
ಮಾರ್ಚ್ 24ರಂದು ದಿಲ್ಲಿಯಲ್ಲಿ ಬೃಹತ್ ಮತಪ್ರದರ್ಶನ
ಸಿದ್ಧತೆಯಾಗಿ ಉತ್ತರ ಭಾರತದಾದ್ಯಂತ ಜನಾಕ್ರೋಶ ಜಾಥಾಗಳು
ಫೆಬ್ರುವರಿ 27ರಂದು ನಡೆದ ಪೊಲಿಟ್ಬ್ಯುರೊ ಸಭೆ ಜನಾಕ್ರೋಶ ಜಾಥಾಗಳು ಮತ್ತು ಸಾಮೂಹಿಕ ರ್ಯಾಲಿಯಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಗಳು, ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ಮೇಲೆ ಹಲ್ಲೆಗಳು, ಯುಎಸ್-ಭಾರತ ವ್ಯಾಪಾರ ಒಪ್ಪಂದ, ಸಂಸತ್ತಿನ ಬಜೆಟ್ ಅಧಿವೇಶನ, ಪ್ರತಿರೋಧದ ದನಿಗಳು, ಎಸ್ಐಆರ್, ಯುಎಸ್ ಆಕ್ರಮಣ ಮತ್ತು ಮೋದಿಯವರ ಇಸ್ರೇಲ್ ಭೇಟಿಯನ್ನು ಚರ್ಚಿಸಿತು. ಸಭೆಯ ನಂತರ ಈ ಕುರಿತು ಪ್ರಕಟಿಸಿರುವ ಹೇಳಿಕೆಯ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:
ನವದೆಹಲಿ, ಫೆಬ್ರುವರಿ 27: ಕಾರ್ಮಿಕ ಸಂಹಿತೆಗಳ ಅಧಿಸೂಚನೆ, ಮನರೆಗಾ ರದ್ದತಿ ಹಾಗೂ ವಿಬಿ-ಗ್ರಾಮ್ ಜಿ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ, ಬೀಜ ಮಸೂದೆ ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಮಾರ್ಚ್ 24ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಒಂದು ಸಾಮೂಹಿಕ ರ್ಯಾಲಿಯನ್ನು ಸಂಘಟಿಸಲು ಸಿಪಿಐ(ಎಂ) ನಿರ್ಧರಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಹೇಳಿದ್ದಾರೆ. ಸಿಪಿಐ(ಎಂ) ಪೊಲಿಟ್ಬ್ಯುರೊ ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಇದನ್ನು ಹೇಳಿದರು.
ಈ ರ್ಯಾಲಿಗೆ ಸಿದ್ಧತೆಯಾಗಿ ಜಮ್ಮು ಮತ್ತು ಕಾಶ್ಮೀರದಿಂದ ಝಾರ್ಖಂಡ್ ವರೆಗೆ ಉತ್ತರ ಭಾರತದಾದ್ಯಂತ ಜನಾಕ್ರೋಶ ಜಾಥಾಗಳನ್ನು ಸಂಘಟಿಸಲಾಗುವುದು; ಪಕ್ಷದ ಪೊಲಿಟ್ಬ್ಯುರೊ ಮತ್ತು ಕೇಂದ್ರಸಮಿತಿಯ ಸದಸ್ಯರುಗಳು ಭಾಗವಹಿಸುವ ಈ ಜಾಥಾಗಳ ಮೂಲಕ ಒಕ್ಕೂಟ ಸರಕಾರದ ಎಲ್ಲ ಕ್ರಮಗಳಿಂದಾಗಿ ಸಂಕಷ್ಟಕ್ಕೀಡಾಗುವ ಜನವಿಭಾಗಗಳನ್ನು ತಲುಪಲಾಗುವುದು ಎಂದು ಅವರು ಹೇಳಿದರು .
ರಾಜಸ್ತಾನದಲ್ಲಿ ಲೋಕಸಭಾ ಸದಸ್ಯ ಆಮ್ರ ರಾಮ್ ನೇತೃತ್ವದಲ್ಲಿ ಈ ಜಾಥ ಆಗಲೇ ಆರಂಭವಾಗಿದೆ. ಉಳಿದೆಡೆಗಳಲ್ಲಿ ಮಾರ್ಚ್ 8 ರ ಮಹಿಳಾ ದಿನಾಚರಣೆಯ ನಂತರ ಆರಂಭವಾಗುತ್ತದೆ ಎಂದು ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗಳು:
ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಯ ವಿಧಾನಸಭೆಗಳಿಗೆ ಚುನಾವಣೆಗಳ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ಕೇರಳದಲ್ಲಿ, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಎಲ್ಡಿಎಫ್ ಸರ್ಕಾರದ ಕತ್ತು ಹಿಸುಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಎಲ್ಡಿಎಫ್ ಅತ್ಯುತ್ತಮ ಕೆಲಸಗಳನ್ನು ಮಾಡಿದೆ; ತೀವ್ರ ಬಡತನ ನಿರ್ಮೂಲನೆಗೆ ಗಮನ ಕೇಂದ್ರೀಕರಿಸಿ, ಅದನ್ನು ಸಾಧಿಸಿದ ದೇಶದ ಮೊದಲ ರಾಜ್ಯವಾಗಿದೆ; ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣವನ್ನು ಉತ್ತಮಪಡಿಸಿದೆ; ಕಾರ್ಮಿಕರ ಹಕ್ಕುಗಳ ರಕ್ಷಣೆಯನ್ನು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯನ್ನು ಖಚಿತಪಡಿಸಿದೆ. ಅರ್ಹರಾದ ಎಲ್ಲರಿಗೂ ಪಿಂಚಣಿಗಳ ವಿತರಣೆಯಾಗುವಂತೆ ಕೂಡ ಖಚಿತಪಡಿಸಿದೆ. ಈ ವಿಶಿಷ್ಟ ಸಾಧನೆಯಿಂದಾಗಿ, ಜನರು ಮತ್ತೊಮ್ಮೆ ಎಲ್ಡಿಎಫ್ ಪರವಾಗಿ ನಿರ್ಣಾಯಕವಾಗಿ ಮತಹಾಕಬೇಕೆಂದು ಪೊಲಿಟ್ಬ್ಯುರೊ ಮನವಿ ಮಾಡಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಪಾರ ಹಣವನ್ನು ಕಲೆಹಾಕಿ, ವಿವಿಧ ಸಂಕುಚಿತವಾದಿ ಶಕ್ತಿಗಳನ್ನು ತನ್ನ ಬೆಂಬಲಕ್ಕೆ ಒಗ್ಗೂಡಿಸುತ್ತಿದೆ. ಅದು ವಿಧಾನಸಭೆಯ ಒಳಗೂ ಹೊರಗೂ ಬಿಜೆಪಿ ಜೊತೆಗೆ ಸಂಯೋಜನೆ ಮಾಡಿಕೊಂಡು ಛಿದ್ರಕಾರೀ ಪಾತ್ರ ವಹಿಸುತ್ತಿದೆ. ಬಿಜೆಪಿ ಸಹ ರಾಜ್ಯದಲ್ಲಿ ಕೋಮು ವಿಭಜನೆಗಳನ್ನು ಉತ್ತೇಜಿಸಿ ತನ್ನ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಎರಡೂ ಶಕ್ತಿಗಳನ್ನು ಸೋಲಿಸಬೇಕಾಗಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ, ಟಿಎಂಸಿ ಯ ಸರ್ವಾಧಿಕಾಶಾಹೀ, ಮಹಿಳಾ ವಿರೋಧಿ ಹಾಗೂ ಬಡವರ ವಿರೋಧಿ ಆಳ್ವಿಕೆಯನ್ನು ಮತ್ತು ಕೋಮುವಾದಿ ಬಿಜೆಪಿಯನ್ನೂ ಸೋಲಿಸಬೇಕು, ಎಡರಂಗಕ್ಕೆ ಮತನೀಡಬೇಕು ಎಂದು ಸಿಪಿಐ(ಎಂ) ಜನರಿಗೆ ಮನವಿ ಮಾಡಿದೆ. ಬಿಜೆಪಿ ಕೋಮುವಾದಿ ವಿಷವನ್ನು ಹರಡಿ, ಮತೀಯ ನೆಲೆಯಲ್ಲಿ ವಿಭಜನೆಗಳನ್ನು ಉತ್ತೇಜಿಸುತ್ತಿದೆ. ಬಿಜೆಪಿ ವಿರುದ್ಧ ಹೋರಾಟದ ಹೆಸರಿನಲ್ಲಿ ಕೆಲವು ಮುಸ್ಲಿಂ ಮೂಲಭೂತವಾದಿ ಮತ್ತು ಸಂಕುಚಿತವಾದಿ ಶಕ್ತಿಗಳೂ ಸಕ್ರಿಯವಾಗಿವೆ. ಇಂತಹ ಮತೀಯ ಕ್ರೋಡೀಕರಣಗಳು ಧ್ರುವೀಕರಣವನ್ನು ಹೆಚ್ಚಿಸಿ ಸಮಾಜದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಚಾರಿತ್ರ್ಯಕ್ಕೆ ಹಾನಿ ಮಾಡುತ್ತವೆ. ಟಿಎಂಸಿ ಕೂಡ ಅಧಿಕಾರ ಉಳಿಸಿಕೊಳ್ಳಲು ಇಂತಹ ಮತೀಯ ಧ್ರುವೀಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆ.
ತಮಿಳುನಾಡಿನಲ್ಲಿ, ಬಲಿಷ್ಠಗೊಂಡ ಡಿಎಂಕೆ ಮೈತ್ರಿ ಮರುಚುನಾವಣೆಗೆ ಜನರ ಬಳಿ ಹೋಗುತ್ತಿದೆ. ಬಿಜೆಪಿ-ಎಐಎಡಿಎಂಕೆ ಮೈತ್ರಿ ತಿರುಪರಂಕುಂದ್ರಂ-ಕೇಂದ್ರಿತ ಕೋಮುವಾದಿ ರಾಜಕಾರಣವನ್ನು ಉತ್ತೇಜಿಸುತ್ತಿದೆ. ಕೋಮುವಾದಿ ಕುಯುಕ್ತಿಗಳನ್ನು ಸೋಲಿಸಲು ರಾಜ್ಯದ ಜಾತ್ಯತೀತ ಪರಂಪರೆಯನ್ನು ಬಲಪಡಿಸಲು ಡಿಎಂಕೆ ಮೈತ್ರಿರಂಗವನ್ನು ಮರುಚುನಾಯಿಸಬೇಕೆಂದು ಪೊಲಿಟ್ಬ್ಯುರೊ ಮನವಿ ಮಾಡಿದೆ.
