಿದ್ದ ಸಮಸ್ಯೆಗಳು-ಸವಾಲುಗಳು ಪರಿಹಾರವಾಗಿವೆಯೇ? ಪರಿಸ್ಥಿತಿ ಬದಲಾಗಿದೆಯೇ? ಕನ್ನಡಿಗರ ಕನಸು ನನಸಾಗಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎಂಬುದೇ ಎಂದು ದುಃಖದಿಂದ ಹೇಳಬೇಕಾಗಿದೆ. 60 ವರ್ಷಗಳ ಹಿಂದೆ ‘ಪ್ರಗತಿಗಾಮಿ ಶಕ್ತಿಗಳ’ ಮುಂದಿದ್ದ ಸವಾಲು ಹಾಗೂ ಕರ್ತವ್ಯಗಳು ಸಹ ಹಾಗೆನೇ ಇವೆಯೇನೋ ಅನಿಸುತ್ತದೆ.
ಪ್ರೊ. ಟಿ. ಆರ್. ಚಂದ್ರಶೇಖರ್ ಅವರು ‘ಕರ್ನಾಟಕ 60-ಅಭಿವೃಧ್ಧಿಯ ನಡೆ’ ಈ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಕಳೆದ 60 ವರ್ಷಗಳ ಅಭಿವೃಧ್ಧಿ ಮಾನವ ಅಭಿವೃದ್ಧಿಯ ದೃಷ್ಟಿಕೋಣದಿಂದ ಎಷ್ಟು ಟೊಳ್ಳು, ಎಂದು ವಿವರವಾಗಿ ನಿರೂಪಿಸಿದ್ದಾರೆ. ಪ್ರಾದೇಶಿಕ ಅಸಮಾನತೆಯತ್ತ ವಿಶೇóಷ ಗಮನ ಸೆಳೆಯುತ್ತಾ, ಗ್ರಾಮ-ನಗರ, ಪುರುಷ-ಮಹಿಳೆಯರ ನಡುವಿನ ಅಸಮಾನತೆಗಳೂ ಇನ್ನೂ ‘ವಿಜೃಂಭಿಸುತ್ತಿವೆ’ ಎಂದು ತೋರಿಸುತ್ತಾರೆ. ಇಪ್ಪತ್ತೆಂಟು ಆಡಳಿತಗಳಲ್ಲಿ ಹರಿ ಹಂಚಿಹೋಗಿದ್ದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವುದು ಏಕಿಕರಣದ ಆಶಯಗಳಲ್ಲಿ ಪ್ರಮುಖವಾದ್ದು ಆಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದು ಆಗಿಲ್ಲ ಎಂಬುದು ಸ್ಪಷ್ಟ. 1980ರ ದಶಕದ ವರೆಗೆ ಇದ್ದ ಸ್ವಲ್ಪ ಮಟ್ಟಿನ ಬೆಳವಣಿಗೆ ಸಹ, 1990ರ ನಂತರದ ‘ಖಾಸಗೀಕರಣದ ಮಹಾಮಾರಿ’ಯಿಂದ ಹಳ್ಳ ಹಿಡಿದಿರುವುದನ್ನು ಅವರು ಗುರುತಿಸುತ್ತಾರೆ. ಕೃಷಿಯ ತೀವ್ರ ಕುಸಿತ, ಆ ಕುಸಿತದಿಂದ ನಷ್ಟವಾದ ಜೀವನೋಪಾಯ-ಉದ್ಯೋಗಗಳನ್ನು ತುಂಬಲಾರದ ಕೈಗಾರಿಕಾ-ಉದ್ಯಮಗಳ ಸ್ಥಗಿತತೆ ಒಟ್ಟಾರೆ ಅಭಿವೃದ್ಧಿಯ ನಡೆಯ ವೈಫಲ್ಯವನ್ನು ತೋರಿಸುತ್ತದೆ.
ಆದರೆ ಕಳೆದ 60 ವರ್ಷಗಳ ವೈಫಲ್ಯಗಳಲ್ಲಿ ಪ್ರಮುಖವಾದ್ದು ‘ಸರ್ವಜನಾಂಗಗಳ ಶಾಂತಿಯ ತೋಟ’ದ ಧ್ವಂಸ. ಸೌಹಾರ್ದ ಪರಂಪರೆ ಪ್ರಬಲವಾಗಿದ್ದ ದೇಶ ವಿಭಜನೆಯ ಕೋಮುವಾದಿ ವಿಷ ಒಂದಿನಿತೂ ತಟ್ಟದ ರಾಜ್ಯಗಳಲ್ಲಿ ಒಂದಾಗಿದ್ದ ಕರ್ನಾಟಕ, ಅದರಲ್ಲೂ ಪ್ರಗತಿಪರ ಚಳುವಳಿಯ ಭದ್ರಕೋಟೆಯಾಗಿದ್ದ ಕರಾವಳಿ ಕರ್ನಾಟಕ, 1990ರ ದಶಕದ ನಂತರ ‘ಕೋಮುವಾದದ ಪ್ರಯೋಗಶಾಲೆ’ಯಾಗಿದ್ದು ಈ ವೈಫಲ್ಯಕ್ಕೆ ಹಿಡಿದ ಕನ್ನಡಿ. ರಾಮಜನ್ಮಭೂಮಿ ಚಳುವಳಿಯಿಂದ ಆರಂಭಿಸಿ; ಕೋಮು ಘರ್ಷಣೆ, ಕೋಮು ದಂಗೆಗಳು, ಅನೈತಿಕ ಪೋಲಿಸ್ ಗಿರಿ, ಲವ್-ಜೆಹಾದ್, ಮತಾಂತರ-ಘರ್ ವಾಪಸಿ, ಭಗವದ್ಗೀತಾ ಅಭಿಯಾನ, ಗೋರಕ್ಷಣೆ, ಟಿಪ್ಪು-ವಿರುದ್ಧ ಅಪಪ್ರಚಾರ, ಬುರ್ಖಾ-ಕೇಸರಿ ಶಾಲು – ಮುಂತಾದ ಹತ್ತು ಹಲವು ಕುತಂತ್ರಗಳನ್ನು ಬಳಸಿ ಕೋಮುವಾದೀಕರಣದ ಭೀಕರ ವಿಸ್ತರಣೆ ಆಗಿದೆ. ಅದು ಎಲ್ಲಾ ಕನ್ನಡಿಗರ ಗೌರವಕ್ಕೆ ಪಾತ್ರರಾಗಿದ್ದ ಡಾ. ಅನಂತಮೂರ್ತಿ ಅವರ ಸಾವನ್ನು ಸಂಭ್ರಮಿಸುವ, ಡಾ. ಕಲಬುರ್ಗಿ ಅವರ ಹತ್ಯೆಯವರೆಗೆ ತಲುಪಿದೆ. ಬಹುಸಂಖ್ಯಾತ ಕೋಮುವಾದಕ್ಕೆ ಪ್ರತಿಕ್ರಿಯೆಯಾಗಿ ಹಾಗು ಇತರ ಕಾರಣಗಳಿಂದ ಅಲ್ಪಸಂಖ್ಯಾತ ಕೋಮುವಾದ ಸಹ ಅಪಾಯಕಾರಿ ಮಟ್ಟಕ್ಕೆ ಬೆಳೆದು ನಿಂತಿದೆ.
ಆದರೆ ಡಾ. ಕಲಬುರ್ಗಿ ಹತ್ಯೆ ಒಂದು ತಿರುಗು ಬಿಂದಾಗಿ, ರಾಜ್ಯದ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಡಾ. ಕಲಬುರ್ಗಿ ಹತ್ಯೆ ನಂತರ ಕೋಮುವಾದಿ ಶಕ್ತಿಗಳಿಗೆ ಬಂದ ತೀಕ್ಷ್ಣ ಸತತ ಪ್ರತಿಕ್ರಿಯೆ/ಪ್ರತಿರೋಧ ಈ ನಿಟ್ಟಿನಲ್ಲಿ ಅತ್ಯಂತ ಸಕಾರಾತ್ಮಕ ಬೆಳವಣಿಗೆ. ಈಗಾಗಲೇ ಇದ್ದ ಸಮುದಾಯದಂತಹ ಸಾಂಸ್ಕøತಿಕ ಸಂಘಟನೆಗಳ ಜತೆ ಜನನುಡಿ, ಡಾ. ಕಲಬುರ್ಗಿ ಹತ್ಯಾ ವಿರೋಧಿ ಸಮಿತಿ, ಜನಸಾಹಿತ್ಯ ಸಂಘಟನೆ ಮುಂತಾದ ಹೊಸ ವಿಶಾಲ ಕೋಮುವಾದಿ-ವಿರೋಧಿ ವೇದಿಕೆಗಳೂ ಹೊಮ್ಮಿರುವುದು ಆಶಾದಾಯಕ ಬೆಳವಣಿಗೆ. ಈ ಎಲ್ಲವನ್ನೂ ಕ್ರೋಡೀಕರಿಸಿ ದುಡಿಯುವ ಜನತೆಯಲ್ಲೂ ಕೋಮುವಾದೀಕರಣದ ವಿರುದ್ಧ ದುಡಿಯುವ ಜನರ ಸಂಘಟನೆಗಳ ಮೂಲಕವೇ ವ್ಯಾಪಕವಾಗಿ ಹೋರಾಡುವ ಅಗತ್ಯ ಇದೆ. ಇಂತಹ ನಡೆಯೊಂದನ್ನು ಕರಾವಳಿ ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ ಮೊದಲ ವಾರದಿಂದ ಜನವರಿ ಮೊದಲ ವಾರದ ವರೆಗೆ ಕೋಮುವಾದದ ವಿರುದ್ಧ ಯೋಜಿಸಿರುವ ಅಧ್ಯಯನ ಶಿಬಿರಗಳು, ಸಮಾವೇಶ, ವ್ಯಾಪಕ ಜಾಥಾ, ಬೃಹತ್ ರ್ಯಾಲಿಗಳೂ ನಡೆಯಲಿವೆ. ಇದು ಕರ್ನಾಟಕದ 60ನೇ ರಾಜ್ಯೋತ್ಸವವನ್ನು ಪ್ರಗತಿಪರ ಶಕ್ತಿಗಳು ಆಚರಿಸುವ ಸೂಕ್ತ ವಿಧಾನ.
