ಮಾನವತೆ ವಿರುದ್ಧ ಈ ಘೋರ ಅಪರಾಧ ಕೊನೆಗೊಳ್ಳಲಿ

ಕಳೆದ ವಾರದ ಕೆಲವು ಸಂವೇದನಾತ್ಮಕ ಬೆಳವಣಿಗೆಗಳು ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಾಟಕೀಯ ಪರಿಣಾಮದೊಂದಿಗೆ ಮುನ್ನೆಲೆಗೆ ತಂದಿವೆ.

ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ ನಿಂದ ಆಮಿಷಕ್ಕೊಳಗಾಗಿ ಅತ್ಯಾಚಾರಕ್ಕೀಡಾದ ಕೇವಲ 15 ವರ್ಷದ ಸಂತ್ರಸ್ತ ಬಾಲಕಿಯ ಅತ್ಯಪರೂಪದ ಪ್ರಕರಣವು ಸಾರ್ವಜನಿಕರ ಆಕ್ರೋಶಭರಿತ ಚರ್ಚೆಗೆ ಗ್ರಾಸವಾಗಿದೆ. 2017ರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೊಳಗಾದ ಸೆಂಗಾರ್‌ ನ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, ಆತನಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ನಿರ್ಧಾರವು ನಂಬಲಿಕ್ಕೇ ಆಗದ ವಿದ್ಯಮಾನವಾಗಿದೆ. ಸಹಜವಾಗಿಯೇ ಈ ಅಸಹ್ಯಕರ ಬೆಳವಣಿಗೆ ದೇಶದಾದ್ಯಂತ ಆಕ್ರೋಶದ ಅಲೆಯನ್ನು ಎಬ್ಬಿಸಿದೆ. ಲೈಂಗಿಕ ದೌರ್ಜನ್ಯದಲ್ಲಿ ಬದುಕುಳಿದ ಸಂತ್ರಸ್ತರಿಗೆ ನ್ಯಾಯ ಸಿಗುವ ವಿಚಾರದ ಚರ್ಚೆಯ ಕಿಡಿಗಳು ಮತ್ತೆ ಹೊತ್ತಿ ಕೊಂಡಿದೆ.

ಉನ್ನಾವೋ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ಹೋರಾಡಿದ ಅಂಬೇಡ್ಕರ್‌ ವಾದಿ ವಕೀಲ ಮೆಹಮೂದ್ ಪ್ರಚಾ, ಹೈಕೋರ್ಟ್ ನ ಈ ತೀರ್ಪಿನಿಂದಾಗುವ ಸಾಮಾಜಿಕ ಪರಿಣಾಮಗಳ ಕುರಿತು ಒಳನೋಟಗಳುಳ್ಳ ವಿಚಾರಗಳನ್ನು ಹಂಚಿಕೊಂಡಿದ್ದಾರೆ. `ನ್ಯಾಯವೇ ಬಲಿಪಶುವಾಗಿದೆ’ ಎಂದು ಅವರು ಹೇಳಿರುವುದು ತುಂಬಾ ಮಾರ್ಮಿಕವಾಗಿದೆ. `ಅಸಿಫಾ ಕೇಸ್, ಹಾಥರಸ್ ಕೇಸ್ ಮತ್ತು ಈಗ ಉನ್ನಾವೋ ಕೇಸ್‌ ನಂಥ ಹಲವಾರು ಪ್ರಕರಣಗಳು ಇಡೀ ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತವೆ. ಇಂದು ಭಾರತದಲ್ಲಿ, ನ್ಯಾಯಾಂಗದ ವಿಳಂಬವು ಎಷ್ಟು ಸಹಜವಾಗಿ ಬಿಟ್ಟಿದೆಯೆಂದರೆ ಸ್ವತಃ ನ್ಯಾಯವೇ ಸಂತ್ರಸ್ತವಾಗುತ್ತದೆ’ ಎಂದೂ ಪ್ರಚಾ ಹೇಳಿದ್ದಾರೆ.