ಅಸ್ಸಾಂನಲ್ಲಿ ಬಿಜೆಪಿ ಒಂದು ಉನ್ಮತ್ತ ಕೋಮುವಾದಿ ಹಾಗೂ ವಿಭಜನಕಾರೀ ಪ್ರಚಾರ ನಡೆಸುತ್ತಿದೆ. ಅಸ್ಸಾಂನ ಜನರ ಒಟ್ಟು ಹಿತದೃಷ್ಟಿಯಿಂದ, ಅತಿ ದೊಡ್ಡ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಬಿಜೆಪಿ-ವಿರೋಧಿ ಮತಗಳು ಒಡೆದು ಹೋಗದಂತೆ ಖಚಿತಪಡಿಸಬೇಕಾಗಿದೆ.
ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು:
ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ನಿಲ್ಲದೆ ನಿರಂತರವಾಗಿ ನಡೆಯುತ್ತಿವೆ. ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಿಂದ ಅಸ್ಸಾಂ ಮುಖ್ಯಮಂತ್ರಿ ಮುಸ್ಲಿಮರ ಮೇಲೆ ಗುಂಡು ಹಾರಿಸುವ ವಿಡಿಯೋ ಬಿಡುಗಡೆ ಮಾಡಿದೆ, ಧಾರ್ಮಿಕ ದ್ವೇಷ ಹಬ್ಬಿಸುವಲ್ಲಿ ಈ ಹಿಂದುತ್ವ ಶಕ್ತಿಗಳು ಯಾವ ಮಟ್ಟಕ್ಕೆ ಹೋಗುತ್ತವೆ ಎಂಬುದನ್ನು ಇದು ತೋರಿಸುತ್ತದೆ. ತೆಲಂಗಾಣದಲ್ಲಿ ಬುಡಕಟ್ಟು ಜನರ ಸಮ್ಮಕ್ಕ-ಸಾರಕ್ಕ ಜಾತ್ರೆಯ ವೇಳೆ ಒಬ್ಬ ಮುಸ್ಲಿಂ ವ್ಯಾಪಾರಿಯ ಮೇಲೆ ಹಲ್ಲೆ ಮಾಡಲಾಗಿದೆ. ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಕಾಶ್ಮೀರಿ ಶಾಲು ವ್ಯಾಪಾರಿಗಳ ಮೇಲೆ ದಾಳಿ ನಡೆದಿದೆ. ರಂಜಾನ್ ಸಮಯದಲ್ಲಿ ನಮಾಜ್ ಸಲ್ಲಿಸುವ ಮುಸ್ಲಿಮರ ಮೇಲೆ ದಾಳಿಗಳು ಹಲವು ರಾಜ್ಯಗಳಿಂದ ವರದಿಯಾಗಿವೆ.
ಜೆಎನ್ಯು ಉಪಕುಲಪತಿಯ ಜಾತಿವಾದಿ ಮತ್ತು ಸಂವೇದನಾಶೂನ್ಯ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಸ್ಎಫ್ಐ, ಎಐಎಸ್ಎ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಗುಂಡಾಗಳು ದಾಳಿ ನಡೆಸಿದರು. ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯದಲ್ಲಿ ಎಸ್ಎಫ್ಐ ಮತ್ತು ಸಿಐಟಿಯು ಧ್ವಜಸ್ತಂಭಗಳನ್ನು ಆರ್ಎಸ್ಎಸ್ ಧ್ವಂಸ ಮಾಡಿತು. ಈ ದಾಳಿಗಳನ್ನು ಖಂಡಿಸುತ್ತ ಪೊಲಿಟ್ಬ್ಯುರೊ, ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸಲು ಆರ್ಎಸ್ಎಸ್/ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳನ್ನು ಪ್ರತಿರೋಧಿಸುವಂತೆ ಮನವಿ ಮಾಡಿದೆ.
ಉತ್ತರಾಖಂಡದ ಕೋತ್ದ್ವಾರದಲ್ಲಿ, ವಿಶ್ವ ಹಿಂದು ಪರಿಷತ್ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ಒಂದು ಗುಂಪು ಮುಸ್ಲಿಂ ಅಂಗಡಿ ಮಾಲೀಕರ ಮೇಲೆ ದಾಳಿ ನಡೆಸಿದಾಗ, ಒಬ್ಬ ಯುವ ಹಿಂದೂ ಜಿಮ್ ಮಾಲೀಕ ಪ್ರತಿರೋಧಿಸಿ, ನಮ್ಮ ಸಮಾಜದಲ್ಲಿ ಈಗಲೂ ಗಟ್ಟಿಯಾದ ಜಾತ್ಯತೀತ ಪ್ರವೃತ್ತಿಗಳು ಅಸ್ತಿತ್ವದಲ್ಲಿವೆ ಎಂದು ತೋರಿಸಿಕೊಟ್ಟಿದ್ದಾರೆ ಎಂದಿರುವ ಪೊಲಿಟ್ಬ್ಯುರೊ, ತಾನು ‘ಮೊಹಮ್ಮದ್ ದೀಪಕ್’ ಎಂದು ಪರಿಚಯಿಸಿಕೊಂಡು ಮುಸ್ಲಿಮರ ಜೀವನೋಪಾಯಗಳನ್ನು ಕಾಪಾಡಲು ಕೋಮುವಾದಿ ಹಲ್ಲೆಗಳನ್ನು ಎದುರಿಸುವ ದೀಪಕ್ ಕುಮಾರ್ ರವರ ಧೀರ ನಿಲುವಿಗೆ ಶ್ಲಾಘನೆ ಸಲ್ಲಿಸಿದೆ.
ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ರಾಜ್ಯಗಳಲ್ಲಿ ಮನುವಾದಿ ಶಕ್ತಿಗಳಿಂದ ದಲಿತರ ಮೇಲೆ ದಾಳಿಗಳು ಹೆಚ್ಚುತ್ತಿರುವುದು ಆತಂಕಕಾರಿ. ಇವೆಲ್ಲವೂ ಬಿಜೆಪಿ ಆಳ್ವಿಕೆಯ ರಾಜ್ಯಗಳು.
ಗುಜರಾತ್ ಸರ್ಕಾರ ಯುವ ವಯಸ್ಕ ದಂಪತಿಗಳು ತಮ್ಮ ಮದುವೆಗೆ ಪೋಷಕರ ಅನುಮತಿ ಪಡೆಯಬೇಕು ಎಂದು ಕಡ್ಡಾಯಗೊಳಿಸಿರುವ ನಿರ್ಧಾರ ಇನ್ನೊಂದು ಪ್ರತಿಗಾಮಿ ಹೆಜ್ಜೆ ಮತ್ತು ಮಹಿಳೆಯರ ಹಕ್ಕುಗಳ ಮೇಲೆ ದಾಳಿ. ಇದನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಯುಎಸ್-ಭಾರತ ವ್ಯಾಪಾರ ಒಪ್ಪಂದ: ಬಿಜೆಪಿ ಸರಕಾರದ ವಿಫಲತೆ ಬಯಲು
ಬಿಜೆಪಿ ನೇತೃತ್ವದ ಸರ್ಕಾರ ಯುಎಸ್ನೊಂದಿಗೆ ತಾತ್ಕಾಲಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ, ಇದು ದೇಶದ ಹಿತಾಸಕ್ತಿಗೆ ಅತ್ಯಂತ ಹಾನಿಕಾರಕವಾಗಿದೆ. ಈ ಒಪ್ಪಂದವು ಕೋಟ್ಯಾಂತರ ರೈತರು ಮತ್ತು ಕಾರ್ಮಿಕರ ಜೀವನವನ್ನು ಧ್ವಂಸಗೊಳಿಸಲಿದೆ. ಲಭ್ಯವಿರುವ ಎಲ್ಲ ಮಾಹಿತಿಗಳ ಪ್ರಕಾರ, ಸರ್ಕಾರ ಯುಎಸ್ ಮುಂದೆ ಶರಣಾಗಿದೆ. ರಷ್ಯನ್ ತೈಲದ ಆಮದು ಕಡಿತಗೊಳಿಸಬೇಕೆಂಬ ಯುಎಸ್ ಆದೇಶಗಳಿಗೆ ಅದು ಶರಣಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸುಂಕಗಳನ್ನು ವಿಧಿಸುವ ಅಧಿಕಾರ ಇಲ್ಲ ಎಂದು ಯುಎಸ್ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಹೊಸ ಪರಿಸ್ಥಿತಿ ಉಂಟಾಯಿತು. ಟ್ರಂಪ್ ಬೇರೆ ಕಾನೂನು ಅವಕಾಶವನ್ನು ಬಳಸಿ ಎಲ್ಲ ದೇಶಗಳ ಮೇಲೆ 15% ಸುಂಕಗಳನ್ನು ವಿಧಿಸಿದ್ದಾರೆ. ಯುರೋಪಿಯನ್ ಒಕ್ಕೂಟ ಸೇರಿದಂತೆ ಯುಎಸ್ನ ಆಪ್ತ ಮಿತ್ರದೇಶಗಳೂ ಅದರೊಂದಿಗೆ ತಮ್ಮ ವ್ಯಾಪಾರ ಒಪ್ಪಂದಗಳನ್ನು ಅಮಾನತುಗೊಳಿಸಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಅಸಮಾನ ಒಪ್ಪಂದದಿಂದ ಹಿಂದೆ ಸರಿಯಲು ಸಿದ್ಧವಿಲ್ಲ. ಇದು ಯುಎಸ್ ಒತ್ತಡವನ್ನು ಪ್ರತಿರೋಧಿಸುವಲ್ಲಿ ಬಿಜೆಪಿ ಸರಕಾರದ ವಿಫಲತೆಯನ್ನು ಇನ್ನಷ್ಟು ಎತ್ತಿ ತೋರಿಸುತ್ತದೆ.
ಈ ಎಲ್ಲ ಬೆಳವಣಿಗೆಗಳು ಭಾರತದ ಸರಕಾರ ರಾಷ್ಟ್ರೀಯ ಸಾರ್ವಭೌಮತ್ವದ ವಿಷಯದಲ್ಲಿ ಎಷ್ಟೊಂದು ರಾಜಿಗೆ ಇಳಿದಿದೆ ಎಂಬುದನ್ನು ಬಯಲು ಮಾಡುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಸಂಸತ್ತಿನ ಬಜೆಟ್ ಅಧಿವೇಶನ: ಚರ್ಚೆಗೆ ನಿರಾಕರಣೆ
2026-27ರ ಬಜೆಟ್ ಕಾರ್ಪೊರೇಟ್ಗಳು ಮತ್ತು ಶ್ರೀಮಂತರ ಹಿತಾಸಕ್ತಿಯನ್ನು ಉತ್ತೇಜಿಸಲು, ಅದಕ್ಕಾಗಿ ದುಡಿಯುವ ಜನಗಳು ಮತ್ತು ಸಾಮಾಜಿಕ ದಮನಕ್ಕೆ ಒಳಗಾಗಿರುವ ವಿಭಾಗಗಳ ಹಿತಾಸಕ್ತಿಗಳನ್ನು ಬಲಿಕೊಡಲು ಬಿಜೆಪಿ ಸರಕಾರ ಬದ್ಧವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಇದಲ್ಲದೆ ರಾಜ್ಯಗಳಿಗೆ ಅವರ ಹಕ್ಕಿನ ಪಾಲನ್ನು ನಿರಾಕರಿಸಿ ಸಂಪನ್ಮೂಲಗಳ ಕೇಂದ್ರೀಕರಣವನ್ನು ಮತ್ತಷ್ಟು ಬಲಪಡಿಸಿದೆ.
