ನ್ಯಾಯಯುತ ಚುನಾವಣೆಗಾಗಿ ಹೋರಾಟದ ಸವಾಲು

12 ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು ಭಾರತದ ಪ್ರಜೆಗಳ ಮತದಾನದ ಹಕ್ಕುಗಳ ವಿಚಾರದಲ್ಲಿ ನಾವು ಭಾರಿ ದುರಂತದತ್ತ ಸಾಗುತ್ತಿದ್ದೇವೆಂದು ಕಾಣುತ್ತಿದೆ. ಮತದಾರರ ಪಟ್ಟಿಯ ಪ್ರಥಮ ಕರಡಿನಲ್ಲಿ ಒಟ್ಟು 6.56 ಕೋಟಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದು ಅಗಾಧವಾಗಿದೆ. ಅಂದರೆ, ಈಗಿರುವ ಮತದಾರರ ಒಟ್ಟು ಸಂಖ್ಯೆಯ ಶೇಕಡ 13ರಷ್ಟಾಗುತ್ತದೆ. ಆಸಕ್ತಿದಾಯಕ ವಿಚಾರವೇನೆಂದರೆ, ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಅಂದರೆ 2.89 ಕೋಟಿ ಹೆಸರುಗಳು ಡಿಲೀಟ್ ಆಗಿವೆ. ತಮಿಳುನಾಡಿನಲ್ಲಿ 90 ಲಕ್ಷ ಡಿಲೀಟ್ ಆಗಿವೆ. ಬಿಹಾರದಲ್ಲಿ ಆದ ವಿಧಾನವೇ ಎಲ್ಲ ಕಡೆ ಪುನರಾವರ್ತನೆಗೊಂಡಿದೆ. ಅಂದರೆ, ಮತದಾರರ ಯಾದಿಗೆ ಹೊಸ ಸೇರ್ಪಡೆ ತೀರಾ ಕನಿಷ್ಠವಾಗಿದ್ದು ಭಾರಿ ಪ್ರಮಾಣದಲ್ಲಿ ತೆಗೆದು ಹಾಕಲಾಗಿದೆ.

ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿರುವುದರಿಂದ ನಾವು ವಿಶಾಲವಾದ ಚಿತ್ರವನ್ನು ಕಾಣುವುದು ಅಗತ್ಯ. ನಾವು ಹೊಂದಿರುವ ಗಣರಾಜ್ಯ ಸಂವಿಧಾನದ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ. ನಮ್ಮ ಓದುಗರ ನೆನಪನ್ನು ಮತ್ತೆ ಮರುಕಳಿಸುವುದು ಅಗತ್ಯ. ಹಿಂದೂತ್ವ-ಪ್ರೇರಿತ ಸದ್ದಿನ ನಡುವೆ, ನಾವಿನ್ನೇನು ಹಿಂದೂ ರಾಷ್ಟ್ರದಲ್ಲಿ ಇದ್ದೇವೆ ಎನ್ನುವಂಥ ವಾತಾವರಣವನ್ನು ಸೃಷ್ಟಿಸಲಾಗಿದೆ. ಆದರೆ, ಚುನಾವಣಾ ಪ್ರಜಾಪ್ರಭುತ್ವ ಇನ್ನೂ ಕಾರ್ಯಾಚರಣೆಯಲ್ಲಿದೆ ಎನ್ನುವುದು ವಾಸ್ತವ. ಅದೇ ರೀತಿ, ಜನವರಿ 26, 1950 ರಂದು ಪ್ರಾರಂಭವಾದ ಪ್ರಜಾಪ್ರಭುತ್ವ ಜಾತ್ಯತೀತ ವ್ಯವಸ್ಥೆಯು ಅಂದಿನಂತೆಯೇ ಬಲವಾದ ಅಡಿಪಾಯವನ್ನು ಹೊಂದಿದೆ.

