ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು, ಭೂಕಬಳಿಕೆ ಮತ್ತು ಮೈಕ್ರೋ ಫೈನಾನ್ಸ್ ವ್ಯವಹಾರಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸಿವೆಯೊ, ಅಲ್ಲಿ ಇದರ ಹಿಂದೆ ಭೂಕಬಳಿಕೆ ಮತ್ತು ಉಳಿಮೆದಾರರಿಂದ, ರೈತರಿಂದ, ಗೇಣಿದಾರರಿಂದ ಭೂಮಿಯನ್ನು ಕಿತ್ತುಕೊಳ್ಳುವ ಒಂದು ಜಾಲ ಕೆಲಸ ಮಾಡುತ್ತಿದೆ. ಅವೆರಡಕ್ಕೂ ಒಂದಕ್ಕೊಂದು ನಂಟಿದೆ. ಈಗ ದೂರದಾರ ಕೊಟ್ಟಿರುವ ಅಂಶಗಳ ಮೇಲೆ ಎಸ್‌ಐಟಿ ತನಿಖೆ ನಡೆಯತ್ತಿದೆ. ಅದರ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಸಾಧ್ಯವಾಗಬೇಕು. ಈಗಿರುವ ಪ್ರಣವ್ ಮೊಹಂತಿ ಅವರ ಎಸ್‌ಐಟಿಗೆ ಹೊಸ ಟರ್ಮ್ಸ್ ಆಫ್ ರೆಫರೆನ್ಸ್ ಅನ್ನು ಸರ್ಕಾರ ಕೊಡಬೇಕು. ಭೂಕಬಳಿಕೆ, ಮೈಕ್ರೋ ಫೈನಾನ್ಸ್ ವ್ಯವಹಾರಗಳ  ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ಆಗ ಅಸಹಜ ಸಾವುಗಳು, ಅತ್ಯಾಚಾರಗಳು ಮತ್ತು ಕೊಲೆಗಳ ಹಿಂದಿರುವ ನಿಜವಾದ ನಂಟು ಬಹಿರಂಗವಾಗುತ್ತದೆ ಎಂದು ಮೂರು ಎಡಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಪಕ್ಷಗಳು ಒತ್ತಾಯಿಸಿವೆ.

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ಆನೆಮಾವುತ ನಾರಾಯಣ, ಯಮುನಾ, ಸೌಜನ್ಯ ಮುಂತಾದ ಅಪಹರಣ, ಅತ್ಯಾಚಾರ, ಕೊಲೆ ಮತ್ತು ಅಸಹಜ ಸಾವುಗಳ ಸಮಗ್ರ ತನಿಖೆ ಮಾಡಬೇಕು ಹಾಗೂ ಧರ್ಮಸ್ಥಳದ ಪರಿಧಿಯಲ್ಲಿ ನಡೆದಿರುವ ಎಲ್ಲಾ ಭೂಕಬಳಿಕೆ ಮತ್ತು ಅಕ್ರಮವಾಗಿ ಒಕ್ಕಲೆಬ್ಬಿಸುವಿಕೆ ಪ್ರಕರಣಗಳು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ನಡೆದಿರುವ ಕಿರುಕುಳ, ದೌರ್ಜನ್ಯ ಮತ್ತು ಆತ್ಮಹತ್ಯೆಗಳ ಸಮಗ್ರ ತನಿಖೆ ನಡೆಸಬೇಕು ಎಂದು ಈ ಎಡಪಕ್ಷಗಳು ಒತ್ತಾಯಿಸಿವೆ.