ಪಕ್ಷಪಾತಿ ಸದನ-ಅಧ್ಯಕ್ಷರುಗಳ ಸಕ್ರಿಯ ಶಾಮೀಲಿನ ಸಹಾಯದಿಂದ ಸರ್ಕಾರ ಪ್ರತಿಪಕ್ಷಗಳಿಗೆ ಅದನ್ನು ವಿಮರ್ಶಿಸುವ ಯಾವುದೇ ವಿಷಯವನ್ನು ಎತ್ತಲು ಯಾವುದೇ ಅವಕಾಶವನ್ನು ಕೊಡುತ್ತಿಲ್ಲ. ಯುಎಸ್ ಮತ್ತು ಯುರೋ ಕೂಟದೊಂದಿಗೆ ಒಪ್ಪಂದಗಳಲ್ಲಿ ಏನಿದೆ ಎಂಬುದನ್ನು ಸಂಸತ್ತಿನ ಮುಂದೆ ಚರ್ಚೆಗೆ ಇಡಲಿಲ್ಲ. ಮಾತಾಡುವ ಹಕ್ಕಿನ ನಿರಾಕರಣೆಯನ್ನು ಪ್ರತಿಭಟಿಸಿದ್ದಕ್ಕೆ ಲೋಕಸಭೆಯ ಎಂಟು ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ಪ್ರತಿರೋಧದ ಧ್ವನಿಗಳು: ಕಾರ್ಮಿಕ ವರ್ಗ ಮತ್ತು ರೈತಾಪಿಗಳಿಗೆ ಅಭಿನಂದನೆ
ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರ ಯಶಸ್ವಿಯಾಗಿದೆ. ಇದು ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಮತ್ತು ಸರಕಾರ ಆರಂಭಿಸಿರುವ ಇತರ ದಾಳಿಗಳ ವಿರುದ್ಧ ಕಾರ್ಮಿಕರ ಆಕ್ರೋಶದ ಒಂದು ಪ್ರದರ್ಶನವಾಗಿದೆ. ರೈತರೂ ದೇಶದ ವಿವಿಧ ಭಾಗಗಳಲ್ಲಿ ಸರ್ಕಾರದ ರೈತವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗಳ ನೇತೃತ್ವವನ್ನು ವಹಿಸಿದ್ದಕ್ಕಾಗಿ ಕಾರ್ಮಿಕ ವರ್ಗ ಮತ್ತು ರೈತಾಪಿಗಳಿಗೆ ಸಿಪಿಐ(ಎಂ) ಅಭಿನಂದನೆ ಸಲ್ಲಿಸಿದೆ.
ಎಸ್ಐಆರ್: ಆರೋಪ ಸಾಬೀತು
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ಬಹು ದೊಡ್ಡ ಜನವಿಭಾಗಗಳನ್ನು ಹಿಂದೆಂದೂ ಕಾಣದ ಸಂಕಷ್ಟಗಳಿಗೆ ಗುರಿಮಾಡಿ ಅತ್ಯಂತ ವಿವಾದಾತ್ಮಕವಾಗಿ ಬಿಟ್ಟಿದೆ. ಸುಪ್ರೀಂ ಕೋರ್ಟ್ ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರಾಕರಿಸಿದರೂ, ಈಗ ಮಧ್ಯಪ್ರವೇಶಿಸಿದೆ ಮತ್ತು ಈ ಪ್ರಕ್ರಿಯೆಯ ಉಸ್ತುವಾರಿಗೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಿದೆ. ಇದು ಒಂದು ಅತ್ಯಂತ ಬಿಗಿ ಸಮಯ ಚೌಕಟ್ಟಿನೊಳಗೆ ಇದನ್ನು ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪವನ್ನು ಸಾಬೀತುಪಡಿಸುತ್ತದೆ. ಈ ಇಡೀ ಕಸರತ್ತು ಜನರಿಗೆ ಅತ್ಯಂತ ತ್ರಾಸದಾಯಕವಾಗುತ್ತಿದೆ, ಅವರನ್ನು ಕಚೇರಿಯಿಂದ ಕಚೇರಿಗೆ ಓಡಾಡುವಂತೆ ಮಾಡಿದೆ.
ಯುಎಸ್ ಸಾಮ್ರಾಜ್ಯಶಾಹಿ ಆಕ್ರಮಣದ ವಿಸ್ತರಣೆ
ಅಮೇರಿಕಾ ಕ್ಯೂಬಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ಕ್ಯೂಬಾದ ಅರ್ಥವ್ಯವಸ್ಥೆಯನ್ನು ಉಡುಗಿಸಿ ಅದು ಶರಣಾಗುವಂತೆ ಬಲವಂತಪಡಿಸಲು, ಅದಕ್ಕೆ ಇಂಧನ ಪೂರೈಕೆಗಳನ್ನು ನಿಲ್ಲಿಸುವಂತೆ ವಿವಿಧ ದೇಶಗಳ ಮೇಲೆ ಒತ್ತಡ ಹಾಕುತ್ತಿದೆ. ಈ ಎಲ್ಲ ಕಷ್ಟ-ನಷ್ಟಗಳನ್ನು ಎದುರಿಸಿ ಕ್ಯೂಬಾದ ಜನರು ಸಾಮ್ರಾಜ್ಯಶಾಹಿ ಒತ್ತಡವನ್ನು ಪ್ರತಿರೋಧಿಸುತ್ತಿದ್ದಾರೆ.