ನಾವು ಇಷ್ಟಪಡುತ್ತೇವೋ ಇಲ್ಲವೋ, ಸಂವಿಧಾನದ ಭಾಗವಾಗಿ ರೂಪಿಸಲಾದ ಚೌಕಟ್ಟಿನ ಆಧಾರದಲ್ಲಿ ಚುನಾವಣೆ ಕುರಿತ ಚರ್ಚೆಯನ್ನು ನಡೆಸಬೇಕು. ವಯಸ್ಕ ಮತದಾನ ಆಧಾರಿತ ಸಾರ್ವತ್ರಿಕ ಚುನಾವಣೆ ವ್ಯವಸ್ಥೆಯನ್ನು ಭಾರತ ಆರಂಭದಿಂದಲೂ ಒಪ್ಪಿಕೊಂಡಿದೆ. ಆ ಕಾಲದಲ್ಲಿ ಐರೋಪ್ಯ ಪ್ರಜಾಪ್ರಭುತ್ವಗಳಲ್ಲಿ ಹಾಗೆ ಇರಲಿಲ್ಲ. ಪ್ರತಿಯೊಬ್ಬ ವಯಸ್ಕ ಭಾರತೀಯರು ಮತದಾನಕ್ಕೆ ಅರ್ಹರಾಗಬೇಕು ಮತ್ತು ಸಂಸತ್ತೇ ಇರಲಿ ವಿಧಾನಸಭೆಗಳೇ ಇರಲಿ; ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎನ್ನುವುದು ಚುನಾವಣಾ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯವಾಗಿದೆ. ಇದು ಕಾರ್ಯಗತವಾಗಲು, ಚುನಾವಣಾ ಪ್ರಕ್ರಿಯೆಯನ್ನು ನೋಡಿಕೊಳ್ಳುವ ಭಾರತ ಚುನಾವಣಾ ಆಯೋಗ (ಇಸಿಐ) ನಿಷ್ಪಕ್ಷಪಾತವಾಗಿರುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, `ನ್ಯಾಯಸಮ್ಮತ ಕಾರ್ಯಾಚರಣೆಯ’ ಅಗತ್ಯವನ್ನು ಸಂವಿಧಾನದಲ್ಲೇ ಒತ್ತಿ ಹೇಳಲಾಗಿದೆ. ಸುಕುಮಾರ್ ಸೇನ್ ನೇತೃತ್ವದ ಪ್ರಥಮ ಚುನಾವಣಾ ಆಯೋಗ ಈ ಪರಿಕಲ್ಪನೆಯನ್ನು ಎರಡು ನಿರ್ಣಾಯಕ ಕ್ರಮಗಳ ಮೂಲಕ ವಾಸ್ತವಿಕಗೊಳಿಸಿತ್ತು.

ಮತದಾನಕ್ಕೆ ಅರ್ಹರಾದವರು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತೆ ಮಾಡುವುದು ಸ್ವತಃ ಚುನಾವಣೆ ಆಯೋಗದ ಜವಾಬ್ದಾರಿಯೇ ಹೊರತು ವೈಯಕ್ತಿಕವಾಗಿ ಮತದಾರರದ್ದಲ್ಲ ಎನ್ನುವುದು ಮೊದಲನೆ ವಿಚಾರವಾಗಿದೆ. ಭಾರತದ ಪ್ರಜೆಗಳಾಗಿರಬೇಕು ಎಂಬುದನ್ನು ಪರಿಶೀಲಿಸುವುದು ಚುನಾವಣೆ ಆಯೋಗಕ್ಕೆ ಸಂಬಂಧಿಸಿದ ವಿಚಾರವಲ್ಲ ಎನ್ನುವುದು ಎರಡನೆಯದಾಗಿದೆ. ಯಾವುದೇ ನಿರ್ದಿಷ್ಟ ಮತದಾರನ ಪೌರತ್ವವನ್ನು ಬೇರೊಬ್ಬ ಪ್ರಜೆ (ಬಹುಶಃ ಅವರ ನೆರೆಹೊರೆಯವರು) ಪ್ರಶ್ನಿಸಿದರೆ ಗೃಹ ಸಚಿವಾಲಯವು ಅದನ್ನು ಪರಿಶೀಲಿಸಬೇಕು.