ಬಹುಶಃ ಈ ಹೊಸ ಭಯಾನಕ ಘಟನೆಗಳು ಗುಜರಾತ್‌ ನ ಕೋಮುವಾದಿ ಮಾರಣಹೋಮದ ನಂತರದ ಪರಿಣಾಮದಂತೆ ಕಾಣುತ್ತದೆ. ಬಿಲ್ಕಿಸ್ ಬಾನೋ ಪ್ರಕರಣವು ಈ ಹೇಯ ಹಾಗೂ ಭೀಕರ ಪ್ರಕ್ರಿಯೆಯನ್ನು ಮುನ್ನೆಲೆಗೆ ತಂದಿದೆ. ಹಿಂದೆ ಆ ಮಹಿಳೆಯನ್ನು ಹಿಂಸೆಗೆ ಒಳಪಡಿಸಿರಲಿಲ್ಲ; ಆದರೆ ಸಾಮಾಜಿಕ, ರಾಜಕೀಯ, ಮತ್ತು ಈ ಎಲ್ಲವುಗಳಿಗೆ ಸೈದ್ಧಾಂತಿಕ ಬೆಂಬಲವನ್ನು ಒದಗಿಸುವ ಮೂಲಕ ಇಂಥ ಅಪರಾಧಗಳನ್ನು ಅಸ್ತ್ರವನ್ನಾಗಿಸುವುದು ಹೊಸ ಆಯಾಮವಾಗಿದೆ. ಲಿಂಗ ಮತ್ತು ಕೋಮುವಾದಿ-ದಲಿತ ಕಿರುಕುಳದ ಈ ಛೇದಕವು ವಾಸ್ತವತೆಯನ್ನು ಇನ್ನೂ ಅಪಾಯಕಾರಿಯನ್ನಾಗಿಸುತ್ತದೆ.

ಬಿಲ್ಕಿಸ್ ಬಾನೋ, ನ್ಯಾಯ ಪಡೆಯುವ ನಿಟ್ಟಿನಲ್ಲಿ ಅಗಾಧವಾದ ದೃಢತೆಯನ್ನು ತೋರಿದ್ದರು. ನಾಗರಿಕ ಸಮಾಜ ಮತ್ತು ಸಂಬಂಧಪಟ್ಟ ಗುಂಪುಗಳು ಪ್ರಕಟಿಸಿದ ವರದಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ವ್ಯಾಪಕ ಸಾಕ್ಷ್ಯಗಳು ಸಿಕ್ಕಿದ್ದವು. ಅಲ್ಲದೆ, ಆರ್‌ ಟಿ ಐ ಅರ್ಜಿಗಳ ಮೂಲಕ ಪಡೆಯಲಾದ ಮಾಹಿತಿಗಳು, ಕೆಲವು ಅತ್ಯಾಚಾರಗಳು ಮಾತ್ರ ವರದಿಯಾಗಿದ್ದವು ಹಾಗೂ ಅದಕ್ಕಿಂತಲೂ ಕಡಿಮೆ ಕೇಸ್‌ ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು ಎನ್ನುವುದನ್ನು ಸೂಚಿಸುತ್ತವೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ; ತಮಗಾದ ಕೆಟ್ಟ ಅನುಭವಗಳನ್ನು ಹೇಳಲು ಮಹಿಳೆಯರು ಹಿಂಜರಿಯಲು ಅತ್ಯಾಚಾರ ಸಂತ್ರಸ್ತರನ್ನು ಸಮಾಜ ಕೀಳಾಗಿ ಕಾಣುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು ಕಾರಣವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. 2002ರ ಗುಜರಾತ್ ಕೋಮು ಮಾರಣಹೋಮ ನಡೆಸಿದವರನ್ನು ಶಿಕ್ಷೆಗೆ ಒಳಪಡಿಸದೆ ಬಿಟ್ಟಿರುವುದರಿಂದ ಕೋಮು ದಳ್ಳುರಿಯ ಸಂತ್ರಸ್ತರು ಪೊಲೀಸರನ್ನು ಭೇಟಿಯಾಗುವುದರಿಂದ ತಡೆಯಿತು ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಯಾಕೆಂದರೆ ಪೊಲೀಸರ ಬಗ್ಗೆ ಮುಸ್ಲಿಂ ಮಹಿಳೆಯರು ವಿಶ್ವಾಸ ಕಳೆದುಕೊಂಡಿದ್ದರು.