ಜಾತಿ ತಾರತಮ್ಯ-ಅಸ್ಪøಶ್ಯತೆಯ ಪಿಡುಗು 60 ವರ್ಷಗಳ ನಂತರ ಇನ್ನೂ ತೊಲಗಲಿಲ್ಲ ಎಂಬುದು ಇನ್ನೊಂದು ಪ್ರಮುಖ ವೈಫಲ್ಯ. 70-80 ರ ದಶಕದಲ್ಲಿ ಮಹಾರಾಷ್ಟ್ರದ ನಂತರ ದೇಶದಲ್ಲೇ ಅತ್ಯಂತ ಪ್ರಬಲ ದಲಿತ ಚಳುವಳಿ ಇದ್ದಾಗ್ಯೂ ಕಂಬಾಲಪಲ್ಲಿಗಳು, ಮರುಕುಂಬಿಗಳು ಮರುಕಳಿಸುತ್ತಲೇ ಇವೆ. ಅಸ್ಪೃಶ್ಯತೆ ತನ್ನ ನೂರಾರು ಅವತಾರಗಳಲ್ಲಿ ತಾಂಡವವಾಡುತ್ತಿದೆ. 70-80ರ ದಶಕದಲ್ಲಿ ಹಾವನೂರು ವರದಿಯ ಜಾರಿ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯ ಜಾರಿಯೊಂದಿಗೆ ಕರ್ನಾಟಕ ಮುನ್ನಡೆ ಸಾಧಿಸಿದೆ. ಆದರೆ ಕೋಮುವಾದಿಕರಣದಿಂದ ಉಚ್ಛ ಜಾತಿಗಳಲ್ಲಿ ಜಾತಿವಾದಿ-ಮನುವಾದಿ ಧೋರಣೆ ಗಟ್ಟಿಗೊಳ್ಳುತ್ತಿದೆ. ಜಾತಿ ತಾರತಮ್ಯ-ಅಸ್ಪೃಶ್ಯತೆಗಳ ವಿರುದ್ಧ ಸಹ ಕಳೆದ ಕೆಲವು ವರ್ಷಗಳಿಂದ ಹಲವು ಐಕ್ಯ ಚಳುವಳಿಗಳು ಬೆಳೆದು ಬಂದಿವೆ. ದಲಿತರ ಸಮಸ್ಯೆಗಳ ಬಗ್ಗೆ ಸಮಗ್ರ ಆರ್ಥಿಕ-ಸಾಮಾಜಿಕ-ರಾಜಕೀಯ ದೃಷ್ಟಿಕೋಣ ಹೊಂದಿರುವ ದಲಿತ ಹಕ್ಕುಗಳ ಸಮಿತಿಯ ಸ್ಥಾಪನೆ ದಲಿತ ಚಳುವಳಿಗೆ ಹೊಸ ಚಾಲನೆ ಕೊಟ್ಟಿದೆ. ಕೋಮುವಾದಿ-ವಿರೋಧಿ ಚಳುವಳಿಗಳು ಸಹ ಜಾತಿ ತಾರತಮ್ಯ-ಅಸ್ಪøಶ್ಯತೆಯ ಪ್ರಶ್ನೆಗಳನ್ನು ಎತ್ತಿಕೊಂಡಿವೆ. ಮಡೆಸ್ನಾನ-ಪಂಕ್ತಿಭೇಧದ ವಿರುದ್ಧ ರಾಜ್ಯವ್ಯಾಪಿ ಚಳುವಳಿಯಿಂದ ಆರಂಭಿಸಿ ಇತ್ತೀಚಿನ ಚಲೋ ಉಡುಪಿಯ ವರೆಗೆ ದಲಿತ, ಎಡಪಂಥೀಯ, ಪ್ರಗತಿಪರ, ಸೆಕ್ಯುಲರ್-ಪ್ರಜಾಸತ್ತಾತ್ಮಕ ಶಕ್ತಿಗಳ ಐಕ್ಯ ಚಳುವಳಿಗಳು ಮುನ್ನಡೆ ಸಾಧಿಸಿರುವುದು ಸಹ ಕರ್ನಾಟಕದ 60ನೇ ರಾಜ್ಯೋತ್ಸವದ ಸಂದರ್ಭದಲ್ಲಿ ಆಶಾದಾಯಕ ಬೆಳವಣಿಗೆ.
