ಹೊಸ ವರ್ಷದ ಎರಡನೇ ದಿನ, ಅಂದರೆ ಜನವರಿ 2ರ ನಸುಕಿನಲ್ಲಿ ವೆನೆಜುವೆಲಾ ರಾಜಧಾನಿ ಕಾರಕಾಸ್‌ನ ಆಗಸ ಸಶ್ತ್ರಾಸ್ತ್ರಗಳು ಮತ್ತು ವಿಮಾನ ದಾಳಿಯ ಬೆಂಕಿಯಿಂದ ಪ್ರಜ್ವಲಿಸಿತು. ಅದರ ಬೆನ್ನಲ್ಲೇ, ವಿಶೇಷವಾಗಿ ಡೆಲ್ಟಾ ಫೋರ್ಸ್ ಕಮಾಂಡೋ ಕಾರ್ಯಾಚರಣೆಗಳಲ್ಲಿ ಬಳಸುವ ಹೆಲಿಕಾಪ್ಟರ್‌ಗಳ ದಂಡು ದಾಳಿ ನಡೆಸಿತು. ಜನವರಿ 3ರ ಬೆಳಿಗ್ಗೆ ಜಗತ್ತು, ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಘಾತಕಾರಿ ಹೇಳಿಕೆಯೊಂದಿಗೆ ಎಚ್ಚರವಾಯಿತು. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಅಮೆರಿಕದ ಸಶಸ್ತ್ರ ಪಡೆಗಳು ಬಂಧಿಸಿದ್ದು, ಅಮೆರಿಕ ಆಡಳಿತದ ನಿಯಂತ್ರಣದಡಿ ಅವರನ್ನು ಅನಾಮಿಕ ತಾಣವೊಂದಕ್ಕೆ ಕರೆದೊಯ್ಯಲಾಗುತ್ತದೆ ಎಂಬುದಾಗಿ ಟ್ರಂಪ್ ಪ್ರಕಟಿಸಿದರು. ಯಾವ ದೃಷ್ಟಿಯಲ್ಲಿ ನೋಡಿದರೂ ಖುಲ್ಲಂ ಖುಲ್ಲಾ, ಕಚ್ಚಾ (ಒರಟು) ಮತ್ತು ಸಾಕ್ಷ್ಯಗಳ ಕಂತೆಯೇ ಹೇಳುವಂತೆ ಇದೊಂದು ವೆನೆಜುವೆಲಾದಲ್ಲಿನ ಕಚ್ಚಾ ತೈಲ ನಿಕ್ಷೇಪಗಳಿಗಾಗಿ ನಡೆಸಿದ ದಾಳಿಯಾಗಿದೆ.
ವೆನೆಜುವೆಲಾ ಸುತ್ತಲಿನ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿಂದ ಅಮೆರಿಕ ನೌಕಾಪಡೆ ಹೆಚ್ಚಿನ ನೌಕೆಗಳನ್ನು ಜಮಾಯಿಸಿದಾಗಲೇ ಏನೋ ತೀವ್ರ ಬೆಳವಣಿಗೆ ನಡೆಯಬಹುದೆಂಬ ಸುಳಿವು ಸಿಕ್ಕಿತ್ತು. ಅಮೆರಿಕ ನೌಕೆಗಳು ವೆನೆಜುವೆಲಾದ ತೈಲ ಹಡಗುಗಳನ್ನು ತಡೆದಿದ್ದಲ್ಲದೆ, ಮಾದಕ ದ್ರವ್ಯಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಅನೇಕ ದೋಣಿಗಳನ್ನು ಬೇಕಾಬಿಟ್ಟಿ ಗುಂಡಿಟ್ಟು ಜಲಸಮಾಧಿ ಮಾಡಿತ್ತು. ಡ್ರಗ್ಸ್ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೂ ಟ್ರಂಪ್ ಮಾಡಿರುವ ಕೃತ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಮುಂಬರುವ ವಾರಗಳಲ್ಲಿ ಆ ವಿಷಯವನ್ನೇ ನಾವು ಆಲಿಸಲಿದ್ದೇವೆ ಎನ್ನುವುದು ನಿಸ್ಸಂಶಯವಾಗಿದೆ. ವಾಸ್ತವವಾಗಿ, ಕೊಕೇನ್ ಸಾಗಾಟದಲ್ಲಿ ವೆನೆಜುವೆಲಾದ ಯಾವುದೇ ಪಾತ್ರವಿಲ್ಲ ಎನ್ನುವುದನ್ನು ವಿಸ್ತೃತ ವಿಶ್ಲೇಷಣೆಗಳು ತೋರಿಸಿವೆ.
ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯ (ಡಿಇಎ) ತೀರಾ ಇತ್ತೀಚಿನ ವರದಿಯಲ್ಲಿ ವೆನೆಜುವೆಲಾವನ್ನು ಒಂದು ಪ್ಯಾರಾಗ್ರಾಫ್‌ನಲ್ಲಿ ಮಾತ್ರವೇ ಉಲ್ಲೇಖಿಸಲಾಗಿದೆ. ನಿಜ ಸಂಗತಿ ಏನೆಂದರೆ, ವಿಶ್ವ ಸಂಸ್ಥೆ ಡ್ರಗ್ ರಿಪೋರ್ಟ್ 2025ರ ನೂರು ಪುಟಗಳಷ್ಟು ದೀರ್ಘ ವರದಿಯಲ್ಲಿ ವೆನೆಜುವೆಲಾ ಹೆಸರು ಒಮ್ಮೆಯೂ ಪ್ರಸ್ತಾಪವಾಗಿಲ್ಲ. ಐರೋಪ್ಯ ಒಕ್ಕೂಟದ ವಾರ್ಷಿಕ ಡ್ರಗ್ ಮೌಲ್ಯಮಾಪನ ವರದಿಯಲ್ಲೂ ಅದರ ಹೆಸರಿಲ್ಲ. ಟ್ರಂಪ್ ಡ್ರಗ್ಸ್ ವಿಚಾರದಲ್ಲಿ ಎಷ್ಟು ಕಾಳಜಿ ಹೊಂದಿದ್ದಾರೆ ಎನ್ನುವುದಕ್ಕೆ ಹೊಂಡುರಾಸ್‌ನಲ್ಲಿ ಈಚೆಗೆ ನಡೆದ ಚುನಾವಣೆಗಳೇ ಸಾಕ್ಷಿಯಾಗಿದೆ. ತಾನು ಇತ್ತೀಚೆಗಷ್ಟೇ ಕ್ಷಮೆ ನೀಡಿದ ಮಾದಕದ್ರವ್ಯ ಕಳ್ಳಸಾಗಣೆದಾರ (ನರ್ಕೋಟ್ರಾಫಿಕರ್) ಜುವಾನ್ ಒರ್ಲಾಂಡೋ ಹೆರ್ನ್ಡೆಜ್‌ನ ಸಹಚರ ಟಿಟೋ ಅಸ್ಫುರಾಗೆ ಮತ ನೀಡುವಂತೆ ಟ್ರಂಪ್ ಒತ್ತಾಯಿಸಿದ್ದರು. ಹಾಗೆ ಮಾಡದಿದ್ದರೆ ಹೊಂಡುರಾಸ್‌ಗೆ ಅಮೆರಿಕದ ನೆರವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಶ್ರೀಮಂತರ ನ್ಯಾಶನಲ್ ಪಾರ್ಟಿಯನ್ನು ಚುನಾಯಿಸದಿದ್ದರೆ ಹೊಂಡುರಾಸ್ ಆರ್ಥಿಕತೆಯನ್ನು ನಾಶ ಮಾಡುವ ಬೆದರಿಕೆ ಅದಾಗಿತ್ತು. ಅದು ನರ್ಕೋಟ್ರಾಫಿಕಿಂಗ್ ಸರ್ಕಾರವನ್ನು ಮರಳಿ ಸ್ಥಾಪಿಸಲು ಹೊಂಡುರಾಸ್ ಮತದಾರರಿಗೆ ಟ್ರಂಪ್ ಆಮಿಷವೊಡ್ಡಿದಂತೆಯೇ ಸರಿ. 2025ರ ಅಕ್ಟೋಬರ್‌ನಲ್ಲಿ ಅರ್ಜೆಂಟೈನಾದಲ್ಲಿ ನಡೆದ ಚುನಾವಣೆಯಲ್ಲೂ ಟ್ರಂಪ್ ಇದೇ ತಂತ್ರವನ್ನು ಅನುಸರಿಸಿದ್ದ. ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ 20 ಶತಕೋಟಿ ಡಾಲರ್ ಪ್ಯಾಕೇಜ್ ಅನ್ನು ತಡೆಹಿಡಿಯುವುದಾಗಿ ಬೆದರಿಕೆ ಹಾಕಲಾಗಿತ್ತು. ಆ ಮೂಲಕ ದೇಶದ ಅಧ್ಯಕ್ಷ ಜೇವಿಯರ್ ಮಿಲೀ ನೇತೃತ್ವದ ಪಕ್ಷವನ್ನು ಮತದಾರರು ಬೆಂಬಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ವೆನೆಜುವೆಲಾದ ತೈಲ ಕೈಗಾರಿಕೆಯಲ್ಲಿ
