ಭಾರತದ ಜಾತ್ಯತೀತ, ಬಹುತ್ವವಾದಿ ಅಡಿಪಾಯಗಳನ್ನು ಕೆಡವಿ, ಅದನ್ನು ಕೋಮುವಾದಿ, ಬಹುಸಂಖ್ಯಾಕವಾದೀ “ಹಿಂದೂ ರಾಷ್ಟ್ರ” ವಾಗಿ ಬದಲಾಯಿಸುವ ಸಂಘ ಪರಿವಾರದ ಫ್ಯಾಸಿಸ್ಟ್ ದಾಳಿಯ ವಿರುದ್ಧದ ಸೈದ್ಧಾಂತಿಕ ಮತ್ತು ರಾಜಕೀಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೀತಾರಾಂ ಯೆಚೂರಿ ನಮನ್ನಗಲಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಅವರ ನಿಕಟ ಸಹಯೋಗಿ ಮತ್ತು ಅವರ ನಂತರ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಎ. ಬೇಬಿ ಅವರಿಂದ ಒಂದು ಸ್ಮರಣೆ.
ಕಾಮ್ರೇಡ್ ಸೀತಾರಾಮ್ ಯೆಚೂರಿ ನಮ್ಮನ್ನು ಅಗಲಿ ಒಂದು ವರ್ಷವಾಗಿದೆ. ಆದರೆ ಇಂದಿಗೂ, ಅವರ ನಿರ್ಗಮನದಿಂದ ಸೃಷ್ಟಿಯಾದ ಆಳವಾದ ಶೂನ್ಯದಿಂದ ನಾವು ಸಂಪೂರ್ಣವಾಗಿ ಹೊರಬಂದಿಲ್ಲ. ಅವರ ಅನುಪಸ್ಥಿತಿಯು ಚಳುವಳಿಯಲ್ಲಿ ಪ್ರತಿಧ್ವನಿಸುತ್ತಲೇ ಇದೆ, ಅವರಲ್ಲಿ ಸಾಕಾರಗೊಂಡಿದ್ದ ಸ್ಪಷ್ಟತೆ, ಬದ್ಧತೆ ಮತ್ತು ಕ್ರಾಂತಿಕಾರಿ ಉತ್ಸಾಹವನ್ನು ನಮಗೆ ನೆನಪಿಸುತ್ತಲೇ ಇದೆ.
ಮೇಲ್ಜಾತಿಯ, ಸವಲತ್ತು ಪಡೆದ ಕುಟುಂಬದಲ್ಲಿ ಜನಿಸಿದ ಕಾಮ್ರೇಡ್ ಯೆಚೂರಿ ಪ್ರಜ್ಞಾಪೂರ್ವಕವಾದ ಮತ್ತು ಅಚಲವಾದ ಒಂದು ಆಯ್ಕೆಯನ್ನು ಮಾಡಿದರು. ಅದೆಂದರೆ, ಭಾರತದ ತುಳಿತಕ್ಕೊಳಗಾದವರು, ಶೋಷಿತರು, ಬಾಯಿ ಮುಚ್ಚಿಸಲ್ಪಟ್ಟವರು ಮತ್ತು ದುಡಿಯುವ ಜನರೊಂದಿಗೆ ನಿಲ್ಲುವುದು. ಅವರ ಬದುಕು ವರ್ಗ ಮತ್ತು ಜಾತಿ ದಬ್ಬಾಳಿಕೆ ಪರಸ್ಪರ ತಳುಕು ಹಾಕಿಕೊಂಡಿದೆ ಮತ್ತು ಅವುಗಳ ವಿರುದ್ಧ ಒಟ್ಟಿಗೆ ಹೋರಾಡಬೇಕು ಎಂಬ ಮಾರ್ಕ್ಸ್ ವಾದಿ ತಿಳುವಳಿಕೆಯ ದೃಢೀಕರಣವಾಗಿತ್ತು. ಭಾರತದಲ್ಲಿ ಬಂಡವಾಳಶಾಹಿಯ ವಿರುದ್ಧದ ಹೋರಾಟವನ್ನು ಜಾತಿ ಶ್ರೇಣೀಕರಣ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧದ ಹೋರಾಟದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂಬ ಸಿಪಿಐ(ಎಂ)ನ ಸ್ಪಷ್ಟ ದೃಷ್ಟಿಕೋನವನ್ನು ಅವರು ಎತ್ತಿಹಿಡಿದರು.