ದೂರುದಾರನ ದೂರಿನ ನಂತರದಲ್ಲಿ ಆಗಿರುವ ಬೆಳವಣಿಗೆಗಳಲ್ಲಿ ಇಂದು ದೂರುದಾರನ ಮತ್ತು ಎಸ್‌ಐಟಿ ವಿರುದ್ಧವೇ ಆರೋಪ ಮಾಡುವಂತಹ ದಾಳಿಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಬಿಜೆಪಿ ಮುಖಂಡರು ವ್ಯಾಪಕವಾಗಿ ಇಂತಹ ದಾಳಿ ಮಾಡುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಸ್‌ಐಟಿ ರಚನೆ ಹಿಂದೆ ಒಂದು ಷಡ್ಯಂತ್ರವಿದೆ ಎನ್ನುವ ರೀತಿಯಲ್ಲಿ ಮಾತನಾಡಿರುವ ಅಂಶಗಳೂ ಇವೆ. ವೈಯಕ್ತಿಕ ಆರೋಪಗಳನ್ನೂ ಮಾಡಲಾಗುತ್ತಿದೆ. ಈ ತನಿಖೆಯ ಹಿಂದೆ ಎಡಪಂಥೀಯರಿದ್ದಾರೆ ಮತ್ತು ಕಮ್ಯೂನಿಸ್ಟರು ಇದಕ್ಕೆ ಕಾರಣರಾಗಿದ್ದಾರೆ ಎಂಬಂತೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಹಲವು ನಾಯಕರು, ಇದು ದೇವರು ಮತ್ತು ಧರ್ಮದ ಮೇಲಿನ ದಾಳಿ ಎಂದು ಬಿಂಬಿಸುವ ರೀತಿಯಲ್ಲಿ ಆರೋಪ ಮಾಡಿದ್ದಾರೆ.

ಈ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆಯಾಗಬೇಕು ಎಂದು ಈ ಹಿಂದೆಯೂ ಒತ್ತಾಯ ಮಾಡಿದವರಲ್ಲಿ ಈ ರಾಜ್ಯದ ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು, ವ್ಯಕ್ತಿಗಳು, ನ್ಯಾಯಾಧೀಶರಿದ್ದಾರೆ. ಎಸ್‌ಐಟಿ ರಚನೆಯಾಗಬೇಕು ಎಂದು ಹಲವು ವಿಭಾಗದ ಜನರೂ ಒತ್ತಾಯ ಮಾಡಿದ್ದರು. ಆದರೆ, ಈಗ ದೂರುದಾರ ಕೊಟ್ಟಿರುವ ದೂರಿನ ಅಂಶಗಳ ಮೇಲೆ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿದೆ. ಪೂರ್ಣವಾಗಿ ತನಿಖೆಯಾಗಲು ಬಿಡಬೇಕು. ತನಿಖೆಯ ದಾರಿ ತಪ್ಪಿಸುವ ರೀತಿಯಲ್ಲಿ ಅದರ ಮೇಲೆ ಯಾವುದೇ ರೀತಿಯಲ್ಲಿ ದಬಾವಣೆ ಮಾಡುವುದಾಗಲೀ, ಒತ್ತಡ ಹಾಕುವುದನ್ನಾಗಲೀ ಯಾರೂ ಪ್ರಯತ್ನ ಮಾಡಬಾರದು ಎಂಬುದು ಎಡಪಕ್ಷಗಳ ಒತ್ತಾಯ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತಪ್ಪಿತಸ್ಥರು ಯಾರು ಎಂದು ಇದುವರೆಗೂ ಗೊತ್ತಾಗಲಿಲ್ಲ