ಕಾರಕಾಸ್‌ನ 303 ಶತಕೋಟಿ ಬ್ಯಾರೆಲ್‌ನಷ್ಟು ತೈಲ ನಿಕ್ಷೇಪದ ಮೇಲೆ ನಿಯಂತ್ರಣ ಸಾಧಿಸುವ ತನ್ನ ಉದ್ದೇಶವನ್ನು ಟ್ರಂಪ್ ಸಾರ್ವಜನಿಕವಾಗಿಯೇ ಪ್ರಕಟಿಸಿದ್ದ. ಇದೀಗ, ವೆನೆಜುವೆಲಾದ ತೈಲ ಕೈಗಾರಿಕೆಯಲ್ಲಿ ತುಂಬಾ ಬಲಿಷ್ಠವಾಗಿ ಒಳಗೊಂಡಿರುವುದರಿಂದ `ನಮ್ಮ ಅಮೆರಿಕದ ಅತಿ ದೊಡ್ಡ ತೈಲ ಕಂಪನಿಗಳು’ ತೈಲ ನಿಕ್ಷೇಪವನ್ನು ಪಡೆಯಲಿವೆ ಎಂದು ಟ್ರಂಪ್ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾನೆ. ವೆನೆಜುವೆಲಾ ಮೇಲಿನ ದಾಳಿಯು ತನ್ನ ಆಡಳಿತದ ಹೊಸ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು (ಎನ್‌ಎಸ್‌ಎಸ್) ಅನುಷ್ಠಾನಗೊಳಿಸುವ ಕ್ರಮದ ಭಾಗವಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮನ್ರೋ ಡಾಕ್ಟ್ರಿ ಅನ್ನು `ಡಾನ್-ರೋ ಡಾಕ್ಟ್ರಿನ್’ ಆಗಿ ಪರಿವರ್ತಿಸುವುದು ಎನ್‌ಎಸ್‌ಎಸ್‌ನ ಆದ್ಯತೆಯಾಗಿದೆ. ಅಧ್ಯಕ್ಷನ ಮಾತುಗಳಲ್ಲೇ ಹೇಳುವುದಾದರೆ `ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪಾರಮ್ಯವನ್ನು ಮರುಸ್ಥಾಪಿಸುವುದು’ ಅದರ ಉದ್ದೇಶವಾಗಿದೆ. ಈ ವಲಯದ ಎಡ ಪಂಥೀಯ ಸರಕಾರಗಳ ಸ್ಥಾನದಲ್ಲಿ ಟ್ರಂಪ್ ಜತೆ ಕೈಜೋಡಿಸುವ ಸರಕಾರಗಳನ್ನು ಸ್ಥಾಪಿಸುವುದನ್ನು ಖಾತರಿಪಡಿಸುವುದು ಟ್ರಂಪ್ ಬಯಕೆಯಾಗಿದೆ. ವೆನೆಜುವೆಲಾ ಅಧ್ಯಕ್ಷರನ್ನು ಹೈಜಾಕ್ ಮಾಡಿದ ಬೆನ್ನಲ್ಲೇ ಕೊಲಂಬಿಯಾ, ಕ್ಯೂಬಾ ಮತ್ತು ಮೆಕ್ಸಿಕೋ ಮೇಲೆ ಕೂಡ ಇದೇ ರೀತಿಯ ಆಕ್ರಮಣ ನಡೆಸುವುದಾಗಿ ಟ್ರಂಪ್ ಬೆದರಿಸುತ್ತಿದ್ದಾನೆ.