“ಎಲ್ಲೆಲ್ಲಿಒಂದು ಕಾರ್ಖಾನೆಯ ಚಿಮಣಿಯಿಂದ ಹೊಗೆ ಏಳುತ್ತದೆಯೋ, ಅದರೊಂದಿಗೇ ಕಾರ್ಮಿಕರ ಕೆಂಬಾವುಟವೂ ಏರಬೇಕು. ಎಲ್ಲೆಲ್ಲಿ ಅಸ್ಪೃಶ್ಯತೆ ಜನರಿಗೆ ಹಳ್ಳಿಯ ಬಾವಿಯಿಂದ ನೀರನ್ನು ನಿರಾಕರಿಸುತ್ತದೆಯೋ, ಅಲ್ಲಿಯೂ ಒಂದು ಪ್ರತಿರೋಧದ ಕೆಂಬಾವುಟ ಹಾರಾಡಬೇಕು” ಎಂದು ಕಾಮ್ರೇಡ್ ಬಿ.ಟಿ. ರಣದಿವೆಯವರು ಮತ್ತೆ ಮತ್ತೆ ಹೇಳುತ್ತಿದ್ದುದನ್ನು ಕಾಮ್ರೇಡ್ ಯೆಚೂರಿ ನಿರಂತರವಾಗಿ ನಮಗೆ ನೆನಪಿಸುತ್ತಿದ್ದರು. ಕ್ರಾಂತಿಕಾರಿ ತುರ್ತಿನಿಂದ ಕೂಡಿದ್ದ ಈ ಮಾತುಗಳನ್ನು ಕಾಮ್ರೇಡ್ ಯೆಚೂರಿ ಆಗಾಗ್ಗೆ ಉಲ್ಲೇಖಿಸುತ್ತಿದ್ದುದು – ವಾಕ್ಚತುರತೆಯ ಪ್ರದರ್ಶನಕ್ಕಾಗಿ ಅಲ್ಲ, ಬದಲಾಗಿ ಕ್ರಿಯೆಗೆ ಒಂದು ಕರೆಯಾಗಿ.
ಪ್ರಸ್ತುತ ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ, ಭಾರತವು ಹಿಂದೆಂದೂ ಕಾಣದ ಒಂದು ಫ್ಯಾಸಿಸ್ಟ್ ಬೆದರಿಕೆಯನ್ನು ಎದುರಿಸುತ್ತಿದೆ. ಭಾರತದ ಜಾತ್ಯತೀತ, ಬಹುತ್ವವಾದಿ ಅಡಿಪಾಯಗಳನ್ನು ಕೆಡವಿ ಅದನ್ನು ಕೋಮುವಾದಿ, ಬಹುಸಂಖ್ಯಾಕವಾದೀ “ಹಿಂದೂ ರಾಷ್ಟ್ರ”ವನ್ನಾಗಿ ಬದಲಾಯಿಸುವ ಸಂಘ ಪರಿವಾರದ ದೀರ್ಘಕಾಲದ ಯೋಜನೆಯು ನಮ್ಮ ಕಣ್ಣ ಮುಂದೆಯೇ ತೆರೆದುಕೊಳ್ಳುತ್ತಿದೆ. ಇದು ಕೇವಲ ರಾಜಕೀಯ ವಿಚಲನವಲ್ಲ – ಇದು ನಾಗರಿಕತೆಯ ಮೇಲೆ ಮನುಸ್ಮೃತಿ ಮತ್ತು ಹಿಂದುತ್ವ ಸಿದ್ಧಾಂತದಲ್ಲಿ ಬೇರೂರಿರುವ ಒಂದು ದಾಳಿಯಾಗಿದೆ.