ಭಯಾನಕ ವಾತಾವರಣವಿದ್ದರೂ ಹೋರಾಡಲು ಮುಂದೆ ಬಂದ ಕೆಲವೇ ಅತ್ಯಾಚಾರ ಸಂತ್ರಸ್ತರಲ್ಲಿ ಬಿಲ್ಕಿಸ್ ಕೂಡ ಒಬ್ಬರು. ಅವರು ಐತಿಹಾಸಿಕ ಹೋರಾಟ ನಡೆಸಿ ಸ್ವತಂತ್ರ ಭಾರತದಲ್ಲಿ ಕೋಮು ಹಿಂಸಾಚಾರದ ವೇಳೆಯ ಈ ಅಪರಾಧಕ್ಕಾಗಿ ಮೊತ್ತಮೊದಲ ಬಾರಿಗೆ ಶಿಕ್ಷೆಯಾಗುವುದನ್ನು ಖಾತರಿಪಡಿಸಿದರು. ಇಡೀ ಸಮುದಾಯವನ್ನು ಅವಮಾನಗೊಳಿಸಲು ಹಾಗೂ ನೈತಿಕವಾಗಿ ಕುಗ್ಗಿಸಲು ಕೋಮು ಹಿಂಸಾಚಾರದ ವೇಳೆ ಮಹಿಳೆಯರ ದೇಹಗಳನ್ನು ಬರ್ಬರ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೂ ಗುಜರಾತ್ ಸರಕಾರ ಅಪರಾಧಿಗಳನ್ನು ಕ್ಷಮಿಸಿತು. ಕೆಲವು ಗೌರವಾನ್ವಿತ ಎನ್‌ಜಿಒಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಯತ್ನಗಳ ಫಲವಾಗಿ ಸರಿಯಾದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿತು, ವಿಚಾರಣೆಯನ್ನು ಗುಜರಾತ್‌ ನಿಂದ ಹೊರಗಡೆ ನಡೆಸಲು ಕ್ರಮ ಕೈಗೊಂಡಿತು ಹಾಗೂ ರಾಜ್ಯ ಪೊಲೀಸರ ಎಫ್‌ಐಆರ್‌ ಅನ್ನು ತಿರಸ್ಕರಿಸಿತು.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಮಾರಣಹೋಮದ ವೇಳೆ ಬಿಲ್ಕಿಸ್ ಬಾನೋ ಮತ್ತು ಇತರ ಅನೇಕ ಮಹಿಳೆಯರಿಗೆ ಆಗಿದ್ದನ್ನು ನೆನಪಿಸುವಂತಿತ್ತು ಉನ್ನಾವೋ ಪ್ರಕರಣ. ಉನ್ನಾವೋ ಕೇಸ್ ನಿಜವಾಗಿಯೂ ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾದ ಒಂದು ಪ್ರಕರಣವಾಗಿದೆ. ಆದರೆ, ಸೆಂಗಾರ್ ತನ್ನ ಬಲಿಷ್ಠ ಸಂಪರ್ಕಗಳನ್ನು ಬಳಸಿಕೊಂಡು ಪೊಲೀಸರು ಮತ್ತು ರಾಜ್ಯ ಸರ್ಕಾರದಿಂದ ರಕ್ಷಣೆ ಪಡೆಯುವಲ್ಲಿ ಸಫಲನಾಗಿದ್ದ. ಉನ್ನಾವೋ ಪ್ರಕರಣದ ವಿಚಾರಣೆಯ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದ ಕಾಲಾವಧಿಯಲ್ಲಿ ಸಾಕ್ಷ್ಯವನ್ನು ನಾಶ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಲಾಯಿತು. ಅಪರಾಧಿಗೆ ಪರಿಹಾರ ಒದಗಿಸಿದ ಹೇಯ ಆದೇಶ ಹೊರಡಿಸಿದ ದೆಹಲಿ ಹೈಕೋರ್ಟ್ ಕೂಡ, ಕರುಣೆ ತೋರುವಂತೆ ಅಪರಾಧಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿರೋಧಿಸಿರಲಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿದೆ. ದೇಶದಾದ್ಯಂತ ಉಂಟಾಗಿರುವ ಆಕ್ರೋಶವನ್ನು ಗಮನಿಸಿದ ಸಿಬಿಐ, ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ಕೋರುವ ಅರ್ಜಿ ಸಲ್ಲಿಸುವ ಒತ್ತಡಕ್ಕೆ ಒಳಗಾಗಿದೆ. ದೆಹಲಿ ಕೋರ್ಟ್ ಆದೇಶವು ಕಾನೂನಿನ ವಿಚಾರದಲ್ಲೂ ಎಡವಿದೆ ಹಾಗೂ ಕ್ರಮೇಣ ಅಪರಾಧಿಗೆ ಪರಿಹಾರ ನೀಡಿದ್ದಕ್ಕೆ ತಡೆ ನೀಡುವುದನ್ನು ಖಾತರಿಪಡಿಸುವಲ್ಲಿಯೂ ದಾರಿ ತಪ್ಪಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿರುವುದು ಇನ್ನೊಂದು ಮಹತ್ವದ ವಿಚಾರವಾಗಿದೆ.