ಎಸ್‌ ಐ ಆರ್

ನಾವು ಪ್ರಮುಖ ಸ್ಥಿತ್ಯಂತರದ ನಡುವೆ ನಿಂತಿದ್ದೇವೆ. ಸಂವಿಧಾನದ 324, 326 ಮತ್ತು 327ನೇ ಪರಿಚ್ಛೇದಗಳಲ್ಲಿ (ಆರ್ಟಿಕಲ್) ಅಡಕವಾಗಿರುವಂತೆ ಚುನಾವಣೆ ಆಯೋಗದ ವ್ಯಾಪಕ ಅಧಿಕಾರಗಳನ್ನು ಪ್ರಶ್ನಿಸದೇ ಇರುವಾಗಲೂ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇಸಿಐಗೆ ಇಲ್ಲ ಎನ್ನುವುದು ಸ್ಪಷ್ಟ. ಐದು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬದಲಾವಣೆಯು ಪೌರತ್ವ ನಿರ್ಧರಿಸುವ ಅಧಿಕಾರ ತನ್ನದೇ ಎಂದು ಆಯೋಗ ಅಹಂಕಾರದಿಂದ ಪ್ರತಿಪಾದಿಸುತ್ತಿದೆ. ವ್ಯಾಪಕ ಅಧಿಕಾರಗಳ ಹೊರತಾಗಿಯೂ ಹಾಗೆ ಮಾಡಲು ಇಸಿಐಗೆ ಯಾವುದೇ ಅಧಿಕಾರವಿಲ್ಲ. ಈ ವಿಷಯ ಇನ್ನೂ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆಗೆ ಬಾಕಿಯಿದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬರುವುದನ್ನು ಕಾಯುವಾಗಲೇ, ಇದುವರೆಗೆ ಏನು ಪರಿಣಾಮ ಆಗಿದೆ ಎನ್ನುವುದನ್ನು ನಾವು ನೋಡುವುದು ಅಗತ್ಯ.

2025ರ ಜೂನ್ 24ರಂದು ಬಿಹಾರದಲ್ಲಿ ಘೋಷಿಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಮತದಾರರ ಪಟ್ಟಿಯ ಭಾಗವಾಗುವುದನ್ನು ಖಾತರಿಪಡಿಸುವ ಹೊಣೆಯನ್ನು ಮತದಾರರ ಹೆಗಲ ಮೇಲೆ ಹೊರಿಸುತ್ತದೆ. ಹಿಂದಿನಂತಲ್ಲದೆ, ಮತದಾರರು ಅರ್ಜಿ ನಮೂನೆಗಳನ್ನು ತುಂಬಬೇಕು; ಮತ್ತು ಅರ್ಹತೆಯನ್ನು ಖಾತರಿಪಡಿಸಲು, ಒಂದೋ 2003ರಲ್ಲಿ ಮತದಾರ ಆಗಿರಬೇಕು ಅಥವಾ ಅವರ ತಂದೆ ಅಥವಾ ತಾಯಿ ಅದೇ ಮತದಾರರ ಪಟ್ಟಿಯಲ್ಲಿ ಇರಬೇಕಾಗುತ್ತದೆ. ಬಿಹಾರ ಎಸ್‌ಐಆರ್ ಕುರಿತು ಉಂಟಾದ ತೀವ್ರವಾದ ಚರ್ಚೆಯು ಸಾಂವಿಧಾನಿಕ ಹಕ್ಕನ್ನು ಖಾತರಿಪಡಿಸಲು ಅರ್ಹತೆಯನ್ನು ಸಾಬೀತುಪಡಿಸುವಲ್ಲಿ ಎದುರಾಗುವ ತೀಕ್ಷ್ಣ ಸವಾಲನ್ನು ಎತ್ತಿ ತೋರಿಸುತ್ತದೆ. ಎಸ್ ಐ ಆರ್‌ ಪ್ರಕ್ರಿಯೆಯನ್ನು ಆರಂಭಿಸಿದ ದಿನ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ತೆಗೆದು ಹಾಕುವಲ್ಲಿ (ಡಿಲೀಟ್) ಯಶಸ್ವಿಯಾಗಿದೆ. ಇದೊಂದು ತೀರಾ ವಿಕ್ಷಿಪ್ತವಾಗಿದ್ದು ಸಾಮೂಹಿಕವಾಗಿ ಡಿಲೀಟ್ ಮಾಡುವ ಪ್ರಕ್ರಿಯೆಯಾಗಿ ಪರಿಣಮಿಸಿತು. ಕೆಲವೇ ಕೆಲವು ಹೆಸರುಗಳು ಸೇರ್ಪಡೆಯಾಗಿದ್ದಕ್ಕೆ ಹೋಲಿಸಿದರೆ ತೆಗೆದು ಹಾಕಿದ ಸಂಖ್ಯೆ ಭಾರಿ ದೊಡ್ಡದಾಗಿದೆ. ಹಾಗಾಗಿ, ಮತದಾರರ ಸಂಖ್ಯೆ ಗಣನೀಯವಗಿ ತಗ್ಗಿದೆ.‌