ಈ ಫ್ಯಾಸಿಸ್ಟ್ ದಾಳಿಯ ವಿರುದ್ಧದ ಸೈದ್ಧಾಂತಿಕ ಮತ್ತು ರಾಜಕೀಯ ಹೋರಾಟದಲ್ಲಿ ಕಾಮ್ರೇಡ್ ಯೆಚೂರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರೆಸ್ಸೆಸ್ ನ ನಿಜಮುಖವನ್ನು, ಅದರ ಪ್ರತಿಗಾಮಿ, ಪಿತೃಪ್ರಧಾನ, ಜಾತಿವಾದಿ ಅಜೆಂಡಾವನ್ನು ಕರಾರುವಾಕ್ಕಾಗಿ ಬಯಲಿಗೆಳೆದ ಯೆಚುರಿಯವರು ಅದನ್ನು ಪ್ರತಿರೋಧಿಸಲು ಮತ್ತು ಸೋಲಿಸಲು ಜಾತ್ಯತೀತ, ಪ್ರಜಾಪ್ರಭುತ್ವವಾದಿ ಮತ್ತು ಎಡಶಕ್ತಿಗಳ ಒಂದು ಸಂಯುಕ್ತ ರಂಗಕ್ಕೆ ಕರೆಯನ್ನು ನಿರಂತರವಾಗಿ ನೀಡುತ್ತ ಬಂದರು.
ಸೋವಿಯತ್ ಒಕ್ಕೂಟದ ಮತ್ತು ಪೂರ್ವ ಯುರೋಪಿನಲ್ಲಿನ ಸಮಾಜವಾದಿ ಪ್ರಯೋಗಗಳ ಪತನದ ನಂತರದ ಸೈದ್ಧಾಂತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅನೇಕ ಕಮ್ಯುನಿಸ್ಟ್ ಪಕ್ಷಗಳು ಭ್ರಮನಿರಸನ ಮತ್ತು ಹಿಂಜರಿತವನ್ನು ಎದುರಿಸಿದವು. ಆದರೆ ಸಿಪಿಐ(ಎಂ) ಗಂಭೀರ ಆಂತರಿಕ ಚರ್ಚೆ ಮತ್ತು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಆ ಬಿರುಗಾಳಿಯನ್ನು ದೃಢ ನಿರ್ಧಾರದಿಂದ ಎದುರಿಸಿ ಮುನ್ನಡೆಯಿತು. ಕಾಮ್ರೇಡ್ ಇಎಂಎಸ್ ನಂಬೂದಿರಿಪಾಡ್, ಜ್ಯೋತಿ ಬಸು, ಹರ್ಕಿಶನ್ ಸಿಂಗ್ ಸುರ್ಜೀತ್ ಮತ್ತು ಎಂ. ಬಸವಪುನ್ನಯ್ಯನವರು ಇದರ ನೇತೃತ್ವ ವಹಿಸಿದ್ದರು. ಮತ್ತು ಆಗ ಯುವ ಮತ್ತು ಕ್ರಿಯಾಶೀಲ ಒಡನಾಡಿಯಾಗಿದ್ದ ಯೆಚೂರಿ ಅವರಿಗೆ ಸಿಪಿಐ(ಎಂ)ನ 14 ನೇ ಮಹಾಧಿವೇಶನವು ರೂಪಿಸಿದ ಕರಡು ಸೈದ್ಧಾಂತಿಕ ಠರಾವಿನ ಸಹ-ಲೇಖನದ ಜವಾಬ್ದಾರಿಯನ್ನು ವಹಿಸಲಾಯಿತು.