ಪ್ರಖ್ಯಾತ ಹೋರಾಟಗಾರರು ಮತ್ತು ಮಹಿಳಾ ಚಳವಳಿ ಹಾಗೂ ನಾಗರಿಕ ಸಮಾಜದ ಮುಖಂಡರು ಅಗಾಧವಾದ ಬೌದ್ಧಿಕ ಮತ್ತು ರಾಜಕೀಯ ಕೆಲಸವನ್ನು ಮಾಡಿದ್ದಾರೆ. ಈ ಕ್ರೂರ ಬೆಳವಣಿಗೆಗಳ ಬಗ್ಗೆ ತಮ್ಮ ಅನುಭವಗಳನ್ನು ದಾಖಲೀಕರಿಸಿದ್ದಾರೆ. ಅವುಗಳನ್ನು ನಿರ್ಲಕ್ಷಿಸುವುದೆಂದರೆ ನಮ್ಮ ನಾಶವನ್ನು ನಾವೇ ಆಹ್ವಾನಿಸಿದಂತೆಯೇ ಸರಿ. ಪ್ರಖ್ಯಾತ ಕಾರ್ಯಕರ್ತರು, ನಾಯಕರು, ನ್ಯಾಯ ಪಂಡಿತರು ಮತ್ತು ಮಹಿಳಾವಾದಿಗಳು ಮಾಡಿರುವ ಈ ಅಧ್ಯಯನಗಳು ಮತ್ತು ಪ್ರಕಟಣೆಗಳು, ಮಹಿಳೆಯರ ವಿರುದ್ಧದ ಬೆಳೆಯುತ್ತಿರುವ ಅಪರಾಧಗಳಿಗೂ ಬೆಳೆಯುತ್ತಿರುವ ಹಿಂದೂತ್ವ ಶಕ್ತಿಗಳು ಮತ್ತು ಆರ್‌ಎಸ್‌ಎಸ್-ಬಿಜೆಪಿ ಅಧಿಕಾರಕ್ಕೆ ಏರಿರುವುದಕ್ಕೂ ನಿಸ್ಸಂಶಯವಾಗಿಯೂ ಸಂಬಂಧವಿರುವುದನ್ನು ನಿರೂಪಿಸಿವೆ. ಹಿಂದೂತ್ವ ಸಂಬಂಧಿತ ಅಪರಾಧಿಗಳಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ಅಧಿಕಾರವೇ ಅವಕಾಶ ಕಲ್ಪಿಸುತ್ತದೆ ಹಾಗೂ ನ್ಯಾಯದ ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಡೆಯುತ್ತದೆ.