6.56 ಕೋಟಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ

12 ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು ಭಾರತದ ಪ್ರಜೆಗಳ ಮತದಾನದ ಹಕ್ಕುಗಳ ವಿಚಾರದಲ್ಲಿ ನಾವು ಭಾರಿ ದುರಂತದತ್ತ ಸಾಗುತ್ತಿದ್ದೇವೆಂದು ಕಾಣಿಸುತ್ತಿದೆ. ಮತದಾರರ ಪಟ್ಟಿಯ ಪ್ರಥಮ ಕರಡಿನಲ್ಲಿ ಒಟ್ಟು 6.56 ಕೋಟಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದು ಅಗಾಧವಾಗಿದೆ. ಅಂದರೆ, ಈಗಿರುವ ಮತದಾರರ ಒಟ್ಟು ಸಂಖ್ಯೆಯ ಶೇಕಡ 13ರಷ್ಟಾಗುತ್ತದೆ. ಆಸಕ್ತಿದಾಯಕ ವಿಚಾರವೇನೆಂದರೆ, ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಅಂದರೆ 2.89 ಕೋಟಿ ಹೆಸರುಗಳು ಡಿಲೀಟ್ ಆಗಿವೆ. ತಮಿಳುನಾಡಿನಲ್ಲಿ 90 ಲಕ್ಷ ಡಿಲೀಟ್ ಆಗಿವೆ. ಬಿಹಾರದಲ್ಲಿ ಆದ ವಿಧಾನವೇ ಎಲ್ಲ ಕಡೆ ಪುನರಾವರ್ತನೆಗೊಂಡಿದೆ. ಅಂದರೆ, ಮತದಾರರ ಯಾದಿಗೆ ಹೊಸ ಸೇರ್ಪಡೆ ತೀರಾ ಕನಿಷ್ಠವಾಗಿದ್ದು ಭಾರಿ ಪ್ರಮಾಣದಲ್ಲಿ ತೆಗೆದು ಹಾಕಲಾಗಿದೆ. ಇಸಿಐನ ಅಂಕಿಅಂಶಗಳು ಜನಸಂಖ್ಯೆಯ ಅಂಕಿಅಂಶದೊಂದಿಗೆ ತಾಳೆಯಾಗುವುದಿಲ್ಲ ಎನ್ನುವುದನ್ನು ತೌಲನಿಕ ಅಧ್ಯಯನ ತೋರಿಸುತ್ತದೆ. ಉತ್ತರ ಪ್ರದೇಶದಲ್ಲೇ ಗ್ರಾಮೀಣ ಭಾಗದಲ್ಲಿ ಹೆಚ್ಚು ಕಮ್ಮಿ 3 ಕೋಟಿ ಮತದಾರರ ವ್ಯತ್ಯಾಸವಾಗಿದೆ. ಮತದಾನದ ಹಕ್ಕುಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸವಕಳಿಯು ಅಸ್ಸಾಂನ ಪರಿಷ್ಕರಣೆಯ (ಎಸ್‌ಐಆರ್ ಅಲ್ಲ) ಫಲಿತಾಂಶಕ್ಕೆ ಹೋಲಿಸಿದಾಗ ನಂಬಲಸಾಧ್ಯ ಎನ್ನುವಂತೆ ಕಾಣುತ್ತದೆ. ಅಸ್ಸಾಂನಲ್ಲಿ ವಸ್ತುಶಃ ಯಾವುದೇ ಡಿಲೀಶನ್ ಆಗಿಲ್ಲ. ಆದ್ದರಿಂದ, ಸಾರ್ವತ್ರಿಕ ಮತದಾನದ ಹಕ್ಕುಗಳ ದೃಷ್ಟಿಯಿಂದ ನೋಡಿದರೆ, ಜನರನ್ನು ಸಾಮೂಹಿಕವಾಗಿ ಮತದಾನದ ಹಕ್ಕಿನಿಂದ ವಂಚಿಸುವ ಉದ್ದೇಶದಿಂದಲೇ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಬೇಕಾಗುತ್ತದೆ.