ಕ್ಯೂಬಾ ಸರ್ಕಾರ ಯುಎಸ್ನಿಂದ ಬಾಡಿಗೆ ಸೈನಿಕರನ್ನು ಹೊತ್ತು ತರುತ್ತಿದ್ದ ಸಶಸ್ತ್ರ ದೋಣಿಯನ್ನು ತಡೆದು ನಿಲ್ಲಿಸಿದೆ. ಅವರು ಒಂದು ದಾಳಿ ನಡೆಸಲು ಕ್ಯೂಬಾವನ್ನು ಪ್ರವೇಶಿಸುವ ಪ್ರಯತ್ನದಲ್ಲಿದ್ದರು. ಈ ಘಟನೆ ಯುಎಸ್ ಆಡಳಿತದ ಶಾಮೀಲು ಇಲ್ಲದೆ ಸಂಭವಿಸುತ್ತಿರಲಿಲ್ಲ. ಇದು ಕ್ಯೂಬಾದ ವಿರುದ್ಧ ಯುಎಸ್ ಸಾಮ್ರಾಜ್ಯಶಾಹಿ ಆಕ್ರಮಣವನ್ನು ಮತ್ತಷ್ಟು ವಿಸ್ತರಿಸಿದೆ.
ಪಕ್ಷ ಕ್ಯೂಬಾ ಜೊತೆ ಸೌಹಾರ್ದವನ್ನು ಪುನರುಚ್ಛರಿಸುತ್ತದೆ ಎಂದಿರುವ ಪೊಲಿಟ್ಬ್ಯುರೊ, ಭಾರತ ಸರ್ಕಾರ ತಕ್ಷಣವೇ ಕ್ಯೂಬಾದ ಜನತೆಗೆ ಅಗತ್ಯ ಔಷಧಿಗಳು ಹಾಗೂ ದೈನಂದಿನ ಅವಶ್ಯಕ ವಸ್ತುಗಳನ್ನು ಕಳುಹಿಸಬೇಕೆಂದು ಆಗ್ರಹಿಸಿದೆ.
ಯುಎಸ್ ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ತನ್ನ ಅತ್ಯಂತ ದೊಡ್ಡ ನೌಕಾಪಡೆಯನ್ನು ನಿಯೋಜಿಸಿ ಇರಾನ್ ಮೇಲೆ ಗುರಿಯಿಟ್ಟಿದೆ. ಇರಾನ್ ಮೇಲೆ ಯಾವುದೇ ದಾಳಿ ಆ ಇಡೀ ಪ್ರದೇಶಕ್ಕೆ ಹರಡಿ, ಪಶ್ಚಿಮ ಏಷ್ಯಾಕ್ಕೆ ಮಾತ್ರವಲ್ಲ, ಜಾಗತಿಕ ಶಾಂತಿಗೇ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಭಾರತ ಸರ್ಕಾರ ಅಮೆರಿಕಾದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಮತ್ತು ಕ್ಯೂಬಾ, ವೆನೆಜುಯೆಲಾ ಹಾಗೂ ಇರಾನ್ ಜೊತೆ ನಿಲ್ಲಬೇಕು ಎಂದು ಪೊಲಿಟ್ಬ್ಯುರೊ ಆಗ್ರಹಿಸಿದೆ.
ಮೋದಿಯ ಇಸ್ರೇಲ್ ಭೇಟಿ: ಭಾರತದ ಹಿತಾಸಕ್ತಿಗಳ ಬಲಿ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ, ಆ ದೇಶ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ, ಗಾಜಾದಲ್ಲಿ ತನ್ನ ಯುದ್ಧವನ್ನು ಮುಂದುವರೆಸುತ್ತಿರುವ ಮತ್ತು ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡಿರುವ ಸಮಯದಲ್ಲಿ ಬರುತ್ತಿದೆ. ಇಸ್ರೇಲಿ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣವು ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಭಾರತದ ವಿದೇಶಾಂಗ ನೀತಿ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಹೊಂದಿಸುತ್ತಿರುವುದನ್ನು ಪ್ರದರ್ಶಿಸುತ್ತದೆ. ಇದು ಪ್ಯಾಲೆಸ್ಟೀನಿಯನ್ ಉದ್ದೇಶವನ್ನು ಬೆಂಬಲಿಸುವ ಮತ್ತು ಪ್ಯಾಲೆಸ್ಟೀನಿಯನ್ನರ ಪ್ರಭುತ್ವದ ಹಕ್ಕನ್ನು ಎತ್ತಿಹಿಡಿಯುವ ಭಾರತದ ದೀರ್ಘಕಾಲೀನ ನಿಲುವಿನಿಂದ ದೂರ ಸರಿದಿರುವುದನ್ನು ತೋರಿಸುತ್ತದೆ. ಇಸ್ರೇಲ್ನ ಪ್ರಚೋದನೆಯ ಮೇರೆಗೆ ಯುಎಸ್ ಇರಾನ್ ಮೇಲೆ ಮಿಲಿಟರಿ ದಾಳಿಮಾಡಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಈ ಭೇಟಿ ನಡೆಯುತ್ತಿರುವುದು ಇದನ್ನು ಇನ್ನಷ್ಟು ಅಸೂಕ್ತಗೊಳಿಸಿದೆ. ಯುಎಸ್ ಪ್ರಸ್ತಾಪವನ್ನು ತಿರಸ್ಕರಿಸಲು ಸಾಧ್ಯವಾಗದೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅದು ರಚಿಸಿದ್ದ ಶಾಂತಿ ಮಂಡಳಿಯಲ್ಲಿ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿತು. ಇದು ಭಾರತದ ಸಾಮರಿಕ ಹಿತಾಸಕ್ತಿಗಳನ್ನು ಬಲಿಗೊಟ್ಟು ಭಾರತದ ವಿದೇಶಾಂಗ ನೀತಿಯನ್ನು ಯುಎಸ್ನ ವಿದೇಶಾಂಗ ನೀತಿಯೊಂದಿಗೆ ಹೊಂದಿಸಿಕೊಳ್ಳುವ ಮತ್ತೊಂದು ಉದಾಹರಣೆ. ಜರ್ಮನಿ ಮತ್ತು ಫ್ರಾನ್ಸ್ನಂತಹ ಯುಎಸ್ ನ ಕೆಲವು ಆಪ್ತ ಮಿತ್ರರಾಷ್ಟ್ರಗಳೂ ಮಂಡಳಿಗೆ ಸೇರಲು ನಿರಾಕರಿಸಿರುವಾಗ, ಭಾರತ ಸರ್ಕಾರದ ನಿರ್ಧಾರ ಇನ್ನಷ್ಟು ಚಿಂತಾಜನಕವಾಗುತ್ತದೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಕಾರ್ಮಿಕ ಸಂಹಿತೆಗಳ ಅಧಿಸೂಚನೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನು ಬದಲಾಯಿಸುವುದು, ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತೆ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವುದು, ಹೊಸ ಬೀಜ ಮಸೂದೆಯನ್ನು ಪರಿಚಯಿಸುವುದು, ಪ್ರತಿಕೂಲವಾದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗುವುದು ಮತ್ತು ಇದರಿಂದಾಗಿ ನಮ್ಮ ದೇಶದ ಜನರ ಹಿತಾಸಕ್ತಿಗಳನ್ನು ಯುಎಸ್ ಮತ್ತು ವಿದೇಶಿ ಬಂಡವಾಳದ ಮುಂದೆ ಬಿಟ್ಟುಕೊಡುವ ಮೂಲಕ ನಮ್ಮ ದೇಶದ ಜನರ ಮೇಲೆ ಬಹುಮುಖಿ ದಾಳಿಗಳನ್ನು ನಡೆಸುತ್ತಿದೆ. ಇದು ವಿದೇಶಾಂಗ ನೀತಿಯಲ್ಲಿಯೂ ಪ್ರತಿಫಲಿಸುತ್ತಿದೆ. ಪ್ರಧಾನಿಯವರ ಇಸ್ರೇಲ್ ಭೇಟಿ ಮತ್ತು ಅವರ ಹೇಳಿಕೆಗಳಲ್ಲಿ ಇದು ಗೋಚರಿಸುತ್ತಿದೆ.
ಸಿಪಿಐ(ಎಂ) ಪೊಲಿಟ್ ಬ್ಯೂರೋ ಈ ನೀತಿಗಳ ವಿರುದ್ಧ ಜನರನ್ನುಅಣಿನೆರೆಸಿ ಮಾರ್ಚ್ 24ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಒಂದು ಬೃಹತ್ ರ್ಯಾಲಿ ನಡೆಸಲಿದೆ. ಜನಾಕ್ರೋಶ ಜಾಥಾಗಳು ಉತ್ತರ ಭಾರತದೆಲ್ಲೆಡೆ ಈ ಸಂದೇಶವನ್ನು ತಲುಪಿಸಲಿವೆ.
ಈ ಹೋರಾಟಗಳನ್ನು ಬಲಪಡಿಸಲು, ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು ಹಾಗೂ ಇವುಗಳ ಮಿತ್ರಪಕ್ಷಗಳಿಗೆ ಮತ ನೀಡಬೇಕು ಎಂದು ಸಿಪಿಐ(ಎಂ) ಮನವಿ ಮಾಡುವುದಾಗಿ ಪೊಲಿಟ್ಬ್ಯುರೊ ಹೇಳಿದೆ
ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಲಿಕ್ಕಾಗಿ ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುರುದ್ದೇಶಪೂರ್ವಕ ದಾಳಿಗಳು
ಸಿಪಿಐ(ಎಂ) ಪೊಲಿಟ್ಬ್ಯುರೊ ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುರುದ್ದೇಶಪೂರ್ವಕವಾದ ದಾಳಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತ ಅದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ವೀಣಾ ಜಾರ್ಜ್ ಅವರ ಮೇಲೆ ಕೆಎಸ್ಯು ಗೂಂಡಾಗಳು ನಡೆಸಿದ ದೈಹಿಕ ದಾಳಿಯನ್ನು ಅದು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ. ಎಲ್ಡಿಎಫ್ ಸರ್ಕಾರವು ಸತತ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಅದರ ಸಾಧನೆಗಳನ್ನು ಎದುರಿಸಲು ಅಸಮರ್ಥರಾಗಿರುವ ಕಾಂಗ್ರೆಸ್ ಮತ್ತು ಇತರೆ ಎಲ್ಲಾ ಎಡವಿರೋಧಿ ಶಕ್ತಿಗಳ ಹತಾಶೆಯನ್ನು ಈ ದಾಳಿಗಳು ಬಿಂಬಿಸುತ್ತವೆ ಎಂದು ಇದನ್ನು ವಿಶ್ಲೇಷಿಸಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸರ್ಕಾರ ಸಾಧಿಸಿರುವ ಯಶಸ್ಸುಗಳು