ಇದು ಒಂದು ಐತಿಹಾಸಿಕ ಕಾರ್ಯವಾಗಿತ್ತು. ಆ ಠರಾವು ಸೋವಿಯೆತ್ ಒಕ್ಕೂಟದ ಪತನವನ್ನು ಒಪ್ಪಿಕೊಂಡಿತು, ಅದರ ಕಾರಣಗಳನ್ನು ವಿಶ್ಲೇಷಿಸಿತು ಮತ್ತು ಸೋಲು ಸಮಾಜವಾದದಿಂದಾಗಿಯೇನೂ ಅಲ್ಲ, ಬದಲಾಗಿ ಸಮಾಜವಾದಿ ನಿರ್ಮಾಣದ ಪ್ರಕ್ರಿಯೆಯಲ್ಲಿನ ಗಂಭೀರ ವಿಕೃತಿಗಳು ಮತ್ತು ದೋಷಗಳಿಂದ ಉಂಟಾಗಿದೆ ಎಂದು ತೀರ್ಮಾನಿಸಿತು. ಸಮಯ ಸಮಯದಲ್ಲಿಅಧಿಕಾರಶಾಹಿ ಮತ್ತು ಸಂರಚನಾತ್ಮಕ ವಿರೂಪಗಳನ್ನು ಸರಿಪಡಿಸುವಲ್ಲಿ ವಿಫಲತೆ ಮತ್ತು ಮಾರ್ಗ ಸರಿಪಡಿಕೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿರುವುದು ಪತನಕ್ಕೆ ಪ್ರಮುಖ ಕಾರಣಗಳೆಂದು ಗುರುತಿಸಲಾಯಿತು.
ಕಾಮ್ರೇಡ್ ಯೆಚೂರಿ ಅವರು ಪಕ್ಷದ ಮಹಾಧಿವೇಶನದ ಮುಂದೆ ಈ ಸೈದ್ಧಾಂತಿಕ ಠರಾವನ್ನು ಮಂಡಿಸಿದ್ದು ಮತ್ತು ಅದರ ಮೇಲಿನ ಚರ್ಚೆಗಳಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡದ್ದು, ಭಾರತೀಯ ಕಾರ್ಮಿಕ ವರ್ಗದ ಒಬ್ಬ ಪ್ರಬುದ್ಧ ಮತ್ತು ಶಿಸ್ತಿನ ಮಾರ್ಕ್ಸ್ವಾದಿ ನಾಯಕರಾಗಿ ಅವರ ಉದಯವನ್ನು ತೋರ್ಪಡಿಸಿತು.
2004ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಸೋಲಿನ ನಂತರ, ಯುಪಿಎ ಸರ್ಕಾರ ಅಧಿಕಾರಕ್ಕೆ ಬಂತು. ಕಾಮ್ರೇಡ್ ಯೆಚೂರಿ ಕಾರ್ಮಿಕ ರಂಗವನ್ನು ರಕ್ಷಿಸುತ್ತಲೇ ಮತ್ತು ನೀತಿ ಸುರಕ್ಷತೆಗಳನ್ನು ಖಚಿತಪಡಿಸಿಕೊಳ್ಳುತ್ತಲೇ ಯುಪಿಎಗೆ ಎಡ ಬೆಂಬಲವನ್ನು ಸಂಯೋಜಿಸುವಲ್ಲಿ ಕಾಮ್ರೇಡ್ ಸುರ್ಜೀತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಯುಪಿಎಯ ನೀತಿ ಚೌಕಟ್ಟಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ವನ್ನು ರೂಪಿಸುವಲ್ಲಿ ಕಾಮ್ರೇಡ್ ಯೆಚೂರಿ ಮತ್ತು ಪಿ. ಚಿದಂಬರಂ ಸಕ್ರಿಯವಾಗಿ ಭಾಗವಹಿಸಿದರು. ಆ ಅವಧಿಯಲ್ಲಿ ಅವರು ಗಳಿಸಿದ ಅನುಭವವು ಅವರ ರಾಜಕೀಯ ಕುಶಾಗ್ರತೆಯನ್ನು, ವಿಶೇಷವಾಗಿ ಕೋಮುವಾದಿ ಬಲಪಂಥಕ್ಕೆ ವಿಶಾಲವಾದ ಪ್ರತಿರೋಧವನ್ನು ನಿರ್ಮಿಸುವಲ್ಲಿ ಆಳಗೊಳಿಸಿತು.