ಮೂರು ವಿಧದ ಅಳಿಸುವಿಕೆಗಳು

ಮತದಾರರ ಪಟ್ಟಿಯ ಪರಿಷ್ಕರಣೆ ಒಂದು ಸಹಜ ಪ್ರಕ್ರಿಯೆಯಾಗಿದೆ. ಹೊಸ ಮತದಾರರ ಸೇರ್ಪಡೆ ಮತ್ತು ಮೃತಪಟ್ಟವರ ಹೆಸರನ್ನು ತೆಗೆದು ಹಾಕುವುದು, ತಪ್ಪುಗಳ ತಿದ್ದುಪಡಿ ಮಾಡುವುದು ಅದರ ಉದ್ದೇಶವಾಗಿರುತ್ತದೆ. ಮತದಾರರ ಹೆಚ್ಚಳ ಮತ್ತು ಸೇರ್ಪಡೆಗಳು ಸುಸ್ಪಷ್ಟ ನಿರೀಕ್ಷೆಯಾಗಿದೆ.

ಮತದಾರರ ಸಂಖ್ಯೆ ಹೆಚ್ಚಬೇಕೆನ್ನುವುದು ಜಗತ್ತಿನಾದ್ಯಂತದ ಪ್ರಜಾಪ್ರಭುತ್ವ ದೇಶಗಳ ನಿರೀಕ್ಷೆಯಾಗಿರುತ್ತದೆ. ಸಾಮೂಹಿಕ ಸಾವುಗಳು, ಸಾಮೂಹಿಕ ವಲಸೆ ಅಥವಾ ಸಾಮೂಹಿಕವಾಗಿ ಮತದಾನದ ಹಕ್ಕಿನ ವಂಚನೆ -ಈ ಮೂರು ಅಂಶಗಳಿಂದ ಮಾತ್ರವೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಕುಸಿಯ ಬಹುದಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ಅವಧಿಯಲ್ಲಿ ಯಾವುದೇ ಅನಾಹುತಕಾರಿ ಸಾವಿನ ವಿದ್ಯಮಾನ ನಡೆದಿಲ್ಲ ಅಥವಾ ದೇಶದ ಹೊರಗೆ ಭಾರಿ ವಲಸೆ ಆಗಿಲ್ಲ. ಒಂದು ವೇಳೆ ಆಂತರಿಕ ವಲಸೆ ನಡೆದರೂ ಇಷ್ಟೊಂದು ಪ್ರಮಾಣದಲ್ಲಿ ಹೆಸರು ಕಡಿಮೆಯಾಗಲು ಸಾಧ್ಯವಿಲ್ಲ. ಯಾಕೆಂದರೆ ಮತದಾರರ ಸ್ಥಳಾಂತರವಷ್ಟೇ ಆಗಿರುತ್ತದೆಯೇ ಹೊರತು ಮತದಾನದ ಹಕ್ಕು ವಂಚನೆಯಾಗದು.