ಇದೇ ಸಂದರ್ಭದಲ್ಲಿ ಆರಂಭದಿಂದಲೂ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಹಲವು ಪ್ರಕರಣಗಳನ್ನು ನಾವು ಗಮನಿಸಬೇಕಾಗಿದೆ. ಮುಖ್ಯವಾಗಿ, ಧರ್ಮಸ್ಥಳದ ಒಂದು ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ವೇದವಲ್ಲಿಯನ್ನು ಸುಟ್ಟು ಹತ್ಯೆ ಮಾಡಿದ ಪ್ರಕರಣ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂದು ಇದುವರೆಗೂ ಗೊತ್ತಾಗಲಿಲ್ಲ. ಪದ್ಮಲತಾಳನ್ನು ಅಪಹರಣ ಮಾಡಿ, ಕೊಲೆ ಮಾಡಿ 56 ದಿನಗಳ ನಂತರದಲ್ಲಿ ಆಕೆಯ ಶವ ಸಿಕ್ಕಿದ ಪರಿಸ್ಥಿತಿಯಲ್ಲಿ ನೋಡಿದ್ದೇವೆ. ಈ ಪ್ರಕರಣದಲ್ಲಿಯೂ ಅಪರಾಧಿಗಳು ಯಾರು ಎಂಬುದು ಇದುವರೆಗೂ ಪತ್ತೆ ಆಗಲಿಲ್ಲ. ಆನೆ ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ ಇವರನ್ನು ಧರ್ಮಸ್ಥಳದ ಮಧ್ಯಭಾಗದಲ್ಲಿರುವ ಅವರ ಮನೆಯಲ್ಲಿ ಕಲ್ಲುಗಳನ್ನು ಹಾಕಿ, ಅವರ ತಲೆ ಜಜ್ಜಿ ಕೊಂದಿರುವ ಪ್ರಕರಣದಲ್ಲೂ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗಿಲ್ಲ. ಸೌಜನ್ಯ ಪ್ರಕರಣದಲ್ಲೂ ಸಿಬಿಐ ಕೋರ್ಟ್ ಕೊಟ್ಟಿರುವ ಆದೇಶದ ಪ್ರಕಾರ ತನಿಖೆ ನಡೆಸಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆಹಚ್ಚಬೇಕಿದೆ. ಹೀಗೆ ಹಲವು ಪ್ರಕರಣಗಳಲ್ಲಿ ಅಪಹರಣ, ಹತ್ಯಾಚಾರ, ಹತ್ಯೆ ಮಾಡಿದವರು ಯಾರು ಎಂಬುದು ತಿಳಿದಿಲ್ಲ. ಹಾಗಾಗಿ, ಸರ್ಕಾರ ಈ ಪ್ರಕರಣಗಗಳನ್ನು ನಿರ್ದಿಷ್ಟವಾಗಿ ತನಿಖೆ ಮಾಡಬೇಕು.

ಇವುಗಳ ಹಿಂದೆ ಭೂಮಿಯ ಕಬಳಿಕೆಯ ಪ್ರಶ್ನೆ ಇದೆ

ಮೂಲಭೂತವಾಗಿ ಎಲ್ಲ ಪ್ರಕರಣಗಳ ಹಿಂದೆ ಧರ್ಮಸ್ಥಳದ ಸುತ್ತಮುತ್ತ ಇರುವ ಭೂಮಿಯ ಕಬಳಿಕೆಯ ಪ್ರಶ್ನೆ ಇದೆ. ಇಡೀ ಧರ್ಮಸ್ಥಳದ ಸುತ್ತಮುತ್ತ ಹಲವು ದಶಕಗಳ ಕಾಲದಿಂದ ಭೂಕಬಳಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಲ್ಲಿನ ಹಿತಾಸಕ್ತಿಗಳು ಪಾಳೆಗಾರಿ ಯಜಮಾನಿಕೆ ನಡೆಸುತ್ತಿದ್ದಾರೆ. ಅವರ ಸುತ್ತ ಇರುವ ಪಟಾಲಂ ಅಲ್ಲಿನ ಭೂಮಿಯನ್ನು ಸಂಪೂರ್ಣವಾಗಿ ಕಬಳಿಸಲು ಏನು ಬೇಕಾದರೂ ಮಾಡುತ್ತಾರೆ ಎನ್ನುವ ಅಂಶಗಳು ಇಲ್ಲಿ ಕಾಣುತ್ತವೆ. ಧರ್ಮಸ್ಥಳದ ಸುತ್ತಮುತ್ತ ಹಲವು ದಶಕಗಳ ಚರಿತ್ರೆಯಲ್ಲಿ ನಮಗಿದು ತಿಳಿಯುತ್ತದೆ. ಅಸಹಜ  ಸಾವುಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸಿವೆಯೊ, ಅಲ್ಲಿ ಇದರ ಹಿಂದೆ ಭೂಕಬಳಿಕೆ ಮತ್ತು ಉಳಿಮೆದಾರರಿಂದ, ರೈತರಿಂದ, ಗೇಣಿದಾರರಿಂದ ಭೂಮಿಯನ್ನು ಕಿತ್ತುಕೊಳ್ಳುವ ಒಂದು ಜಾಲ ಕೆಲಸ ಮಾಡುತ್ತಿದೆ. ಅವೆರಡಕ್ಕೂ ಒಂದಕ್ಕೊಂದು ನಂಟಿದೆ. ಈಗ ದೂರದಾರ ಕೊಟ್ಟಿರುವ ಅಂಶಗಳ ಮೇಲೆ ಎಸ್‌ಐಟಿ ತನಿಖೆ ನಡೆಯತ್ತಿದೆ. ಅದರ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಸಾಧ್ಯವಾಗಬೇಕು. ಅದಕ್ಕೆ ಹೊಸ ಟರ್ಮ್ಸ್ ಆಫ್ ರೆಫರೆನ್ಸ್ ಅನ್ನು ಸರ್ಕಾರ ಕೊಡಬೇಕು. ಭೂಕಬಳಿಕೆಯ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ಆಗ ಈ ಅಸಹಜ ಸಾವುಗಳು, ಅತ್ಯಾಚಾರಗಳು ಮತ್ತು ಕೊಲೆಗಳ ಹಿಂದಿರುವ ನಿಜವಾದ ನಂಟು ಬಹಿರಂಗವಾಗುತ್ತದೆ. ಆ ಕಾರಣಕ್ಕಾಗಿ ಇಲ್ಲಿ ಪ್ರಸ್ತಾಪಿಸಿರುವ ಎಲ್ಲ ಪ್ರಕರಣಗಳನ್ನು ಪುನರ್ ತನಿಖೆ ಮಾಡಬೇಕು.

ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕಿರುಕುಳ

ಸಂಪತ್ತು ಮತ್ತು ಭೂಮಿಯನ್ನು ಕಬಳಿಸಬೇಕೆನ್ನುವ ಒಂದು ದೊಡ್ಡ ಜಾಲ ಕೆಲಸ ಮಾಡುತ್ತಿದೆ. ಅದು ಇಂದು ಇಡೀ ರಾಜ್ಯಕ್ಕೆ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಅದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ, ಮೈಕ್ರೋ ಫೈನಾನ್ಸ್ ಹೆಸರಲ್ಲಿ ಇಡೀ ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರವನ್ನು ಅಕ್ರಮ ವಿಧಾನಗಳ ಮೂಲಕ ಮಾಡುತ್ತಿದೆ. ಈ ಮೈಕ್ರೋ ಫೈನಾನ್ಸ್ ವ್ಯವಹಾರದ ಕಾರಣಕ್ಕಾಗಿ ವಿಪರೀತ ಬಡ್ಡಿ ಮತ್ತು ವಿಪರೀತ ಕಿರುಕುಳ, ದೌರ್ಜನ್ಯ ನಡೆಸುತ್ತಿದ್ದಾರೆ. ಸಾಲ ಪಡೆದವರು ಸಾಲ ತಿರಿಸಲಾಗದೆ, ಬಡ್ಡಿ ಚಕ್ರಬಡ್ಡಿಗಳಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ರಾಜ್ಯಾದ್ಯಂತ ಸಂಭವಿಸುತ್ತಿವೆ. ಈ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು.