ಆದ್ದರಿಂದ, ಇದೊಂದು ಕೇವಲ ಅಪರಾಧವಲ್ಲ; ಬದಲಿಗೆ ಕ್ರಿಮಿನಲ್ ರಕ್ಷಣೆಯಾಗಿದೆ. ಅದು ಸದಾ ಸಂಭ್ರಮಿಸುತ್ತಿದ್ದು ಈ ರಾಷ್ಟ್ರದ ಮೂಲ ಚೌಕಟ್ಟನ್ನೇ ನಾಶ ಮಾಡುತ್ತದೆ.

ಈ ಕ್ಯಾನ್ಸರ್‌ ಕಾರಕ ವೈರಸ್‌ ನ ಅಗತ್ಯ ಸೈದ್ಧಾಂತಿಕ ಬೇರುಗಳನ್ನು ನೋಡುವುದು ಉಪಯುಕ್ತವಾಗುತ್ತದೆ. ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಮೋಹನ್ ಭಾಗವತ್ ಸಹಿತ ಉನ್ನತ ನಾಯಕರು, ಪುರುಷ ಶ್ರೇಷ್ಠತೆ ಹಾಗೂ ಪಿತೃ ಪ್ರಧಾನ ಧೋರಣೆಯತ್ತ ಆರೆಸ್ಸೆಸ್‌ ನ ಒಲವನ್ನು ಎತ್ತಿ ಹಿಡಿದಿದ್ದಾರೆ. ಸನಾತನ ಧರ್ಮದ ಸಮೀಕರಣದೊಂದಿಗೆ ಹಿಂದೂತ್ವದ ಪ್ರತಿಪಾದನೆಯು ಈ ಒಲವುಗಳನ್ನು ಎತ್ತಿತೋರಿಸುತ್ತವೆ. ರಾಮಾಯಣ ಮತ್ತು ಮಹಾಭಾರತದ ದಿನಗಳಿಂದ ಹಿಡಿದು ಅವುಗಳು ಯಾವಾಗಲೂ ಸೀತಾ ಮತ್ತು ದ್ರೌಪದಿಯನ್ನು ಉಲ್ಲೇಖಿಸಿದ್ದು ನಮ್ಮ ಸಮಷ್ಟಿ ಪ್ರಜ್ಞೆಯಲ್ಲಿ ಉಳಿದುಕೊಂಡು ಬಂದಿದೆ. ತನ್ನ ಚಾರಿತ್ರ್ಯವನ್ನು ಸಾಬೀತುಪಡಿಸಲು ಸೀತಾ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾಯಿತು. ದ್ರೌಪದಿಯ ದೇಹವು ಮೇಲುಗೈ ಸಾಧಿಸಲು ಒಂದು ಯುದ್ಧ ರಂಗವೇ ಆಗಿದ್ದು ಸಾರ್ವಜನಿಕವಾಗಿ ಅವಮಾನಕ್ಕೆ ತುತ್ತಾಗಬೇಕಾಯಿತು.