ಕೋಮುವಾದೀಕರಣದ ಭೀಕರ ವಿಸ್ತರಣೆ ಸ್ವತಂತ್ರ ಬೆಳವಣಿಗೆ ಅಲ್ಲ, 1990ರ ನಂತರ ರಾಷ್ಟ್ರೀಯ-ಅಂತರ್ರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಾಗತಿಕರಣದ ನೀತಿಗಳನ್ನು ಹೇರಲು ಆಳುವ ವರ್ಗಗಳ ಆಕ್ರಾಮಕ ನಡೆಯ ಭಾಗ. ಜಾಗತಿಕರಣದ ನೀತಿಗಳು ಕೃಷಿ-ಕೈಗಾರಿಕೆ ಮತ್ತಿತರ ಆರ್ಥಿಕ ಚಟುವಟಿಕೆಯಲ್ಲಿ ಮಾಡಿರುವ ಆಳವಾದ ಪರಿಣಾಮಗಳಿಂದ, ಇಂತಹ ನೀತಿಗಳ ವಿರುದ್ಧ ತೀವ್ರ ಪ್ರತಿರೋಧ ಒಡ್ಡಿದ್ದಾಗ್ಯೂ ರೈತರ, ಕೃಷಿಕೂಲಿಕಾರರ, ಕಾರ್ಮಿಕರ ಚಳುವಳಿ/ಸಂಘಟನೆಗಳಿಗೂ ತೀವ್ರ ಹಿನ್ನಡೆ ಉಂಟಾಗಿವೆ. ಜಾಗತೀಕರಣ ಹುಟ್ಟಿ ಹಾಕಿದ ಹುಸಿ ಕನಸುಗಳ ಗುಳ್ಳೆ ಒಡೆಯುತ್ತಿದ್ದಂತೆ, ಅದರ ದುಷ್ಪರಿಣಾಮಗಳ ಭೀಕರತೆ ಅರಿವಾಗುತ್ತಿದ್ದಂತೆ ದುಡಿಯುವ ಜನರ ಚಳುವಳಿ ಪುನಃ ಚೇತರಿಸಿಕೊಂಡು ಮುಂದುವರೆಯುತ್ತಿದೆ. ರೈತರು, ಕೂಲಿಕಾರರು, ಕಾರ್ಮಿಕರ ಮೇಲೆ ಜಾಗತೀಕರಣದ ದುಷ್ಪರಿಣಾಮಗಳು ಏನು? ಅದರ ವಿರುದ್ಧ ಪ್ರತಿರೋಧ ಒಡ್ಡಲು ಯಾವ ಸಂಘಟನಾತ್ಮಕ ತಂತ್ರ ಬಳಸಬಹುದು ಎಂಬ ಬಗ್ಗೆ ಚಿಂತನ ಮಂಥನ ನಡೆಸಿದ ಎಡ ಚಳುವಳಿ ಹೊಸ ಅರಿವಿನೊಂದಿಗೆ ಮುನ್ನುಗ್ಗುತ್ತಿದೆ.
