ಸಂಪೂರ್ಣವಾಗಿ ಜನವಿರೋಧಿ, ಒಕ್ಕೂಟತತ್ವ ವಿರೋಧಿ ಕೇಂದ್ರ ಬಜೆಟ್

“ಹೆಚ್ಚುತ್ತಿರುವ ಅಸಮಾನತೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ”

ಸಿಪಿಐ(ಎಂ) ಪೊಲಿಟ್‍ಬ್ಯುರೊ

ಪೆಬ್ರವರಿ 1, 2026ರಂದು ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸಿದ ಒಂಬತ್ತನೇ ಕೇಂದ್ರ ಬಜೆಟ್ ದುಡಿಯುವ ಜನರ, ಸಾಮಾಜಿಕವಾಗಿ ದಮನಕ್ಕೊಳಗಾದ ಜನವಿಭಾಗಗಳ ಹಾಗೂ ಒಟ್ಟಾರೆ ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳನ್ನು ಬಲಿಗೊಟ್ಟು, ಕೆಲವೇ ದೊಡ್ಡ ವ್ಯವಹಾರ ಸಮೂಹಗಳು ಮತ್ತು ಶ್ರೀಮಂತರು ಮತ್ತು ಧನಾಢ್ಯರ ಸಂಕುಚಿತ ಹಿತಾಸಕ್ತಿಗಳನ್ನು ಉತ್ತೇಜಿಸಲು ಮೋದಿ ಸರ್ಕಾರದ ಏನೇನೂ ವಿಮರ್ಶೆಯಿಲ್ಲದೆ ಬದ್ಧವಾಗಿದೆ ಎಂಬುದಕ್ಕೆ ಕಣ್ಣಿಗೆ ಕಟ್ಟುವಂತಿರುವ ಒಂದು  ಸಾಕ್ಷಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀಕ್ಷ್ಣವಾಗಿ ಟೀಕಿಸಿದೆ,. ನಿರ್ಮಲಾ ಸೀತಾರಾಮನ್ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುವ ‘ವಿತ್ತೀಯ ಶಿಸ್ತು’ ಎಂದರೆ ಸದಾ ಕಾರ್ಪೊರೇಟ್‌ ಕ್ಷೇತ್ರ ಹಾಗೂ ಶ್ರೀಮಂತರಿಗೆ ತೆರಿಗೆ ಸವಲತ್ತುಗಳನ್ನು ನೀಡುವುದು, ಅದೇ ವೇಳೆ ದುಡಿಯುವ ಜನರ ಪರಿಸ್ಥಿತಿಗಳ ಸುಧಾರಣೆಗೆ ಅಗತ್ಯವಿರುವ ವೆಚ್ಚಗಳನ್ನು ಹಿಂಡುವುದನ್ನು ವರ್ಣಿಸುವ ಇನ್ನೊಂದು  ವಿಧಾನವೇ ಆಗಿದೆ. ಇದು, ಪ್ರಸ್ತುತ ವರ್ಷದಲ್ಲಿಯೂ ಮುಂದಿನ ವರ್ಷದ ಬಜೆಟ್‌ನಲ್ಲಿಯೂ ಆದಾಯಗಳಲ್ಲಿ ಭಾರೀ ಕುಸಿತ ಹಾಗೂ ತೀವ್ರ ವೆಚ್ಚಕಡಿತದಲ್ಲಿ  ವ್ಯಕ್ತಗೊಂಡಿದೆ ಎಂದು ಸಿಪಿಐ(ಎಂ) ಹೇಳಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಮಾಡಿದ ತೆರಿಗೆ ಆದಾಯಗಳ ಅಂದಾಜು ಬಹಳವೇನೂ ಇರಲಿಲ್ಲ.  ಅವು ಕೂಡ ಈಗ ಅಂತ್ಯಗೊಳ್ಳುತ್ತಿರುವ 2025–26 ರ ಹಣಕಾಸು ವರ್ಷದಲ್ಲಿ ಈಡೇರುವಲ್ಲಿ ಬಹಳ ಹಿಂದೆ ಉಳಿದಿವೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಆದಾಯಗಳಲ್ಲಿ ಉಂಟಾದ ಕೊರತೆಯ ಒಂದು ಭಾಗವನ್ನು ಅಬಕಾರಿ ಸುಂಕಗಳ (ಮುಖ್ಯವಾಗಿ ತೈಲದ ಮೇಲೆಯೇ ಬೀಳುವ ಸುಂಕ) ವೃದ್ಧಿಯ ಮೂಲಕ ಸದ್ದಿಲ್ಲದೆ ತುಂಬಿಕೊಳ್ಳಲಾಗಿದೆ. ಹಣಕಾಸು ಮಂತ್ರಿಗಳು ಈ ಆದಾಯ ಬಿಕ್ಕಟ್ಟಿನ ಬಗ್ಗೆ, ಹಾಗೂ ಅದು ಆಂತರಿಕ ಆರ್ಥಿಕ ಸ್ಥಿತಿಯ ಬಗ್ಗೆ ಏನನ್ನು ಬಿಂಬಿಸುತ್ತದೆ ಎಂಬುದನ್ನು ಗಮನಕ್ಕೆ ತಗೆದುಕೊಂಡಿಲ್ಲ, ಜೊತೆಗೆ ಅವರು ಪ್ರಕಟಿಸಿರುವ ತೆರಿಗೆ ಪ್ರಸ್ತಾವನೆಗಳು ಆದಾಯಗಳ ಮೇಲೆ ಬೀರಬಹುದಾದ  ಪರಿಣಾಮಗಳ ಬಗ್ಗೆ ಯಾವ ಉಲ್ಲೇಖವನ್ನೂ ಮಾಡದೇ ಬಿಟ್ಟಿದ್ದಾರೆ. ಆದರೆ 2026–27ರ ನಿರೀಕ್ಷಿತ ಆದಾಯಗಳು 2025–26ರ ಬಜೆಟ್ ಅಂದಾಜುಗಳಷ್ಟೇ ಇರುತ್ತವೆ ಎಂಬುದು ಸ್ವಯಂ ವೇದ್ಯ. ರಾಷ್ಟ್ರೀಯ ಆದಾಯದಲ್ಲಿ ಸರ್ಕಾರಕ್ಕೆ ಆದಾಯದ ಪಾಲಾಗಿ ಸಿಗುವ ಪ್ರಮಾಣದಲ್ಲಿ ಒಂದು ತೀವ್ರ ಇಳಿಕೆಯಾಗುತ್ತದೆ ಎಂಬುದು ಇದರ ವಾಸ್ತವ ಅರ್ಥ.

Leave a Reply

Your email address will not be published. Required fields are marked *