ಪುರಾಣಗಳು ಮಾತ್ರವಲ್ಲದೆ ನೈಜ ವೇದ ಮತ್ತು ಪುರಾಣ ಪಠ್ಯಗಳು ಕೂಡ ಮಹಿಳೆಯರನ್ನು ಕೀಳಾಗಿ ತೋರಿಸುವ ಅಳಿಸಲಾಗದ ಪ್ರಕ್ರಿಯೆಯನ್ನು ಒಳಗೊಂಡಿವೆ. ಋಗ್ವೇದ ಮತ್ತು ಅಥರ್ವ ವೇದಗಳು ಮಹಿಳೆಯನ್ನು ಮನೆಗೆಲಸ ಮತ್ತು ಮಾತೃತ್ವಕ್ಕಷ್ಟೇ ಸೀಮಿತಗೊಳಿಸಿವೆ. ಅಧೀನಳಾಗಿರುವುದನ್ನು ಸೌಮ್ಯವಾಗಿ ಸೂಚಿಸುವ ಪತಿಗೆ ಅರ್ಪಿಸಿಕೊಂಡಿರುವಿಕೆ ಮಹಿಳೆಯ ಪ್ರಮುಖ ಆದ್ಯತೆಯಾಗಿದೆ. ಭಗವದ್ ಗೀತೆ, ಅರ್ಥ ಶಾಸ್ತ್ರ ಮತ್ತು ಅವೆಲ್ಲದಕ್ಕೆ ಮೇಲಾಗಿ ಮನುಸ್ಮೃತಿಯು ನಿದ್ದೆ, ಕಾಮ, ಕೋಪ, ಅಪ್ರಾಮಾಣಿಕತೆ, ದುರುದ್ದೇಶ ಮತ್ತು ಕೆಟ್ಟ ನಡತೆಯು ಮಹಿಳೆಯ ಗುಣಗಳೆಂದು ಆರೋಪಿಸುತ್ತವೆ. ಮಹಿಳೆಯರು ಹೃದಯಹೀನರು ಮತ್ತು ನಿಷ್ಠೆಯಿಲ್ಲದವರು ಎಂದು ಹೇಳುತ್ತಾ ಅವರ ಬಗ್ಗೆ ಎಚ್ಚರದಿಂದ ಇರಬೇಕೆಂದು ತಿಳಿಸುತ್ತವೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಬಾರದು. ಕೊಟ್ಟರೆ ಸಾಮಾಜಿಕ ಸಂರಚನೆಯೇ ನಾಶವಾಗುತ್ತದೆ, ಅವರು ಚಂಚಲ ಮನಸ್ಸಿನವರು ಎನ್ನುತ್ತವೆ. ಒಬ್ಬ ಪುರುಷ ತನ್ನ ಪತ್ನಿಯನ್ನು ಬಿಡಬಹುದು, ಅಡಮಾನ ಇಡಬಹುದು ಅಥವಾ ಆಕೆಯನ್ನು ಮಾರಲೂ ಬಹುದು (ಅಂದರೆ ದ್ರೌಪದಿ) ಎಂದೂ ಮನುಸ್ಮೃತಿ ಹೇಳುತ್ತದೆ. ಆಕೆ ಯಾವತ್ತೂ ತನ್ನ ಗಂಡನನ್ನು ಅತೃಪ್ತಿಗೊಳಿಸಬಾರದು. ಶಿವ ಪುರಾಣ, ದೇವಿ ಭಾಗವತಂ ಪುರಾಣ, ಬ್ರಹ್ಮ ವೈವರ್ತ ಪುರಾಣ, ಭಗವದ್ ಪುರಾಣ, ನಾರದ ಪುರಾಣ, ಗರುಡ ಪುರಾಣ, ಅಗ್ನಿ ಪುರಾಣ, ಮತ್ಸ್ಯ ಪುರಾಣ ಮತ್ತು ಬ್ರಾಹ್ಮಣ ಪುರಾಣದಲ್ಲಿ ಇಂಥ `ವಿವೇಕದ ಅಣಿ ಮುತ್ತುಗಳು’ ಇವೆ. ಮನೆಗೆ ಸೀಮಿತವಾಗಿರುವುದು ಮತ್ತು ಪತಿ ಹಾಗೂ ಕುಟುಂಬದ ಇತರ ಪುರುಷರಿಗೆ ವಿಧೇಯಳಾಗಿರುವುದರಿಂದ ಮಹಿಳೆ ತನ್ನ ಸ್ವಾತಂತ್ರ್ಯವನ್ನೇ ಮರೆಯಬಹುದು.