ಜಗತ್ತಿನಾದ್ಯಂತ ಪ್ರಶಂಸೆ ಮತ್ತು ಮಾನ್ಯತೆ ಗಳಿಸಿವೆ. ಎಲ್ಡಿಎಫ್ನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಬಿಡದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಸಹ ಈ ಸತ್ಯವನ್ನು ಒಪ್ಪಿಕೊಳ್ಳಬೇಕಾಗಿ ಬಂದಿದ್ದು, ದೇಶದಲ್ಲಿ ಉಚಿತ ಚಿಕಿತ್ಸೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಒದಗಿಸಿದ ರಾಜ್ಯವೆಂದು ಕೇರಳಕ್ಕೆ ಸತತ ಮೂರು ವರ್ಷಗಳ ಕಾಲ ಪ್ರಶಸ್ತಿ ನೀಡಿ ಗೌರವಿಸಿದೆ. ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವು ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಕೈಗೊಂಡ ವಿಶೇಷ ಉಪಕ್ರಮಗಳಿಗಾಗಿ ಯುಎನ್ ಪ್ರಶಸ್ತಿಯನ್ನು ಪಡೆದಿದೆ. ಕೇರಳದಲ್ಲಿ ಶಿಶು ಮರಣ ಪ್ರಮಾಣ (IMR) ಅನ್ನು 5ಕ್ಕೆ ಇಳಿಸಲಾಗಿದೆ; ಇದು ಹೆಚ್ಚಿನ ತಲಾ ಆದಾಯ ಇರುವ ಯುಎಸ್ ನ ಪ್ರಮಾಣ(5.6) ಕ್ಕಿಂತಲೂ ಉತ್ತಮವಾಗಿದೆ. ಇವೆಲ್ಲವೂ ಕೇರಳದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸರ್ಕಾರವು ಎಷ್ಟು ಗಂಭೀರವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಹೇರಿದ ತೀವ್ರ ಹಣಕಾಸು ನಿರ್ಬಂಧಗಳ ನಡುವೆಯೂ ಈ ಸಾಧನೆಗಳು ಸಾಧ್ಯವಾಗಿವೆ. ಯುಡಿಎಫ್ ಸರ್ಕಾರದ (2011-16) ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ವೆಚ್ಚ ರೂ. 18,825.44 ಕೋಟಿಯಾಗಿತ್ತು. ಎಲ್ಡಿಎಫ್ ಸರ್ಕಾರದ (2016-21) ಅವಧಿಯಲ್ಲಿ ಅದು ದ್ವಿಗುಣವಾಗಿ ರೂ. 36,651.79 ಕೋಟಿಗೆ ಏರಿತು. ಕಳೆದ ನಾಲ್ಕು ವರ್ಷಗಳಲ್ಲಿ (2021-25) ಮತ್ತಷ್ಟು ರೂ. 41,510.43 ಕೋಟಿ ವೆಚ್ಚ ಮಾಡಲಾಗಿದೆ. ಈ ಹೆಚ್ಚಿದ ವೆಚ್ಚಗಳು ಸಾರ್ವಜನಿಕ ಆರೋಗ್ಯದ ಬಗ್ಗೆ ಎಲ್ಡಿಎಫ್ ಸರ್ಕಾರದ ಬದ್ಧತೆಯನ್ನು ಸ್ಪಷ್ಟಪಡಿಸುತ್ತವೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎಲ್ಡಿಎಫ್ ಸಾಧಿಸಿರುವ ಈ ಯಶಸ್ಸುಗಳನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಸಹ ಸಹಿಸಿಕೊಳ್ಳಲಾಗುತ್ತಿಲ್ಲ, ಏಕೆಂದರೆ ಅವರ ನೀತಿ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವುದಾಗಿದೆ. ಕೇರಳದಲ್ಲಿ ಖಾಸಗಿ ವಲಯವು ಆರೋಗ್ಯ ಕ್ಷೇತ್ರದಲ್ಲಿ ಭಾರೀ ಹೂಡಿಕೆಗಳನ್ನು ಮಾಡಿದ್ದರೂ ಆಳವಾಗಿ ಪ್ರವೇಶಿಸಲು ವಿಫಲವಾಗಿರುವುದಕ್ಕೆ ಬಹುಮಟ್ಟಿಗೆ ಬಲಿಷ್ಠ ಸಾರ್ವಜನಿಕ ವಲಯದ ಉಪಸ್ಥಿತಿಯೇ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸಿ, ಆ ಮೂಲಕ ಖಾಸಗಿ ವಲಯದ ವಿಸ್ತರಣೆಗೆ ಅವಕಾಶ ಕಲ್ಪಿಸುವುದೇ ಈ ದಾಳಿಗಳ ನಿಜ ಉದ್ದೇಶವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಈ ದಾಳಿಗಳನ್ನು ಖಂಡಿಸುತ್ತ, ಜನರು ಈ ದುಷ್ಟ ತಂತ್ರಗಳನ್ನು ಅರಿತು ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಎಲ್ಡಿಎಫ್ ಸರ್ಕಾರದ ರಕ್ಷಣೆಗೆ ದೃಢವಾಗಿ ನಿಲ್ಲಬೇಕು ಎಂದು ಆಗ್ರಹಪೂರ್ವಕವಾಗಿ ಮನವಿಮಾಡಿದೆ.