ಅಮೆರಿಕವೇ ಈಗ ವೆನೆಜುವೆಲಾ ಸರಕಾರವನ್ನು ನಡೆಸುತ್ತದೆ ಎಂದು ಟ್ರಂಪ್ ಸಾರಿದ್ದಾನೆ. ಅಲ್ಲಿ ಕಾಲೂರುತ್ತೇನೆ ಹಾಗೂ ಬೇರೆ ಯಾರೂ ಅಲ್ಲಿ ಪಾತ್ರ ವಹಿಸುವುದು ಇಷ್ಟವಿಲ್ಲ ಎಂದಿದ್ದಾನೆ. ತನ್ನ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದರೂ ಆತನ ಕ್ರಮವು ಅಮೆರಿಕ ಸಂವಿಧಾನದ ಯುದ್ಧ ಅಧಿಕಾರ ನಿಯಮವನ್ನು ಸುಸ್ಪಷ್ಟವಾಗಿ ಅಮಾನ್ಯಗೊಳಿಸುತ್ತದೆ. ವಿದೇಶಿ ನಾಯಕನೊಬ್ಬನನ್ನು ನ್ಯಾಯ ಇಲಾಖೆ ಛೀಮಾರಿ ಹಾಕಿದರೆ ಮಾತ್ರವೇ ಇಂಥ ಉದ್ಧಟತನದ ಮಧ್ಯಪ್ರವೇಶ ಮಾಡಬಹುದು ಎಂಬುದೇ ಆ ನಿಯಮವಾಗಿದೆ.
ಆಳಗೊಳ್ಳುತ್ತಿರುವ ಅಮೆರಿಕದ ಆರ್ಥಿಕ ಬಿಕ್ಕಟ್ಟು
ಆಡಳಿತ ಬದಲಾವಣೆಯೇ ಅಮೆರಿಕದ ಉದ್ದೇಶವೆನ್ನುವುದು ಸ್ಪಷ್ಟವಾಗಿದೆ. ಟ್ರಂಪ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ (ಸಚಿವ) ಮಾರ್ಕೋ ರೂಬಿಯೋ ಹೇಳಿಕೆಗಳಿಂದ ಅದು ಸ್ಪಷ್ಟಗೊಂಡಿದೆ. ಅಮೆರಿಕದ ಕ್ರಮಕ್ಕೆ ಆ ದೇಶದೊಳಗೇ ವ್ಯಕ್ತವಾಗುತ್ತಿರುವ ಟೀಕೆ ಅಭೂತಪೂರ್ವವಾದುದಾಗಿದೆ. `ಕಾನೂನು ಅನುಷ್ಠಾನ’ ಎನ್ನುವುದು ಒಂದು ಬರೀ ನೆಪವಾಗಿದ್ದು ಅದಕ್ಕೆ ಯಾವುದೇ ಸಮರ್ಥನೆಯಿಲ್ಲ. ಆದರೆ ಈ ಧಾಳಿ ನಡೆದಿದ್ದೇಕೆ ಎನ್ನುವುದನ್ನು ಹುಡುಕಲು ಪ್ರಯತ್ನಿಸುವಾಗ, ಎಪ್‌ಸ್ಟೀನ್‌ನ ಬಹಿರಂಗಗೊಳಿಸುವಿಕೆಯಿಂದ ಟ್ರಂಪ್ ಆಡಳಿತಕ್ಕೆ ಹೆಚ್ಚುತ್ತಿರುವ ಮುಜುಗರ ಮತ್ತು ಇನ್ನೂ ಆಳಗೊಳ್ಳುತ್ತಿರುವ ಅಮೆರಿಕದ ಆರ್ಥಿಕ ಬಿಕ್ಕಟ್ಟಿನಿಂದ ಗಮನವನ್ನು ಬೇರೆಡೆ ಸೆಳೆಯಲು ಏನಾದರೂ ಅಗತ್ಯವಾಗಿದೆ ಎಂದು ಆಂತರಿಕ ಟೀಕಾಕಾರರು ಒಕ್ಕೊರಲಿನಿಂದ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕದ ತೈಲ ಕಂಪನಿಗಳನ್ನು ತೃಪ್ತಿಪಡಿಸುವುದು
ವೆನೆಜುವೆಲಾ ಮೇಲಿನ ಈ ದುಸ್ಸಾಹಸವು ಎರಡು ಹಕ್ಕಿಗಳನ್ನು ಹೊಡೆಯುವ ಉದ್ದೇಶ ಹೊಂದಿದೆ. ಸ್ವತಃ ತನ್ನ ವಿಶ್ವಾಸಾರ್ಹತೆ ಮತ್ತು ಆಡಳಿತವನ್ನು ಪಾರು ಮಾಡುವುದಲ್ಲದೆ ಎಕ್ಸಾನ್ ಮತ್ತು ಚೆವ್ರಾನ್‌ನಂಥ ಅಮೆರಿಕದ ದಿಗ್ಗಜ ತೈಲ ಕಂಪನಿಗಳನ್ನು ತೃಪ್ತಿಪಡಿಸುವುದು ಗುರಿಯಾಗಿದೆ. ಈ ಎರಡೂ ಕಂಪನಿಗಳು ಟ್ರಂಪ್ ಚುನಾವಣೆ ಪ್ರಚಾರಕ್ಕೆ ಅಪಾರ ಹಣವನ್ನು ಸುರಿದಿದ್ದವು.
ಆ ಪ್ರಕ್ರಿಯೆಯಲ್ಲಿ ಟ್ರಂಪ್ ವಿಶ್ವ ಸಂಸ್ಥೆಯ ಸನದಿನಂಥ ಅಂತಾರಾಷ್ಟ್ರೀಯ ಕಾನೂನುಗಳನ್ನು; ಅದರಲ್ಲೂ ವಿಶೇಷವಾಗಿ ಕ್ಲಾಸ್ 2 (4), ಮಾನವ ಹಕ್ಕುಗಳ ಕಾನೂನು, ಜಿನೇವಾ ಒಡಂಬಡಿಕೆ ಮತ್ತು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಮತ್ತು ಜನರಲ್ ಅಸೆಂಬ್ಲಿಯ (ಮಹಾಸಭೆ) ಹಲವು ನಿರ್ಣಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಾಕಾರರು ಹೇಳಿದ್ದಾರೆ. ಅದು ನಿಜವಾಗಿಯೂ ಅಮೆರಿಕ ಸಂವಿಧಾನದ ಉಲ್ಲಂಘನೆಯೇ ಆಗಿದೆ.
