ಭಾರತದ ನ್ಯಾಯಾಂಗ ವಿಶ್ವದ ಅತ್ಯಂತ ಶಕ್ತಿಯುತ ನ್ಯಾಯಾಂಗಗಳಲ್ಲಿ ಒಂದು ಎಂಬ ಖ್ಯಾತಿ ಇದೆ. ಈ ಖ್ಯಾತಿಗೆ ನಮ್ಮ ಘನವೆತ್ತ ನ್ಯಾಯಾಂಗ ನಿರ್ವಹಿಸುತ್ತಾ ಬಂದಿರುವ ಹೊಣೆಗಾರಿಕೆಯೇ ಕಾರಣವಾಗಿದೆ ಎಂದರೆ ತಪ್ಪಾಗದು. ನಮ್ಮ ಗೌರವಾನ್ವಿತ ನ್ಯಾಯಾಂಗವು ಮುಂದೆ ನಿಂತು ದೇಶದ ಪ್ರಜೆಗಳ ಹಕ್ಕುಗಳನ್ನು ರಕ್ಷಿಸಿದ್ದರಿಂದಾಗಿ, ಕಾರ್ಯಾಂಗವು ತನ್ನ ಮಿತಿಯನ್ನು ಮೀರಿ ವರ್ತಿಸಿದಾಗ ನಾಗರಿಕರ ಸ್ವಾತಂತ್ರ್ಯವನ್ನು ಕಾಪಾಡಿದ್ದರಿಂದಾಗಿ, ಸಂಸತ್ತಿನ ಅಧಿಕಾರ ವ್ಯಾಪ್ತಿಗೂ ಒಂದು ಲಕ್ಷ್ಮಣ ರೇಖೆಯನ್ನು ಎಳೆದು ದೇಶದ ಸಂವಿಧಾನಕ್ಕೊಂದು ರಕ್ಷಣಾ ಕವಚವನ್ನು ಕೊಟ್ಟದ್ದರಿಂದಾಗಿ ನಮ್ಮ ನ್ಯಾಯಾಂಗಕ್ಕೆ ಆ ಕೀರ್ತಿ ಪ್ರಾಪ್ತವಾಗಿದೆ. ಈ ಖ್ಯಾತಿಯನ್ನು ನಮಗೆ ಉಳಿಸಿಕೊಳ್ಳಲು ಹಾಗೂ ಬೆಳೆಸಿಕೊಳ್ಳಲು ಸಾಧ್ಯವಾಗಬೇಕಾಗಿದೆ.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇತ್ತೀಚೆಗೆ ಸಂಭವಿಸಿದ ಕೆಲವು ಬೆಳವಣಿಗೆಗಳು ಕಳವಳಕಾರಿಯಾಗಿವೆ. ನ್ಯಾಯಾಂಗವು ಕಾರ್ಯಾಂಗದ ಕೈಗೊಂಬೆಯಾಗಿ ಪರಿವರ್ತನೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಇತ್ತೀಚಿಗೆ ಸುಗ್ರೀವಾಜ್ಞೆಗಳ ಮೂಲಕ ಕೆಲವು ಕಾನೂನು ಪಾಸಾಗಿವೆ. ನೀವು ಪ್ರಧಾನ ಮಂತ್ರಿಗಳನ್ನು ಠೀಕಿಸಿದರೆ ನಿಮ್ಮನ್ನು ರಾಷ್ಟ್ರ ದ್ರೋಹಿ ಎಂದು ಪರಿಗಣಿಸಬಹುದು. ನೀವು ಶಾಸಕರನ್ನು ಠೀಕಿಸಿದರೆ ನಿಮ್ಮನ್ನು ಹಕ್ಕುಚ್ಯುತಿ ಅಡಿಯಲ್ಲಿ ದಂಡಿಸಬಹುದು. ನೀವು ಒಬ್ಬ ನ್ಯಾಯಾಧೀಶರನ್ನು ಅಪ್ಪಿತಪ್ಪಿ ಠೀಕಿಸಿದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ. ಖ್ಯಾತ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ನಡೆದಿರುವುದು ಇದೇ.
ಪ್ರಶಾಂತ್ ಭೂಷಣ್ರವರು ಮಾಡಿದ್ದ ಎರಡು ಟ್ವೀಟ್ಗಳನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಮಾನ್ಯ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ತೀರ್ಪು ನೀಡಿದ್ದು ದುರದೃಷ್ಟಕರವಾಗಿದೆ. ಸದರಿ ಟ್ವೀಟ್ಗಳಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳು ಇದ್ದರೂ ಇರಬಹುದು. ಆದರೆ ಪ್ರಶಾಂತ ಬೂಷಣ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್ ಅವರ ಎರಡು ಟ್ವೀಟ್ಗಳನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೊಳಪಡಿಸಿದ್ದು ಖೇದಕರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರಯ ಪರವಾಗಿ ಧ್ವನಿ ಎತ್ತುವ ಮನಸ್ಸುಗಳಿಗೆ ತೀರಾ ನಿರಾಸೆಯಾಗಿರುತ್ತದೆ. ಪ್ರಶಾಂತ್ ಭೂಷಣ್ ಹಿರಿಯ ವಕೀಲರು. ಸಂವಿಧಾನ ತಜ್ಞರು. ಹಲವು ಪ್ರಕರಣಗಳಲ್ಲಿ ಸಾರ್ವಜನಿಕ ಹಿತ್ತಾಸಕ್ತಿಯ ಪರವಾಗಿ ದನಿ ಎತ್ತಿರುವವರು. ಕೆಲವು ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿಯೂ ಕರ್ತವ್ಯ ನಿಭಾಯಿಸಿದವರು. ಆದರೆ, ಅವರು ಆಡಿದ ಮಾತುಗಳ ವಿಚಾರವಾಗಿ ಕೋರ್ಟ್ ಕಠಿಣ ನಿಲುವು ತಾಳಿರುವುದು ದುರದೃಷ್ಟಕರವಾಗಿದೆ. ಇಂತವು ನಿಲುವುಗಳು ನ್ಯಾಯಾಂಗದ ಅಡಿಪಾಯವನ್ನೇ ಅಲುಗಾಡಿಸುತ್ತವೆ.
“ನ್ಯಾಯಾಂಗ ನಿಂದನೆಯ ಕಾನೂನು ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯಲು ಬಳಕೆಯಾಗಬೇಕಿಲ್ಲ. ಈ ಕಾನೂನನ್ನು ಅಪರೂಪಕ್ಕೆ ಬಳಸಿಕೊಳ್ಳಬೇಕು. ವಾಕ್ ಸ್ವಾತಂತ್ರವನ್ನು ರಕ್ಷಿಸಬೇಕಿರುವುದೇ ಬಹುಮುಖ್ಯವಾದದ್ದು” ಎಂದು ಖ್ಯಾತ ನ್ಯಾಯ ಶಾಸ್ತ್ರಜ್ಞಾ ನ್ಯಾಯಮೂರ್ತಿ ಲಾರ್ಡ್ ಡೆನಿಂಗ್ ಹೇಳಿದ್ದಾರೆ. ಇದೇ ರೀತಿಯ ಮಾತುಗಳನ್ನು ನಮ್ಮ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಎಸ್. ಮಳಗಾಂವಕರ್ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆಡಿದ ಮಾತುಗಳು ಅವಿಸ್ಮರಣೀಯ. “ಅತ್ಯಂತ ಕಟುವಾದ, ತರವಲ್ಲದ ಟೀಕೆಗಳನ್ನೂ ಒಳ್ಳೆಯ ಉದ್ದೇಶದಿಂದ ಮಾಡಿದಾಗ ಅವುಗಳ ವಿಷಯದಲ್ಲಿ ಮಾನವೀಯವಾದ ನಿಲುವು ತಾಳುವುದು ಒಳಿತು” ಎಂದು ಆಗ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದು ಪ್ರಸಿದ್ಧರಾದ ಮಾನ್ಯ ಶ್ರೀ ವಿ.ಆರ್. ಕೃಷ್ಣ ಅಯ್ಯರ್ ಹೇಳಿದ್ದವು. ನ್ಯಾಯಾಂಗ ನಿಂದನೆಯ ಕಾನೂನಿನ ಭೀತಿಯ ಸದಾಶಯದ ಟೀಕೆಗಳೂ ವ್ಯಕ್ತವಾಗದಂತೆ ತಡೆಯುತ್ತವೆ. ಟೀಕೆಗಳನ್ನು ಸ್ವೀಕರಿಸುವ ಸಂಸ್ಥೆಗಳು ಗಟ್ಟಿಯಾಗುತ್ತವೆಯೇ ವಿನಾ ದುರ್ಬಲವಾಗುವುದಿಲ್ಲ.