ಒಟ್ಟಾರೆಯಾಗಿ ಹೇಳಬೇಕಾದರೆ, ಈ ಅವಧಿಯಲ್ಲಿ ಚುನಾವಣೆ ಆಯೋಗದ ವರ್ತನೆಯು ತೀರಾ ಅಪಾರದರ್ಶಕವಾಗಿತ್ತು ಮತ್ತು ರಾಜಕೀಯ ಪಕ್ಷಗಳು, ಸ್ವತಂತ್ರ ತಜ್ಞರು, ಸ್ವತಂತ್ರ ವೀಕ್ಷಕರು ಹಾಗೂ ವಿರಳವಾಗಿ ಸ್ವತಂತ್ರ ಮಾಧ್ಯಮಗಳು ಎತ್ತುವ ಪ್ರಶ್ನೆಗಳನ್ನು ಅದು ಕಸದ ಬುಟ್ಟಿಗೆ ಎಸೆಯಿತು. ಎಸ್‌ಐಆರ್ ಪ್ರಕ್ರಿಯೆಯ ವಿನ್ಯಾಸದಲ್ಲೇ ದೋಷವಿರುವುದರಿಂದ  ಇಷ್ಟೊಂದು ದೊಡ್ಡ ದುರಂತ ಸಂಭವಿಸಿದೆ ಎನ್ನುವುದು ಸ್ಪಷ್ಟವಾಗಿದೆ. `ನ್ಯಾಯಸಮ್ಮತ ಕಣ’ದ (ಲೆವೆಲ್ ಪ್ಲೇಯಿಂಗ್ ಫೀಲ್ಡ್) ಪ್ರಶ್ನೆಯನ್ನು ರಾಜಕೀಯ ಪಕ್ಷಗಳಿಗೆ ನಿರ್ಧರಿಸಲು ಆಗುವುದಿಲ್ಲ. ವೈಯಕ್ತಿಕ ಮತದಾರ ಮತ್ತು ಅವರ ಸಾಂವಿಧಾನಿಕ ಹಕ್ಕುಗಳು ನಿರ್ಧರಿಸುತ್ತವೆ.

ಎಸ್‌ಐಆರ್ ಆರಂಭಕ್ಕೆ ಸಂಬಂಧಿಸಿ ಯಾವುದೇ ಒಳಗೊಳ್ಳುವ ಸಮಾಲೋಚನಾ ಪ್ರಕ್ರಿಯೆ ನಡೆಸುವುದು ಬಿಡಿ, ಇಷ್ಟೊಂದು ಬೃಹತ್ ಕಾರ್ಯದ ಬಗ್ಗೆ ಚುನಾವಣೆ ಆಯೋಗ ಯಾವುದೇ ವಿವರಣೆಯನ್ನೂ ನೀಡದಿರುವುದರಿಂದ ಮುಂಬರುವ ಚುನಾವಣಾ ಹೋರಾಟದಲ್ಲಿ ಈ ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ. ಪ್ರಕ್ರಿಯೆ ಆರಂಭಕ್ಕೆ ಯಾವುದೇ ದಾಖಲೆಗಳ ಪುರಾವೆಯನ್ನು ಒದಗಿಸಲು ಅಥವಾ 2002/03ರ ಪ್ರಕ್ರಿಯೆಯ ವಿವರಗಳನ್ನು ಒದಗಿಸಲು ಆಯೋಗಕ್ಕೆ ಸಾಧ್ಯವಾಗದಿರುವುದರಿಂದ ಇದು ಇನ್ನೂ ಮುಖ್ಯವಾಗುತ್ತದೆ.

ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದನ್ನು ಖಾತರಿಪಡಿಸಲು ನುಸುಳುಕೋರರನ್ನು `ಪತ್ತೆ ಮಾಡಬೇಕು, ತೆಗೆದು ಹಾಕಬೇಕು ಮತ್ತು ಗಡಿಪಾರು ಮಾಡಬೇಕು’ (ಡಿಟೆಕ್ಟೆಡ್, ಡಿಲೀಟೆಡ್ ಡಿಪೋರ್ಟೆಡ್) ಎಂದು ಸ್ವಲ್ಪ ಸಮಯದ ಹಿಂದೆ ಕೇಂದ್ರ ಗೃಹ ಮಂತ್ರಿ  ಕರೆ ನೀಡಿದ್ದರು. ಆದರೆ, 12 ರಾಜ್ಯಗಳಿಗೆ ಸಂಬಂಧಿಸಿ ಪ್ರಕಟಿಸಿದ ಪ್ರಥಮ ಕರಡು ಮತದಾರರ ಪಟ್ಟಿಗಳಲ್ಲಿ ಅಥವಾ ಬಿಹಾರದ ಅಂತಿಮ ಮತದಾರರ ಪಟ್ಟಿಯಲ್ಲಿ ಅಂತಹ ಹುಡುಕಾಟವು ಗಮನಾರ್ಹ ಫಲಿತಾಂಶಗಳನ್ನು ನೀಡಿದೆ ಎಂದು ತೋರಿಸಲು ಯಾವುದೇ ಡೇಟಾ ಇಲ್ಲ. ಎಸ್‌ಐಆರ್‌ಗೆ ಬಿಜೆಪಿ ಮಾತ್ರವೇ ಅತ್ಯುತ್ಸಾಹದಿಂದ ಬೆಂಬಲಿಸಿದ್ದರಿಂದ ಈ ಪ್ರಕ್ರಿಯೆ ಅದಕ್ಕೆ ಮಾತ್ರವೇ ಲಾಭದಾಯಕ ಎಂದು ಯಾರಾದರೂ ಊಹಿಸಬಹುದಾಗಿದೆ. ಬೂತ್‌ ವಾರಾಗಿ ಹೊಸ ಹೆಸರುಗಳನ್ನು ಸೇರಿಸಲು ಬಿಜೆಪಿ/ಆರ್‌ಎಸ್‌ಎಸ್ ಯಂತ್ರ ಸಜ್ಜಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಅದಕ್ಕೆ ಪುರಾವೆಗಳೂ ಇವೆ ಎಂದಿವೆ. ಈ ಪ್ರಕ್ರಿಯೆಯಲ್ಲಿ ನೆರವಾಗುವಂತೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ಒತ್ತಡವನ್ನು ಹೇರಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳನ್ನು ಅಪ್ಲೋಡ್ ಮಾಡಲು ಎಐ ಸಾಧನಗಳು, ಸಾಫ್ಟ್ವೇರ್ ಮತ್ತು ಸಂಸ್ಥೆಗಳನ್ನು ಬಳಸುವುದನ್ನು ಪಾರದರ್ಶಕವಾಗಿ ಪ್ರಕಟಿಸಿಲ್ಲ. ಆದರೆ, ಲಿಂಗ ಮತ್ತು ಸಾಮಾಜಿಕ ಗುಂಪುಗಳು ಡಿಲೀಶನ್‌ನಿಂದಾಗಿ ವಿಶೇಷವಾಗಿ ಸಂತ್ರಸ್ತವಾಗುತ್ತವೆ ಎನ್ನುವುದನ್ನು ದತ್ತಾಂಶಗಳು ತೋರಿಸಿಕೊಟ್ಟಿವೆ. ಇವೆಲ್ಲವೂ ಸಂಭಾವ್ಯ ಭಾರಿ ಪ್ರಮಾಣದ ವಂಚನೆಗೆ ನೆರವಾಗಲಿವೆ. ಆದ್ದರಿಂದ, `ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಹೋರಾಡುವುದು ಈ ಸುತ್ತಿನ ಚುನಾವಣೆಯಲ್ಲಿ ಪ್ರತಿಪಕ್ಷಗಳು ಎದುರಿಸಬೇಕಾದ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ನಾವೆಲ್ಲರೂ ಸನ್ನದ್ಧರಾಗಬೇಕು.

(ಕನ್ನಡಕ್ಕೆ: ವಿಶ್ವ)

Leave a Reply

Your email address will not be published. Required fields are marked *