ಇದೇ ಸೆಪ್ಟೆಂಬರ್ 2ರಂದು ಕರ್ನಾಟಕದ 50 ಲಕ್ಷ (ಕಳೆದ 60 ವರ್ಷದಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ) ಕಾರ್ಮಿಕರು ಭಾಗವಹಿಸಿದ್ದು ಇದಕ್ಕೆ ಒಂದು ಉದಾಹರಣೆ. ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರಕಾರವನ್ನು ನಡುಗಿಸಿದ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರ ಚಾರಿತ್ರಿಕ ಚಳುವಳಿ ಸಹ ಗಮನಾರ್ಹ. ಕನಿಷ್ಟ ಕೂಲಿ ಮತ್ತು ಇತರ ಹಕ್ಕೊತ್ತಾಯಗಳಿಗೆ ಸತತವಾಗಿ ಮುಷ್ಕರ ಮುಂತಾದ ಕಾರ್ಮಿಕರ ಹೋರಾಟಗಳು ನಡೆಯುತ್ತಲೇ ಇವೆ. ಜಾಗತೀಕರಣದ ಪರಿಣಾಮವಾಗಿ ಬದಲಾಗಿರುವ ಕಾರ್ಮಿಕರನ್ನು ಸಮರಶೀಲ ಸಂಘಟನೆಗಳಲ್ಲಿ ಸಂಘಟಿಸುವತ್ತ ಕಾರ್ಮಿಕ ಚಳುವಳಿ ಹೊಸ ಅರಿವು ತಂತ್ರಗಳೊಂದಿಗೆ ಮುನ್ನಡೆಯುತ್ತಿರುವುದು ಕರ್ನಾಟಕದ 60ನೇ ರಾಜ್ಯೋತ್ಸವದ ಸಂದರ್ಭದಲ್ಲಿ ಭರವಸೆ ಹುಟ್ಟಿಸುವಂತಹುದು.
ಜಾಗತೀಕರಣದ ನೀತಿಗಳು ರೈತ ಕೃಷಿಯ ನಾಶ ಮಾಡಿರುವುದು, ಗ್ರಾಮೀಣ ಕರ್ನಾಟಕದ ಬದುಕನ್ನೇ ಬುಡಮೇಲು ಮಾಡಿರುವುದು, ಅವರ ಭೂಮಿಯನ್ನು ಕಿತ್ತುಕೊಂಡು ಅವರನ್ನು ಕೃಷಿ ಮತ್ತು ಹಳ್ಳಿಗಳಿಂದ ಹೊರದಬ್ಬಿ, ಅವರು ನಗರದ ಇನ್ನಷ್ಟು ಅಭದ್ರ ಜೀವನದತ್ತ ಗುಳೆ ಹೋಗುವಂತೆ ಮಾಡಿರುವುದು ಕಳೆದ 6 ದಶಕಗಳಲ್ಲೇ ಅತ್ಯಂತ ದುಃಖದಾಯಕ ವಿದ್ಯಮಾನ. ಇದರ ವಿರುದ್ಧವೂ ಕಳೆದ ಕೆಲವು ವರ್ಷಗಳಿಂದ ಐಕ್ಯ ಚಳುವಳಿಗಳು ಬೆಳೆದು ಬರುತ್ತಿವೆ. ರೈತ, ಕೃಷಿ ಕೂಲಿಕಾರರ, ಕಾರ್ಮಿಕರ ಸಂಘಗಳು ನವೆಂಬರ್ 18ರಂದು ‘ಭೂಮಿಗಾಗಿ ಜೈಲು ಭರೋ’ ಚಳುವಳಿ, ಗ್ರಾಮೀಣ ಭೂಸಂಬಂಧಗಳಲ್ಲಿ ತೀವ್ರ ಬದಲಾವಣೆಯತ್ತ ದೀರ್ಘ ಮುನ್ನಡೆಗೆ ಮುನ್ನುಡಿ ಬರೆಯಲು ಸಿದ್ದವಾಗುತ್ತಿರುವುದು ಕರ್ನಾಟಕದ 60ನೇ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ಫೂರ್ತಿದಾಯಕ.
ಇವೆಲ್ಲವುಗಳ ಮೂಲಕ ಕಮ್ಯುನಿಸ್ಟ್ ಪಕ್ಷ 60 ವರ್ಷಗಳ ಹಿಂದೆ, “ಪ್ರಗತಿಗಾಮಿ ಭಾವನೆ ಆರ್ಥಿಕ, ರಾಜಕೀಯ ಸಾಂಸ್ಕøತಿಕ, ಸಾಮಾಜಿಕ; ಸಾಮಾಜಿಕ ರಂಗಗಳಲ್ಲೆಲ್ಲ ಬೆಳೆಯುವಂತೆ ಮಾಡಲು’ ದುಡಿಯುತ್ತೇವೆ ಎಂದು ಮಾಡಿದ್ದ ಪ್ರತಿಜ್ಞೆಯನ್ನು 60ನೇ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪುನರುಚ್ಚರಿಸೋಣ. ‘ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ಕನಸನ್ನು ಸಾಕಾರಗೊಳಿಸೋಣ.