ಅಮೆರಿಕ ಆಡಳಿತವು ಏಕಪಕ್ಷೀಯವಾಗಿ ಇಂಥ ಕ್ರಮವನ್ನು ತೆಗೆದುಕೊಳ್ಳಲಾಗದು. ಅದು ಅಮೆರಿಕ ಕಾಂಗ್ರೆಸ್‌ನ (ಸಂಸತ್ತು) ಅನುಮೋದನೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಕೊನೆಯ ವಿಚಾರಕ್ಕೆ ಟ್ರಂಪ್ ನೀಡಿರುವ ಪ್ರತಿಕ್ರಿಯೆ ತೀರಾ ಆಘಾತಕಾರಿಯಾಗಿದೆ. ಇಂಥ ಭದ್ರತಾ ಸೂಕ್ಷ್ಮ ಮಾಹಿತಿಗಳನ್ನು ಸೋರಿಕೆ ಮಾಡುವಲ್ಲಿ ಕಾಂಗ್ರೆಸ್ ಕೆಟ್ಟ ಹೆಸರನ್ನು ಹೊಂದಿದೆ ಎಂದವರು ಹೇಳಿದ್ದಾರೆ!
ಏನೇ ಇದ್ದರೂ, ವೆನೆಜುವೆಲಾದ ಅನೇಕ ನಾಗರಿಕರ ಸಾವಿಗೂ ಕಾರಣವಾಗಿರುವ ಈ ಕಮಾಂಡೋ ಕಾರ್ಯಾಚರಣೆಯು ಬಾಡಿಗೆ ಬಂಟರು ಮತ್ತು ರ‍್ಯಾಂಬೋ ಸಿಂಡ್ರೋಮ್’ಗೆ ಹೋಲಿಕೆಯಾಗುತ್ತದೆ. ಆದರೆ, ಮಡುರೋ ಮತ್ತು ಅವರ ಪತ್ನಿಯನ್ನು ವಶಪಡಿಸಿಕೊಂಡಿರುವ ಟ್ರಂಪ್ ತನ್ನ ದಾರಿಯನ್ನು ಕಳೆದುಕೊಂಡಂತೆ ಕಾಣುತ್ತದೆ. ಮಾರ್ಕೋ ರೂಬಿಯೋ ತನ್ನ ನಿರೂಪಣೆಯನ್ನು ಹಲವು ಬಾರಿ ಬದಲಾಯಿಸಿದ್ದಾನೆ. ಈ ಕ್ರಮಕ್ಕೆ ಆಧಾರವೆಂದು ರೂಬಿಯೋ ಹೇಳಿಕೊಳ್ಳುವ 25 ಪುಟಗಳ ಛೀಮಾರಿ ದಸ್ತಾವೇಜಿನಲ್ಲಿ ಮಡುರೋ ಬಗ್ಗೆ ಪ್ರಸ್ತಾಪವೇ ಇಲ್ಲ. ಹಾಗೂ ಅವರ ಪತ್ನಿಯ ಕುರಿತು ದಸ್ತಾವೇಜಿನ 9ನೇ ಪುಟದಲ್ಲಿ ಒಂದು ಉಲ್ಲೇಖವಷ್ಟೇ ಇದೆ. ಅದು ಕೂಡ, 2007ರಲ್ಲಿ ಆಕೆ ಇನ್ನೂ ಮಡುರೋರನ್ನು ವಿವಾಹವಾಗದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಮಡುರೋ ಆಗ ಅಧ್ಯಕ್ಷರೂ ಆಗಿರಲಿಲ್ಲ.