ದೇವರ ಮೇಲಿನ ಜನರ ನಂಬಿಕೆಯ ದುರುಪಯೋಗ

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ  ಸಾವುಗಳು, ಕೊಲೆಗಳು, ಅತ್ಯಾಚಾರಗಳು ಮತ್ತು ಭೂಕಬಳಿಕೆಯ ಪ್ರಕರಣಗಳು, ಮೈಕ್ರೋ ಫೈನಾನ್ಸ್ ಪ್ರಶ್ನೆಗಳು ಇವೆಲ್ಲ ಪ್ರಕರಣಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಸಮಗ್ರವಾದ ತನಿಖೆಗೆ ಒಳಪಡಿಸಬೇಕು ಎಂದು ಎಡ ಪಕ್ಷಗಳು ಒತ್ತಾಯ ಮಾಡಿದ್ದವು. ಈ ಸಂದರ್ಭದಲ್ಲಿ, ನಿಜವಾದ ಇಂತಹ ಸಮಸ್ಯೆಗಳ ಬಗ್ಗೆ ತನಿಖೆ ಮಾಡಬೇಕೆಂದು ಎಡಪಕ್ಷಗಳು ಸೇರಿದಂತೆ ಸಾಮಾನ್ಯ ಜನರು ಒತ್ತಾಯ ಮಾಡುತ್ತಿರುವಾಗಲೇ ಅದಕ್ಕೆ ಕೋಮುವಾದದ ಬಣ್ಣ ಕಟ್ಟಲು ಬಿಜೆಪಿಯ ಹಲವು ಮುಖಂಡರು ನೇರನೇರ ಪ್ರಯತ್ನಪಡುತ್ತಿರುವುದು ತೀರ ಖಂಡನೀಯ. ಬಿಜೆಪಿಯವರು ಜನರ ಸಮಸ್ಯೆಗಳ ಬಗ್ಗೆ ಇದುವರೆಗೂ ಬಾಯೇ ಬಿಡಲಿಲ್ಲ. ನಿಜಕ್ಕೂ ಕೂಡ ಧರ್ಮಸ್ಥಳದ ಮೇಲೆ ಜನರಿಗೆ ನಂಬಿಕೆ ಇದೆ. ಅಲ್ಲಿನ ದೇವರು ಮತ್ತು ಧರ್ಮದ ಬಗ್ಗೆ ಆ ನಂಬಿಕೆಯನ್ನು ದುರ್ಬಲಗೊಳಿಸುವ ಕೆಲಸಗಳಾಗಿವೆ. ಜನರ ನಂಬಿಕೆಗೆ ದಕ್ಕೆ ಆಗಬಾರದೆಂಬ ನಿಟ್ಟಿನಲ್ಲಿ ಇವೆಲ್ಲವೂ ತನಿಖೆಯಾಗಿ ಸತ್ಯ ಹೊರಬರಬೇಕು ಎಂದು ಎಡಪಕ್ಷಗಳು ಅದಕ್ಕಾಗಿ ಹೋರಾಟ ಮಾಡುತ್ತಿವೆ. ಇಂದು ಯಾರು ಈ ಪ್ರಕರಣಗಳನ್ನು ಮುಚ್ಚಿಹಾಕಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆಯೋ, ಅವರು ದೇವರ ಮೇಲಿನ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಂಬಿಕೆಯನ್ನು ಹಣದ ವ್ಯವಹಾರವಾಗಿ ಮಾರ್ಪಡಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಇದನ್ನು ಎಡಪಕ್ಷಗಳು ಖಂಡಿಸುತ್ತವೆ. ಹೀಗಾಗಿ ಈ ಒತ್ತಾಯವು ದೇವರು ಧರ್ಮದ ಪ್ರಶ್ನೆಗೆ ಸಂಬಂಧ ಇಲ್ಲದೆ ಇರುವ ವಿಚಾರ. ಅತ್ಯಂತ ಅಕ್ಷಮ್ಯವಾದ ಈ ಎಲ್ಲಾ ಪ್ರಕರಣಗಳು ಸಮಗ್ರ ತನಿಖೆಗೆ ಒಳಪಡಬೇಕು ಎಂದು ಈ ಮೂರು ಎಡ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿವೆ. ಈಗಿರುವ ಪ್ರಣವ್ ಮೊಹಂತಿ ಅವರ ಎಸ್‌ಐಟಿಗೆ ಹೊಸ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟು ಇದನ್ನು ತನಿಖೆಗೆ ಒಳಪಡಿಸಬೇಕು.