20ನೇ ಶತಮಾನದಲ್ಲಿ ಇಂಥ ಅರಾಜಕವಾದಿತನಗಳು ಸ್ವೀಕಾರಯೋಗ್ಯವಲ್ಲ ಎನ್ನುವುದು ಒಂದು ಸತ್ಯ ವಾದ ಆಗುತ್ತದೆ. ವಿಶ್ವಗುರು ಹಾಗೂ ಸಮಕಾಲೀನ ಜಗತ್ತಿನ ಮೇಲೆ ಮಹಾ ಪ್ರಭಾವವಿದೆಯೆಂದು ಭಾರತದ ಚುನಾಯಿತ ನಾಯಕರು ಹೇಳಿಕೊಳ್ಳುವುದೇ ಆದಲ್ಲಿ ಅವರು ಇಂಥ ಪ್ರತಿಗಾಮಿ ಚಿಂತನೆಗಳಿಂದ ದೂರವಿರಬೇಕು ಹಾಗೂ ಅವುಗಳಿಗೆ ಅವಕಾಶ ನೀಡಬಾರದು. ಆದರೆ ಅದು ಸಾಧ್ಯವಿಲ್ಲ. ಬಿಜೆಪಿಯು ಆರೆಸ್ಸೆಸ್ ಮತ್ತು ಹಿಂದೂತ್ವದೊಂದಿಗೆ ಹೊಕ್ಕುಳ ಬಳ್ಳಿ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಭಾರತದಲ್ಲಿ ಮಹಿಳೆಯರು ಅನಾದಿ ಕಾಲದಿಂದಲೂ ಶಿಕ್ಷಣ, ಆರೋಗ್ಯ, ಆದಾಯ ಮುಂತಾಗಿ ಎಲ್ಲ ವಿಚಾರಗಳಲ್ಲಿ ಸಾಂಸ್ಥಿಕ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಪ್ರಸಕ್ತ ಕಾಲದಲ್ಲಿ ಅವರು ಎರಡನೇ; ಹಾಗೂ ಧರ್ಮದ್ವೇಷ ಮತ್ತು ಸ್ತ್ರೀದ್ವೇಷದ ಕ್ರೂರ ಜಗತ್ತಿನ ಇನ್ನೂ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳ ಒಟ್ಟು ಶಕ್ತಿ ಹಾಗೂ ಪುರುಷರು ಮತ್ತು ಮಹಿಳೆಯರು ಕೈ ಕೈ ಜೋಡಿಸಿ ನಡೆದು ಹೋರಾಡಿದರೆ ಮಾತ್ರವೇ ಈ ಸವಾಲನ್ನು ಎದುರಿಸಲು ಸಾಧ್ಯ. ಈ ಉದ್ದೇಶ ಸಾಧನೆಯಲ್ಲಿ ಜನತಾಂತ್ರಿಕ ಮಹಿಳಾ ಚಳವಳಿಯು ಮಹತ್ವದ ಕೊಡುಗೆಗಳನ್ನು ನೀಡಿದೆ.

( 01.01.2026 ರ ಪೀಪಲ್ಸ್‌ ಡೆಮಾಕ್ರಸಿ ಸಂಪಾದಕೀಯ)

ಕನ್ನಡಕ್ಕೆ: ವಿಶ್ವ

 

Leave a Reply

Your email address will not be published. Required fields are marked *