ಸಾಮಾನ್ಯವಾಗಿ ಆಪಾದಿಸಲಾಗುವಂತೆ ಅಮೆರಿಕ ಒಂದು ಪುಂಡ ದೇಶವಾಗಿದೆ ಎನ್ನುವುದು ಇದರ ನಿಜ ಅರ್ಥವಾಗಿದೆ. ಹಾಗೂ ಟ್ರಂಪ್ ಅಧ್ಯಕ್ಷರಾಗಿದ್ದಾಗ ಜಗತ್ತಿನ ಸೂಪರ್ ಮೊನಾರ್ಕ್ನಂತೆ (ಸಮ್ರಾಟ) ವರ್ತಿಸುತ್ತದೆ. ತಾನೇ ಕಾನೂನು ಎಂಬಂತೆ ಟ್ರಂಪ್ ವರ್ತಿಸುತ್ತಾನೆ. ಭಾರಿ ಪ್ರತಿರೋಧ ವ್ಯಕ್ತವಾಗುತ್ತದೆ ಎನ್ನುವುದು ಜಗತ್ತಿನಾದ್ಯಂತ, ಅದರಲ್ಲೂ ಪ್ರಮುಖವಾಗಿ ವೆನೆಜುವೆಲಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯಿಂದ ತಿಳಿಯುತ್ತದೆ. ಲ್ಯಾಟಿನ್ ಅಮೆರಿಕ ದೇಶಗಳು, ಬ್ರಿಕ್ಸ್ ಮತ್ತು ಅಮೆರಿಕದ ಐರೋಪ್ಯ ಮಿತ್ರ ರಾಷ್ಟ್ರಗಳು ಕೂಡ ಜಗತ್ತನ್ನು ಅಸ್ಥಿರಗೊಳಿಸುವ ಅಮೆರಿಕದ ಕೃತ್ಯವನ್ನು ಬಲವಾಗಿ ಖಂಡಿಸಿವೆ.
ವೆನೆಜುವೆಲಾ ಸರಕಾರದ ಅಧ್ಯಕ್ಷರಾಗಿ ಸರ್ವೋನ್ನತ ಸಾಂವಿಧಾನಿಕ ಕೋರ್ಟ್ ಅಧಿಕೃತಗೊಳಿಸಿರುವ ವೆನೆಜುವೆಲಾ ಉಪಾಧ್ಯಕ್ಷ ಡೆಲ್ಸಿ ಫೆರ್ನಾಂಡಿಸ್ ಅಮೆರಿಕ ಆಡಳಿತದೊಂದಿಗೆ ಸಹಕರಿಸುತ್ತಾರೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾನೆ. ಆದರೆ, ನಿಕೋಲಸ್ ಮಡುರೋ ಅವರೇ ದೇಶದ ಕಾನೂನುಬದ್ಧ ಅಧ್ಯಕ್ಷರಾಗಿರುತ್ತಾರೆ ಮತ್ತು ದೇಶದ ಸಾರ್ವಭೌಮತ್ವವನ್ನು ನಾಶ ಮಾಡುವ ಬಾಹ್ಯ ಹಸ್ತಕ್ಷೇಪವನ್ನು ವೆನೆಜುವೆಲಾ ಯಾವತ್ತೂ ಒಪ್ಪುವುದಿಲ್ಲ ಎಂದು ಫೆರ್ನಾಂಡಿಸ್ ಘೋಷಿಸಿದ್ದಾರೆ.
ಪ್ಯಾಲೆಸ್ಟೀನ್ ಜತೆಗಿನ ಸೌಹಾರ್ದ ಅಭಿಯಾನದ ನಂತರ ವೆನೆಜುವೆಲಾಕ್ಕೆ ಸಂಬಂಧಿಸಿ ಇಂಥ ಆಂದೋಲನ ಜಗತ್ತಿನಾದ್ಯಂತ ಅಲ್ಪ ಕಾಲದಲ್ಲಿ ಕ್ಷಿಪ್ರವಾಗಿ ವಿದ್ಯುತ್ ನಂತೆ ಹರಡುತ್ತಿದೆ. ಅಮೆರಿಕದ ನಗ್ನ ದಬ್ಬಾಳಿಕೆಯನ್ನು ಏಕಕಂಠದಿಂದ ಖಂಡಿಸಲಾಗುತ್ತಿದೆ.