ಇಂದು, ಪ್ರಸಕ್ತ ಆಳ್ವಿಕೆಯ ಅಡಿಯಲ್ಲಿ, ಭಾರತವು ಸಂಘ ಪರಿವಾರದ ನವ-ಫ್ಯಾಸಿಸ್ಟ್ ಶಕ್ತಿಗಳ ಮುತ್ತಿಗೆಗೆ ಒಳಗಾಗಿದೆ. ಸಿಪಿಐ(ಎಂ) ನ 24ನೇ ಮಹಾಧಿವೇಶನವು ಈ ಸರ್ವಾಧಿಕಾರಶಾಹೀ ಬೆದರಿಕೆಯ ವಿರುದ್ಧ ವಿಶಾಲ ಮತ್ತು ಸಮರಶೀಲ ಪ್ರತಿರೋಧವನ್ನು ನಿರ್ಮಿಸುವುದು ಮತ್ತು ದೇಶಾದ್ಯಂತ ಪಕ್ಷದ ಸ್ವತಂತ್ರ ಶಕ್ತಿಯನ್ನು ವಿಸ್ತರಿಸುವುದು ಪ್ರಧಾನ ಕಾರ್ಯಭಾರ ಎಂದು ಸ್ಪಷ್ಟವಾಗಿ ಗುರುತಿಸಿದೆ.
ಇಂದು ಕಾರ್ಯನಿರತ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರವನ್ನು ಹೊಂದಿರುವ ಭಾರತದ ಏಕೈಕ ರಾಜ್ಯವಾಗಿ, ಕೇರಳವು ಭರವಸೆಯ ತೋರುದೀಪವಾಗಿ, ಒಂದು ಪರ್ಯಾಯ ದಾರಿ ಸಾಧ್ಯ ಎಂಬುದಕ್ಕೆ ಒಂದು ಜೀವಂತ ಉದಾಹರಣೆಯಾಗಿ ನಿಂತಿದೆ. ಕೇಂದ್ರದ ನಿರಂತರ ದಾಳಿಗಳನ್ನು ಎದುರಿಸಿಯೂ ಆಡಳಿತವು ಜನಪರ, ಜಾತ್ಯತೀತ ಮತ್ತು ಅಭಿವೃದ್ಧಿ-ಆಧಾರಿತವಾಗಿರಲು ಸಾಧ್ಯವಿದೆ ಎಂದು ಕಾಮ್ರೇಡ್ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ, ಎಲ್ಡಿಎಫ್ ಸರ್ಕಾರ ಪ್ರದರ್ಶಿಸಿದೆ.
ಕೇರಳದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಚುನಾವಣೆಗಳು ನಿರ್ಣಾಯಕವಾಗಿವೆ. ಎಲ್ಡಿಎಫ್ನ ಉಪಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮತ್ತು ವಿಸ್ತರಿಸುವುದು ಕೇವಲ ರಾಜ್ಯ ಮಟ್ಟದ ರಾಜಕೀಯ ಗುರಿಯಷ್ಟೇ ಅಲ್ಲ, ಅದು ರಾಷ್ಟ್ರೀಯ ಅವಶ್ಯಕತೆಯೂ ಆಗಿದೆ. ಎಲ್.ಡಿ.ಎಫ್ ನ ನಿರಂತರ ಯಶಸ್ಸು ಭಾರತದಾದ್ಯಂತ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಶಕ್ತಿ ಮತ್ತು ವಿಶ್ವಾಸವನ್ನು ನೀಡುತ್ತದೆ. ಭಾರತದಲ್ಲಿ ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಸಮರದಲ್ಲಿ ಎಲ್.ಡಿ.ಎಫ್ ನ ಮಹತ್ವವನ್ನು ಗುರುತಿಸಿ, ಕಾಮ್ರೇಡ್ ಯೆಚೂರಿ ಯಾವಾಗಲೂ ಅದರೊಂದಿಗೆ ಸದಾ ದೃಢವಾಗಿ ನಿಂತರು.