ಸ್ವತಂತ್ರವಾದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಈ ಅಂಶಗಳನ್ನು ಸೇರಿಸಿದರೆ ಇದರ ವ್ಯಾಪ್ತಿ ದೊಡ್ಡದಾಗುತ್ತೆ, ಇದಕ್ಕೆ ಸೇರಿಸಲಾಗದು ಎಂಬ ಪ್ರಶ್ನೆ ರಾಜ್ಯ ಸರ್ಕಾರಕ್ಕಿದ್ದರೆ. ಒಂದು ಸ್ವತಂತ್ರವಾದ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ, ಎಲ್ಲಾ ಪ್ರಕರಣಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯ ಮಾಡುತ್ತೇವೆ. ನಾವು ಧರ್ಮಸ್ಥಳದ ಊರಿನ ವಿರುದ್ಧ ಅಲ್ಲ, ಮಂಜುನಾಥ ಸ್ವಾಮಿಯ ವಿರುದ್ಧವೂ ಅಲ್ಲ, ಅಥವಾ ಅಲ್ಲಿರುವ ಕಾವಂದರ ವಿರುದ್ಧವೂ ಅಲ್ಲ, ನಾವು ಕೇಳುತ್ತಿರುವುದು ನ್ಯಾಯದ ಪರವಾದ ಪ್ರಶ್ನೆ. ಎಸ್‌ಐಟಿ ತನಿಖೆಯಾಗಿ  ಅದಕ್ಕೆ ನಿಜವಾದ ಆರೋಪಿಗಳು ಯಾರು ಎನ್ನುವುದು ಪತ್ತೆ ಆದಮೇಲೆ, ಅವರಿಗೆ ಶಿಕ್ಷೆಯಾಗಬೇಕು ಎಂದು ಬಯಸುತ್ತೇವೆ. ನ್ಯಾಯ ಕೇಳುತ್ತಿದ್ದೇವೆ.

ಉಗ್ರಪ್ಪ ಸಮಿತಿ ವರದಿ ಸರ್ಕಾರದ ಬಳಿ ಇದೆ

ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಉಗ್ರಪ್ಪ ಸಮಿತಿ ರಚನೆ ಆಗಿತ್ತು. ಆ ಸಂದರ್ಭದಲ್ಲಿ ಅವರು ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದ್ದ ಅಸಹಜ ಸಾವುಗಳ ಬಗ್ಗೆ ವರದಿಯೊಂದನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದು ಈಗಾಗಲೇ ಸಿದ್ದರಾಮಯ್ಯನವರ ಸರ್ಕಾರದ ಮುಂದಿದೆ. ಅದರ ಬಗ್ಗೆ ಯಾವುದೇ ಚರ್ಚೆಯನ್ನೂ ಮಾಡುತ್ತಿಲ್ಲ. ಆ ವರದಿಯಲ್ಲಿ ಸ್ಪಷ್ಟವಾಗಿ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ನಡೆದಿರುವ ಅಸಹಜ ಸಾವುಗಳ ಪಟ್ಟಿಯೇ ಇದೆ. ಅವೆಲ್ಲವನ್ನು ಸೇರಿಸಿಕೊಂಡು ನಿಜವಾದ ಅಪರಾಧಿಗಳು ಯಾರು ಎಂಬುದು ಪತ್ತೆಯಾಗಬೇಕು. ಎಲ್ಲಾ ಪ್ರಶ್ನೆಗಳು ಇತ್ಯರ್ಥವಾಗಿ ತಪ್ಪಿತಸ್ಥರು ಪತ್ತೆಯಾದರೆ, ಖಂಡಿತವಾಗಿಯೂ ಇಂದು ಜನರಲ್ಲಿರುವ ಗೊಂದಲಗಳಿಗೆ ಉತ್ತರ ಸಿಗುತ್ತವೆ ಎಂದು ಎಡಪಕ್ಷಗಳ ಮುಖಂಡರು ಹೇಳಿದ್ದಾರೆ.

ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ-ಎಂಎಲ್ ರಾಜ್ಯ ಸಮಿತಿ ಸದಸ್ಯೆ ಲೇಖಾ ಇದ್ದರು.

Leave a Reply

Your email address will not be published. Required fields are marked *