ನ್ಯಾಯಾಂಗದ ಮೇಲಿನ ವಿಶ್ವಾಸ ಕಳೆದು ಕೊಳ್ಳುತ್ತಿರುವುದಕ್ಕೆ ಕಾರಣವಾಗಬಹುದಾದ ಇನ್ನೊಂದು ವರದಿಯಾಗಿದೆ. ಪ್ರಧಾನ ಮಂತ್ರಿ ಹೆಸರಿನಲ್ಲಿ ರಚನೆಯಾಗಿರುವ ಒಂದು ಟ್ರಸ್ಟ್ ನಿಧಿಯಲ್ಲಿ ಸಂಗ್ರಹವಾಗಿರುವ ನಿಧಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ಸಲಿಸಲಾದ ಸಾರ್ವಜನಿಕ ಹಿತ್ತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಪಿ.ಎಂ. ಕೇರ್ ಎಂಬ ಈ ಖಾಸಗಿ ಟ್ರಸ್ಟ್ ಬಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿರುತ್ತದೆ. ಇದೊಂದು ಸೇವಾ ಸಂಸ್ಥೆಯಾಗಿ ನೋಂದಣಿ ಆಗಿರುವುದರಿಂದ ಅದಕ್ಕೆ ಯಾವುದೇ ನಿರ್ದೇಶನ ನೀಡಲು ಬರುವುದಿಲ್ಲ ಎಂಬುದು ಕೋರ್ಟಿನ ನಿಲುಮೆಯಾಗಿದೆ. ದೇಣಿಗೆಯಾಗಿ ಬರುವ ಕೋಟ್ಯಾಂತರ ರೂಪಾಯಿಗಳನ್ನು ಹೇಗೆ ವೆಚ್ಛ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸುವುದಿಲ್ಲ. ಸರ್ಕಾರವು ಜನರಿಗೆ ತೋರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸುಪ್ರೀಂ ಕೋರ್ಟಿನ ಈ ತೀರ್ಪು ಬಹುದೊಡ್ಡ ಹೊಡೆತ ಕೊಟ್ಟಿದೆ. ಸಾರ್ವಜನಿಕರಿಂದ ಪಡೆದ ಹಣದ ವಿಷಯದಲ್ಲಿ ಅಪಾರದರ್ಶಕವಾಗಿ ವರ್ತಿಸುತ್ತಿರುವ ಪ್ರಧಾನ ಮಂತ್ರಿ ಹೆಸರಿನ ಟ್ರಸ್ಟ್ನ ತನಿಖೆ ಮಾಡಲು ದೊರೆತ ಅವಕಾಶವನ್ನು ಕೈಬಿಟ್ಟಂತಾಗಿದೆ. “ರೋಗಿ ಬಯಸಿದ್ದೇ ಹಾಲು, ಮೋದಿ ಪಡೆದದ್ದೇ ಹಾಲು” ಎಂಬತಾಗಿದೆ. ನಮ್ಮ ನ್ಯಾಯಾಂಗ ಎತ್ತ ಸಾಗುತ್ತಿದೆ. ಸರ್ವಾಧಿಕಾರಿ ಪ್ರವೃತ್ತಿಗಳು ಬಹುವೇಗದಿಂದ ಬೆಳೆಯುತ್ತಿರುವಾಗ ಜನತೆ ಯಾರ ಮೇಲೆ ನಂಬಿಕೆ ಇಟ್ಟುಕೊಳ್ಳುವುದು?