ತಮಿಳುನಾಡು, ಬಂಗಾಳ, ಅಸ್ಸಾಂ, ಪುದುಚೇರಿ ಮತ್ತು ಬಿಹಾರದ ಚುನಾವಣೆಗಳು ಕೂಡ ಭಾರತದ ರಾಜಕೀಯ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಬಿಜೆಪಿಯ ಸೋಲು ಮತ್ತು ಎಡ ಮತ್ತು ಪ್ರಗತಿಪರ ಶಕ್ತಿಗಳ ಮುನ್ನಡೆ ನಮ್ಮ ತಕ್ಷಣದ ರಾಜಕೀಯ ಗುರಿಯಾಗಿರಬೇಕು. ಇದನ್ನು ಸಾಧಿಸಲು, ಸಿಪಿಐ(ಎಂ)ನ ಸಂಪೂರ್ಣ ಶಕ್ತಿಯನ್ನು – ಅದರ ಒಂದು ದಶಲಕ್ಷಕ್ಕೂ ಹೆಚ್ಚು ಸದಸ್ಯರನ್ನು – ಸಜ್ಜುಗೊಳಿಸಬೇಕು. ಎಲ್ಲಾ ಸಾಮೂಹಿಕ ರಂಗಗಳು ಚೈತನ್ಯಶೀಲವಾಗಬೇಕು. ನಮ್ಮ ರಾಜಕೀಯ ಹೋರಾಟಗಳು ಸಾಂಸ್ಕೃತಿಕ ಪ್ರಜ್ಞೆ, ಸೃಜನಶೀಲತೆ ಮತ್ತು ಸ್ಪಷ್ಟತೆಯಿಂದ ತುಂಬಿರಬೇಕು.
ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಕೃತಿಕ –ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಗಿರುವ ಸಮರದಲ್ಲಿ ಕಾಮ್ರೇಡ್ ಯೆಚೂರಿಯವರು ಹಾಕಿಕೊಟ್ಟ ಪರಂಪರೆಯು ಮಾರ್ಗದರ್ಶಕ ಬೆಳಕಾಗಿರುತ್ತದೆ. ಅವರ ಬದ್ಧತೆ, ಅವರ ತೀಕ್ಷ್ಣ ಬೌದ್ಧಿಕತೆ, ಅವರ ಅವಿಶ್ರಾಂತ ಕೆಲಸ ಮತ್ತು ಜನಸಮೂಹಗಳೊಂದಿಗೆ ಅವರ ಆಳವಾದ ಸಂಪರ್ಕ- ಈ ಗುಣಗಳನ್ನು ನಾವು ಮುಂದೊಯ್ಯಬೇಕಾಗಿದೆ.
ಕಾಮ್ರೇಡ್ ಸೀತಾರಾಮ್ ಯೆಚೂರಿಯವರ ಕ್ರಾಂತಿಕಾರಿ ಜೀವನದಿಂದ ಪ್ರೇರಿತರಾಗಿ ನಾವು ಸಿದ್ಧರಾಗೋಣ. ಶೋಷಣೆಯನ್ನು ಕಿತ್ತೊಗೆಯುವ, ಜಾತಿ ಮತ್ತು ಕೋಮು ದಬ್ಬಾಳಿಕೆಯನ್ನು ಕೊನೆಗಾಣಿಸುವ ಮತ್ತು ಒಂದು ಸಮಾಜವಾದಿ ಭಾರತವನ್ನು ನಿರ್ಮಿಸುವ ನಮ್ಮ ಐತಿಹಾಸಿಕ ಕಾರ್ಯವನ್ನು ಮುಂದೊಯ್ಯುವಲ್ಲಿಅವರು ನಮಗೆ ತೋರಿಸಿದ ಅಚಲ, ರಾಜಿಯಾಗದ ಮತ್ತು ಮಾರ್ಕ್ಸ್ ವಾದಿ-ಲೆನಿನ್ ವಾದಿ ಚಿಂತನೆಯಲ್ಲಿ ಬೇರೂರಿರುವ ದಾರಿಗೆ ನಾವು ಬದ್ಧರಾಗೋಣ.
