2016 ಎಪ್ರಿಲ್ ನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆದಿತ್ತು. ಇವುಗಳ ಆಡಳಿತದ ಅವಧಿ 2021 ಎಪ್ರಿಲ್ ನಲ್ಲಿ ಮುಗಿದಿದೆ. ಈಗಾಗಲೇ ಜನ ಪ್ರತಿನಿಧಿಗಳ ಆಡಳಿತ ಇಲ್ಲದೇ ಐದು ವರ್ಷಗಳು ಕಳೆದಿವೆ. ಇದು ಅಧಿಕಾರ ವಿಕೇಂದ್ರೀಕರಣದ ಪಂಚಾಯತ್ ರಾಜ್ ಕಾಯ್ದೆಯ ಸ್ಪೂರ್ತಿಗೆ ವಿರುದ್ದವಾಗಿದೆ. ಇದರಿಂದಾಗಿ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಮಾನವ ಅಭಿವೃದ್ಧಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾಗಿದ್ದ 1279 ಕೋಟಿ ರೂಪಾಯಿ ಅನುದಾನ ಕಡಿತಗೊಂಡಿದೆ. ಅಧಿಕಾರ ಕೇಂದ್ರೀಕರಣದ ಹಾಗೂ ಆಡಳಿತ ಭ್ರಷ್ಟಾಚಾರವನ್ನು ಬೆಂಬಲಿಸುವ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಇಂತಹ ಲೋಪಕ್ಕೆ ಪೂರ್ಣ ಹೊಣೆಯಾಗಿದೆ. ಇಂತಹ ಅಕ್ಷಮ್ಯ ಅಪರಾಧ ಮುಂದುವರೆಯದಂತೆ ತಕ್ಷಣ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಕೇರಳದ ಎಡ ಪ್ರಜಾಪ್ರಭುತ್ವ ರಂಗ ಸರಕಾರವು ನಿಗದಿತ ಕಾಲಾವಧಿಯಲ್ಲಿ ಯಶಸ್ವಿಯಾಗಿ ಚುನಾವಣೆ ನಡೆಸುತ್ತಾ ಬಂದಿದೆ. ಸುಮಾರು ಐದು ವರ್ಷ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯು ಅಧಿಕಾರಿಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿ, ಯಾರಿಗೂ ಉತ್ತರದಾಯಿ ಅಲ್ಲದ ಸ್ಥಿತಿಯಲ್ಲಿ ಇರುವಾಗ, ಮತ್ತಷ್ಟು ವಿಳಂಬ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
ಧೀರ್ಘ ಅವಧಿಯ ಚುನಾವಣೆ ಮುಂದೂಡಿಕೆಗೆ ಮೂಲ ಕಾರಣ ಹಿಂದಿನ ಬಿಜೆಪಿ ಸರಕಾರ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನೆಪದಲ್ಲಿ ಚುನಾವಣೆ ಮುಂದೂಡಲಾಗಿತ್ತು. ರಾಜ್ಯ ಚುನಾವಣಾ ಆಯೋಗವು ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಹೈಕೋರ್ಟ್ ಮೆಟ್ಟಲೇರಿತ್ತು. ಈಗಲಾದರೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು ಚುನಾವಣೆ ನಡೆಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಒಳ ಮೀಸಲಾತಿ ವರ್ಗೀಕರಣದ ಲೋಪ ಸರಿಪಡಿಸಲು ಆಗ್ರಹ
ಪರಿಶಿಷ್ಟ ಜಾತಿ ಸಮುದಾಯಗಳ ಒಳ ಮೀಸಲಾತಿ ವರ್ಗೀಕರಣದಲ್ಲಿ ಇದುವರೆಗೆ ಮೀಸಲಾತಿ ಸೌಲಭ್ಯದಿಂದ ವಂಚಿತವಾದ ಅಲೆಮಾರಿ ಮತ್ತಿತರ ವಿಭಾಗಗಳಿಗೆ ನ್ಯಾಯ ಒದಗಿಸುವ ತನ್ನ ಭರವಸೆ ವಿರುದ್ದ ಕಾಂಗ್ರೆಸ್ ಸರ್ಕಾರ ವರ್ತಿಸಿರುವುದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.
ಒಳ ಮೀಸಲಾತಿ ವರ್ಗೀಕರಣಕ್ಕೆ ಅಗತ್ಯವಾದ ಸಮರ್ಪಕ ದತ್ತಾಂಶಗಳ ಆಧಾರವನ್ನು ಕಡೆಗಣಿಸಿ ಅಂಗೀಕರಿಸಿದ ಶಾಸನವು ನ್ಯಾಯಾಂಗದ ಪರಾಮರ್ಶೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗೆ ಯಾವುದೇ ದೂರದೃಷ್ಟಿ ಇಲ್ಲದ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಅದ್ದರಿಂದ ಒಳ ಮೀಸಲಾತಿಯ ಸೂಕ್ತವಾದ ವರ್ಗೀಕರಣ ಹಾಗೂ ಹಂಚಿಕೆಯನ್ನು ಮಾಡಬೇಕು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