ಖಂಡಿಸುವಲ್ಲಿ ಮೋದಿ ಸರಕಾರದ ಪುಕ್ಕಲುತನ
ಏನೇ ಇದ್ದರೂ, ಅಲಿಪ್ತ ಚಳವಳಿಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ ಇದು ಭಾರಿ ಮುಜುಗರದ ಕ್ಷಣವಾಗಿದೆ. ಗಾಜಾ ನರಹತ್ಯೆಯ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ಅಸ್ಪಷ್ಟ ನಿಲುವು ತಳೆದಿದ್ದಂತೆಯೇ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಗಳ ಉಲ್ಲಂಘನೆಯಾಗಿರುವ ವೆನೆಜುವೆಲಾ ಪ್ರಕರಣದಲ್ಲೂ ಅಮೆರಿಕದ ಅಪರಾಧವನ್ನು ಖಂಡಿಸುವಲ್ಲಿ ಮೋದಿ ಸರಕಾರ ದಯನೀಯವಾಗಿ ವಿಫಲವಾಗಿದೆ. ಅದರ ವಿದೇಶಾಂಗ ನೀತಿಯ ಪುಕ್ಕಲುತನ ಇದರಿಂದ ಇನ್ನೊಮ್ಮೆ ಬಯಲಾಗಿದೆ.
ಆದರೆ ಭಾರತೀಯರು ದೇಶದ ಸಾಮ್ರಾಜ್ಯಶಾಹಿ ವಿರೋಧಿ ಪರಂಪರೆಯನ್ನು ಹೆಮ್ಮೆಯಿಂದ ಉಳಿಸಿಕೊಂಡಿದ್ದಾರೆ. ಏಕಸ್ವಾಮ್ಯ, ಏಕಪಕ್ಷೀಯತೆ ಸಾಧಿಸುವುದು ಹಾಗೂ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ನೈಸರ್ಗಿಗ ಸಂಪತ್ತಿಗಾಗಿ ಅಮೆರಿಕದ ದುರಾಸೆಯ ವಿರುದ್ಧದ ಹೋರಾಟ ಸುದೀರ್ಘವಾದುದು ಎನ್ನುವುದು ಸ್ಪಷ್ಟವಾಗಿದೆ. ಈ ಸಂಘರ್ಷವು ಟ್ರಂಪ್‌ನಿಂದ ದಿನದಿನವೂ ಅವಮಾನಕ್ಕೆ ಒಳಗಾಗುತ್ತಿರುವ ನಮ್ಮದೇ ಸರಕಾರದ ವಿರುದ್ಧವೂ ಸಮಾನವಾಗಿ ನಿರ್ದೇಶಿತವಾಗಿರಬೇಕು. ಟ್ರಂಪ್ `ಸಂತೋಷ’ವಾಗಿರುವುದನ್ನು ಖಾತರಿಪಡಿಸಲು ಪ್ರಧಾನ ಮಂತ್ರಿ ವಿಫಲವಾದರೆ, ಭಾರತವು ತನ್ನ ಸುಂಕದ ತಾಪವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ನಮ್ಮದೇ ಸುರಕ್ಷತೆಗಾಗಿ, ವೆನೆಜುವೆಲಾ ಜನರ ಒಳಿತಿಗಾಗಿ ಮತ್ತು ಅಮೆರಿಕ ಸಾಮ್ರಾಜ್ಯಶಾಹಿಯ ಬೆದರಿಕೆ ಎದುರಿಸುತ್ತಿರುವ ಇತರ ಎಲ್ಲರಿಗೂ ಈ ಹೋರಾಟವು ಹಿಂದೆಂದಿಗಿಂತಲೂ ಈಗ ನಿಜವಾಗಿದೆ!
ಜನವರಿ 08, 2026
ಕನ್ನಡಕ್ಕೆ: ವಿಶ್ವ
